ಭಾಗ 164
ಭರತೇಶ್ ಶೆಟ್ಟಿ,ಎಕ್ಕಾರ್

ಸಂಚಿಕೆ ೧೬೫ ಮಹಾಭಾರತ
ಇಷ್ಟು ಹೊತ್ತು ಸುಮ್ಮನೆ ಕುಳಿತು ಕಾಯುತ್ತಿದ್ದ ದುರ್ಯೋಧನ ತನ್ನ ಕಾರ್ಯಸಾಧನೆಯ ಹಾದಿ ಸುಗಮವಾಯಿತು ಎಂಬಂತೆ ಸುಖಭಾವ ತಳೆದು ಮಂದಸ್ಮಿತನಾಗಿ “ಧರ್ಮರಾಜ! ದ್ಯೂತದ ಆಟಕ್ಕೆ ಪೂರಕವಾಗಿ ಹಸ್ತಿನೆಯ ಸಮಸ್ತ ಆಸ್ತಿಯನ್ನು ನಮ್ಮ ಮಾವ ಶಕುನಿಯವರಿಗಿತ್ತಿದ್ದೇನೆ. ರಾಜ ಪ್ರತಿನಿಧಿಯಾಗಿ ಅವರಿಗೆ ದ್ಯೂತವಾಡಲು ಅನುಮತಿಯನ್ನೂ ನೀಡುತ್ತಿದ್ದೇವೆ” ಎಂದು ಹೇಳಿ ದ್ಯೂತ ಮಂಚದ ಹಾಸಿನ ಮೇಲೆ ಶಕುನಿಯ ಒತ್ತಿನಲ್ಲಿ ಕುಳಿತನು. ಧರ್ಮರಾಯನು ಎದ್ದು ಬಂದು ದೇವರನ್ನು ಸ್ಮರಿಸಿ – ದೈವೇಚ್ಚೆ ಮೆರೆಯಲಿ ಎನ್ನುತ್ತಾ ಪ್ರಾರ್ಥಿಸಿ ಎದುರುಗಡೆ ಕುಳಿತುಕೊಂಡನು. ಈ ದೃಶ್ಯವನ್ನು ಕಂಡು ಭೀಷ್ಮ, ವಿದುರ, ದ್ರೋಣ, ಕೃಪಾದಿಗಳು, ಭೀಮಾರ್ಜುನ, ನಕುಲ ಸಹದೇವಾದಿ ಪ್ರಮುಖರು ದಿಙ್ಮೂಢರಾದರು. ಅಸಹಾಯಕರಾಗಿ, ಏನೂ ಮಾಡಲೂ, ಆಡಲೂ ಆಗದೆ ಸುಮ್ಮನುಳಿದು ಮನದ ಅಸಮಾಧಾನ, ಅಸಹನೆ, ಕ್ರೋಧ, ಆತಂಕಗಳ ಸುಖಾಂತ್ಯಕ್ಕಾಗಿ ದೇವತಾ ಪ್ರಾರ್ಥನೆ ಮಾಡತೊಡಗಿದರು. ಮುಂದೆ ಹೇಗೆ, ಏನಾದೀತು ಎಂಬ ಮಿಶ್ರ ಭಾವಗಳ ಗೊಂದಲ ಗೋಜಲಿನಲ್ಲಿ ಸಿಲುಕಿ ಮೌನಿಗಳಾಗಿಯೇ ಉಳಿದರು.
ನೋಡ ನೋಡುತ್ತಿದ್ದಂತೆಯೇ ಆಟ ಆರಂಭವಾಯಿತು. ದುರ್ಯೋಧನನು ಬೆಲೆಬಾಳುವ ರತ್ನ ಹಾರಗಳನ್ನು, ಒತ್ತೆ ಇಟ್ಟರೆ – ಧರ್ಮರಾಯ ಕೊರಳ ಅಮೂಲ್ಯ ಹಾರವನ್ನು ಪಣಕ್ಕಿಟ್ಟು ಆಡಿದನು. ಅಕ್ಷ ವಿದ್ಯಾ ಚತುರ ಶಕುನಿ ದಾಳದ ಮರ್ಮವರಿತು ಆಡಿ ಗೆದ್ದು ಬಿಟ್ಟನು. ಕೌರವ ಪಾಳಯದಲ್ಲಿ ಮೊದಲ ಹರ್ಷೋದ್ಘಾರವಾಯಿತು. ಆಟ ಸಾಗುತ್ತಿತ್ತು… ಹಂತ ಹಂತವಾಗಿ ಧರ್ಮರಾಯ ಸ್ವರ್ಣ ಭಂಡಾರ, ರಥ, ಲಕ್ಷ ದಾಸ, ದಾಸಿಯರನ್ನು, ಉತ್ತಮ ಗಜಾಶ್ವ ಸೇನೆ, ಬಂಡಿಗಳು, ಧನ ಕನಕ ಕೊಪ್ಪರಿಗೆಗಳನ್ನೂ, ಹೊನ್ನು ಬಂಗಾರದ ಖಜಾನೆ ಹೀಗೆ ಒಂದೊಂದನ್ನೇ ಪಣಕ್ಕಿಟ್ಟು ಸೋಲುತ್ತಾ ಹೋದನು. ಶಕುನಿ, ದುರ್ಯೋಧನರು “ಇನ್ನೇನಿದೆ?” “ಇನ್ನೇನಿದೆ?” ಎಂದು ಹರ್ಷ, ಅಪಹಾಸ್ಯ ತುಂಬಿ ಗಹಗಹಿಸಿ ನಗುತ್ತಾ ಕೇಳತೊಡಗಿದರು.
ಹಸ್ತಿನೆಯ ಕುಲ ಬೆಳಗಬೇಕಾದ ಪುತ್ರರತ್ನರಿಂದ ನಡೆಸಲ್ಪಡುತ್ತಿದ್ದ ವಿಕೃತಿಯ ಪರಿಣಾಮ ಘೋರ ಅನರ್ಥ, ವಿಧ್ವಂಸಕ್ಕೆ ಹೇತುವಾಗಿ ಸರ್ವನಾಶಕ್ಕೆ ಬಾಗಿಲು ತೆರೆದಿಡುವ ಸೂಚನೆ ಅರಿತ ಧರ್ಮಜ್ಞ ವಿದುರ ಹಸ್ತಿನೆಯ ಮಂತ್ರಿಯಾಗಿ ಸಾಮ್ರಾಜ್ಯದ ಹಿತ ಚಿಂತಕನಾಗಿ ಎದ್ದು ನಿಂತನು. ಖಂಡಿತವಾದಿಯಾಗಿ ನಿಷ್ಠುರ ನುಡಿಗಳನ್ನಾಡುತ್ತಾ ಧೃತರಾಷ್ಟ್ರನನ್ನು ಎಚ್ಚರಿಸ ತೊಡಗಿದನು. “ಮಹಾರಾಜಾ! ಪರಿಸ್ಥಿತಿ ವಿಷಮ ಸ್ಥಿತಿಗೇರುತ್ತಿದೆ. ನಿನ್ನ ಪುತ್ರ ವ್ಯಾಮೋಹ ಅತಿಯಾಯಿತು. ಕೈಯಾರೆ ನೀನೇ ನಿನ್ನ ಸಾಮ್ರಾಜ್ಯ ಹಾಗೂ ಸಕಲವನ್ನೂ ನಿರ್ನಾಮ ಮಾಡಲು ಕಾರಣನೆನಿಸಿಕೊಳ್ಳುತ್ತಿರುವೆ. ನಿನ್ನ ಮಗ ದುರ್ಯೋಧನನ್ನು ಎಚ್ಚರಿಸಿ ನೀತಿ ಬೋಧನೆಯನ್ನು ಮಾಡಿ ಸರಿದಾರಿಗೆ ತರುವುದನ್ನು ಬಿಟ್ಟು ಆತನಿಂದಾಗುತ್ತಿರುವ ಅಧರ್ಮಕ್ಕೆ ಪೂರಕನೂ ಪ್ರೇರಕನೂ ಆಗಿರುವೆ. ಈಗಲೂ ನಿನಗೆ ಅವಕಾಶವಿದೆ. ಸರ್ವರ ಸಂರಕ್ಷಣೆ ನಿನ್ನ ಅಧಿಕಾರದಲ್ಲಿದೆ. ಈ ಅನರ್ಥದ ದ್ಯೂತ ಮುಂದುವರಿಯಲು ನೀನು ಅವಕಾಶ ಮಾಡಿಕೊಟ್ಟರೆ ನಿನಗೆ ನಷ್ಟ. ಸಂಪತ್ತು ಸಾಮ್ರಾಜ್ಯದ ಜೊತೆಗೆ ಇಷ್ಟ ಮಿತ್ರರು, ಪುತ್ರರತ್ನರನ್ನೂ ಕಳೆದುಕೊಂಡು ಮರುಗಿ ಕೊರಗಿ ಕರಗಿಹೋಗುವ ಸ್ಥಿತಿಯೂ ನಿನಗೆ ಒದಗಲಿದೆ. ನಿನ್ನ ಮಗ ಕೌರವ ಹುಟ್ಟುವಾಗಲೆ ವಿಕಾರವಾಗಿ ಅರಚುತ್ತಾ ಅಪಶಕುನದೊಂದಿಗೆ ಹುಟ್ಟಿದ್ದಾನೆ. ಪ್ರಾಜ್ಞರೂ, ಋಷಿಗಳೂ, ಜ್ಞಾನಿಗಳೆಲ್ಲರೂ ಪಾಕೃತಿಕ ಅವಘಡಗಳಾದ ಬಿರುಗಾಳಿ, ಭೀಕರ ಗುಡುಗು, ಸಿಡಿಲು, ಮಿಂಚು, ಪ್ರಾಣಿ ಪಕ್ಷಿಗಳ ಆಕ್ರಂದನವೂ ಸೇರಿ, ಜನ ಭಯಭೀತರಾಗಿ ಪ್ರಾಣರಕ್ಷಣೆಗಾಗಿ ಓಡುವ ಸ್ಥಿತಿ ಬಂದದ್ದನ್ನು ಕಂಡು, ಮಗುವಿನ ಜನ್ಮ ಜಾತ ಕಾಲ ಗಮನಿಸಿ ವಿಶ್ಲೇಷಿಸಿದಾಗ ವಂಶವನ್ನೇ ನಿರ್ವಂಶಗೊಳಿಸುವ ಲಕ್ಷಣ ಶಿಶು ಜನನ ಕಾಲದ ಶಕುನ ಸೂಚಕವಾಗಿ ನಿರೂಪಿಸಲ್ಪಟ್ಟಿತ್ತು. ಪರಿಹಾರವಾಗಿ ಕ್ಷಣಿಕ ವ್ಯಾಮೋಹ ತೊರೆದು ಅಮಂಗಲಕಾರವಾದ ಈ ಮಗುವನ್ನು ಕಾಡಿನ ಮಧ್ಯೆ ಬಿಡುವಂತೆ ಸಲಹೆ ನೀಡಿದರೂ, ನೀನು ಕೇಳಿರಲಿಲ್ಲ. ಈಗ ಆ ಸ್ಥಿತಿ ನಿರ್ಮಾಣವಾಗಿದೆ. ವಿನಾಶಕಾಲ ಕಾಲಬುಡದಲ್ಲಿ ಕುಣಿಯುತ್ತಿದೆ. ಅರ್ಥ ಮಾಡಿಕೊಂಡು ನಿನ್ನ ಮಕ್ಕಳಿಗೆ ಅಪ್ಪನಷ್ಟೇ ಆಗಿ ತರ್ಕಿಸದೆ, ಹಸ್ತಿನಾವತಿಯ ಸಿಂಹಾಸನಾರೂಢ ಮಹಾರಾಜನಾಗಿ- ಸಮಸ್ತ ಸಾಮ್ರಾಜ್ಯ ಮತ್ತು ಉನ್ನತ ಚಂದ್ರವಂಶದ ಸಂರಕ್ಷಣೆಯ ಹೊಣೆ ಹೊತ್ತಿರುವ ಜವಾಬ್ದಾರನಾಗಿ ನ್ಯಾಯ, ಧರ್ಮದ ಬಗೆಯಲ್ಲಿ ತರ್ಕಿಸಿ ಈ ವಿಕೃತಿಯನ್ನು ನಿಲ್ಲಿಸು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪರಿಣಾಮ ಅನುಭವಿಸಬೇಕಾಗಿ ಬರುವುದು ನಿನಗೇ ಹೊರತು ಅನ್ಯರಿಗಲ್ಲ. ಯಾಕೆಂದರೆ ನಿನ್ನವರಾದ ಅನ್ಯರೆಲ್ಲರೂ ನಾಶ ಆಗಬಹುದಾದ ಪ್ರಳಯರೂಪಿ ವಿಪತ್ತಿಗೆ ದಾರಿಯಾದೀತು. ನೀನೊಬ್ಬನೇ ಉಳಿದು ಪರಿತಪಿಸಬೇಕಾಗಿ ಬರಬಹುದು. ಸಜ್ಜನರಿಗೆ ಬಂದ ಆಪತ್ತು, ದುರ್ಜನರಿಗೆ ಬಂದ ಸಂಪತ್ತು ಒಮ್ಮೆಗೆ ನೆರೆ ನೀರಿನಂತೆ ಏರಿ ಬಂದರೂ ಶೀಘ್ರವಾಗಿ ಉಪಶಮನವಾಗುತ್ತದೆ. ಕಡೆಗೆ ಧರ್ಮವೇ ಗೆದ್ದು ಮೆರೆಯುತ್ತದೆ.” ಹೀಗೆ ಕಣ್ಣು ಕಾಣದ ರಾಜನಾಗಿದ್ದರೂ ಆತನ ಅಂತರಂಗದ ಕಣ್ಣಿಗೆ ಕಾಣಿಸುವಂತೆ ಅಂದರೆ ಅರ್ಥವಾಗುವಂತೆ ವಿದುರ ತಿಳಿ ಹೇಳುವ ಪ್ರಯತ್ನ ಮಾಡಿದನು.
ಮುಂದುವರಿಯುವುದು..





















