
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಗ್ರೂಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷ, ಸುಳ್ಳು ಮಾಹಿತಿ ಮತ್ತು ಬೆದರಿಕೆ ಸಂದೇಶಗಳನ್ನು ಹರಡುವ ಪ್ರಕರಣಗಳು ತೀವ್ರವಾಗಿ ಹೆಚ್ಚಾಗಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಅನುಪಮಾ ಅಗರ್ವಾಲ್ ಈ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಕೆಲವರು ನಕಲಿ ಪ್ರೊಫೈಲ್ಗಳು ಅಥವಾ ವಿದೇಶದಲ್ಲಿ ನೋಂದಾಯಿತ ಖಾತೆಗಳ ಮೂಲಕ ಸುಳ್ಳು ಪೋಸ್ಟ್ಗಳನ್ನು ಹಂಚಿಕೊಂಡಿದ್ದು ಇಂತಹ ಖಾತೆಗಳನ್ನು ಪತ್ತೆಹಚ್ಚಲಾಗುವುದಿಲ್ಲ ಎಂಬ ಅಭಿಪ್ರಾಯವಿದೆ. ಆದರೆ ಎಲ್ಲೇ ಖಾತೆ ರಚಿಸಿದರೂ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬಹುದಾದ್ದರಿಂದ ಜನರು ತಮ್ಮ ಭವಿಷ್ಯ ಮತ್ತು ಉದ್ಯೋಗವನ್ನು ಗಮನದಲ್ಲಿರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಚಾರಗಳನ್ನು ಬರೆಯುವ ಮೊದಲು ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂಗಳು ಇಂತಹ ಪ್ರಕರಣಗಳನ್ನು ತಡೆಯಲು 126 ಮತ್ತು 129ರ ಅಡಿಯಲ್ಲಿ ಇಂತಹ ಪ್ರಕರಣಗಳನ್ನು ತಡೆಯಲು ಮುಂಜಾಗ್ರತ ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಪಿಗಳಿಂದ ನಿರ್ದಿಷ್ಟ ಅವಧಿಗೆ ಉತ್ತಮ ನಡವಳಿಕೆಗೆ ಸಹಿ ಹಾಕಿಸಲಾಗುತ್ತಿದೆ. ಈ ಅವಧಿಯಲ್ಲಿ ಅವರು ಪುನರಾವರ್ತನೆ ಮಾಡಿದರೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಮಂಗಳೂರು ನಗರವನ್ನು ಶಾಂತಿಯುತ, ಕಾನೂನು ಬದ್ಧ ಮತ್ತು ಏಕತೆಯ ನಗರವನ್ನಾಗಿಸಲು ಎಲ್ಲರ ಸಹಕಾರ ಬಹು ಮುಖ್ಯವಾದ್ದರಿಂದ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.



















