ಸ್ವಚ್ಛತೆ, ಸುರಕ್ಷತೆ ಕಾರ್ಯ ನಿರ್ವಹಿಸುವಂತೆ, ನಿರ್ಮಿತಿ ಕೇಂದ್ರಕ್ಕೆ ಡಿಸಿ ಖಡಕ್ ಸೂಚನೆ
ಶಾಸಕರ ಮನವಿಯಂತೆ, ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆಯೂ ಆದೇಶದಲ್ಲಿ ಉಲ್ಲೇಖ..?

ಕಾರ್ಕಳ: ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ಆವರಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಕುರಿತು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ನಿರ್ಮಿತಿ ಕೇಂದ್ರಕ್ಕೆ ಖಡಕ್ ಸೂಚನೆ ನೀಡಿದ್ದಾರೆ.
ಜೂನ್ 4 ರಂದು ಪರಶುರಾಮ ಥೀಂ ಪಾರ್ಕ್ ನ ಆವರಣದಲ್ಲಿ ಕಳ್ಳತನ ನಡೆದಿದೆ ಎಂಬ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ಪಾರ್ಕ್ನ ನಿರ್ವಹಣೆಯಲ್ಲಿನ ಲೋಪ ದೋಷಗಳನ್ನು ಸರಿಪಡಿಸಲು ಅಧಿಕೃತ ಜ್ಞಾಪನ ಹೊರಡಿಸಿದ್ದು ಥೀಮ್ ಪಾರ್ಕ್ ನ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಕಾರಣ ಅಲ್ಲಿನ ಬೆಲೆಬಾಳುವ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಸಾಮಗ್ರಿಗಳನ್ನು ರಕ್ಷಿಸುವ ಹೊಣೆಗಾರಿಕೆ ಅನುಷ್ಠಾನ ಸಂಸ್ಥೆಯಾದ ನಿರ್ಮಿತಿ ಕೇಂದ್ರದ್ದೆ ಆಗಿದೆ ಎಂದು ತಿಳಿಸಿದ್ದಾರೆ.
ಪಾರ್ಕ್‌ನಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳು, ಸೌಂದರ್ಯೀಕರಣ ಕೆಲಸಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಮೂಲಸೌಕರ್ಯಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚೆ ನಡೆಸಿದ ಜಿಲ್ಲಾಧಿಕಾರಿಗಳು ಪಾರ್ಕ್ ಆವರಣದಲ್ಲಿ ರಸ್ತೆ, ವಿದ್ಯುತ್, ನೀರು, ಸ್ವಚ್ಛತೆ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಇನ್ನಷ್ಟು ಸುಧಾರಿಸುವ ಅಗತ್ಯವಿದೆ ಎಂದು ಸೂಚಿಸಿದರು. ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಹಾಗೂ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು ಪಾರ್ಕ್ ಆವರಣದಲ್ಲಿ 24×7 ಭದ್ರತೆ, ಮಗು ಪಾರ್ಕ್ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಹೇಳಿದರು.
ತನಿಖೆ ನಡೆಯುತ್ತಿರುವುದರಿಂದ ಅಧಿಕೃತ ವ್ಯಕ್ತಿಗಳನ್ನು ಹೊರತುಪಡಿಸಿ ಸಾರ್ವಜನಿಕರ ಪ್ರವೇಶವನ್ನು ನಿರ್ವಹಿಸಿದ್ದು ಯಾರಾದರೂ ಅತಿಕ್ರಮ ಪ್ರವೇಶ ಮಾಡಿದರೆ ಅವರ ವಿರುದ್ಧ ಹೊಸ ಕಾಯ್ದೆಯಾದ BNSS 2023ರಡಿ ಎಫ್ಐಆರ್ ದಾಖಲಿಸಲು ಸೂಚಿಸಿದ್ದಾರೆ.
ಇನ್ನು ಜನವರಿ 10ರೊಳಗೆ ಕೈಗೊಂಡ ಕ್ರಮಗಳ ಬಗ್ಗೆ ಅನುಪಾಲನಾ ವರದಿ ಸಲ್ಲಿಸಬೇಕು. ಅಲ್ಲದೇ ಪ್ರತಿ ವಾರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಜಿಪಿಎಸ್ ಫೋಟೋದೊಂದಿಗೆ ವರದಿ ನೀಡುವಂತೆ ತಿಳಿಸಲಾಗಿದೆ.
ಸ್ಥಳೀಯ ಶಾಸಕರು ಜನವರಿ 14ರಿಂದ ಒಂದು ತಿಂಗಳ ಕಾಲ ಪಾರ್ಕ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದು ಆದರೆ ಪ್ರಕರಣ ಸಿಎಡಿ ತನಿಖೆಯಲ್ಲಿ ಇರುವುದು ಹಾಗೂ ಹೈಕೋರ್ಟ್ ನ ವಿಚಾರಣೆ ನಡೆಯುತ್ತಿರುವುದರಿಂದ ಪಾರ್ಕ್ ನ ಸುರಕ್ಷತೆಗೆ ಜಿಲ್ಲಾಡಳಿತ ಮೊದಲ ಆದ್ಯತೆ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.



















