
ಹೊಸದಿಲ್ಲಿ: ಪೋಕ್ಸೋ ಕಾಯ್ದೆಯ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಅದರ ಕಠಿಣ ನಿಯಮಗಳಿಂದ ನಿಜವಾದ ಹದಿಹರೆಯದ ಸಂಬಂಧಗಳಿಗೆ ವಿನಾಯಿತಿ ನೀಡುವಂತೆ ‘ರೋಮಿಯೋ–ಜೂಲಿಯೆಟ್’ ನಿಯಮವನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಕ್ರಮಕೈಗೊಳ್ಳಬೇಕೆಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಸೂಚನೆ ನೀಡಿದೆ.
ಪೋಕ್ಸೋ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುವ ಘಟನೆಗಳನ್ನು ನ್ಯಾಯಾಂಗವು ಪದೇಪದೇ ಗಮನಿಸಿರುವ ಹಿನ್ನೆಲೆಯಲ್ಲಿ, ನಿಜವಾದ ಹದಿಹರೆಯದ ಸಂಬಂಧಗಳನ್ನು ಈ ಕಾಯ್ದೆಯ ಕಟ್ಟುನಿಟ್ಟಿನಿಂದ ಹೊರತಾಗಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರನ್ನೊಳಗೊಂಡ ಪೀಠವು, ಹಳೆಯ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಈ ಕಾನೂನನ್ನು ಬಳಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸುವ ವ್ಯವಸ್ಥೆಯನ್ನು ಸರ್ಕಾರ ಪರಿಗಣಿಸಬಹುದು ಎಂದು ತೀರ್ಪಿನಲ್ಲಿ ತಿಳಿಸಿದೆ. ಈ ತೀರ್ಪಿನ ಪ್ರತಿಯನ್ನು ಭಾರತ ಸರ್ಕಾರದ ಕಾನೂನು ಕಾರ್ಯದರ್ಶಿಗಳಿಗೆ ಕಳುಹಿಸುವಂತೆ ನ್ಯಾಯಾಲಯವು ಸೂಚಿಸಿದೆ.
ಪ್ರಕರಣದ ಹಿನ್ನೆಲೆ:
ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದ ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಪೀಠವು ಪೋಕ್ಸೋ ಕಾಯ್ದೆಯಡಿ ಪ್ರಕರಣಗಳಲ್ಲಿ ಜಾಮೀನು ಹಂತದಲ್ಲಿ ವೈದ್ಯಕೀಯ ತಪಾಸಣೆಯ ಮೂಲಕ ಸಂತ್ರಸ್ಥರ ವಯಸ್ಸಿನ ನಿರ್ಣಯವನ್ನು ಕಡ್ಡಾಯಗೊಳಿಸಿ ಉಚ್ಚ ನ್ಯಾಯಾಲಯಗಳು ಆದೇಶಿಸುವಂತಿಲ್ಲ ಎಂದು ಸ್ಪಷ್ಟನೆ ನೀಡಿದೆ.
ರೋಮಿಯೋ ಜೂಲಿಯೆಟ್ ನಿಯಮ:
ಅಂದರೆ ಪರಸ್ಪರರ ವಯಸ್ಸಿನಲ್ಲಿ ಅಲ್ಪ ಅಂತರವಿರುವ ಹದಿಹರೆಯದ ಬಾಲಕ ಮತ್ತು ಬಾಲಕಿ ನಡುವೆ ಪರಸ್ಪರ ಸಮ್ಮತಿಯ ಸಂಬಂಧಗಳಿಗೆ ಕಾನೂನಿನ ರಕ್ಷಣೆಯನ್ನು ನೀಡುವ ಅಥವಾ ದಂಡನೆಯಲ್ಲಿ ಉದಾರತೆಯನ್ನು ತೋರುವ ಕಾನೂನು ತತ್ವವಾಗಿದೆ.



















