
ಬೆಂಗಳೂರು: ರಾಜ್ಯದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಕೊರತೆ ಸಮಸ್ಯೆ ಮುಂದುವರಿದಿದ್ದು, ಇದಕ್ಕೆ ತಕ್ಷಣದ ಪರಿಹಾರ ಕಂಡುಕೊಳ್ಳುವ ಲಕ್ಷಣಗಳು ಸ್ಪಷ್ಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಈ ಸಭೆಯಲ್ಲಿ IOC, HP, GAIL ಹಾಗೂ ಭಾರತ್ ಪೆಟ್ರೋಲಿಯಂ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ, ಸಿಲಿಂಡರ್ ಪೂರೈಕೆ ಮತ್ತು ವಿತರಣೆ ಕುರಿತಂತೆ ವಿಸ್ತೃತ ಚರ್ಚೆ ನಡೆಸಲಾಯಿತು. ಸಮಸ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಕೇಂದ್ರ ಸರ್ಕಾರವು ರಾಜ್ಯಕ್ಕೆ ಹೆಚ್ಚುವರಿಯಾಗಿ 20% ವಾಣಿಜ್ಯ ಸಿಲಿಂಡರ್ ಪೂರೈಕೆ ಮಾಡಲು ಒಪ್ಪಿಗೆ ಸೂಚಿಸಿರುವುದಾಗಿ ಸಚಿವರು ಮಾಹಿತಿ ನೀಡಿದರು. ಆದರೆ ಸಿಲಿಂಡರ್‌ಗಳ ಕಪ್ಪು ಮಾರುಕಟ್ಟೆ ಮತ್ತು ಅಕ್ರಮ ಮಾರಾಟವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.
ಈ ಕ್ರಮದ ಭಾಗವಾಗಿ, ಹೋಟೆಲ್‌ಗಳು ಸೇರಿದಂತೆ ಎಲ್ಲಾ ವಾಣಿಜ್ಯ ಬಳಕೆದಾರರು ಒಂದು ವಾರದೊಳಗೆ GAIL ಕಂಪನಿಯೊಂದಿಗೆ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಮಾಡಿಸದ ಬಳಕೆದಾರರಿಗೆ ಸಿಲಿಂಡರ್ ಪೂರೈಕೆ ನಿರ್ಬಂಧಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ಈ ವ್ಯವಸ್ಥೆಯಿಂದ ಅಕ್ರಮ ವಿತರಣೆಗೆ ಕಡಿವಾಣ ಬೀಳುವ ಜೊತೆಗೆ, ಭವಿಷ್ಯದಲ್ಲಿ GAIL ಪೈಪ್‌ಲೈನ್ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲು ಅನುಕೂಲವಾಗಲಿದೆ. ಪ್ರಸ್ತುತ ರಾಜ್ಯದಲ್ಲಿ ದಿನಕ್ಕೆ ಸುಮಾರು 15,000 ರಿಂದ 16,000 ವಾಣಿಜ್ಯ ಸಿಲಿಂಡರ್‌ಗಳ ಬೇಡಿಕೆ ಇದೆ ಎಂದು ಅಂದಾಜಿಸಲಾಗಿದೆ.






















































