ಭಾಗ – 447
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೪೭ ಮಹಾಭಾರತ
ಬಲಭದ್ರದೇವ ಯಾತ್ರೆ ಮುಂದುವರಿಸುತ್ತಾ ಸರಸ್ವತೀ ತಟದಲ್ಲಿ ತಪಸ್ಸು, ಗಾಯನ, ವಾದನ, ನೃತ್ಯಾದಿ ನಿರತರಾಗಿದ್ದ ವಿಶ್ವಾವಸು ಪ್ರಮುಖರಾದ ಗಂಧರ್ವರು ಆಶ್ರಿತರಾಗಿರುವ ಗಂಧರ್ವ ತೀರ್ಥದಲ್ಲೂ ಸ್ನಾನಾಚಮನಗಳನ್ನು ಮಾಡಿ ಯಾತ್ರೆ ಮುಂದುವರಿಸಿದ್ದನು.
ಅಲ್ಲಿಂದ ಗರ್ಗ ಕ್ಷೇತ್ರ – ಅನವರತವಾಗಿ ತಪಸ್ಚರ್ಯೆಯನ್ನಾಚರಿಸಿ ಪವಿತ್ರಾಂತಃಕರಣನಾಗಿದ್ದ ಮಹಾತ್ಮರಾದ ವೃದ್ಧ ಗರ್ಗರು ಇದೇ ಸರಸ್ವತಿ ನದಿ ತೀರದಲ್ಲಿದ್ದರು. ತಪಃಸ್ಶಕ್ತಿಯಿಂದ ಕಾಲಜ್ಞಾನವನ್ನು, ನಕ್ಷತ್ರಗಳ ಗತಿಯನ್ನು, ದಾರುಣವಾದ ಉತ್ಪಾತಗಳು ಸಂಭವಿಸುವುದನ್ನು, ಶುಭಲಕ್ಷಣಗಳನ್ನು ಹೀಗೆ ಭೂತ – ಭವಿಷ್ಯವನ್ನು ತಿಳಿದುಕೊಂಡಿದ್ದರು. ಮಹಾತ್ಮರಾದ ಗರ್ಗರಿಂದ ಈ ಕ್ಷೇತ್ರದಲ್ಲಿ ತೀರ್ಥ ಗರ್ಗ ಸ್ರೋತ ಎಂಬ ಹೆಸರಿನಿಂದ ಪಾಪನಾಶಿನಿಯಾಗಿ ಪ್ರಸಿದ್ಧವಾಗಿದೆ.
ಬಲರಾಮನು ಇಲ್ಲೂ ತೀರ್ಥಸ್ನಾನಗೈದು ಋಷಿ ಮುನಿಗಳ ಸೇವೆಗೈದು ದಾನ ಧರ್ಮಾದಿಗಳನ್ನು ಪೂರೈಸಿ ಮುನ್ನಡೆದು ಬಂದವನು.
ಮುಂದೆ ಬಲರಾಮನು ಶಂಖ ತೀರ್ಥಕ್ಷೇತ್ರಕ್ಕೆ ಬಂದು ಅಲ್ಲೂ ಯಥಾವತ್ತಾಗಿ ಆಚಾರಗಳನ್ನು ಪೂರೈಸಿದನು. ಸರಸ್ವತೀ ನದಿ ತೀರದಲ್ಲಿ ಮಹಾಶಂಖವೆಂಬ ಮಹಾವೃಕ್ಷವೊಂದು ಬೆಳೆದಿತ್ತು. ಮೇರು ಪರ್ವತದಂತೆ ಆ ವೃಕ್ಷ ಗಗನ ಚುಂಬಿಯಾಗಿ ವಿಶಾಲ ಭೂಮಿಯನ್ನು ಆವರಿಸಿ ಬೆಳೆದಿತ್ತು. ಋಷಿವರೇಣ್ಯರು ಸರಸ್ವತೀ ನದಿ ತೀರದ ಈ ವೃಕ್ಷದಡಿ ಆಶ್ರಿತರಾಗಿ ತಪೋ ನಿರತರಾಗಿದ್ದರು. ಈ ಶಂಖ ವೃಕ್ಷದ ಸಾಮಿಪ್ಯದಲ್ಲಿ ಯಕ್ಷರು, ವಿದ್ಯಾಧರರು, ಮಹಾತೇಜಸ್ವಿ ರಾಕ್ಷಸರು, ಮಹಾಬಲಿಷ್ಠ ಪಿಶಾಚರು, ಸಿದ್ಧರು ಸಹಸ್ರಾರು ಸಂಖ್ಯೆಯಲ್ಲಿದ್ದರು. ಇವರೆಲ್ಲರೂ ನಿರಾಹಾರಿಗಳಾಗಿ ನಿಯಮ ವ್ರತಾನುಷ್ಠಾನಪರರಾಗಿ ಮಹಾಶಂಖವೃಕ್ಷದ ಫಲ ಯಾವಾಗ ಪ್ರಾಪ್ತವಾಗುತ್ತದೋ ಅದನ್ನಷ್ಟು ಮಾತ್ರ ಭುಂಜಿಸಿ ವ್ರತ ನಿಷ್ಠರಾಗಿ ತಪಸ್ಸನ್ನು ಆಚರಿಸುತ್ತಿದ್ದರು. ಇವರೆಲ್ಲರು ಮನುಷ್ಯರ ಕಣ್ಣಿಗೆ ಅದೃಶ್ಯರಾಗಿದ್ದು ಶಂಖವೃಕ್ಷದ ಆಶ್ರಯದಲ್ಲಿದ್ದರು. ಹೀಗೆ ಬಹುವಿಧ ಗುಣದ, ಶಕ್ತಿಯ, ಋಷಿ ಮುನಿಗಳು, ರಾಕ್ಷಸ, ಪಿಶಾಚ, ಸಿದ್ದರೆಲ್ಲ ಮನೋವಾಂಛಿತ ಜ್ಞಾನ ಶಕ್ತಿಯನ್ನು ಗಳಿಸಿಕೊಳ್ಳುತ್ತಿದ್ದ ಮಹಾ ಕ್ಷೇತ್ರವಾಗಿತ್ತು. ಬಲರಾಮನೂ ಈ ಪುಣ್ಯ ಕ್ಷೇತ್ರದ ತೀರ್ಥ ಸ್ನಾನಗೈದು ದಾನ ಧರ್ಮಾದಿ ಸತ್ಕರ್ಮ ವಿರಚಿಸಿದನು. ಕೆಲದಿನಗಳ ಕಾಲ ಅಲ್ಲೇ ಕುಳಿತು ತಪಸ್ಸನ್ನಾಚರಿಸಿ ನಂತರ “ನಾಗಧನ್ವಾ” ತೀರ್ಥ ಕ್ಷೇತ್ರಕ್ಕೆ ಹೋದನು.
ಸರಸ್ವತೀ ನದಿಯ ನಾಗಧನ್ವಾ ತೀರ್ಥ ವಿಶೇಷ ತೀರ್ಥ ಕ್ಷೇತ್ರ. ಈ ತೀರ್ಥದಲ್ಲಿ ಅಗಣಿತ ಸಂಖ್ಯೆಯಲ್ಲಿ ಸರ್ಪಗಳು ಪರಿವೃತವಾಗಿವೆ. ಮಹಾ ದ್ಯುತಿಮಂತನಾದ ಸರ್ಪರಾಜ ವಾಸುಕಿಯ ಸಾನಿಧ್ಯವಿರುವ ತೀರ್ಥ ಕ್ಷೇತ್ರ. ಮಾತ್ರವಲ್ಲ ಇಲ್ಲಿ ಹದಿನಾಲ್ಕು ಸಾವಿರ ವಿಭಾಗದ ಋಷಿಗಳು ವಾಸ್ತವ್ಯವಿದ್ದು ಸಾಧನಾ ನಿರತರಾಗಿರುವುದೂ ವಿಶೇಷವೇ ಸರಿ. ಈ ಕ್ಷೇತ್ರಕ್ಕೆ ದೇವತೆಗಳೂ ಬಂದು ಪನ್ನಗ ಶ್ರೇಷ್ಠನಾದ ವಾಸುಕಿಯನ್ನು ಸರ್ವ ಸರ್ಪಗಳ ರಾಜ ನಾಗರಾಜನನ್ನು ಯಥಾವಿಧಿಯಾಗಿ ಅಭಿಷೇಚಿಸಿ ಪೂಜಿಸುತ್ತಾರೆ. ಈ ತೀರ್ಥದಲ್ಲಿ ಲಕ್ಷೋಪಲಕ್ಷ ಸರ್ಪಗಳಿದ್ದರೂ ಕ್ಷೇತ್ರ ಮಹಿಮೆ ಎಂಬಂತೆ ಯಾವ ಯಾತ್ರಾರ್ಥಿಗೂ ಹಾನಿ ಮಾಡುವುದಿಲ್ಲ. ಭಯರಹಿತರಾಗಿ ವಿಷಸರ್ಪಗಳ ಮಧ್ಯೆ ತೀರ್ಥ ಸ್ನಾನ ಮಾಡಬಹುದಾದ ಕ್ಷೇತ್ರವೇ ನಾಗಧನ್ವಾ ತೀರ್ಥ. ಈ ಕ್ಷೇತ್ರವೂ ಬಹುವಿಧ ದೋಷ, ಪಾಪ ನಾಶಿನಿಯಾಗಿದ್ದು ಸುವಿಖ್ಯಾತವಾಗಿದೆ. ಇಲ್ಲಿ ಹೆಜ್ಜೆ ಹೆಜ್ಜೆಗೂ ಸಾವಿರಾರು ತೀರ್ಥಕ್ಷೇತ್ರಗಳಿದ್ದು ಬಲರಾಮ ಎಲ್ಲಾ ತೀರ್ಥಗಳಲ್ಲೂ ಸ್ನಾನಾಚಮನಗೈದು ದಾನ ಧರ್ಮಾದಿ ಸತ್ಕರ್ಮಗಳನ್ನು ಪೂರೈಸಿದನು. ಅಲ್ಲಿರುವ ಋಷಿಗಳ ನಿರ್ದೇಶನದಲ್ಲಿ ವ್ರತ, ಉಪವಾಸಗಳನ್ನು ಆಚರಿಸಿ ಅವರೆಲ್ಲರ ಸೇವೆಗೈದು ಪ್ರಯಾಣ ಬೆಳೆಸಿದನು.
ಅಲ್ಲಿಂದ ಮುಂದೆ ಬಂದಾಗ ಸರಸ್ವತಿ ನದಿ ಒಂದು ವಿಸ್ಮಯಕ್ಕೆ ಕಾರಣಳಾಗಿದ್ದಾಳೆ. ಏನೆಂದರೆ ಅಲ್ಲಿಯವರೆಗೆ ಪಶ್ಚಿಮಾಭಿಮುಖವಾಗಿ ಹರಿಯುತ್ತಿದ್ದ ಸರಸ್ವತಿ ಒಮ್ಮಿಂದೊಮ್ಮೆಲೆ ತಿರುಗಿ ಪೂರ್ವಾಭಿಮುಖವಾಗಿ ಹಿಂತಿರುಗಿ ಹರಿಯುತ್ತಿದ್ದಾಳೆ. ಹಲಾಯುಧ ಬಲರಾಮನು ನೋಡಿ ಆಶ್ಚರ್ಯ ಭರಿತನಾಗಿದ್ದಾನೆ. ಹೀಗಾಗಲು ಮಹತ್ತರವಾದ ಹಿನ್ನೆಲೆ ಕಥೆಯಿದೆ.
ಮುಂದುವರಿಯುವುದು…
















































