
ಬೆಂಗಳೂರು: ಅಮೆರಿಕಾ–ಇಸ್ರೇಲ್–ಇರಾನ್ ಸಂಘರ್ಷದ ಪರಿಣಾಮ ಜಾಗತಿಕ ಪೂರೈಕೆ ಸರಪಳಿ ಅಸ್ತವ್ಯಸ್ತಗೊಂಡಿದ್ದು, ಬೆಂಗಳೂರಿನಲ್ಲಿ ಕಳೆದ ಮೂರು ವಾರಗಳಿಂದ ವಾಣಿಜ್ಯ LPG ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಇದರಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.
ಇದೀಗ ಕಚ್ಚಾ ತೈಲ ಹಾಗೂ ಪೆಟ್ರೋಕೆಮಿಕಲ್ಸ್ ಬೆಲೆ ಏರಿಕೆಯಿಂದ ಔಷಧ ಪ್ಯಾಕೇಜಿಂಗ್ ವೆಚ್ಚ ಹೆಚ್ಚಾಗಿ, ಏಪ್ರಿಲ್ ಮೊದಲ ವಾರದಿಂದ ಔಷಧ ದರಗಳು ಶೇ.15–20ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಪ್ಯಾರಸಿಟಮಾಲ್ ಸೇರಿದಂತೆ ಹೃದಯ, ಮಧುಮೇಹ, ಗ್ಯಾಸ್ಟ್ರಿಕ್ ಹಾಗೂ ಕೆಮ್ಮಿನ ಔಷಧಗಳು ಸೇರಿದಂತೆ 600ಕ್ಕೂ ಹೆಚ್ಚು ಅವಶ್ಯಕ ಔಷಧಗಳ ಬೆಲೆ ಏರಿಕೆಯಾಗಲಿದ್ದು, ಸೌಂದರ್ಯವರ್ಧಕ ಮತ್ತು ಮಕ್ಕಳ ಉತ್ಪನ್ನಗಳ ದರಗಳೂ ಹೆಚ್ಚಾಗಲಿವೆ ಎಂದು ಸಂಘಟನೆ ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಔಷಧ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರದ ಪಾಲಿಸಿಯ ಮೇಲೆ ಅವಲಂಬಿತವಾಗಿದೆ. ಯುದ್ಧದ ಎಫೆಕ್ಟ್‌ನಿಂದ ದರ ಏರಿಕೆಯಾದರೆ ಅದು ನಮ್ಮ ಕೈಯಲ್ಲಿ ಇಲ್ಲ. ಆದರೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧದ ಕೊರತೆಯಾಗದಂತೆ ನಾವು ಕ್ರಮ ಕೈಗೊಳ್ಳುವುದಾಗಿ” ಭರವಸೆ ನೀಡಿದ್ದಾರೆ.











































