
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಹುಮತ ಪಡೆದಿರುವ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೆ. ಪಕ್ಷದ ಹಿರಿಯ ನಾಯಕ ಸುವೆಂದು ಅಧಿಕಾರಿ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುವೆಂದು ಅಧಿಕಾರಿ ಅವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದರು. ನಾಳೆ ಬೆಳಗ್ಗೆ 11 ಗಂಟೆಗೆ ಕೊಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದಕ್ಕೂ ಮುನ್ನ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಅಧಿಕಾರಿ ಅವರ ಹೆಸರನ್ನು ಮುಂದಿರಿಸಿದರು. ಸಭೆಯಲ್ಲಿ ಅಮಿತ್ ಶಾ ಹಾಗೂ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಉಪಸ್ಥಿತರಿದ್ದರು.
ಶನಿವಾರ ನಡೆಯಲಿರುವ ಪ್ರಮಾಣವಚನ ಸಮಾರಂಭದಲ್ಲಿ ಹಲವು ಗಣ್ಯರು, ಕೈಗಾರಿಕೋದ್ಯಮಿಗಳು ಹಾಗೂ ರಾಜಕೀಯ ನಾಯಕರು ಭಾಗವಹಿಸುವ ಸಾಧ್ಯತೆ ಇದೆ.





















