28.7 C
Udupi
Friday, May 15, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 522

ಭರತೇಶ ಶೆಟ್ಟಿ, ಎಕ್ಕಾರು

ತನ್ನ ಅರ್ಧಾಂಗಿಯಾದ ಪ್ರಭಾವತಿಯ ಕೋರಿಕೆ ನ್ಯಾಯ ಸಮ್ಮತವಾಗಿದೆ. ನಾಳೆಯ ಸೂರ್ಯೋದಯದಿಂದ ಆರಂಭಗೊಳ್ಳಲಿರುವ ಯುದ್ಧದಲ್ಲಿ ಅರ್ಜುನನೊಡನೆ ಸಾಗಲಿರುವ ಸೆಣಸಾಟದ ಪರಿಣಾಮ ಏನೂ ಆಗಬಹುದು. ಜೀವಸಹಿತನಾಗಿ ಉಳಿದರೆ ಅದು ಅತಿಮಾನುಷ ಸಾಧನೆಯಾದೀತು. ತನ್ನಾಕೆಯ ಕೋರಿಕೆ ನಿರಾಕರಿಸುವಂತಹುದಲ್ಲ. ಯಾಕೆಂದರೆ ಮೊದಲು ಯುದ್ದೋನ್ಮುಖನಾಗಿ ನಂತರ ಪೂರೈಸುವ ಭರವಸೆ ನೀಡೋಣವೆ? ಅದು ಅಸಂಭವನೀಯವಾದರೆ ಕೊಟ್ಟ ಮಾತಿಗೆ ತಪ್ಪಿ ವಚನ ಭ್ರಷ್ಟನಾಗುವೆ. ನನಗೀಗ ಎರಡು ಪ್ರಮುಖ ಕರ್ತವ್ಯಗಳು ಎದುರಾಗಿವೆ. ಮೊದಲನೆಯದು ನನ್ನ ತಂದೆ ಚಂಪಕಾವತಿಯ ಮಹಾರಾಜ ಕ್ಷಾತ್ರಧರ್ಮದ ಕೀರ್ತಿಗನುಚಿತವಾಗಿ ಅಶ್ವಮೇಧ ಯಾಗದ ಕುದುರೆಯನ್ನು ಬಂಧಿಸಿದ್ದಾರೆ. ಈಗ ನಾವು ಯಾಗಾಶ್ವವನ್ನು ಬಿಡಿಸಲು ಬರುವ ಪಾರ್ಥನೊಡನೆ ಕಾದಾಡಬೇಕು. ಹರಿಪ್ರೀತನೂ, ಶ್ರೀಶ ಕೃಪಾರ್ಥಿಯೂ ಆಗಿರುವ ಪಾಂಡುಪುತ್ರ ಮಹಾತ್ಮ ಅರ್ಜುನ ಒಂದೊಮ್ಮೆಗೆ ನನ್ನೆದುರು ಬಂದಾಗ ಸಮರ ಮುಖದಲ್ಲಿ ಯಾರ ಸೋಲು, ಸಾವು ಸಂಭವಿಸೀತು ಎಂಬ ಸತ್ಯ ಕಲ್ಪನಾತೀತವಾದದ್ದು. ಅದೇನು ಆಗುವುದೋ ಆಗಿ ಹೋಗಲಿ. ಕರ್ಮವನ್ನು ಧರ್ಮಯುಕ್ತವಾಗಿ ಪೂರೈಸಿದ ಕಾರಣ ನನ್ನ ಬಳಿ ಕ್ಲೇಶವೇನೂ ಉಳಿಯದು. ದೇವ ಕೇಶವನು ಮುಂದಿನದ್ದನ್ನು ಅನುಗ್ರಹಿಸಬೇಕು. ಅದು ಹಾಗಿರಲಿ ಇದೀಗ ನನ್ನ ಪತ್ನಿ ತೆರೆದಿಟ್ಟಿರುವ ವಿಚಾರವೂ ಸದ್ಧರ್ಮದಿಂದ ಕೂಡಿದೆ. ವಂಶೋದ್ಧರಣ ಮಾಡಬೇಕಾದುದು ನನಗೆ ಕರ್ತವ್ಯ. ಆದರೂ ಆ ಕಾರಣದಿಂದ ನಾನಿಲ್ಲಿ ಉಳಿದೆ ಎಂದಾದರೆ ಚಂಪಕಾವತಿಯ ಸೇನಾಪತಿಯಾಗಿ ನನ್ನಿಂದ ಕರ್ತವ್ಯಲೋಪವಾದೀತು. ನನ್ನ ವೈಯಕ್ತಿಕ ವಿಚಾರ ಅಥವಾ ನಮ್ಮ ವಂಶದ ವಿಚಾರಕ್ಕಿಂತ ಸಮಗ್ರ ರಾಜ್ಯಕ್ಕೆ ಬೇಕಾದುದನ್ನು ಪೂರೈಸಬೇಕಾದುದು ನನ್ನ ಪಾಲಿಗೆ ಯುಕ್ತ ಧರ್ಮವಾಗುತ್ತದೆ. ಹೀಗೆಂದು ತೀರ್ಮಾನಿಸಿ “ಪ್ರಭಾವತೀ! ನೀನು ನನ್ನ ಧರ್ಮಪತ್ನಿ. ನಾಲ್ಕು ಪುರುಷಾರ್ಥಗಳಲ್ಲಿ ಮೊದಲ ಮೂರು – ಧರ್ಮ, ಅರ್ಥ, ಕಾಮ. ಇವುಗಳಲ್ಲಿ ಈ ತನಕ ನಿನ್ನನ್ನು ಸಹಭಾಗಿನಿಯಾಗಿಸಿದ್ದೇನೆ. ಧರ್ಮ ಕಾರ್ಯಗಳಲ್ಲಿ ನೀನು ನನ್ನ ಸಹಚಾರಿಣಿ. ವ್ರತ, ನಿಯಮ, ಸಹಕಾರ, ಪಾಲನೆ, ದೈವಭಕ್ತಿ, ಗುರುಭಕ್ತಿ, ಸತ್ಕರ್ಮ, ದಾನ, ಧರ್ಮ ಹೀಗೆ ಸುಗುಣವಾದ ಯಾವ ಕರ್ಮಗಳಿದ್ದರೂ ನಿನ್ನನ್ನುಳಿದು ನಾನೊಬ್ಬನು ಮಾಡಿದ್ದಿಲ್ಲ. ಅರ್ಥ ಎಂದರೆ ಸಂಪತ್ತು. ಹಾಗೆಂದು ಧನಕನಕಗಳು ಮಾತ್ರ ಸಂಪತ್ತು ಎಂದಾಗದು. ಅದು ಅಷ್ಟೆ ಎಂದು ತಿಳಿದರೆ ಸಂಕೀರ್ಣವಾದೀತು. ಆರೋಗ್ಯ, ನೆಮ್ಮದಿ, ಮನಶಾಂತಿ, ಸತ್ಕೀರ್ತಿಯ ಜೊತೆಗೆ ಧನಕನಕಾದಿ ಸಮಸ್ತ ಸಂಪತ್ತುಗಳ ಸಂಪಾದನೆ ಮತ್ತು ಸಂರಕ್ಷಣೆಯ ವಿಚಾರದಲ್ಲೂ ನನ್ನ ಜೊತೆಯಲ್ಲಿ ನೀನಿದ್ದು ಪರಸ್ಪರ ತಿಳಿದು ಪೊರೆದವಳು. ಇನ್ನು ಕಾಮ ಅಂದರೆ ಮನಸ್ಸು ಮತ್ತು ಶರೀರ ಏನನ್ನು ಬಯಸಿದರೂ ಅದನ್ನು ಒದಗಿಸಿಕೊಡುವಲ್ಲಿ ನಾವಿಬ್ಬರು ಪರಸ್ಪರ ಹಿಂದುಳಿದವರಲ್ಲ. ಆಹಾರ, ವಸ್ತ್ರ, ಭೂಷಣ, ವಿಹಾರ, ವಿರಾಮ, ಪ್ರಯಾಣ, ಸುಖ, ಸೌಕರ್ಯ, ಕಾರ್ಯ ಇತ್ಯಾದಿ ಏನನ್ನು ನೀನು ಬಯಸಿದ್ದರೂ ಅದನ್ನು ನಾವು ಪರಸ್ಪರ ಪೂರೈಸಿದವರಿದ್ದೇವೆ ಎಂಬ ತೃಪ್ತಿ ನನಗಿದೆ. ಕೊನೆಯದಾಗಿ ಇನ್ನೊಂದು ಪುರುಷಾರ್ಥವಿದೆ. ಅದು ಮೋಕ್ಷ ಮೊದಲ ಮೂರು ಪುರುಷಾರ್ಥಗಳನ್ನು ನಿಷ್ಠೆಯಿಂದ ಪಾಲಿಸಿದ್ದು ಹೌದಾಗಿದ್ದರೆ ಕೊನೆಯ ಪುರುಷಾರ್ಥ ಸಾಧನೆಗೆ ಪೂರಕವಾಗಿ ಸಂಚಿತ ಕರ್ಮಫಲ ದಾರಿಯನ್ನು ಸುಗಮಗೊಳಿಸುತ್ತದೆ ಎಂಬುವುದು ಶಾಸ್ತ್ರ ಖಚಿತ ವಿಚಾರ. ಈಗ ನಾನು ಪಾಲಿಸಬೇಕಾದ ಕರ್ಮ ಸಮರಮುಖದಲ್ಲಿ ನಮ್ಮ ರಾಜ್ಯದ ಕೀರ್ತಿ ಕಳೆಗುಂದದಂತೆ ಕಾಪಾಡಲು ಹೋರಾಡಬೇಕಿದೆ. ನೀ‌ನು ನನ್ನ ಅರ್ಧಾಂಗಿಯಾಗಿ ಗಂಡನಾದ ನನ್ನ ಸುಖ ಮತ್ತು ದುಃಖ ಎರಡಲ್ಲೂ ಸಮಪಾಲುದಾರಳಾಗಿ ಸಹಕರಿಸಿ ಅನುಸರಿಸಬೇಕಾಗಿದೆ. ಹಾಗಾಗಿ ನನ್ನ ಕರ್ತವ್ಯದ ಮಾರ್ಗದಲ್ಲಿ ನೀನು ತೊಡಕಾಗದೆ ಪೂರಕಳಾಗಿ ಧೈರ್ಯ ಸ್ಥೈರ್ಯವಂತಳಾಗಿ ನನ್ನನ್ನು ಸತ್ಕರ್ಮಕ್ಕೆ ಪ್ರೇರೇಪಿಸಬೇಕಾದುದು ಧರ್ಮ. ಅರ್ಜುನನೆದುರು ಸಂಗ್ರಾಮನಿರತನಾಗಿ ನನ್ನಿಂದ ಸಾಧ್ಯವಾದುದಕ್ಕಿಂತಲೂ ಅಧಿಕತಮವಾದ ಸಾಹಸ ಪ್ರದರ್ಶಿಸಿ ನಮ್ಮ ಪುರದ ಕೀರ್ತಿ ಉಳಿಸುವ ಕಾರ್ಯ ಮಾಡಲು ಮುಂದಾಗಿದ್ದೇನೆ. ಒಂದೊಮ್ಮೆಗೆ ನಾನು ಸೋತು ಸತ್ತರೂ ನೀನು ದುಃಖಿಸಬೇಕಾಗಿಲ್ಲ. ಯಾಕೆಂದರೆ ಮರ್ತ್ಯಲೋಕದಲ್ಲಿ ಜನಿಸಿರುವ ನಾವು ಮೃತ್ಯುವಶರಾಗಲೇ ಬೇಕು. ಜನನ ಮತ್ತು ಮರಣದ ಆಯ್ಕೆ ಎರಡೂ ನಮ್ಮ ಕೈಯಲ್ಲಿಲ್ಲ, ನಮಗೆ ತಿಳಿಸಿ ಅದೆರಡೂ ಸಂಭವಿಸುವುದೂ ಇಲ್ಲ. ಆದರೆ ಚಿನ್ಮಯನ ಕೃಪೆಯಿಂದ ನಿನ್ನ ಪತಿಯಾದ ನಾನೂ ಹರಿಭಕ್ತನಾಗಿದ್ದು ಆ ಧನಂಜಯನನ್ನು ಕೆಣಕಿ ನಮ್ಮ ದೇವರಾದ ಶ್ರೀಹರಿಯನ್ನು ಕಾಣುವ ಸಾಹಸ ಮೆರೆಯುತ್ತೇನೆ. ಭೂಭಾರ ಹರಣಕ್ಕಾಗಿ ಸಂಭವಿಸಿ ಬಂದಿರುವ ಲೋಕಲೋಕಗಳ ಪಾಲನಾಕರ್ತೃ ನನಗೆ ದರುಶನವಿತ್ತರೆ ಮತ್ತೆ ನನ್ನ ನಿರ್ಣಯಗಳೇನಿದ್ದರೂ ಕೈಗೂಡಿದಂತೆಯೆ ಆಗುತ್ತದೆ. ಆತನಲ್ಲಿ ಭಕ್ತನಾಗಿ ಮನಸಾರೆ ಬೇಡಿ ನನಗೆ ಬೇಕಾದುದದನ್ನು ಪಡೆಯುತ್ತೇನೆ. ಅಂದರೆ ಮೋಕ್ಷಕ್ಕಾಗಿ ಮಹಾಪೂಜೆಯಂತೆ ಯುದ್ಧ ಮಾಡುತ್ತೇನೆ. ನನ್ನ ಮರಣವನ್ನು ಮತ್ತು ಆ ಬಳಿಕದ ಗತಿಯನ್ನು ನನ್ನ ಇಚ್ಚೆಯಂತೆ ಹೊಂದಿಸಿಕೊಳ್ಳುವ ಮೋಕ್ಷ ಸಂಗ್ರಾಮ ವಾಗಿಸಿ ಕೊನೆಯ ಉಸಿರೆಳೆದು ಬಿಡುವವರೆಗೂ ಈ ಮಣ್ಣಿನ ಋಣ ತೀರಿಸಲು ಕಾದಾಡುತ್ತೇನೆ. ಪ್ರಿಯೇ! ನೀನು ನನ್ನ ಶ್ರೇಯಸ್ಸನ್ನು ಬಯಸುವವಳು ಹೌದಲ್ಲವೆ? ಮೋಕ್ಷಕ್ಕಿಂತ ಉನ್ನತವಾದುದು ಬೇರೇನು ಇರಲು ಸಾಧ್ಯ ಹೇಳು! ಅಂತಹ ಅನರ್ಘ್ಯ – ಅನನ್ಯವಾದ ಸಾಧನೆಗೆ ಅವಕಾಶ ನಮ್ಮ ಪಾದಮೂಲಕ್ಕೆ ಬಂದಿರುವಾಗ ಉತ್ಸವದ ಉತ್ಸಾಹ ನನ್ನ ಮನದಲ್ಲಿ ಪುಟಿದೇಳುತ್ತಿದೆ. ನೀ‌ನು ಸತ್ಯ ಅರಿತು ನಿನ್ನ ಗಂಡನಿಗೆ ಸಿಗಲಿರುವುದು ಜಯವೇ ಆದರೂ, ಅಥವಾ ಸಾವಿನ ಮುಖೇನ ಪರಮೋಚ್ಚ ಗತಿಯಾದ ಮೋಕ್ಷವೇ ಆದರೂ ನೀನು ಸಂತೋಷ ಪಡುತ್ತಾ ಯುದ್ಧದ ಆಕಾಂಕ್ಷಿಯಾಗಿರುವ ನನಗೆ ಸಹಕಾರಿಯಾಗು” ಎಂದು ವಿಸ್ತೃತ ವಿವರಣೆಯಿತ್ತು ಕೇಳಿ ಕೊಂಡನು.

ಆಗ ಪ್ರಭಾವತಿಗೆ ತನ್ನ ಗಂಡ ಆತನಿಗೆ ಸಾವು ಒದಗಿದರೂ ಸಂಭ್ರಮ ಸಡಗರದಿಂದ ಸ್ವೀಕರಿಸಲು ಸಿದ್ಧನಾಗಿರುವ ಸತ್ಯದ ಅರಿವಾಯಿತು. ಧರ್ಮಪತ್ನಿಯಾಗಿ ಪತಿಯ ಮರಣದ ವಿಚಾರ ನೆನೆದಾಗ ತನು ಮನಗಳು ನಡುಗಿ ಶೀತಲವಾದವು. ಆದರೂ ಸೈರಿಸಿಕೊಳ್ಳುತ್ತಾ “ಸ್ವಾಮೀ, ನೀವು ಹೇಳುತ್ತಿರುವುದು ಧರ್ಮ ಸಮ್ಮತವಾಗಿದೆ. ಪತ್ನಿಯಾಗಿ ಯಾರೂ ತನ್ನ ಪತಿಯ ಸಾವನ್ನು ಬಯಸಲಾರಳು. ಆದರೆ ನಾನು ಆ ಸತ್ಯವನ್ನು ಕಲ್ಪಿಸಿಕೊಂಡ ಕಾರಣದಿಂದ ನಿಮ್ಮಲ್ಲಿ ನನ್ನ ಆಸೆಯನ್ನು ಬೇಡಿಕೊಂಡದ್ದು. ಕೇವಲ ನನಗಾಗಿ ನಾನು ಆ ರೀತಿ ಕೇಳಿಕೊಂಡದ್ದಲ್ಲ. ನಿಮಗಾಗಿ ಮತ್ತು ನಿಮ್ಮ ಇಚ್ಚಾಪೂರ್ತಿಗಾಗಿಯೂ ನಾನು ಬಯಸಿದ ಬಯಕೆ ಈಡೇರಬೇಕು. ನೀವು ಈಗ ಹೇಳಿದ ಮೋಕ್ಷ ಪ್ರಾಪ್ತವಾಗಬೇಕಾದರೆ ಋಣತ್ರಯಗಳಿಂದ ಮೊದಲು ಮುಕ್ತರಾಗಬೇಕಲ್ಲವೇ? ದೇವಋಣ, ಋಷಿಋಣ ಮತ್ತು ಪಿತೃ ಋಣ ಗಳಿಂದ ವಿಮೋಚನೆ ಹೊಂದಿದರೆ ಮಾತ್ರ ಮೋಕ್ಷ ಸಾಧನೆ ಸಾಧ್ಯ ಎಂಬುವುದು ನಿಮಗೆ ತಿಳಿದಿದೆಯಲ್ಲವೆ? ದೇವ ಋಣ ಮುಕ್ತಿಗಾಗಿ ದೇವರು ಪ್ರಾಕೃತ ರೂಪದಲ್ಲಿ ಸೃಜಿಸಿರುವ ಪ್ರಕೃತಿಯನ್ನು ಸಂರಕ್ಷಿಸಿ ಆರಾಧಿಸಬೇಕು. ಅಂತಹ ಪ್ರಾಕೃತ ಸೃಷ್ಟಿಯ ರಕ್ಷಣೆ ಪೋಷಣೆಯನ್ನೂ ಮಾಡುತ್ತಿರಬೇಕು. ಮರ ಗಿಡ, ಕಾಡು, ಪ್ರಾಣಿ, ನದಿ, ಮಣ್ಣು, ನೀರು, ಗಾಳಿ, ಹೀಗೆ ಏನೆಲ್ಲಾ ಪ್ರಕೃತಿದತ್ತವಾಗಿದ್ದು ನಮ್ಮ ಜೀವ ಬದುಕುಳಿಯಲು ಕಾರಣವಾಗಿವೆಯೋ, ಅಂತಹವುಗಳ ಬಳಕೆಯಿಂದ ಋಣ ಸಂಚಯವಾಗುತ್ತದೆ. ಪ್ರಾಕೃತ ಆರಾಧನೆ, ಧರ್ಮಕಾರ್ಯ, ಯಾಗ ಯಜ್ಞ, ದೇವತಾ ಪ್ರೀತ್ಯರ್ಥ ಸತ್ಕರ್ಮ ಆಚರಣೆ ಮಾಡಿ ಋಣ ಸಂದಾಯದ ಸಾಕಷ್ಟು ಪ್ರಯತ್ನ ನೀವು ಮಾಡಿದ್ದೀರಿ. ಇನ್ನು ಋಷಿಋಣದ ಮುಕ್ತಿಗೂ ನಿಮ್ಮಿಂದ ಯಥಾಸಾಧ್ಯ ಶ್ರಮ ವಿನಿಯೋಗವಾಗಿದೆ. ಅಂದರೆ ಮನುಷ್ಯರಾದ ನಮಗೆ ಜ್ಞಾನ, ವಿದ್ಯೆ, ಸಂಸ್ಕಾರ ನೀಡಿದವರು ಋಷಿಗಳು. ಹಾಗಾಗಿ ಅವರಿಗೂ ನಾವು ಋಣಿಗಳಾಗುತ್ತೇವೆ. ಅಂತಹ ಋಣ ಮುಕ್ತಿಗಾಗಿ ಸಕಲ ಶಾಸ್ತ್ರದ ಅಧ್ಯಯನ, ಮನನ, ಜ್ಞಾನವೃದ್ಧಿ ಮಾಡಿಕೊಳ್ಳಬೇಕು. ನೀವು ಸಕಲ ಶಾಸ್ತ್ರ ಪಾರಂಗತರು ಆಗಿರುವಿರುವಿರಿ. ಮೂರನೆಯದ್ದಾದ ಪಿತೃಋಣ ಮುಕ್ತಿಯಾಗಬೇಕಾದರೆ ನಮಗೆ ಸಂತಾನ ಭಾಗ್ಯೋದಯವಾಗಬೇಕು. ಹೀಗಿರಲು ನಿಮ್ಮ ಧರ್ಮಪತ್ನಿ, ನನಗಾಗುತ್ತಿರುವ ಕಡುದುಃಖ ಅತಿ ಭಯ, ಆತಂಕಗಳನ್ನೆಲ್ಲಾ ಅದುಮಿಟ್ಟು ನಮ್ಮ ವಂಶ, ಸಂತಾನದ ಬೆಳವಣಿಗೆಯ ಬಗ್ಗೆ ಆಳವಾಗಿ ಯೋಚಿಸಿ ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. ಯುದ್ಧದಲ್ಲಿ ನಿಮಗೆ ಜಯವಾದರೆ ಮಹದಾನಂದವಾಗುತ್ತದೆ. ಹಾಗಾಗದೆ ಸೋಲು, ಸಾವು ಸಂಭವಿಸಿದರೆ, ಅದನ್ನು ಸಹಿಸಿ ಬದುಕುಳಿಯುವ ಶಕ್ತಿ ನನಗಿಲ್ಲ. ಆದರೂ ಪಿತೃಸದ್ಗತಿಯಾಗದೆ ಸತ್ತರೆ ಮೋಕ್ಷ ಸಾಧನೆ ಸಾಧ್ಯವಾಗದು. ಸಂತಾನಹೀನನಾದವನಿಗೆ ಮೋಕ್ಷ ಅಸಾಧ್ಯ. ನನ್ನ ಮಾತು ಮನ್ನಿಸಿ ಇಂದಿನ ರಾತ್ರಿ ನೀವು ನನ್ನ ಜೊತೆ ಕಳೆಯಬೇಕು. ಈ ರಾಜ್ಯದ ಯುವರಾಣಿಯಾಗಿಯೂ ನನಗೆ ಹೊಣೆಗಾರಿಕೆಯಿದೆ. ವಂಶೋದ್ಧರಣೆ ಮಾಡಿ ಉತ್ತರಾಧಿಕಾರಿಯನ್ನು ರಾಜ್ಯ ರಕ್ಷಣೆಗೆ ಒದಗಿಸುವುದು ನನ್ನ ಜವಾಬ್ದಾರಿ. ಪ್ರಾಣಕಾಂತಾ! ನೀವು ಆಗದು ಎನ್ನದೆ ನನ್ನ ಇಚ್ಚೆಯನ್ನು ಈಡೇರಿಸ ಬೇಕು” ಎಂದು ಸಕಾರಣವಿತ್ತು ಬೇಡಿಕೊಂಡಳು.

ಸುಧನ್ವನಿಗೆ ಸಂಸಾರಿಯಾಗಿ ಮುಕ್ತಿ ದಕ್ಕಬೇಕಾದರೆ ತಾನು ಪಿತನಾಗಬೇಕು ಎಂಬ ಸತ್ಯ ಅರಿವಾಯಿತು. ಪತ್ನಿಯ ಹೆಬ್ಬಯಕೆ ಈಡೇರಿಸುವ ಕುರಿತು ಯೋಚಿಸತೊಡಗಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page