
ನವದೆಹಲಿ: ಸುಪ್ರೀಂ ಕೋರ್ಟ್ ಮಹತ್ವದ ಮತ್ತು ಐತಿಹಾಸಿಕ ತೀರ್ಪೊಂದನ್ನು ಹೊರಡಿಸಿದ್ದು ಅದೇನೆಂದರೆ ಮಗುವನ್ನು ದತ್ತು ಪಡೆದ ತಾಯಂದಿರಿಗೂ ಹೆರಿಗೆ ರಜೆಯನ್ನು ನಿರಾಕರಿಸುವಂತಿಲ್ಲ ಎಂದು ತೀರ್ಪು ನೀಡಿದೆ.
ಈ ಹಿಂದೆ ಕೇವಲ ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ದತ್ತು ಪಡೆದ ತಾಯಂದಿರಿಗೆ ಮಾತ್ರ 12 ವಾರಗಳ ಹೆರಿಗೆ ರಜೆಗೆ ಅವಕಾಶವಿತ್ತು. ಆದರೆ ಈ ವಯಸ್ಸಿನ ಮಿತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು ಮಗು ಎಷ್ಟೇ ದೊಡ್ಡದಿದ್ದರೂ ತಾಯಿ ಮತ್ತು ಮಗುವಿನ ನಡುವೆ ಬಾಂಧವ್ಯ ಬೆಳೆಯಲು ಸಮಯದ ಅಗತ್ಯ ಇರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಹೀಗಾಗಿ ಮಗು ಹುಟ್ಟಿ ಮೂರು ತಿಂಗಳು ಕಳೆದರೂ ಸಹ ಮಗು ದತ್ತು ಪಡೆದ ದಿನದಿಂದ ತಾಯಿಗೆ ಹೆರಿಗೆ ರಜೆಯ ಸೌಲಭ್ಯ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.






