ಈ ಯೋಜನೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಉಂಟುಮಾಡಿದೆ: ಉದಯ ಶೆಟ್ಟಿ,ಮುನಿಯಾಲು
ಶ್ರೀ ಭುವನೇಂದ್ರ ಕಾಲೇಜ್, ಕಾರ್ಕಳ

ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ ಉಡುಪಿ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಉಡುಪಿ ಇದರ ಯುವನಿಧಿ ಮಾಹಿತಿ ಕಾರ್ಯಾಗಾರ ಹಾಗೂ ಕೌಶಲ್ಯ ಮತ್ತು ಉದ್ಯೋಗ ಮಾಹಿತಿ ಕಾರ್ಯಕ್ರಮವು ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಮತ್ತು ಉದ್ಯೋಗ ಮಾಹಿತಿ ಕೋಶ ಇದರ ಸಹಯೋಗದೊಂದಿಗೆ ನೆರವೇರಿತು.
ಪಂಚ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷರಾದ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ಸಮಾಜದ ಕಟ್ಟ ಕಡೆಯ ಜನರನ್ನು ಮುಟ್ಟುವುದು ಹೇಗೆ ಎನ್ನುವ ಗುರಿಯೊಂದಿಗೆ ಹುಟ್ಟಿಕೊಂಡ ಯೋಜನೆಗಳಲ್ಲಿ ಯುವನಿಧಿ ಇಂದು ಸಾರ್ಥಕತೆಯನ್ನು ಪಡೆಯುತ್ತ ಸಾಗುತ್ತಿದೆ. ಉದ್ಯೋಗದ ಅವಕಾಶ ಹಳ್ಳಿಗಳಲ್ಲಿ ಕಡಿಮೆಯಾಗಿರುವಾಗ ಈ ಯೋಜನೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಅಲ್ಪ ಮಟ್ಟಿಗೆ ಆರ್ಥಿಕ ಭದ್ರತೆಯನ್ನು ಕೊಡುವಂತೆ ಮಾಡಿದೆ.
ಉದ್ಯೋಗದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳು ಹೆಚ್ಚಿನ ಸಂಬಳದ ನಿರೀಕ್ಷೆಯನ್ನು ಉದ್ಯೋಗದ ಆರಂಭದಲ್ಲಿ ಇಟ್ಟುಕೊಳ್ಳಬಾರದು. ಉದ್ಯೋಗ ಪಡೆಯಲು ಇರುವ ದಾರಿಯನ್ನು ಮೊದಲು ಗುರುತಿಸಬೇಕು.ಒಂದೊಂದೇ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುತ್ತಾ ಸಾಧನೆಯನ್ನು ಮಾಡಬೇಕು.ಬದುಕಿನಲ್ಲಿ ಏರಿಳಿತಗಳಾದಾಗ ಕುಗ್ಗದೆ ಮುಂದೆ ಸಾಗುವ ಪ್ರಯತ್ನವನ್ನು ಮಾಡಬೇಕು.
ಜೊತೆಗೆ, ಸದಾ ಸಮಾಜಮುಖೀ ಕೆಲಸಗಳಲ್ಲಿ ತೊಡಗುತ್ತಾ, ಸಮಾಜದ ಆಗುಹೋಗುಗಳ ಬಗ್ಗೆ ಗಮನ ಹರಿಸಬೇಕು.ಎಲ್ಲವನ್ನು ಅರಿತುಕೊಳ್ಳುವುದೇ ವಿದ್ಯಾರ್ಥಿಗಳ ಮೊದಲ ಆದ್ಯತೆಯಾಗಬೇಕು ಯುವನಿಧಿಯನ್ನು ಬಳಸಿಕೊಂಡು ಪಡೆದ ಸೌಲಭ್ಯಗಳನ್ನು ಸಮಾಜಕ್ಕೆ ಹಿಂತಿರುಗಿಸುವ ಹೊಣೆಗಾರಿಕೆಯನ್ನೂ ಭವಿಷ್ಯದಲ್ಲಿ ಇಟ್ಟುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಕಳ ತಾಲೂಕು ಯುವನಿಧಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ, ಮಾಳ ಮಾತನಾಡುತ್ತಾ, ಯುವನಿಧಿಗೆ ಸಂಬಂಧಪಟ್ಟ ಎಲ್ಲ ಮಾಹಿತಿಗಳನ್ನು ಕಾಲೇಜುಗಳಿಗೆ ಹೋಗಿ ತಿಳಿಸುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎನ್ನುವುದು ಸತ್ಯ. ಪದವಿ ಆದ ಮೇಲೆ ಕೆಲಸ ಸಿಗುವವರೆಗೆ ಸಹಾಯ ಆಗಲಿ ಎಂದು ಜಾರಿಗೆ ತಂದ ಈ ಯೋಜನೆ ನಿಮಗೆ ವರವಾಗಿದೆ.ಇದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಿ ಎಂದರು.
ಉಡುಪಿ ಜಿಲ್ಲಾ ಸಮಿತಿಯ ಉದ್ಯೋಗ ಮಾಹಿತಿ ಕಾರ್ಯನಿರ್ವಾಹಕರಾದ ಕು. ಲತಾ ಇವರು ಯುವನಿಧಿಗೆ ಸಂಬಂಧಪಟ್ಟಂತೆ ಯಾವ ವಿದ್ಯಾರ್ಥಿ ಯಾವ ಸಂದರ್ಭದಲ್ಲಿ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸುವ ವಿಧಾನ ಹೇಗೆ ಅದರ ಕ್ರಮಗಳ ಕುರಿತ ಮಾಹಿತಿಯನ್ನು ಸವಿಸ್ತಾರವಾಗಿ ವಿವರಿಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ,ಡಾ. ಮಂಜುನಾಥ ಎ. ಕೋಟ್ಯಾನ್ ಇವರು, ಸರಕಾರದ ಯೋಜನೆಗಳ ಪ್ರಭಾವ ತಿಳಿಯುವುದು ಅದರ ಅಭಾವವಾದಾಗ ಮಾತ್ರ. ವಿದ್ಯಾರ್ಥಿಗಳು ನಿರುದ್ಯೋಗದ ದಿನಗಳಲ್ಲಿ ಇರುವಾಗ ಇಂತಹ ಯೋಜನೆಗಳು ನಿಜವಾದ ಅರ್ಥ ಪಡೆಯುತ್ತವೆ. ಇದರ ಅಗತ್ಯತೆ ಮತ್ತು ಅರ್ಹತೆ ಇರುವ ಕೆಲವರಿಗಾದರೂ ಸಿಕ್ಕಾಗ ಸಾರ್ಥಕವಾದಂತೆ. ನಾವು ಬದುಕುವ ಸಮಾಜವನ್ನು ನಮ್ಮ ಅಂತರಂಗದ ಭಾಗವನ್ನಾಗಿ ನೋಡಿದಾಗ ಮಾತ್ರ ಇಂತಹ ಯೋಜನೆಗಳೆಲ್ಲ ಹುಟ್ಟುತ್ತವೆ. ವಿದ್ಯಾರ್ಥಿಗಳು ಬದುಕು ನಡೆಸುವ ಹಂತದಲ್ಲಿ ದಾರಿ ತಪ್ಪದೆ ಸಾಗಬೇಕು. ಆಗ ಸರಕಾರದ ಯೋಜನೆಗಳು ಹೆಚ್ಚು ಸಫಲತೆಯನ್ನು ಪಡೆಯುತ್ತವೆ. ಈ ಸೌಲಭ್ಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿ ಕ್ಷೇಮಪಾಲನಾ ಆಧಿಕಾರಿ ಡಾ. ಈಶ್ವರ ಭಟ್ ಸ್ವಾಗತಿಸಿ, ಕಾಲೇಜಿನ ಉದ್ಯೋಗ ಮಾಹಿತಿ ಕೋಶದ ಸಂಯೋಜಕರಾದ ಜಾಯ್ಲಿನ್ ವಂದನಾ ಕಬ್ರಾಲ್ ವಂದಿಸಿದರು. ಕನ್ನಡ ವಿಭಾಗ ಮುಖ್ಯಸ್ಥರಾದ ವನಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.






