
ಬೆಂಗಳೂರು: ಎಸ್ಎಸ್ಎಲ್ಸಿ ಹಿಂದಿ ವಿಷಯಕ್ಕೆ ಅಂಕ ನೀಡುವ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಗ್ರೇಡ್ ಬದಲಿಗೆ ಅಂಕ ನೀಡುವಂತೆ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರ ಪೀಠ ಸೂಚನೆ ನೀಡಿದ್ದು, ಸರ್ಕಾರದ ಮರುಪರಿಶೀಲನಾ ಅರ್ಜಿಯೂ ಇತ್ಯರ್ಥವಾಗಿದೆ.
ಸರ್ಕಾರ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರೂ, ಅಧಿಸೂಚನೆಯಲ್ಲಿ ಉಲ್ಲೇಖಿಸದ ಗ್ರೇಡಿಂಗ್ ಪದ್ಧತಿಯನ್ನು ನಂತರ ಜಾರಿಗೆ ತರುವುದು ಸರಿಯಲ್ಲ ಎಂದು ತಿಳಿಸಿದ ನ್ಯಾಯಾಲಯ ನಿಯಮ ರೂಪಿಸುವ ಮೊದಲು ಮೌಲ್ಯಮಾಪನ ವಿಧಾನ ಬದಲಾವಣೆ ಅನೌಚಿತ್ಯ ಎಂದು ಸ್ಪಷ್ಟಪಡಿಸಿದೆ.
ಚಿಕ್ಕಮಗಳೂರಿನ ವಿದ್ಯಾರ್ಥಿನಿಯರ ಅರ್ಜಿಯ ಹಿನ್ನೆಲೆಯಲ್ಲಿ 2025-26ನೇ ಸಾಲಿನಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ. ತೃತೀಯ ಭಾಷೆಗೆ ಗ್ರೇಡಿಂಗ್ ಜಾರಿಗೆ ಸರ್ಕಾರ ಮುಂದಾದುದು ಶಿಕ್ಷಕರು ಹಾಗೂ ಪೋಷಕರ ವಿರೋಧಕ್ಕೆ ಕಾರಣವಾಗಿತ್ತು. ಅಂಕ ನೀಡದಿದ್ದರೆ ವಿದ್ಯಾರ್ಥಿಗಳ ಆಸಕ್ತಿ ಕುಗ್ಗಿ, ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಿನ್ನಡೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು.













