28.2 C
Udupi
Thursday, May 21, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 528

ಭರತೇಶ ಶೆಟ್ಟಿ ,ಎಕ್ಕಾರು

ಸುಧನ್ವನ ಯುದ್ಧ ಸಿದ್ಧತೆ ಹೇಗಿತ್ತು ಗೊತ್ತೆ? ಪದ್ಮವ್ಯೂಹವನ್ನು ಬಲಿದು ದಶ ದಿಕ್ಕುಗಳಿಂದ ಅರ್ಜುನ ಆಕ್ರಮಿಸಿದರೂ ಪದ್ಮದ ದಳಗಳಂತೆ ಸೇನೆ ಸ್ಥಿತಗೊಂಡಿದೆ. ಹೂವಿನ ಕೇಸರವಿರುವ ಕೇಂದ್ರ ಭಾಗದಲ್ಲಿ ಪಾಂಡವರ ಯಜ್ಞ ತುರಗವನ್ನು ರಕ್ಷಿಸಿ ಬಂಧಿಸಲಾಗಿದೆ. ಅರಿ ಭಯಂಕರನಾದ ಅರ್ಜುನ‌ನನ್ನು ಎದುರಿಸುವ ಸಮಗ್ರ ಸಿದ್ಧತೆ ಮಾಡಿಕೊಂಡ ಸುಧನ್ವ ಆಯಕಟ್ಟಿನ ಸ್ಥಳದಲ್ಲಿ ರಥಿಕನಾಗಿ ಸ್ಥಿತನಾಗಿದ್ದಾನೆ. ವ್ಯೂಹ ಚಕ್ರಾಕಾರವಾಗಿ ಸವ್ಯ – ಅಪಸವ್ಯವಾಗಿ ತಿರುಗುತ್ತಾ ಎದುರಾಳಿಯ ಸೇನೆ ವ್ಯೂಹ ಪ್ರವೇಶ ಮಾಡಿ ಒಳ ನುಗ್ಗಲು ಕೆಲವೆಡೆ ಅವಕಾಶವೂ, ಒಳ ಹೊಕ್ಕ ಪಾಂಡವ ಸೇನೆ ಮತ್ತೆ ನುಸುಳದಂತೆ ಭದ್ರ ದಳ ವ್ಯೂಹವಿದ್ದು ಅಲ್ಲಿಯೆ ನಾಶ ಪಡಿಸಲ್ಪಡುವಂತೆ ವ್ಯವಸ್ಥೆಯೂ ಆಗಿದೆ. ಹೀಗೆ ಸಕಲ ಸಿದ್ಧತೆಗಳಾಗಿ ಜಯಕಾರ ಅತ್ಸುತ್ಸಾಹದಿಂದ ಮೊಳಗತೊಡಗಿತು. ಅಷ್ಟು ಹೊತ್ತಿಗಾಗುವಾಗ ಅರುಣೋದಯವಾಗಿ ಸೂರ್ಯದೇವ ಮೂಡಣದಿ ಮೇಲೇರಿ ಬಂದು ಬೆಳಗಾಯಿತು. ಕೂಡಲೆ ಸುಧನ್ವ ದೂತರನ್ನು ಕರೆದು “ಅರ್ಜುನನ ಬಳಿ ಹೋಗಿ, ನನ್ನ ಮುಖವಾಣಿಯನ್ನು ತಿಳಿಸಿ ಬನ್ನಿ. ಏನೆಂದರೆ ಧರ್ಮರಾಯನಿಂದ ಪೂಜಿಸಲ್ಪಟ್ಟು ಯಾಗ ನಿಯಮಾನುಸಾರ ತಿರುಗಾಟಕ್ಕೆ ಹೊರಟ ಕುದುರೆಯನ್ನು ಚಂಪಕಾವತಿಯ ಮಹಾರಾಜ ಬಂಧಿಸಿ ಸಮರ ಸಾರಿದ್ದಾರೆ. ಈಗ ಯಾಗದ ಕುದುರೆ ವ್ಯೂಹದ ಮಧ್ಯದಲ್ಲಿದೆ. ಸಾಮರ್ಥ್ಯದಿಂದ ಯುದ್ಧ ಮಾಡಿ ಕುದುರೆಯನ್ನು ಬಿಡಿಸಿಕೊಳ್ಳಬೇಕು. ಚಂಪಕಾವತಿಯ ಯುವರಾಜ ಸುಧನ್ವ ಬಳುಹುಳ್ಳ ಭಟನಾಗಿದ್ದು ಈಗ ಸೇನಾಪತಿಯಾಗಿ ನಿಯೋಜಿತನಾಗಿ ಯುದ್ಧಾಹ್ವಾನ ನೀಡಿದ್ದಾನೆ. ಸಮರ ಆರಂಭವಾಗಲಿ” ಎಂದು ನಿರೂಪಿಸಿ ಕಳುಹಿಸಿದನು.

ರಾಜಾಜ್ಞೆ ಹೊತ್ತು ಹೊರಟ ದೂತರು ಅರ್ಜುನನ ಸಮಕ್ಷ ಬಂದು ನಮಿಸಿ ವಿಚಾರವನ್ನು ಶ್ರುತ ಪಡಿಸಿದರು.

ಕೇಳಿದ ಅರ್ಜುನ ” ಭಲೇ! ಸಣ್ಣ ರಾಜ್ಯವಾದರೂ ಕ್ಷತ್ರಿಯೋಚಿತ ನಿರ್ಣಯ ವನ್ನು ಕೈಗೊಂಡ ಸ್ವಾಭಿಮಾನಿ ರಾಷ್ಟ್ರವಿದು. ಅಂಜದೆ, ಎದೆಗುಂದದೆ ರಾತ್ರಿ ಬೆಳಗಾಗುವುದರೊಳಗೆ ಸೇನೆಯನ್ನು ಸಮಾಹಿತಗೊಳಿಸಿ ವ್ಯೂಹವಾಗಿ ರಚಿಸಿ ಯುದ್ಧಾಹ್ವಾನ ನೀಡಿದ್ದು ಮೆಚ್ಚ ಬೇಕಾದ ಸಾಹಸ. ಸರಿ ನಾವು ಯುದ್ಧ ಘೋಷಣೆ ಮಾಡುತ್ತೇವೆ. ಯುದ್ಧ ಆರಂಭವಾಗಲಿ ಎಂದು ಹೇಳಿ ಕಳುಹಿಸಿದನು.

ಅರ್ಜುನ ತನ್ನ ಪಾಲನೆಯಲ್ಲಿ ಸಾಗುತ್ತಿರುವ ಯಾಗಾಶ್ವದ ಪ್ರಯಾಣಕ್ಕೆ ಜೊತೆಗಾರರಾಗಿ ಬಂದ ಪ್ರಮುಖರನ್ನು ಕರೆದು, ಪ್ರದ್ಯುಮ್ನನನ್ನು ಉದ್ದೇಶಿಸಿ “ಪ್ರದ್ಯುಮ್ನಾ! ನಮ್ಮ ಸೇನೆಗೆ ಸೇನಾಧ್ಯಕ್ಷ ನೀನು. ಯಾಗ ತುರಗದ ಯಾನ ನಿರಾಂತಕವಾಗದೆ ಈಗ ಬಂಧಿಸಲ್ಪಟ್ಟಿದೆ. ನಿಯಮಾನುಸಾರ ನಿನ್ನ ಅಭಿಪ್ರಾಯ ಕೇಳುವುದು ನನಗೆ ಕರ್ತವ್ಯ. ಏನು ನಿನ್ನ ಅಭಿಪ್ರಾಯ?”

“ನನ್ನ ತಂದೆ ಶ್ರೀಕೃಷ್ಣ, ಯಾಗದ ಕುದುರೆಯ ಬೆಂಗಾವಲಿಗೆ ನೀವು ಹೊರಟಾಗ ನನ್ನನ್ನೂ ನಿಮ್ಮೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಸಣ್ಣ ರಾಜ್ಯವಾದರೂ ಸ್ವಾಭಿಮಾನ ಬಿಡದೆ ಯುದ್ಧಕ್ಕೆ ಮುಂದಾಗಿದ್ದಾರೆ. ನನಗೆ ಅಪ್ಪಣೆಯಿತ್ತರೆ ಕ್ಷಣಾರ್ಧದಲ್ಲಿ ರಣತಂತ್ರ ನಿರೂಪಿಸಿ ಅತಿ ಶೀಘ್ರದಲ್ಲಿ ಯಾಗದ ಕುದುರೆಯನ್ನು ಬಂಧಮುಕ್ತಗೊಳಿಸುತ್ತೇನೆ” ಎಂದನು ಪ್ರದ್ಯುಮ್ನ.

ಆಗ ವೃಷಕೇತು, ಅನುಸಾಲ್ವ, ಎಲ್ಲರೂ ಜೊತೆಯಾಗಿ ಬಲಾಢ್ಯ ಸೇನೆಯನ್ನು ಸೇರಿಸಿ ಯುದ್ಧಕ್ಕೆ ಸನ್ನದ್ಧರಾದರು. ಅರ್ಜುನನ ಅಪ್ಪಣೆ ಪಡೆದು ಶಂಖನಾದ ಮಾಡುತ್ತಾ ಯುದ್ಧ ಘೋಷಣೆ ಮಾಡಿದರು.

ಸೇನೆ ಮುನ್ನುಗ್ಗಿತು ಸುಧನ್ವನಿಗೆ ಎದುರಾಗಿ ವೃಷಭಧ್ವಜ ವುಳ್ಳ ಕನಕಮಯ ರಥ ಕಾಣಿಸಿತು. ಕೂಡಲೆ ಅರ್ಥೈಸಿಕೊಂಡನು. ಬರುತ್ತಿರುವಾತ ಅರ್ಜುನನಲ್ಲ. ಯಾಕೆಂದರೆ ಅರ್ಜುನ ಕಪಿಧ್ವಜ. ಆದರೆ ಬರುತ್ತಿರುವಾತ ಸಾಮಾನ್ಯನಂತೆ ಕಾಣುತ್ತಿಲ್ಲ. ವಿಕ್ರಮಿಯಾದ ಈತನನ್ನು ನಾನೇ ಎದುರಿಸುವೆ ಎಂದು ಸುಧನ್ವನು ಮುಂದಾದನು. ಬಂದಿರುವಾತ ಯಾರೆಂದು ವಿಚಾರಿಸಿದಾಗ ಕರ್ಣ ಪುತ್ರ ವೃಷಕೇತು ಎಂದು ತಿಳಿಯಿತು. ಘನಘೋರ ಸಂಗರ ಸಾಗಿತು. ವೃಷಕೇತು ಕೂಡ ಅಸಾಮಾನ್ಯ ವೀರ. ಭೀಕರ ಸಂಗ್ರಾಮ ಸಾಗಿ ಕೊನೆಗೆ ವೃಷಕೇತು ಸೋತು ಹೋದನು. ಆ ಕೂಡಲೆ ಎದುರಾದವ ಅಸುರ ಅನುಸಾಲ್ವ. ರಣ ಭಯಂಕರನಾಗಿ ಅತಿಬಲ ಸಾಹಸ ಮೆರೆದು ಕಾದಾಡಿದರೂ ಕೈಸಾಗದೆ ಪರಾಭವಗೊಂಡು ಹಿಂದೆ ಸರಿಯಬೇಕಾಯಿತು. ಈಗ ಸ್ವಯಂ ಪ್ರದ್ಯುಮ್ನ ಸುಧನ್ವನನ್ನು ತಡೆಯಲು ಮುಂದೊತ್ತಿ ಬಂದನು.

ಶ್ರೀಕೃಷ್ಣ ರುಕ್ಮಿಣಿ ಸಂಜಾತನನ್ನು ಕಾಣುವಾಗ ಸಾಕ್ಷಾತ್ ಶ್ರೀಹರಿಯ ತದ್ರೂಪ ಕಂಡಂತೆ ಭಾಸವಾಗಿ ಸುಧನ್ವನಿಗೆ ಒಮ್ಮೆಗೆ ವೀರಾವೇಶ ಮಾಯವಾಗಿ ಭಕ್ತಿ ಜಾಗೃತವಾಯಿತು. ತಕ್ಷಣ ವಿವೇಕಿಯಾಗಿ ಬಂದಾತ ಯಾರು ನೀನೆಂದು ಕೇಳಿದಾಗ ಪ್ರದ್ಯುಮ್ನ(ಅನಿರುದ್ಧ)ನೆಂಬ ವಿಚಾರ ತಿಳಿಯಿತು. ಸಮರ ಸಮರಸದಿಂದ ಸಾಗಿತು. ಏನೇನು ವೈಶಿಷ್ಟ್ಯ ಪ್ರದರ್ಶಿಸಿದರೂ ಆ ಕ್ಷಣದಲ್ಲಿ ಪ್ರತಿರೋಧ ಮತ್ತು ಪ್ರತಿದಾಳಿ ಎದುರಾಳಿಯಿಂದ ಆಗುತ್ತಿದೆ. ಪ್ರದ್ಯುಮ್ನನೇನು ಸಾಮಾನ್ಯನೆ? ಧನುರ್ವಿದ್ಯಾ ಪಾರಂಗತ ಧನುರ್ವೇದಿ. ಭರದ ಯುದ್ಧ ಸಾಗಿತು. ಆದರೂ ಸುಧನ್ವನೆದುರು ಕೈಸೋತು ಅನಿರುದ್ಧ ಹಿಂಜರಿಯಬೇಕಾಯಿತು. ಮುಂದೊತ್ತಿ ಬಂದವರೆಲ್ಲರೂ ಸುಧನ್ವನೊಡನೆ ಸೋತ ಸಮಾಚಾರ ಕೇಳಿದ ಅರ್ಜುನ ಸ್ವಯಂ ತಾನು ಸುಧನ್ವನಿಗೆದುರಾಗಿ ಹೊರಟು ಬರಬೇಕಾಯಿತು.

ಬರುತ್ತಿರುವಾತನ ವರ್ಚಸ್ಸು, ಗಾಂಭೀರ್ಯ, ತೇಜಸ್ಸು ನೋಡಿ ಈತನು ಅರ್ಜುನನಿರಬಹುದು ಎಂದು ಕಲ್ಪಿಸಿ ಧ್ವಜ ನೋಡಿದರೆ ಕಪಿಧ್ವಜವಿದೆ. ಹೌದು ಈತನೇ ಪಾರ್ಥ ಎಂಬ ಸತ್ಯ ಸುಧನ್ವನಿಗೆ ಧೃಡವಾಯಿತು.

ಗಾಂಡೀವದ ಧನುಷ್ಟೇಂಕಾರಗೈಯುತ್ತಾ ಬಂದ ಧನುರ್ಧರ ಧನಂಜಯನ ಜೊತೆ ಪರಸ್ಪರ ಪರಿಚಯ ವಿನಿಮಯವಾಗಿ ಯುದ್ಧಾರಂಭಗೊಂಡಿತು. ತುರುಸಿನ ಯುದ್ಧ, ಮಂತ್ರಾಸ್ತ್ರಗಳ ಪ್ರಯೋಗ, ಅತಿ ವೇಗದ ಸಮರ ಸಾಗಿದರೂ ಸುಧನ್ವನನ್ನು ಅಲುಗಾಡಿಸಲಾಗುತ್ತಿಲ್ಲ. ಇದೇನು ಮಾಯೆಯೊ? ಮೋಡಿಯೊ? ಈ ಕಿರಿದಾದ ರಾಷ್ಟ್ರದಲ್ಲೂ ಇಷ್ಟು ಪ್ರಬಲ ಯುವರಾಜನೆ ಎಂದು ಅರ್ಜುನನಿಗೂ ವಿಸ್ಮಯವಾಯಿತು.

ಆಗ ಸುಧನ್ವ “ಹೇ ಪಾರ್ಥ ನೀನು ಅಸಾಧಾರಣ ಶೂರನಿರಬಹುದು. ಆದರೆ ಕೃಷ್ಣ ಸಾರಥ್ಯವಿಲ್ಲದೆ ನನ್ನನ್ನು ಗೆಲ್ಲಲಾರೆ. ಈಗಲೆ ಶ್ರೀಕೃಷ್ಣ ಪರಮಾತ್ಮನನ್ನು ಸ್ಮರಿಸಿ ನಿನ್ನ ಸಾರಥಿಯಾಗಿಸು. ಹಾಗೆ ಮಾಡದೆ, ನೀ‌ನು ಅತುಲ ವೀರನೆಂದು ಬಗೆದು ಹೋರಾಡಿದರೆ ನಿನಗೂ ಸೋಲಾದೀತು” ಎಂದು ಅರ್ಜುನನನ್ನು ಎಚ್ಚರಿಸಿದನು.

ಅರ್ಜುನ ಗಹಗಹಿಸಿ ನಗುತ್ತಾ! “ಹೇ ಸುಧನ್ವಾ! ಎಂತೆಂತಹ ವೀರರನ್ನು ದೆಸೆಗೆಡಿಸಿದ ನನಗೆ ನಿನಂತಹವರ ಉಪದೇಶವೊ? ಕನಿಷ್ಠರನ್ನು ಗೆಲ್ಲುವಲ್ಲಿ ಕೃಷ್ಣ ಸಾರಥ್ಯ ಬೇಕಾಗಿಲ್ಲ. ನನ್ನೆದುರು ಈ ತನಕ ನೀನು ನಿಂತು ಹೋರಾಡುತ್ತಿರುವುದು ವಿಶೇಷ ಎಂದು ಹೇಳಿ ತೀಕ್ಷ್ಣ ಶರ ಪ್ರಯೋಗಿಸಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page