32.5 C
Udupi
Sunday, May 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 510

ಭರತೇಶ ಶೆಟ್ಟಿ , ಎಕ್ಕಾರು

ಶ್ರೀಕೃಷ್ಣಾಗಮನದ ಸುದ್ದಿಯನ್ನು ದೂತ ಮುಖದಿಂದ ತಿಳಿದು ಅಧಮ್ಯವಾದ ಸಂತೋಷವನ್ನು ತಳೆಯುತ್ತಾ ಧರ್ಮರಾಯನು ಕುಲ ಪುರೋಹಿತರಾದ ಧೌಮ್ಯರನ್ನು ಮುಂದಿಟ್ಟುಕೊಂಡು ತಮ್ಮಂದಿರಾದ ಅರ್ಜುನ, ನಕುಲ, ಸಹದೇವಾದಿಗಳನ್ನು ಕೂಡಿಕೊಂಡು, ದ್ರೌಪದಿ ಸಹಿತನಾಗಿ ಸಕಲ ರಾಜ ಮರ್ಯಾದೆಯೊಂದಿಗೆ ಪುರದ ಹೊರಗೆ ನಡೆದು ಬಂದನು. ಕೃಷ್ಣನು ಬರುತ್ತಿದ್ದಾನೆ ಎಂಬ ಸುದ್ದಿ ತಿಳಿದಾಕ್ಷಣ ಧರ್ಮರಾಯನ ಮನದಲ್ಲಿ ಅಶ್ವಮೇಧಯಾಗ ಮಾಡುವ ಮುನ್ನವೇ ಮಾಡಿ ಪೂರೈಸಿದ ಸಂತೃಪ್ತಿ ತುಂಬಿಕೊಂಡಿತು. ಹಸ್ತಿನಾವತಿಯ ವಿಸ್ತಾರ ಸಾಮ್ರಾಜ್ಯದ ಸಾಮ್ರಾಟನಾಗಿದ್ದರೂ, ಬರುತ್ತಿರುವ ಕೃಷ್ಣ ತನ್ನ ಅತ್ತೆಯ ಮಗ ಸಂಬಂಧಿಯಾಗಿ ಭಾವನು ಹೌದಾದರೂ, ಧರ್ಮರಾಯನ ಭಾವ ಭಕ್ತಿಯ ಪಾರಮ್ಯದಲ್ಲಿ ತೇಲುತ್ತಿತ್ತು. ಪೂಜ್ಯ ಭಾವದಿಂದ ಇದಿರ್ಗೊಂಡು ಜೊತೆಯಾಗಿ ಕರೆತಂದು, ಸೋದರರನ್ನು ಕೂಡಿಕೊಂಡು, ಸಪತ್ನೀಕನಾಗಿ ಬಹುವಿಧ ಉಪಚಾರ, ಸತ್ಕಾರಗಳನ್ನು ಮಾಡುತ್ತಾ, ಮತ್ತೂ ಮತ್ತೂ ಉಪಚರಿಸುತ್ತಾ ಇಷ್ಟೂ ಸಾಕಾಗದು ಎಂಬಂತಹ ಅತೀವ ಹಂಬಲಿಗನಾಗಿ ಸೇವೆ ಮಾಡಿ ತನ್ನ ಮನದಣಿಯೆ ಆರಾಧಿಸಿದನು.

ಶ್ರೀಕೃಷ್ಣನು “ಅಯ್ಯಾ ಧರ್ಮಮೂರ್ತಿಯೆ! ಪಾಂಡುಪುತ್ರರಾದ ನಿಮ್ಮ ಮತ್ತು ನನ್ನ ಸಂಬಂಧ ಬೇರೆಯೆ ಆಗಿದೆ. ಆದರೆ ಲೋಕಮುಖದಲ್ಲಿ ನೀನು ಮಹಾರಾಜ. ಸಮಗ್ರ ಹಸ್ತಿನಾವತಿಯ ಸಾಮ್ರಾಟ. ರಾಜಾ ಪ್ರತ್ಯಕ್ಷ ದೇವತಾ ಎಂಬ ದೃಷ್ಟಿಯಿಂದ ನಿನ್ನ ಪ್ರಜೆಗಳು ನಿನ್ನನ್ನು ಸೇವಿಸುತ್ತಾರೆ. ರಾಜ್ಯದ ಹಿತಕ್ಕಾಗಿ ರಾಜನು ಶಾರೀರಿಕವಾಗಿಯೂ ಮಾನಸಿಕವಾಗಿಯೂ ಸ್ಥಿತನಾಗಿರುವುದು ಅತ್ಯಗತ್ಯ. ಅಂತೆಯೆ ಲೋಕ ಕಲ್ಯಾಣಾರ್ಥವಾಗಿ, ನಿನ್ನ ಮನಶಾಂತಿಗಾಗಿ ಸಂಕಲ್ಪಗೊಂಡಿರುವ ಅಶ್ವಮೇಧ ಯಾಗ ಪರಮ ಪವಿತ್ರವಾದುದು‌. ಈ ಪುಣ್ಯ ಕೈಂಕರ್ಯಕ್ಕೆ ಸಜ್ಜನರಾದವರು ಅರಿತು ಸಹಕಾರಿಗಳಾಗುತ್ತಾರೆ. ಧರ್ಮನಿರತನಾದ ನಿನಗೆ ಶ್ರೇಯಸ್ಸನ್ನು ಹರಸುತ್ತಾರೆ. ನಾನೂ ಅದೇ ಸಾಲಿನಲ್ಲಿ ನಿಂತು ನಿನ್ನ ಹಿತೈಷಿಯಾಗಿ ನನ್ನ ಕಿಂಚಿತ್ ಕಾಣಿಕೆಯನ್ನು ನಿನಗೆ ಸಮರ್ಪಿಸಲು ತಂದಿದ್ದೇನೆ. ಉದಾರ ಮನಸ್ಸಿನಿಂದ ಸ್ವೀಕರಿಸಬೇಕು” ಎಂದು ಕೇಳಿಕೊಂಡನು.

ಆಗ ಧರ್ಮರಾಯ “ಸ್ವಾಮೀ! ಲೀಲಾಮಾನುಷನಾದ ನಿನ್ನ ಮಹಿಮೆಯನ್ನು ಕಿವಿಯಿಂದ ಕೇಳಿ, ಕಣ್ಣುಗಳಿಂದ ನೋಡಿ, ಜೊತೆಗಿದ್ದು ಸ್ವತಃ ಅನುಭವಿಸಿದ ನನಗೆ ಅಪೇಕ್ಷೆಯಿರುವುದು ನಿನ್ನ ಸಾಮೀಪ್ಯ ಮಾತ್ರ. ನೀನು ತಂದಿರುವುದು ಕಿಂಚಿತ್ ಕಾಣಿಕೆ ಮಾತ್ರವಲ್ಲ, ನಮ್ಮ ಪಾಲಿಗದು ಮಹಾ ಪ್ರಸಾದ. ನಿನ್ನ ಕೃಪಾಕಟಾಕ್ಷದ ಋಣವನ್ನು ನಾವೆಂತು ತೀರಿಸಬಲ್ಲೆವು ಕೃಷ್ಣಾ?” ಎಂದು ಭಕ್ತಿಪೂರ್ವಕವಾಗಿ ಸ್ವೀಕರಿಸಿ ಧನ್ಯತಾಭಾವದಿಂದ ವಂದಿಸಿದನು.

ಅತ್ತ ಕೃಷ್ಣನ ರಾಣಿಯರ ಸೇವೆಯಲ್ಲಿ ದ್ರೌಪದಿ ಮತ್ತು ಪರಿಚಾರಕಿಯರು ನಿರತರಾಗಿದ್ದಾರೆ. ತುಸು ಹೊತ್ತು ಎಲ್ಲರೂ ಕುಶಲ ಸಮಾಚಾರ ವಿನಿಮಯ ಮಾಡುತ್ತಾ, ನಂತರ ಸಂತೋಷದಿಂದ ಸಲುಗೆಯ ಹಾಸ್ಯ ಮಾತುಗಳಿಂದ ರಂಜಿಸುತ್ತಾ ಕಾಲಕಳೆಯತೊಡಗಿದ್ದಾರೆ. ಇತ್ತ ಪಾಂಡವರೂ ಕೃಷ್ಣನೂ ಬಹಳ ಆತ್ಮೀಯತೆಯಿಂದ ಪರಿಹಾಸ ಮಾಡುತ್ತಾ, ತನ್ಮಯರಾಗಿ ಅನುಭವ ಕಥನಗಳನ್ನು ಹೇಳುತ್ತಾ, ನಕ್ಕು ನಲಿದಾಡುತ್ತಾ ಸಂಭ್ರಮಿಸುತ್ತಿದ್ದಾರೆ. ಇಂತಹ ಹರ್ಷೋತ್ಕರ್ಷದ ಸಮಯದಲ್ಲಿ ಅಲ್ಲೊಂದು ವಿಶೇಷ ನಡೆದು ಹೋಯಿತು.

ಸೌಭ ದೇಶದ ದೊರೆ ಅನುಸಾಲ್ವನಿಗೆ ಕೃಷ್ಣನ ಮೇಲೆ ವೈರ. ಆ ಪೂರ್ವದ್ವೇಷದ ಸಾಧನೆಗಾಗಿ ಸಕಾಲವನ್ನು ಕಾಯುತ್ತಿದ್ದನು. ಪಾಂಡವರ ಅಶ್ವ ಮೇಧ ಯಾಗ ನಿಮಿತ್ತವಾಗಿ ಕೃಷ್ಣ ಹಸ್ತಿನಾವತಿಗೆ ತೆರಳಿರುವ ವಿಚಾರ ತಿಳಿದುಕೊಂಡನು. ಆ ಕೂಡಲೆ ಸಿದ್ಧತೆ ಮಾಡಿಕೊಂಡು ಬಲಾಢ್ಯ ಸೇನಾ ಸಮೇತನಾಗಿ ಹಸ್ತಿನಾವತಿಯತ್ತ ಹೊರಟು ಬಂದಿದ್ದನು. ಹಾಗೆ ಬಂದವನು ಗೌಪ್ಯವಾಗಿ ಅನತಿ ದೂರದಲ್ಲಿ ಉಳಿದುಕೊಂಡಿದ್ದನು. ಸುದ್ದಿ ಚಾರಕರ ಮುಖೇನ ಹಂತ ಹಂತವಾಗಿ ಮಾಹಿತಿ ಪಡೆಯುತ್ತಾ ಅವಕಾಶಕ್ಕಾಗಿ ಕಾತರಿಸುತ್ತಿದ್ದನು. ಸೈನ್ಯ, ರಕ್ಷಣೆ, ಆಯುಧಗಳ್ಯಾವುದೂ ಇಲ್ಲದೆ ಸಲ್ಲಾಪ ನಿರತರಾಗಿರುವ ಕೃಷ್ಣ ಮತ್ತು ಪಾಂಡವರ ವರ್ತಮಾನ ತಿಳಿದ ಕೂಡಲೆ, ಇದೇ ಅತ್ಯುತ್ತಮ ಅವಕಾಶವೆಂದು ಅನುಸಾಲ್ವ ಹಠಾತ್ತಾಗಿ ದಾಳಿ ಮಾಡಿದನು. ಪಾಂಡವರು ಊಟೋಪಚಾರದ ವ್ಯವಸ್ಥೆಗಳೊಂದಿಗೆ ನಿರಾಯುಧರಾಗಿದ್ದಾರೆ. ಶ್ರೀಕೃಷ್ಣ ಬಂದಿರುವ ಸಂತಸದಲ್ಲಿ ಜಗತ್ತನ್ನು ಮರೆತು ಜಗನ್ನಾಥನ ಜೊತೆ ಮಹದಾನಂದದಿಂದ ಇರುವ ಈ ಸಮಯ ವೈರಿಗಳ ಆಕ್ರಮಣ ಅನಿರೀಕ್ಷಿವಾಗಿತ್ತು. ಆಯುಧಾಗಾರಗಳು, ಸೈನ್ಯ, ಚತುರಂಗಬಲಗಳು ಯಾವುದೂ ಅಲ್ಲಿರದೆ ಯಾವುದೆ ಯುದ್ಧ ಸಿದ್ಧತೆಗಳು ಇರಲಿಲ್ಲ. ಆಕಸ್ಮಿಕವಾಗಿ ಇದಿರಾದ ಈ ಪರಿಸ್ಥಿತಿ ಒಮ್ಮೆಗೆ ಎಲ್ಲರನ್ನೂ ದಿಗ್ಭ್ರಾಂತರನ್ನಾಗಿಸಿದೆ.

ಅಷ್ಟರಲ್ಲಿ ಅಪಾಯ ಅರಿತ ಶ್ರೀಕೃಷ್ಣನು ತನ್ನ ಪಾಂಚಜನ್ಯವನ್ನೆತ್ತಿ ರಣ ಭೀಷಣ ಧ್ವನಿಯೆಬ್ಬಿಸುತ್ತಾ ಮೊಳಗಿಸಿದನು. ಸಮರದ ಸೂಚನೆಯಿದೆಂದು ಅರಿತು ಅಲ್ಲೆಲ್ಲೋ ಇದ್ದ ಪ್ರದ್ಯುಮ್ನ, ಅನಿರುದ್ಧ, ಸಾತ್ಯಕಿ, ಸಾಂಬ, ಗಜ, ಕೃತವರ್ಮ ಮೊದಲಾದ ಯಾದವರೊಂದಿಗೆ ಘಟೋತ್ಕಚ ಪುತ್ರ ಮೇಘನಾದ, ಕರ್ಣಪುತ್ರ ವೃಷಕೇತು ಮೊದಲಾದ ವಿಕ್ರಮಿಗಳು ಸೆಟೆದು ನಿಂತರು. ಅತ್ತಲಿಂದ ಸ್ವರಕ್ಷಣೆಗೆ ಎಂಬಂತೆ ಕ್ಷಾತ್ರಯಾಣಿಯರಾದ ದ್ರೌಪದಿ, ರುಕ್ಮಿಣಿ, ಸತ್ಯಭಾಮೆಯಾದಿ ನಾರಿಯರೂ ಧನುರ್ಬಾಣಗಳನ್ನು ಧರಿಸಿ ಸನ್ನದ್ಧರಾಗಿ ಯುದ್ಧದಲ್ಲಿ ತೊಡಗಿದರು. ಶ್ರೀಕೃಷ್ಣನು ಮಾತ್ರ ಏನು ಆಗಲಿಲ್ಲ ಎಂಬಂತೆ ಮಂದಸ್ಮಿತನಾಗಿ ನಿಂತು “ಆಪತ್ಕಾಲದಲ್ಲಿ ಪುರುಷ ಸ್ತ್ರೀ ಎಂಬ ಪರಿಭೇದವಿರದು. ಎಲ್ಲರೂ ಭಯ ತೊರೆದು ತಾವೆಷ್ಟು ಶಕ್ತಿ ಸಾಮರ್ಥ್ಯವಂತರು ಎಂದು ತೋರಿಸಬಲ್ಲ ವೀರಾತ್ಮರು ಆಗುತ್ತಾರೆ” ಎಂದು ನುಡಿದು ಮತ್ತೆ ಮಂದಹಾಸ ಬೀರಿದನು. ಆಗ ಸತ್ಯಭಾಮೆಗೆ ವಿಸ್ಮಯವಾಗಿ “ಸ್ವಾಮೀ! ಇದೇನು? ಅಸುರಾರಿ ಎಂಬ ಅಭಿದಾನವಿರುವ ನೀನು ದಾನವದ್ವಂಸ ಮಾಡುವುದನ್ನು ಬಿಟ್ಟು ನಗುತ್ತಾ ನಿಂತಿರುವೆ? ಏನಿದು ನಿನ್ನ ಲೀಲೆ?” ಎಂದು ಪಟ ಪಟನೆ ಪ್ರಶ್ನಿಸ ತೊಡಗಿದಳು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page