
ನವದೆಹಲಿ: ಚುನಾವಣಾ ಆಯೋಗವು (EC) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೋಟಿಸ್ ನೀಡಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಚುನಾವಣಾ ಪ್ರಚಾರದ ವೇಳೆ ಖರ್ಗೆ ಅವರು ಮೋದಿ ಅವರನ್ನು ‘ಭಯೋತ್ಪಾದಕ’ ಎಂದು ಉಲ್ಲೇಖಿಸಿದ್ದು ಈ ಹೇಳಿಕೆ ಹೊರಬಂದ ಬಳಿಕ ದೇಶದಾದ್ಯಂತ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವರು ಹಾಗೂ ಪಕ್ಷದ ಪ್ರಮುಖರು ಚುನಾವಣಾ ಆಯೋಗವನ್ನು ಸಂಪರ್ಕಿಸಿ, ಇದು ಮಾದರಿ ನೀತಿ ಸಂಹಿತೆ (MCC) ಉಲ್ಲಂಘನೆ ಎಂದು ದೂರು ಸಲ್ಲಿಸಿದ್ದಾರೆ.
ದೂರು ಆಧಾರವಾಗಿ ಕ್ರಮ ಕೈಗೊಂಡಿರುವ ಆಯೋಗವು, ಖರ್ಗೆ ಅವರಿಗೆ 24 ಗಂಟೆಗಳೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು, “ನಾನು ವ್ಯಕ್ತಿಯನ್ನು ಗುರಿಯಾಗಿಸಿಲ್ಲ; ಮೋದಿ ಆಡಳಿತದ ಶೈಲಿಯನ್ನು ‘ರಾಜಕೀಯ ಭಯೋತ್ಪಾದನೆ’ ಎಂದು ವರ್ಣಿಸಿದ್ದೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ.













