ಸರಕಾರ ದೃಷ್ಟಿ ಮತ್ತು ಶ್ರವಣದೋಷ ಪೀಡಿತ ವಾದಾಗ ಜನವಿರೋಧಿ ನಿರ್ಧಾರ
ಶಾಸಕ ವಿ. ಸುನೀಲ್ ಕುಮಾರ್ ಆಕ್ರೋಶ

ಆಳುವ ಸರ್ಕಾರ ದಿವಾಳಿಯಾದಾಗ ಅಥವಾ ದೃಷ್ಟಿ ಹಾಗೂ ಶ್ರವಣ ದೋಷ ಪೀಡಿತವಾದಾಗ ಮಾತ್ರ ಇಂಥದೊಂದು ಜನವಿರೋಧಿ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯ.
ರಾಜ್ಯ ಕಾಂಗ್ರೆಸ್ ಸರ್ಕಾರ ತುಳಿಯುತ್ತಿರುವ ದುಶಾಃಸನ ಆಡಳಿತಕ್ಕೆ ಕಾರ್ಕಳ- ಅಜೆಕಾರು ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿರುವುದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಎಂದು ಶಾಸಕ ವಿ. ಸುನಿಲ್ ಕುಮಾರ್ ಸರಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯ ಸ್ಥಾಪನೆಯ ಉದ್ದೇಶವೇ ನೀರಾವರಿ ಹಾಗೂ ರೈತ ಕಲ್ಯಾಣ. ರಾಜ್ಯದಲ್ಲಿ ಈಗ ಬೇಸಿಗೆ ಪ್ರಾರಂಭವಾಗಿದ್ದು ನೀರಿನ ಸಮಸ್ಯೆ ಹಿಂದಿನ ವರ್ಷಗಳಿಗಿಂತ ತೀವ್ರ ಪ್ರಮಾಣದಲ್ಲಿ ಬಾಧಿಸುವ ಸಾಧ್ಯತೆ ಇದೆ. ಇಂಥ ಸಂದರ್ಭದಲ್ಲಿ ಈ ಏತ ನೀರಾವರಿ ಯೋಜನೆಗೆ ಸಂಬಂಧಪಟ್ಟ 2 ಕೋಟಿ ರೂ.ಗೂ ಅಧಿಕ ವಿದ್ಯುತ್ ಬಾಕಿ ನೆಪದಲ್ಲಿ ಸಂಪರ್ಕ ಕಡಿತ ಮಾಡಿರುವುದು ಅಸಮಂಜಸ ಹಾಗೂ ರೈತ ವಿರೋಧಿ ಕ್ರಮ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇಂಧನ ಇಲಾಖೆಯ ನಿರ್ವಹಣೆ ಹಾಳು ಬಿದ್ದು ಹೋಗಿದೆ. ಹೀಗಾಗಿ ಮೆಸ್ಕಾಂ ಏತ ನೀರಾವರಿ ಯೋಜನೆಯ ಪ್ಯೂಜ್ ಕಿತ್ತು ಸಂಪರ್ಕ ಕಡಿತಗೊಳಿಸಿ ಮೂರು ದಿನ ಕಳೆದರೂ ಸರ್ಕಾರ ಮೌನಕ್ಕೆ ಶರಣಾಗಿದೆ. ಸರ್ಕಾರದ ಈ ಕ್ರಮವನ್ನು ಉಗ್ರವಾಗಿ ಖಂಡಿಸುತ್ತೇನೆ. ಅನ್ನದಾತರ ಬದುಕಿನೊಟ್ಟಿಗೆ ಆಟವಾಡಬೇಡಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











































