
ವಾಷಿಂಗ್ಟನ್: ಭಾರತ ಸರ್ಕಾರವು ಎಐ ಟೂಲ್ ಆಗಿರುವ ಗ್ರೋಕ್ ಬಳಸಿ ಅಶ್ಲೀಲ, ಅಸಭ್ಯ ಫೋಟೋಗಳನ್ನು ಸೃಷ್ಟಿಸಿತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ ಬೆನ್ನಲ್ಲೇ ಈ ಕುರಿತು ಮಾಲೀಕ, ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಸ್ವತಃ ಮಸ್ಕ್ ಅವರ ಫೋಟೋವನ್ನೂ ಗ್ರೋಕ್ ಬಳಸಿ ಅಶ್ಲೀಲವಾಗಿ ಚಿತ್ರಿಸಲಾಗಿದ್ದು ಅದರ ಬೆನ್ನಲ್ಲೇ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಮಸ್ಕ್, ‘ಗ್ರೋಕ್ ಬಳಸಿ ಕಾನೂನುಬಾಹಿರ ಪೋಸ್ಟ್ಗಳನ್ನು ಸೃಷ್ಟಿಸುತ್ತಿರುವವರು, ಅಂತಹ ಕಾಂಟೆಂಟ್ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ನಾವು ತಮಾಷೆ ಮಾಡುತ್ತಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
ಘಟನೆ ಹಿನ್ನೆಲೆ:
ಗ್ರೋಕ್ನಲ್ಲಿ ಕೆಲ ಬೇನಾಮಿ ಬಳಕೆದಾರರು ಮಹಿಳೆಯರ ಫೋಟೋ ಹಾಕಿ ಅದನ್ನು ಅಶ್ಲೀಲವಾಗಿ ಮಾರ್ಪಡಿಸುವಂತೆ ಕೇಳಿ ವಿಕೃತ ಆನಂದ ಪಡುತ್ತಿದ್ದರು. ಇದರ ವಿರುದ್ಧ ಎಕ್ಸ್ ಬಳಕೆದಾರರು ದನಿ ಎತ್ತಿದ ಬೆನ್ನಲ್ಲೇ ಭಾರತ ಸರ್ಕಾರ ಕೂಡ, ‘ಅಂತಹ ಅಂಶಗಳನ್ನು ಎಕ್ಸ್ನಿಂದ ತೆಗೆದುಹಾಕಬೇಕು ಮತ್ತು ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ 72 ತಾಸುಗಳ ಒಳಗಾಗಿ ವರದಿ ನೀಡಬೇಕು’ ಎಂದು ಸೂಚನೆ ನೀಡಿದೆ.






