28.8 C
Udupi
Tuesday, April 28, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 505

ಭರತೇಶ ಶೆಟ್ಟಿ ,ಎಕ್ಕಾರು

ವ್ಯಾಸರು ಧರ್ಮರಾಯನ ಧರ್ಮಚಿತ್ತದ ನಿಸ್ವಾರ್ಥ ಗುಣವನ್ನು ಮನಸಾರೆ ಮೆಚ್ಚಿ “ನಿನ್ನ ಪ್ರಶ್ನೆ ಸಹಜವಾದುದಾಗಿದೆ. ನಾವು ಅದನ್ನು ಸೂಕ್ಷ್ಮವಾಗಿ ವಿವೇಚಿಸಬೇಕು. ಉತ್ತಮರಾದ ಬ್ರಾಹ್ಮಣರು ಸಿರಿವಂತಿಕೆಯನ್ನು ಬಯಸಲಾರರು. ಯಾವ ಕಾರಣಕ್ಕೂ ಸಂಗ್ರಹವನ್ನು ಮಾಡುವುದಿಲ್ಲ. ಎಷ್ಟು ಬೇಕೋ ಅಷ್ಟನ್ನು ಮಾತ್ರ ಸ್ವೀಕರಿಸಿ ವಿನಿಯೋಗಿಸುತ್ತಾರೆ. ಹೆಚ್ಚಿನದು ತಮಗೆ ಪ್ರಾಪ್ತಿಸಿದರೂ ಅದನ್ನು ಲೋಕಹಿತಕ್ಕಾಗಿ ಬಿಟ್ಟು ಬಿಡುತ್ತಾರೆ. ಮರುತ್ತ ರಾಜನು ಶಿವಾನುಗ್ರಹದಿಂದ ಪ್ರಾಪ್ತವಾದ ಧನಧಾನ್ಯವನ್ನು ಹೇರಳವಾಗಿ ದಾನ ಮಾಡಿದ್ದನು ನಿಜ. ಆದರೆ ಅವರು ಮಾತ್ರ ಎಷ್ಟು ಬೇಕಿತ್ತೊ ಅಷ್ಟನ್ನು ಮಾತ್ರ ಕೊಂಡು ಹೋಗಿದ್ದಾರೆ. ಒಮ್ಮೆ ಅವರು ಬಿಟ್ಟು ಹೋದ ಮೇಲೆ ಅದರ ಮೇಲೆ ದಾನ ಪಡೆದವನಿಗೆ ಹಕ್ಕಿರುವುದಿಲ್ಲ. ಹಾಗೆಂದು ಇಲ್ಲಿ ತೊರೆದು ಹೋದ ಬ್ರಾಹ್ಮಣರಿಗೆ ಬಿಟ್ಟು ಬಂದುದರ ಬಗ್ಗೆ ಅಪೇಕ್ಷೆ ಇರಲಿಲ್ಲ. ಅಗತ್ಯ ಇರುವವರ ಸದ್ವಿನಿಯೋಗಕ್ಕೆ ಒದಗಲಿ ಎಂದು ಬಿಟ್ಟು ಹೋಗಿದ್ದರು. ಪ್ರಕೃತಿ ಒಂದು ನಿಯಮವನ್ನು ನಮಗೆ ಬೋದನೆ ಮಾಡಿದೆ. ಅಂತಹ ನಿಯಮ ಇಲ್ಲೂ ವ್ಯವಹಾರ ರೂಪದಲ್ಲಿ ಪ್ರಕಟವಾಗಿದೆ. ದಾನ ಪಡೆದ ಬ್ರಾಹ್ಮಣರು ಪ್ರತಿಯಾಗಿ ಶುಭ ಹಾರೈಸಿ ಹೊರಟು ಹೋಗಿದ್ದಾರೆ. ಪ್ರಕೃತಿಯ ನಿಯಮ ಸಾರ್ವತ್ರಿಕವಾದುದು. ಮಳೆಯಾಗುವುದು ಎಲ್ಲರಿಗೂ ತಿಳಿದಿದೆ. ಮಳೆ ಧಾರಾಕಾರವಾಗಿ ಸುರಿದಾಗ ಭೂಮಿ ತನಗೆ ಬೇಕಾದಷ್ಟನ್ನು ಹೀರಿಕೊಂಡು ಹೆಚ್ಚಾದುದನ್ನು ಹರಿದು ಹೋಗಗೊಡುತ್ತದೆ. ಹಾಗೆ ಹೆಚ್ಚಾಗಿ ಹರಿದು ಹೋದ ನೀರು ಹಳ್ಳ, ತೊರೆ, ನದಿಗಳನ್ನು ಸೇರಿ ತುಂಬಿಕ್ಕೊಳ್ಳುತ್ತಾ ಕೊನೆಗೆ ಸಮುದ್ರ ಪಾಲಾಗುತ್ತದೆ. ಕಡಲಿನಲ್ಲಿರುವ ನೀರಿನ ಜೊತೆ ಸೇರಿದ ನೀರು ಬಿಸಿಲಿನ ಝಳಕ್ಕೆ ಆವಿಯಾಗಿ ಗಗನದಲ್ಲಿ ತೇಲುತ್ತಾ ಮೋಡವಾಗಿ ಮತ್ತೆ ಮಳೆಯಾಗಿ ಇಳೆಗೆ ತಂಪಾಗಲು ಎಲ್ಲೆಡೆ ಸುರಿಯುತ್ತದೆ. ಮರುತ್ತನ ಯಾಗದಲ್ಲಾದ ದಾನವೂ ಮಳೆಯಂತೆ ಹೆರಳವಾಗಿದ್ದರೂ ಪಡೆದವರು ಭೂಮಿಯಂತೆ ಎಷ್ಟು ಬೇಕು ಅಷ್ಟನ್ನು ಮಾತ್ರ ತಮ್ಮದಾಗಿಸಿ ಮಿಕ್ಕುಳಿದುದನ್ನು ಹಾಗಯೆ ಬಿಟ್ಟಿದ್ದಾರೆ. ಹಾಗೆ ಹೆಚ್ಚಾಗಿ ಹರಿದ ನೀರು ಮೋಡವಾಗಿ ಮತ್ತೆ ಮಳೆಯಾಗಿ ಎಲ್ಲೆಡೆ ಉಪಯೋಗವಾಗುವಂತೆ ಸುರಿಯುತ್ತದೆ. ಹಾಗೆಯೆ ಇಲ್ಲೂ ಮಿಕ್ಕುಳಿದ ದಾನ ನಿಕ್ಷೇಪವಾಗಿ ಯಾರದ್ದೊ ಸದುಪಯೋಗಕ್ಕಾಗಿ ಉಳಿದಿದೆ. ನೀನು ಅದನ್ನು ಪಡೆದು ಸದ್ವಿನಿಯೋಗ ಪಡಿಸಿದರೆ ಯಾವ ವಿಧದ ಅಪಚಾರವೂ ಆಗದು. ಹಾಗಾಗಿ ನಿಸ್ಸಂಶಯ ಚಿತ್ತ ಹೊಂದಿ ನೀನು ಶಿವಾನುಗ್ರಹದಿಂದ ಪ್ರಾಪ್ತವಾದ ಈ ನಿಧಿಯನ್ನು ಪುಣ್ಯಪ್ರದ ಕಾರ್ಯಕ್ಕೆ ಬಳಸಬಹುದು” ಎಂದು ಸಕಾರಣವಿತ್ತು ವಿವರಿಸಿದರು. ಧರ್ಮರಾಯನ ಮನಸ್ಸು ನಿರಾಳವಾಗಿ ಒಪ್ಪಿಕೊಂಡನು.

ಮತ್ತೆ ಮುಂದುವರಿಸಿದ ಭಗವಾನ್ ವ್ಯಾಸರು “ಧರ್ಮರಾಜಾ! ಅಶ್ವಮೇಧ ಯಾಗಕ್ಕೆ ಎಷ್ಟು ಧನಕನಕ ಸಂಪತ್ತಿದ್ದರೂ ಸಾಕಾಗದು. ಯಾಕೆಂದರೆ ಪೂಜಿಸಿ ಬಿಡುವ ಅಶ್ವ ಸುದೀರ್ಘ ಒಂದು ವರ್ಷ ಕಾಲ ಮುಕ್ತವಾಗಿ ಸಂಚರಿಸುತ್ತಿರಬೇಕು. ಆಗ ಯಾರಾದರು ಅವರ ಪುರ ಪ್ರವೇಶವನ್ನು ಪ್ರಶ್ನಿಸಿ ತಡೆದು ಕಟ್ಟಿಹಾಕಬಹುದು. ಅಂತಹ ಸಮಯ ಬಳುಹುಳ್ಳ ಭಟರೊಡನೆ ಕಾದಾಡಿ ಸೋಲಿಸುತ್ತಾ ದಿಗ್ವಿಜಯ ಮುಂದುವರಿಸಬೇಕು. ನಿನ್ನ ತಮ್ಮಂದಿರಾದ ಭೀಮಾರ್ಜುನರು ಅಮಿತ ಪರಾಕ್ರಮಿ, ಅತುಲ ವಿಕ್ರಮಿಗಳೂ ಆದ ಕಾರಣ ದಿಗ್ವಿಜಯ ನಿನಗೆ ಸವಾಲಾಗದು. ಸಮಸ್ಯೆ ಏನಾದರು ತಲೆದೋರಿದರೆ ಶ್ರೀಕೃಷ್ಣನಿರುವಾಗ ಪರಿಹಾರ ಜಟಿಲವಾಗದು. ಆದರೆ ಈಗ ಮೊದಲಾಗಿ ನಿಮ್ಮಿಂದ ಒಂದು ಕಾರ್ಯವಾಗಬೇಕು. ಏನೆಂದರೆ ಯಾಗ ಆರಂಭ ಕಾಲದಲ್ಲಿ ಪೂಜಿಸಿ ದೇಶ ದೇಶ ಸುತ್ತಬೇಕಾದ ಕುದುರೆ ಬಹುವಿಧ ಸುಲಕ್ಷಣಗಳನ್ನು ಹೊಂದಿರಬೇಕು. ಅಂತಹ ಅಶ್ವ ದುರ್ಲಭವೇ ಸರಿ. ಭದ್ರಾವತಿ ಎಂಬ ನಗರದಲ್ಲಿ ಯವನಾಶ್ವ ಎಂಬ ಅರಸನಿದ್ದಾನೆ. ಅವನ ಬಳಿ ಇಂತಹ ಅದ್ವಿತೀಯ ಲಕ್ಷಣಗಳು ಇರುವ ಅತ್ಯುತ್ತಮ ಅಶ್ವವಿದೆ. ಆತನ ದೇಶ ಈ ದಿವ್ಯ ಅಶ್ವದಿಂದಾಗಿ ಎಲ್ಲೆಡೆ ಪ್ರಸಿದ್ಧವಾಗಿದೆ. ಆ ಕುದುರೆಯನ್ನು ಯಾಗ ಕಾರ್ಯಕ್ಕಾಗಿ ತಮ್ಮದಾಗಿಸುವುದು ವೀರ ಪುರುಷರಾದ ನಿನ್ನ ತಮ್ಮಂದಿರಿಗೆ ಅಸಾಧ್ಯ ಕಾರ್ಯವಲ್ಲ. ಸ್ವಾಮಿ ಕೃಷ್ಣನ ಅನುಗ್ರಹವಿರುವ ನಿಮಗೆ ಯಾವ ವಿಚಾರದಲ್ಲೂ ಸಂದೇಹ ಬೇಡ. ಶುಭ ಕಾರ್ಯ ಶೀಘ್ರವಾಗಿ ಪ್ರಾರಂಭವಾಗುವಂತಾಗಲಿ” ಎಂದು ಸೂಚಿಸಿದರು.

ಹೀಗೆ ಭಗವಾನ್ ವ್ಯಾಸರು ನಿರ್ದೇಶನ ನೀಡಿದಾಗ ಧರ್ಮರಾಯ ತನ್ನ ಸೋದರರತ್ತ ಒಮ್ಮೆ ನೋಡಿದನು. ಎಲ್ಲರೂ ನಾವು ಸಿದ್ಧರಿದ್ದೇವೆ ಎಂಬ ಸಮ್ಮತಿಯನ್ನು ಉತ್ಸಾಹಭರಿತ ಮುಖ ಮುದ್ರೆಯಿಂದ ವ್ಯಕ್ತಪಡಿಸಿದರು. ಸರ್ವರ ಅಭಿಮತವನ್ನು ಅರಿತು ವ್ಯಾಸರತ್ತ ಮುಖಮಾಡಿ ಕೈ ಜೋಡಿಸಿ “ಭಗವಾನ್! ನಾವು ಧನ್ಯರಾಗಿದ್ದೇವೆ. ನಿಮ್ಮ ಅನುಗ್ರಹಕ್ಕೆ ಪಾತ್ರರಾದ ನಾವು ಪುಣ್ಯವಂತರು.” ಎಂದು ಸಂತೃಪ್ತ ಭಾವದಿಂದ ನಮಿಸಿದನು.

ಅದೇ ಸಮಯ ಅಲ್ಲಿಗೆ ಶ್ರೀಕೃಷ್ಣ ಪರಮಾತ್ಮನ ಆಗಮನವಾಯಿತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page