ಭಾಗ – 246
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೨೪೭ ಮಹಾಭಾರತ
ಹೀಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಒಬ್ಬೊಬ್ಬರು ಒಂದೊಂದು ದಿಕ್ಕಿನತ್ತ ಸಾಗಿದರು. ಬೇರೆ ಬೇರೆ ಸಮಯದಲ್ಲಿ ಪ್ರತ್ಯೇಕ ವ್ಯವಸ್ಥೆಯೊಂದಿಗೆ ಪುರ ಪ್ರವೇಶ ಮಾಡಿದರು. ಯುಧಿಷ್ಟಿರನು ಯೋಜನೆಯಂತೆ ವ್ಯವಹರಿಸಿ ಸೂಕ್ತ ಸಮಯದಲ್ಲಿ ವಿರಾಟರಾಯನನ್ನು ಸಂಧಿಸಿ ಆತನ ವಿಶ್ವಾಸ ಗಳಿಸಿ ಕಂಕ ಎಂಬ ಹೆಸರಿನ ದ್ವಿಜೋತ್ತಮನಂತೆ ಪಗಡೆಯಾಟಕ್ಕೆ ಜೊತೆಗಾರನಾಗಿ ಸೇರಿಕೊಂಡನು. ಧರ್ಮರಾಯನ ತೇಜಸ್ಸನ್ನು ನೋಡಿ ವಿರಾಟನಿಗೆ ಈತ ವಿಶೇಷ ವ್ಯಕ್ತಿತ್ವವುಳ್ಳವ ಎಂದು ತರ್ಕಿಸಿ, ತೇಜಸ್ವಿ ಎಂದು ಕಲ್ಪಿಸಿಕೊಂಡು ಆಶ್ರಯ ನೀಡಿದನು. ಚಕ್ರವರ್ತಿಯಾಗಿ ಧರ್ಮರಾಯ ಸಂಭಾವನೆ ನೀಡಬಹುದು, ಆದರೆ ಪಡೆಯುವಲ್ಲಿ ನಿರ್ಬಂಧವಿದೆ. ಪೂಜನೀಯ ದೇವತೆಗಳ, ಋಷಿ ಮುನಿಗಳ, ಆಚಾರ್ಯರ, ಗುರುಗಳನ್ನು ಹೊರತು ಅನ್ಯರ ಪಾದಾಪೂಜಾದಿಗಳನ್ನು ಮಾಡುವಂತಿಲ್ಲ. ನಿತ್ಯಾನುಷ್ಠಾನ ಆಚಾರಗಳನ್ನು ಪಾಲಿಸಬೇಕಾಗಿತ್ತು. ಇದನ್ನೆಲ್ಲಾ ಯೋಚಿಸಿ ಬ್ರಾಹ್ಮಣೋತ್ತಮನಾಗಿ ಕಾಣಿಸಿಕೊಂಡು ವರ್ಣವೊಂದರಿಂದಲೆ ತನ್ನೆಲ್ಲಾ ಬಾಧ್ಯತೆಗಳಿಗೆ ಪರಿಹಾರ ಕಂಡುಕೊಂಡಿದ್ದಾನೆ.
ಸ್ವಲ್ಪ ಕಾಲ ಕಳೆದು ಭೀಮ ಅಡುಗೆಯವನಂತೆ ಬಂದು ‘ವಲಲ’ ನೆಂದು ಪರಿಚಯಿಸಿ ಪೂರ್ವ ನಿರ್ಧಾರದಂತೆ ನಟಿಸಿ ಮತ್ಸ್ಯ ದೇಶದ ಪಾಕಶಾಲೆ ಸೇರಿದನು. ನಕುಲ – ಸಹದೇವರೂ ಅಶ್ವ ಪಾಲಕ ‘ದಾಮಗ್ರಂಥಿ’ಯಾಗಿ ಮತ್ತು ಗೋ ಪಾಲಕ ‘ತಂತ್ರಿಪಾಲ’ರಾಗಿ ನೇಮಕರಾಗುವಲ್ಲಿ ಯಶಸ್ವಿಯಾದರು.
ಹೀಗಿರಲು ದ್ರೌಪದಿಯು ತನ್ನ ಕೂದಲನ್ನು ಅರ್ಧ ಮೇಲಕ್ಕೆತ್ತಿ ಬಲಗಡೆಯಿಂದ ಇಳಿಬಿಟ್ಟು ಮಾಸಿದ ಸೀರೆ ಉಟ್ಟು ರಾಜ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಈಕೆಯ ಸ್ನಿಗ್ಧ ಸೌಂದರ್ಯ ಕಂಡು ಕೆಲವರು ಸುಮ್ಮ ಸುಮ್ಮನೆ ಮಾತನಾಡಿಸಿದರು, ಪರಿಚಯ ಕೇಳಿದರು, ವಿನಾ ಕಾರಣ ಹಿಂದೆ ಮುಂದೆ ಹೋಗುತ್ತಿದ್ದರು. ಹಾಗೆಯೆ ಸಾಗುತ್ತಾ ದ್ರೌಪದಿ ಅರಮನೆಯ ಬೀದಿಗೆ ತಲುಪುವ ಮೊದಲು ಆಕೆಯ ಸುದ್ದಿ ಸಖಿಯರಿಂದ ವಿರಾಟನ ರಾಣಿ ಸುಧೇಷ್ಣಾ ದೇವಿಯ ಕಿವಿಗೆ ಬಿದ್ದಿತು. ಯಾರೋ ಓರ್ವಳು ಅಪ್ರತಿಮ ಸುಂದರಿ, ಕೇಶ ಪೋಷಣೆ, ಕೇಶಾಲಂಕಾರ ನಿಪುಣೆಯು ನಮ್ಮ ಪುರಕ್ಕೆ ಬಂದಿದ್ದಾಳೆ. ಈಗ ಅರಮನೆಯತ್ತ ಬರುತ್ತಿದ್ದಾಳೆ. ಈ ಸಮಾಚಾರ ತಿಳಿದು ಕುತೂಹಲಿಗಳಾದ ಸುಧೇಷ್ಣೆ ಅರಮನೆಯ ಕಿಟಕಿಯಿಂದ ದ್ರೌಪದಿಯನ್ನು ನೋಡಿ ಕರೆಸಿಕೊಂಡು ವಿಚಾರಿಸಿದಳು. “ನಾನು ‘ಮಾಲಿನಿ’, ಸೈರಂಧ್ರಿ ವೃತ್ತಿಯಲ್ಲಿ ನಿಷ್ಣಾತೆ, ಈ ಮೊದಲು ದ್ವಾರಕೆಯ ಸತ್ಯಭಾಮಾ ದೇವಿಗೆ, ನಂತರ ಇಂದ್ರಪ್ರಸ್ಥದಲ್ಲಿ ದ್ರೌಪದಿ ದೇವಿಗೆ ಸೈರಂಧ್ರಿಯಾಗಿ ಕೆಲಸ ಮಾಡಿದ್ದೇನೆ. ಅವರು ನನ್ನನ್ನೂ ನನ್ನ ಕೆಲಸವನ್ನೂ ಬಹುವಾಗಿ ಮೆಚ್ಚಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಪಾಂಡವರು ಪುರ ತೊರೆದು ಹೋದ ಕಾಲದಿಂದ ಹೀಗೆ ಎಲ್ಲೆಲ್ಲೋ ಆಶ್ರಯವರಸುತ್ತಾ ತಿರುಗುತ್ತಿದ್ದೇನೆ” ಎಂದಳು. ಇದನ್ನು ಕೇಳಿದ ಸುಧೇಷ್ಣಾ ದೇವಿ, “ಇಂತಹಾ ಅದ್ಬುತ ರೂಪವತಿಯಾದ ನೀನು ಸೈರಂಧ್ರಿ ಕೆಲಸ ಮಾಡುವುದೆ? ಹೆಣ್ಣಾದ ನನಗೆ ನಿನ್ನನ್ನು ಕಾಣುವಾಗ ಮೋಹಗೊಳ್ಳುತ್ತಿದ್ದೇನೊ ಎಂಬಂತೆ ಭ್ರಮೆಯಾಗುತ್ತಿದೆ. ಆದರೂ ನಿನ್ನ ಪ್ರಭೆ, ವರ್ಚಸ್ಸನ್ನು ನೋಡುವಾಗ ಆಶ್ರಯ – ಉದ್ಯೋಗ ನೀಡುವ ಮನಸ್ಸಾಗಿದೆ” ಎಂದು ಹೇಳಿ ನಕ್ಕುಬಿಟ್ಟಳು.
ದ್ರೌಪದಿಗೆ ಮಾತಿನ ಸೂಕ್ಷ್ಮ ಅರಿವಾಯಿತು. ಚೆಲುವಿಕೆಯರನ್ನು ಬಯಸುವ ಪುರುಷ ಪುಂಗವರ ಕೊರತೆಯಿಲ್ಲ. ರಾಜಾಧಿರಾಜರಿಂದ ಮಾಂಡಲೀಕರವರೆಗೂ ಅವಕಾಶ ನೀಡಬಲ್ಲರೊ ಏನೋ ಎಂಬ ರೀತಿಯ ದ್ವಂದ್ವವಿತ್ತು. ಅದನ್ನರಿತು ತಕ್ಷಣ ಉತ್ತರ ನೀಡಿದಳು “ಹಾಗೇನಿಲ್ಲ, ರೂಪ ಲಾವಣ್ಯ ಸಹಜವಾಗಿ ಬಂದುದು – ಮೋಹವು ಹಾಗಲ್ಲ, ವಿವೇಕವಿಲ್ಲದೆ ಉಂಟಾಗುವುದು. ನನ್ನಿಂದ ಯಾರಿಗೂ ಕೇಡು ಉಂಟಾಗಲಾರದು. ನನ್ನನ್ನು ಕೆಡಿಸಲು ಯಾರಾದರೂ ಮುಂದಾದರೆ ಅಂಥವರನ್ನು ಘೋರ ಶಿಕ್ಷೆಗೆ ಒಳಪಡಿಸದೆ ಬಿಡಲಾರರು ನನ್ನ ಪತಿಗಳು. ನಿಮಗಷ್ಟೇ ಗುಪ್ತ ಮಾಹಿತಿಯಾಗಿ ಈ ವಿಚಾರ ಅರುಹುತ್ತಿದ್ದೇನೆ, ನನ್ನನ್ನು ಐದು ಮಂದಿ ಗಂಧರ್ವರು ವಿಧ್ಯುಕ್ತವಾಗಿ ಮದುವೆಯಾಗಿದ್ದಾರೆ. ಸುಖ ಸಂಸಾರ ನಮ್ಮದಾಗಿತ್ತು. ಆದರೆ ಕೆಟ್ಟ ಸಮಯ ನಮ್ಮ ಪಾಲಿಗೆ ಶಾಪದಂತೆ ಬಂದೊದಗಿತು. ನನ್ನ ಪತಿಗಳು ಪ್ರತ್ಯೇಕ ಪ್ರತ್ಯೇಕವಾಗಿ ವಾಸ ಮಾಡುವಂತಾಯಿತು. ಹಾಗಿದ್ದರೂ ನನಗೇನಾದರು ತೊಂದರೆಯಾದರೆ ತಕ್ಷಣ ಪ್ರಕಟರಾಗಿ ಬಾಧೆ ನೀಡಿದವರನ್ನು ಶಿಕ್ಷಿಸದೆ ಬಿಡಲಾರರು. ನಾವೆಲ್ಲರೂ ಪ್ರತ್ಯೇಕವಾಗಿ ವಾಸ ಮಾಡುವಂತಾದ ದುರ್ವಿಧಿಯ ಘಟನೆಯ ವೃತ್ತಾಂತದ ದಿನದಿಂದ ನನ್ನ ಕೇಶವನ್ನು ಅಲಂಕರಿಸದೆ ಬಿಟ್ಟಿದ್ದೇನೆ. ಈ ಪ್ರಕರಣ ಇತ್ಯರ್ಥವಾಗುವವರೆಗೂ ನಾನು ಕೇಶ ಕಟ್ಟಲಾಗದು. ಸೈರಂಧ್ರಿ ವೃತ್ತಿ ನನಗಿಲ್ಲಿ ನೀಡುವಿರಾದರೆ ನನ್ನದ್ದಾದ ಕೆಲವು ಕಟ್ಟುಪಾಡುಗಳಿವೆ. ಇತರ ಎಲ್ಲಾ ಪರಿಚಾರಕಿಯರಂತೆ ನನ್ನ ಬಳಿ ಉಳಿದೆಲ್ಲಾ ಕೆಲಸ ಹೇಳುವಂತಿಲ್ಲ. ನಾನು ಮಹಾರಾಣಿ ಮತ್ತು ಯುವರಾಣಿಗಷ್ಟೆ ಸೈರಂಧ್ರಿಯಾಗಿ ಕೆಲಸ ಮಾಡಬಲ್ಲೆ. ಗಂಧರ್ವರ ರಾಣಿಯಾದ ಕಾರಣ ನಾನು ಇಲ್ಲಿರುವಷ್ಟು ದಿನ ಕೆಲಸದವಳೆಂದು ಉಳಿದ ಊಳಿಗದವರಂತೆ ಮಿಕ್ಕುಳಿದ, ಎಂಜಲಾದ ಊಟ ನನಗೆ ನೀಡಬಾರದು. ಶುದ್ದ ಆಹಾರವನ್ನು ನೀಡಬೇಕು. ಕೈಕಾಲುಗಳನ್ನು ತೊಳೆಯಿಸುವ ಕೆಲಸ ನನ್ನಿಂದ ಮಾಡಿಸಬಾರದು. ಈ ರೀತಿ ಯಾರು ನನ್ನನ್ನು ಮರ್ಯಾದೆಯಿಂದ ನಡೆಸಿಕೊಳ್ಳುತ್ತಾರೊ, ಹೀನಾಯವಾಗಿ ನಡೆಸಿಕೊಳ್ಳುವುದಿಲ್ಲವೊ ಅವರ ಬಳಿ ಮಾತ್ರ ಆಶ್ರಯಿತಳಾಗಿರುವೆ. ಹಾಗೆಂದು ನಾನು ಸಂಪಾದನೆಗಾಗಿ ಈ ವೃತ್ತಿ ಮಾಡುವುದಿಲ್ಲ. ನನಗೆ ವೇತನ, ಗೌರವಧನಗಳನ್ನಾಗಲಿ ನೀಡಬೇಕಾಗಿಲ್ಲ. ಮಾನನಿಧಿಯಾದ ನನ್ನನ್ನು ಗೌರವಯುತವಾಗಿ ಪಾಲಿಸಿಕೊಂಡರಷ್ಟೆ ಸಾಕು. ನಿಮ್ಮ ಬಗ್ಗೆ ದೇಶದೆಲ್ಲೆಡೆ ಕೀರ್ತಿ ಹಬ್ಬಿದೆ. ಬಹುವಾಗಿ ಕೊಂಡಾಡುವುದನ್ನು ಕೇಳಿ, ನೀವು ಪರಮ ಸಾಧ್ವಿ, ಸುಗುಣೆ, ಸುಶೀಲೆ ಎಂಬ ವಿಚಾರ ಅರಿತು ಇತ್ತ ಬಂದವಳು ನಾನು. ಹೀಗೆ ಜನಜನಿತವಾದ ಹೊಗಳಿಕೆಯಿಂದ ವಿಚಾರ ತಿಳಿದು ನಿಮ್ಮ ಬಗ್ಗೆ ವಿಶ್ವಾಸವನ್ನಿಟ್ಟು ಬಂದಿದ್ದೇನೆ ” ಎಂದು ಸ್ಪಷ್ಟವಾಗಿ ಹೇಳಿದಳು. ಸೈರಂಧ್ರಿಯಾಗಿ ಕಾರ್ಯ ನಿರ್ವಹಿಸಲು ನಿಯಮಗಳಿದ್ದರೂ ಆಕ್ಷೇಪಿಸದೆ, ಸ್ತ್ರೀ ಸಹಜವಾಗಿ ತನ್ನನ್ನು ಹೊಗಳಿದ ಕಾರಣದಿಂದ ಸುಧೇಷ್ಣೆ ಸಂತುಷ್ಟಳಾದಳೋ ಏನೋ! ದ್ರೌಪದಿಗೆ ಸೈರಂಧ್ರಿಯಾಗಿ ಆಕೆಯ ನಿಯಮದಂತೆ ಒಪ್ಪಿ ಉದ್ಯೋಗ ನೀಡಿದಳು. ಇಲ್ಲೊಂದು ಸೂಕ್ಷ್ಮವಿದೆ, ಸಾಮ್ರಾಜ್ಞಿಯಾದ ದ್ರೌಪದಿ ಧರ್ಮರಾಯನ ಜೊತೆ ರಾಜಸೂಯಾಧ್ವರದ ಪುಣ್ಯ ಕಲಶೋದಕ ಅಭಿಷಿಕ್ತಳು. ಆಕೆ ಹೇಳಿದ ಬಾಹಿರ ಕರ್ಮಗಳನ್ನು ಆಚರಿಸದೆ ಬದುಕುವ ಬಾಧ್ಯತೆ ಆಕೆಗಿದೆ. ಈ ಕಷ್ಟ ಕಾಲದಲ್ಲೂ ಅದನ್ನು ಪಾಲಿಸುವ ಜವಾಬ್ದಾರಿ ಕರ್ತವ್ಯ ಪ್ರಜ್ಞೆಯಾಗಿ ಜಾಗೃತವಾಗಿತ್ತು.
ಇತ್ತ ಅರ್ಜುನನೂ ಬ್ರಹನ್ನಳೆಯಾಗಿ ಅತ್ತ ಹೆಣ್ಣೂ ಅಲ್ಲ ಇತ್ತ ಗಂಡೂ ಅಲ್ಲ ಎಂಬಂತೆ ಹೇಳಿಕೊಂಡು ಪುರದಲ್ಲಿ ತಿರುಗಾಡುತ್ತಾ ಅರಮನೆ ಸೇರಿದನು. ನಾಟ್ಯ ಪ್ರಾವಿಣ್ಯತೆಯ ವಿಚಾರ ತಿಳಿಸಿ, ವಿದ್ಯಾ ಪ್ರೌಢಿಮೆಯ ಬಗ್ಗೆ ವಿವರಿಸಿದನು. ಮೆಚ್ಚಿದ ವಿರಾಟ ಅರಮನೆಯ ಸ್ತ್ರೀಯರಿಗೆ ನಾಟ್ಯಾಚಾರ್ಯನಾಗಿ ವಿದ್ಯೆ ಕಲಿಸುವಂತಾಗಲಿ ಎಂದು ನೇಮಕ ಮಾಡಿದ. ಆದರೂ ಬ್ರಹನ್ನಳೆಯ ಅಂಗಸೌಷ್ಟವ ನೋಡಿ ಹಾಗೆಯೇ ಒಪ್ಪಿಕೊಳ್ಳಲಿಲ್ಲ ವಿರಾಟ. ಬ್ರಹನ್ನಳೆಯ ಬಗ್ಗೆ ಕೇಳಿದಾಗ ಆತ “ಹೆಣ್ಣಿಗ”(ನಪುಂಸಕ) ನೆಂದು ತಿಳಿಯಿತಾದರೂ ಪರೀಕ್ಷಿಸುವ ಮನಮಾಡಿದನು. ಬ್ರಹನ್ನಳೆಗೆ ಉಳಿದುಕೊಳ್ಳಲು ವಸತಿಯ ವ್ಯವಸ್ಥೆ ಮಾಡಿಸಿ ಕಳುಹಿಸಿ ಕೊಟ್ಟನು. ಅಲ್ಲಿಯೆ ಕೆಲದಿನಗಳನ್ನು ಕಳೆಯಬೇಕಾದ ಅನಿವಾರ್ಯತೆ ಅರ್ಜುನನದ್ದಾಯಿತು. ಅದೊಂದು ವೇಶ್ಯಾಗ್ರಹ ಎಂದು ತಿಳಿದಾಗ ವಿಪರೀತ ವೇದನೆಯೂ ಮನಸ್ಸಿಗಾಯಿತು. ತಕ್ಷಣ ವಿರಾಟ ನನ್ನ ಬಗ್ಗೆ ಅನುಮಾನದಿಂದ ಹೀಗೆ ಮಾಡಿರಬಹುದೆಂಬ ಸತ್ಯ ಅರಿತುಕೊಂಡು, ಆಗಲಿ ನನ್ನ ಸತ್ವ ಪರೀಕ್ಷೆ ಎಂದು ನಿರಾತಂಕನಾದ. ಪುರದ ವೇಶ್ಯೆಯರು ಆತನ ಬಳಿ ಹೇಗೇಗೋ ನಡೆದು ಕೊಂಡರೂ ಕಿಂಚಿತ್ ಸ್ಪಂದಿಸಲೂ ಇಲ್ಲ, ಮೋಡಿಗೊಳಗಾಗಲೂ ಇಲ್ಲ. ಸ್ವರ್ಗಲೋಕದ ಅಪ್ಸರಾಂಗನೆ ಗಣ್ಯ ಗಣಿಕೆಯಾದ ಊರ್ವಶಿಗೆ ಮನಸೋಲದೆ ಜಿತೇಂದ್ರಿಯನಾಗಿ ಗೆದ್ದವನು, ವಿರಾಟನ ಪುರದ ವಿಲಾಸಿನಿ ಸ್ತ್ರೀಯರಿಗೆ ಸೋಲುವನೆ? ಹಾಗೆಂದು ಈಗ ಬ್ರಹನ್ನಳೆಯಾಗಿ ಪೂರ್ಣ ಪುರುಷನೂ ಅಲ್ಲ.
ಈ ವೃತ್ತಾಂತದಿಂದ ಬ್ರಹನ್ನಳೆಯ ಬಗ್ಗೆ ಪೂರ್ಣ ವಿಶ್ವಾಸ ವಿರಾಟನಿಗಾಯಿತು. ತನ್ನ ಮಗಳಾದ ಉತ್ತರೆಗೆ ನಾಟ್ಯ ಶಾಸ್ತ್ರ ಕಲಿಸುವ ನಾಟ್ಯಾಚಾರ್ಯನಾಗಿ ಪುರದ ರಂಗ ಮಂದಿರದಲ್ಲಿ ಉದ್ಯೋಗ ನೀಡಿದನು.
ಹೀಗೆ ಪಾಂಡವರು ತಮ್ಮ ನಿರ್ಧಾರಿತ ಉಪಾಯದಂತೆ ವ್ಯವಹರಿಸಿ ವಿರಾಟನ ಆಸ್ಥಾನದಲ್ಲಿ ಆಶ್ರಯ ಪಡೆದರು. ಯಮಧರ್ಮನ ಅನುಗ್ರಹ ವಿಶೇಷದಿಂದ ಯಾರಿಗೂ ಇವರ ಬಗ್ಗೆ ಎಳ್ಳಷ್ಟೂ ಸಂದೇಹ ಬರಲಿಲ್ಲ. ಆದರೂ ಪುರುಷ ಪ್ರಯತ್ನದಿಂದ ವಾಸ್ತವದಲ್ಲೂ ಯಾರಿಗೂ ಗೊತ್ತಾಗದಂತೆ ಬದುಕುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಶ್ರಮದಿಂದಲೆ ಆಶ್ರಯ ಪಡೆದಿದ್ದಾರೆ. ಪಾಂಡವರ ಅಜ್ಞಾತವಾಸ ಆರಂಭವಾಯಿತು.
ಮುಂದುವರಿಯುವುದು…













