ಭಾಗ – 500
ಭರತೇಶ ಶೆಟ್ಟಿ,ಎಕ್ಕಾರು

ಧರ್ಮರಾಜನ ರಾಜ್ಯಭಾರ ಆರಂಭವಾಗಿದೆ. ಶ್ರೀಕೃಷ್ಣನು ಸೂತ್ರಧಾರನಂತೆ ನಿಂತು ತಕ್ಷಣ ಮಾಡಬೇಕಾದ ಕಾರ್ಯಗಳ ಸೂಚನೆಯನ್ನು ನೀಡುತ್ತಾ ಮಾರ್ಗದರ್ಶನವನ್ನೀಯುತ್ತಿದ್ದಾನೆ. ಸದ್ಧರ್ಮದಿಂದ ಪ್ರಜಾಪರಿಪಾಲಕನಾಗಿ ಯುಧಿಷ್ಠಿರ ಹಸ್ತಿನಾವತಿಯಲ್ಲಿ ಬೇಕು ಬೇಕಾದ ಸಕಲ ಪ್ರಗತಿ ಕಾರ್ಯಗಳನ್ನು ಆರಂಭಿಸಿದ್ದಾನೆ. ವಿದುರನ ಮಂತ್ರಾಲೋಚನೆ, ಧೌಮ್ಯರಿಂದ ಪುರದ ಹಿತ ಬಯಸುವ ಪುರೋಹಿತ ಕಾರ್ಯಗಳು, ಭೀಮಸೇನನಿಗೆ ಯುವರಾಜ ಜವಾಬ್ದಾರಿ, ನಕುಲನ ಸೇನಾಧ್ಯಕ್ಷತೆ, ಸಹದೇವನಿಂದ ಮಹಾರಾಜನ ಸಂರಕ್ಷಣೆ ಮತ್ತು ಧರ್ಮರಾಯನ ಆಪ್ತ ಸಹಕಾರಿಯ ಹೊಣೆಗಾರಿಕೆ, ಸಂಜಯ ಮಂತ್ರಿಯಾಗಿ ಆಸ್ಥಾನದಲ್ಲಿ ಪ್ರಧಾನ ಭೂಮಿಕೆ, ಅರ್ಜುನನಿಂದ ಸಾಮ್ರಾಜ್ಯದ ಗುಪ್ತ, ಪ್ರಗತಿ, ಪರಿಶೀಲನೆ, ಪೂರ್ಣ ಪ್ರಮಾಣದ ಸೇನಾಪತಿಯ ನಿಭಾವಣೆಯೊಂದಿಗೆ ಗಜಪುರ ಈಗ ಯಾರೂ ಕಣ್ಣೆತ್ತಿ ನೋಡದಷ್ಟು ಸುಭದ್ರವೂ, ಬಲಾಢ್ಯವೂ ಆದ ರಾಷ್ಟ್ರವಾಗುತ್ತಿದೆ. ಅನ್ಯ ರಾಜರು ಹಸ್ತಿನೆಯನ್ನು ಮಾದರಿಯಾಗಿ ಅನುಸರಿಸುವಷ್ಟರ ಮಟ್ಟಕ್ಕೆ ಸಮೃದ್ಧವಾಗಿ ಹೆಸರುವಾಸಿಯಾಗ ತೊಡಗಿದೆ. ಕೃಷಿಯ ವಿಭಾಗ ನೋಡುವುದಾದರೆ ಹೇರಳವಾದ ಫಲಪುಷ್ಪ ಧಾನ್ಯಗಳು, ಗೋವುಗಳು ಅತ್ಯುತ್ಕೃಷ್ಟವಾದ ಹಾಲಿನ ಹೊಳೆಯನ್ನು ಹರಿಸುತ್ತಿವೆ. ಋಷಿ ಮುನಿಗಳು ನಿರಾಂತಕ ಮನಸ್ಥಿತಿಯವರಾಗಿ ಆಶ್ರಿತರಾಗಿದ್ದಾರೆ. ಜನರಿಗೂ ರೋಗರುಜಿನಗಳಿಲ್ಲ, ಬಡತನವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಯಥಾ ರಾಜ ತಥಾ ಪ್ರಜಾ ಎಂಬಂತೆ ಸಮಸ್ತ ಪ್ರಜಾಪರಿವಾರ ಧರ್ಮಬುದ್ಧಿಯುಕ್ತವಾಗಿ ಶಾಂತಿಯುತ ಜೀವನ ಸಾಗಿಸುತ್ತಿದ್ದಾರೆ.
ಹೀಗಿರಲು ಶ್ರೀಕೃಷ್ಣನು ಎಲ್ಲವೂ ಸಮಸ್ಥಿತಿಗೆ ಬರುತ್ತಿದೆ ಎಂದರಿತು ದ್ವಾರಕೆಯತ್ತ ಹೊರಡಲು ಸಿದ್ಧನಾದನು. ಹಿರಿಯರಿಗೆಲ್ಲಾ ವಂದಿಸಿ, ಕಿರಿಯರೆಲ್ಲರಿಗೂ ಆಶೀರ್ವದಿಸಿ ಹೊರಟು ನಿಂತಾಗ ಮತ್ತೆ ಜನರಲ್ಲಿ ಅನಾಥ ಪ್ರಜ್ಞೆ ಕಾಡತೊಡಗಿತು. ಯಾದವ ಶ್ರೇಷ್ಠನು ಇನ್ನೂ ನಮ್ಮೊಂದಿಗಿರಬೇಕು, ಬಿಟ್ಟು ಹೋಗಲೇಬಾರದು ಎಂಬಂತಹ ಆಕಾಂಕ್ಷೆ ವ್ಯಕ್ತವಾಗುತ್ತಿದೆ. ಆದರೆ ಕೃಷ್ಣನಿಗೆ ನಿಲ್ಲಲಾಗುತ್ತದೆಯೆ? ಆತನದ್ದಾದ ದ್ವಾರಕೆಯ ಜವಾಬ್ದಾರಿ ಇರುವಾಗ ಅನಿವಾರ್ಯತೆ ಎದುರಾಗಿದೆ.
ಧರ್ಮರಾಯ ಸಹಿತ ಪಾಂಡವರು, ಪ್ರಜಾಪರಿವಾರ ಪರಮಾತ್ಮ ಶ್ರೀಕೃಷ್ಣನನ್ನು ಬೀಳ್ಗೊಡಲು ಹೊರಟಿದ್ದಾರೆ. ತುಸು ದೂರದವರೆಗೆ ಜೊತೆಯಾಗಿ ಸಾಗಿ, ಕೃಷ್ಣನಿಲ್ಲದೆ ಹೇಗಾದೀತೊ ಎಂದು ಮಾನಸಿಕವಾಗಿ ದುಃಖ ಭಯಕ್ಕೆ ಕಾರಣವಾಗಿದೆ.
ಶ್ರೀಕೃಷ್ಣನು ಬಹುವಿಧ ಉಪದೇಶಗಳನ್ನು, ಮಾಡ ಬಾರದು ಎಂದಿರುವ ವಿಚಾರಗಳನ್ನು, ಪಾಲಿಸಲೇಬೇಕಾದ ಆಚಾರಗಳನ್ನು ಸಮಗ್ರವಾಗಿ ಧರ್ಮಜನಿಗೆ ಹೇಳಿದನು. ಪಾಂಡವರು ಕೇಳಿದ ಪ್ರಶ್ನೆಗಳಿಗೆಲ್ಲಾ ಸದುತ್ತರಗಳನ್ನು ನೀಡಿದನು. ಕೊನೆಗೆ “ಧರ್ಮರಾಯಾ! ಬದುಕಿನಲ್ಲಿ ಹಿಂದಿರುಗಿ ನೋಡಬೇಕಾದುದು ಬಹಳ ಅಗತ್ಯ. ಆದರೆ ಏನು ಆಗಬೇಕಾಗಿತ್ತೋ ಅದೆಲ್ಲವೂ ನೋಡುತ್ತಿದ್ದಂತೆ ಆಗಿ ಹೋಗಿದೆ. ಆದರೆ ನೀವು ಧರ್ಮದ ಪಕ್ಷದಲ್ಲಿ ನಿಂತ ಕಾರಣ ಅಂತಿಮ ಜಯ ನಿಮಗೊದಗಿದೆ. ಇನ್ನು ಮುಂದೆಯೂ ಧರ್ಮದ ಪಥದಲ್ಲಿ ಮುಂದುವರಿಯಿರಿ, ನಿಶ್ಚಿಂತರಾಗಿರಿ. ಆದರೆ ನೀವು ಯಾವ ಕಾರಣಕ್ಕೂ ಎಲ್ಲಾ ಸರಿಯಿದೆ ಎಂಬ ಔದಾಸಿನ್ಯ ತೋರಬಾರದು. ಎಚ್ಚರಿಕೆ ಸದಾ ಜಾಗೃತವಾಗಿರಲಿ. ನಿಮಗೆ ಸನ್ಮಂಗಲವಾಗಲಿ” ಎಂದು ನುಡಿದು ಪ್ರಯಾಣ ಬೆಳೆಸಿದನು. ಪಾಂಡವರು ಅನುಸರಿಸಿ ಬಂದವರ ಜೊತೆ ಹಸ್ತಿನೆಯತ್ತ ತಿರುಗಿ ಬಂದರು. ಶ್ರೀಕೃಷ್ಣನ ರಥ ದ್ವಾರಕೆಯತ್ತ ಹಾರಿತು.
ಇತ್ತ ಹಸ್ತಿನಾವತಿಯಲ್ಲಿ ಪ್ರಜೆಗಳು ಸಂತೋಷದಿಂದ ಬದುಕುತ್ತಿದ್ದಾರೆ. ಈ ತನಕ ಇದ್ದ ಆತಂಕಗಳು ದೂರವಾಗುತ್ತಿದೆ. ಕಳೆದುಕೊಂಡ ಅಪ್ಪ, ಅಣ್ಣ, ಮಾವ, ಬಂಧು, ಬಳಗ ವಿಯೋಗ ದುಃಖ ತಂದಿತ್ತಾದರೂ ಈಗ ಸಹಿಸುವ ಶಕ್ತಿ ಕಾಲ ಸರಿಯುತ್ತಾ ಪ್ರಾಪ್ತವಾಗುತ್ತಿದೆ. ಕೊನೆಗಾದರೂ ನಮಗೆ ಸರ್ವ ಸಮರ್ಥ, ಉತ್ತಮ ರಾಜ ದೊರೆತಿದ್ದಾನಲ್ಲ ಎಂಬ ಸಮಾಧಾನ ಹೊಂದಿದ್ದಾರೆ. ದುರ್ಯೋಧನನ ಆಳ್ವಿಕೆಯಲ್ಲಿ ಪ್ರಜೆಗಳಿಗೇನೂ ಕೊರತೆ ಆಗಿರದಿದ್ದರೂ, ಆತ ಪಾಂಡವರನ್ನು ಹೇಗೆ ಸೋಲಿಸುವುದು? ಕೊಲ್ಲುವುದು? ಎಂಬ ದ್ವೇಷದ ಭಾವ ಹೊತ್ತು ಬದುಕುತ್ತಿದ್ದು ತನ್ನ ಎಲ್ಲ ಗಮನವನ್ನು ಆ ವಿಚಾರದಲ್ಲಿ ವಿನಿಯೋಗಿಸುತ್ತಿದ್ದನು. ಕ್ರಮೇಣ ಈ ಸ್ಥಿತಿ ಬೆಳೆದಾಗ ಪ್ರಜೆಗಳ ಮೇಲೆ ಪರಿಣಾಮ ಬೀರುತ್ತಾ ಕೆಲವರು ಪಾಂಡವರು ಉತ್ತಮ ಎಂದೂ, ಇನ್ನುಳಿದವರು ಕೌರವನೇ ಶ್ರೇಷ್ಟ ಎಂಬ ಧೋರಣೆ ತಳೆದು ಸಾಮ್ರಾಜ್ಯದೊಳಗೆ ದ್ವಂದ್ವ ಭಾವದ ಗುಂಪುಗಾರಿಕೆಗಳು ಬುಗಿಳೇಳುತ್ತಿದ್ದವು. ಈ ಕಾರಣದಿಂದ ಜನರ ಜೀವನ ಪರಸ್ಪರ ಎದುರು ಪಂಗಡದ ವಿರುದ್ದ ವೈರ ಭಾವವನ್ನು ತಳೆದು ಎಲ್ಲೆಡೆ ಅಶಾಂತಿ ಪಸರಿಸಿಕೊಂಡಿತ್ತು.
ಆದರೆ ಈಗ ಅಂತಹ ಯಾವುದೆ ಅಂತರಗಳಿಲ್ಲ. ಎಲ್ಲರೂ ಸುಖಿಗಳಾಗಿ ಜೀವಿಸುತ್ತಿದ್ದಾರೆ. ಆದರೂ ಧರ್ಮರಾಯನಿಗೆ ಮನದಲ್ಲಿ ಏನೋ ತಳಮಳ. ತಾನು ರಾಜನಾಗುವಲ್ಲಿ ಬಹು ದೋಷಕರವಾದ ಬಂಧು ಹತ್ಯೆ ಮಾಡಬೇಕಾಯಿತು ಎಂಬ ಚಿಂತೆ ಬೆಳೆಯುತ್ತಿತ್ತು. ದೊಡ್ಡಪ್ಪ ಧೃತರಾಷ್ಟ್ರ, ಗಾಂಧಾರಿಯರನ್ನು ಕಂಡಾಗ, ಅವರ ದುಃಖವನ್ನು ಅರಿತು ಅನುಭವಿಸಿದಾಗ ತನಗೂ ಅತೀವ ವೇದನೆಯಾಗುತ್ತಿತ್ತು. ಕಾರಣ ಅವರು ಪುತ್ರವಿಯೋಗಕ್ಕೊಳಗಾಗಿ ಕೊರಗುವಂತಾಗಲು ತಾನು ಕಾರಣ ಎಂಬ ವ್ಯಥೆ, ಜಗದಲ್ಲಿ ಪುರುಷೋತ್ತಮ ಸ್ವರೂಪಿ ಅಜ್ಜ ಭೀಷ್ಮರಿಗೆ ಒದಗಿದ ಸ್ಥಿತಿ, ಜ್ಞಾನದಾನವಿತ್ತ ಗುರು ದ್ರೋಣರು, ಸೋದರರಾದ ನೂರು ಮಂದಿ ಕೌರವರು ಹೀಗೆ ಅಗಣಿತ ಸಂಖ್ಯೆಯ ಮಿತ್ರರ ಸಾವಿಗೆ ಕಾರಣನಾದೆನಲ್ಲ! ಇವರೆಲ್ಲರನ್ನು ಕೊಲೆಗೈದ ಪಾತಕಿ ನಾನಾಗಿ ಹೋದೆನಲ್ಲ ಎಂದು ಸ್ಮರಣೆ ಮಾಡುತ್ತಾ ಕೊರಗಿ ಕರಗಿ ಹೋಗುತ್ತಿದ್ದನು.
ಹೀಗಿರಲು ಒಂದು ದಿನ ಭಗವಾನ್ ವೇದವ್ಯಾಸರು ಧರ್ಮರಾಯನ ಆಸ್ಥಾನಕ್ಕೆ ಬಂದರು.
ಮುಂದುವರಿಯುವುದು…













