
ನವದೆಹಲಿ: ಲಿವ್-ಇನ್ ಸಂಬಂಧದಲ್ಲಿ ದೀರ್ಘಕಾಲ ಸಹಜೀವನ ನಡೆಸಿ, ನಂತರ ಪುರುಷನ ವಿರುದ್ಧ ಅತ್ಯಾಚಾರದ ದೂರು ನೀಡುವ ಪ್ರವೃತ್ತಿ ಬಗ್ಗೆ ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಮದುವೆಯಾಗದೆ ಒಟ್ಟಿಗೆ ಬದುಕಿದ ಸಂಬಂಧದಿಂದ ದೂರವಾದರೆ ಅದು ಕ್ರಿಮಿನಲ್ ಅಪರಾಧವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸುಳ್ಳು ಮದುವೆ ಭರವಸೆ ನೀಡಿದ ಆರೋಪದಡಿ ದಾಖಲಾದ ಪ್ರಕರಣವನ್ನು ವಿಚಾರಿಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಪೀಠ, ಇದು ಪರಸ್ಪರ ಒಪ್ಪಿಗೆಯ ಲಿವ್-ಇನ್ ಸಂಬಂಧವಾಗಿದ್ದು, ಇಬ್ಬರೂ ಮಗುವಿನ ಪಾಲಕರಾಗಿದ್ದಾರೆ ಎಂದು ಗಮನಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಅತ್ಯಾಚಾರ ಆರೋಪ ಮಾಡುತ್ತಿರುವುದು ಪ್ರಶ್ನಾರ್ಹ ಎಂದು ಅಭಿಪ್ರಾಯಪಟ್ಟಿತು.
ವಯಸ್ಕರು ಸ್ವಇಚ್ಛೆಯಿಂದ ವಿವಾಹದ ಹೊರಗೆ ಒಟ್ಟಿಗೆ ಬದುಕಲು ನಿರ್ಧರಿಸಿದರೆ, ಅದರಲ್ಲಿ ಕೆಲವು ಅಪಾಯಗಳು ಸಹಜ. ವರ್ಷಗಳ ಕಾಲ ಸಹಜೀವನ ನಡೆಸಿ ನಂತರ ಬೇರ್ಪಟ್ಟ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.
ಅರ್ಜಿದಾರರ ಪರ ವಕೀಲರು, ಆರೋಪಿಯು ಮದುವೆಯ ಭರವಸೆ ನೀಡಿ ಮಹಿಳೆಯನ್ನು ಮೋಸಗೊಳಿಸಿದ್ದಾನೆ ಎಂದು ವಾದಿಸಿದರು. ಆದರೆ, ದೀರ್ಘಕಾಲದ ಸಂಬಂಧದ ಬಳಿಕ ಇಂತಹ ಆರೋಪಗಳ ಕಾನೂನು ಮಾನ್ಯತೆ ಕುರಿತು ನ್ಯಾಯಾಲಯ ಸಂದೇಹ ವ್ಯಕ್ತಪಡಿಸಿದೆ.

















