
ಉಡುಪಿ: ಜ.9ರಂದು ಶ್ರೀ ಶ್ರೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪುರಪ್ರವೇಶ ಸಂಜೆ 3 ಗಂಟೆಯಿಂದ ನಡೆಯಲಿದೆ.
ಶ್ರೀಗಳು ಶ್ರೀ ಶೀರೂರು ಮೂಲ ಮಠದಿಂದ ಶ್ರೀ ರಾಮಚಂದ್ರ ದೇವರ ಮತ್ತು ಶ್ರೀ ಮುಖ್ಯಪ್ರಾಣ ಹಾಗೂ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವರ ದರ್ಶನ ಮಾಡಲಿದ್ದು ಮಧ್ಯಾಹ್ನ 3 ಗಂಟೆಗೆ ಕಡಿಯಾಳಿಯಿಂದ ಮೆರವಣಿಗೆಯೊಂದಿಗೆ ಪುರಪ್ರವೇಶ ಮಾಡಲಿದ್ದಾರೆ.
ಶ್ರೀ ಶಿರೂರು ಪರ್ಯಾಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರ ವತಿಯಿಂದ ಶ್ರೀಪಾದರನ್ನು ಪಟ್ಟದ ದೇವರೊಂದಿಗೆ ಕಡಿಯಾಳಿಯಲ್ಲಿ ಆದರದಿಂದ ಬರಮಾಡಿಕೊಳ್ಳಲಾಗುತ್ತದೆ.
ಪುರ ಪ್ರವೇಶದ ನಿಮಿತ್ತ ಉಡುಪಿ ನಗರ ಭಾಗದಲ್ಲಿ ಸಂಪೂರ್ಣ ಭಗವಾದ್ವಜಗಳಿಂದ ಅಲಂಕರಿಸಲಾಗಿದ್ದು ಸ್ವಾಗತ ಗೋಪುರ ಹಾಕಲಾಗಿದೆ. ಅವಿಭಜಿತ ದ.ಕ. ಜಿಲ್ಲೆಯ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ನಾಯಕರು, ಭಜನಾ ತಂಡಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿಯ ಸದಸ್ಯರು, ಯುವಕ ಯುವತಿ ಮಂಡಲದ ಸದಸ್ಯರು, ವಿವಿಧ ಕಲಾತಂಡಗಳ ಪ್ರದರ್ಶನಗಳು, ಸಂಸ್ಕೃತಿಕ ತಂಡದವರು ವಿಶೇಷ ಟ್ಯಾಬ್ಲೋಗಳ ಮೆರವಣಿಗೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿದೆ.



















