
ಬೆಂಗಳೂರು : ದತ್ತು ನೀಡಲಾಗಿದೆ ಎಂಬ ಕಾರಣ ಮುಂದಿಟ್ಟು ವೃದ್ಧ ಹೆತ್ತ ತಾಯಿಗೆ ಜೀವನಾಂಶ ನೀಡಲು ನಿರಾಕರಿಸಿದ ಮಗನ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತಾಯಿಗೆ ಮಾಸಿಕ 8 ಸಾವಿರ ರೂ. ಜೀವನಾಂಶ ಪಾವತಿಸಬೇಕು ಎಂಬ ಅಧೀನ ನ್ಯಾಯಾಲಯಗಳ ಆದೇಶವನ್ನು ನ್ಯಾಯಾಲಯ ಸಮರ್ಥಿಸಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮೇಗಳಾಪುರ ನಿವಾಸಿ ಎಂ.ಸಿ. ಚೇತನ್ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ತಿರಸ್ಕರಿಸಿತು. ದತ್ತು ನೀಡಿದರೂ ಹೆತ್ತ ತಾಯಿಗೆ ಮಗನ ಕರ್ತವ್ಯ ತಪ್ಪುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಚೇತನ್ ಅವರನ್ನು ಅವರ ತಾಯಿ ಶಿವಲಿಂಗಮ್ಮ ತನ್ನ ಸಹೋದರಿ ಪುಟ್ಟಮ್ಮಗೆ ದತ್ತು ನೀಡಿದ್ದರಿಂದ ಜೀವನಾಂಶ ನೀಡುವ ಹೊಣೆ ಇಲ್ಲವೆಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ತಾಯಿಗೆ ನೀಡಲಾಗಿರುವ 8 ಸಾವಿರ ರೂ. ಮೊತ್ತ ಅಲ್ಪವಾಗಿದೆ; ಅದನ್ನೂ ನೀಡಲು ವಿರೋಧಿಸುವುದು ಸರಿಯಲ್ಲ ಎಂದು ಖಡಕ್ ಸೂಚನೆ ನೀಡಿದರು.
ಈ ಮೊದಲು ಮಳವಳ್ಳಿ ಜೆಎಂಎಫ್‌ಸಿ ನ್ಯಾಯಾಲಯ 2021ರಲ್ಲಿ ಶಿವಲಿಂಗಮ್ಮ ಅವರಿಗೆ ತಲಾ 8 ಸಾವಿರ ರೂ. ಜೀವನಾಂಶ ನೀಡುವಂತೆ ಚೇತನ್ ಮತ್ತು ಅವರ ಸಹೋದರ ನವೀನ್ ಕುಮಾರ್‌ಗೆ ಆದೇಶಿಸಿತ್ತು. ಆ ಆದೇಶವನ್ನು ಮಂಡ್ಯ ಜಿಲ್ಲಾ ನ್ಯಾಯಾಲಯವೂ 2025ರಲ್ಲಿ ಸ್ಥಿರಪಡಿಸಿತ್ತು. ಅದನ್ನು ಪ್ರಶ್ನಿಸಿ ಚೇತನ್ ಹೈಕೋರ್ಟ್ ಮೊರೆ ಹೋಗಿದ್ದರೂ, ಅರ್ಜಿ ವಜಾಗೊಂಡಿದೆ.






