ಭಾಗ 158
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೧೫೯ ಮಹಾಭಾರತ
ಭೀಷ್ಮಾಚಾರ್ಯರು ಭೀಮ ಮತ್ತು ಕ್ರೋಧಾವೇಶಗೊಂಡಿದ್ದ ಯಾದವ ವೀರರನ್ನು ಸಮಾಧಾನದಿಂದಿರಲು ಮೊದಲು ಹೇಳಿದರು. ನಂತರ ಶಿಶುಪಾಲನ ವೃತ್ತಾಂತ ಹೇಳತೊಡಗಿದರು. “ನೀವ್ಯಾರೂ ದುಡುಕಬಾರದು. ಅವಸರದಲ್ಲಿ ಆವೇಶದ ಕೈಗೆ ಬುದ್ಧಿಯನ್ನಿತ್ತರೂ ಆತನ ವಧೆ ನಿಮ್ಮಿಂದ ಸಾಧ್ಯವೇ ಇಲ್ಲ. ನೀವ್ಯಾರೂ ಆತನ ಗುಟ್ಟು ತಿಳಿದಿಲ್ಲ. ಈ ಶಿಶುಪಾಲ ಹುಟ್ಟುವಾಗ ಆತನ ಹಣೆಯ ಮೇಲೆ ಹೆಚ್ಚಿನದಾದ ಮೂರನೇ ಕಣ್ಣೊಂದು ಇತ್ತು. ಮಾತ್ರವಲ್ಲ ಅಧಿಕವಾದ ಎರಡು ಕೈಗಳು ಸೇರಿ ತ್ರಿನೇತ್ರ – ಚತುರ್ಭುಜನಾಗಿ ಸಾಮಾನ್ಯ ಮನುಷ್ಯರಿಗಿಂತ ವಿಭಿನ್ನನಾಗಿ ಹುಟ್ಟು ಪಡೆದಿದ್ದನು. ವಿಲಕ್ಷಣವಾಗಿ ಗೋಚರಿಸುತ್ತಿದ್ದ ಈ ಮಗುವನ್ನು ಕಂಡು ಹೆತ್ತ ಮಾತಾಪಿತರು ಭಯಗೊಂಡು ವ್ಯಾಕುಲಚಿತ್ತರಾಗಿದ್ದರು. ಆ ಸಂದರ್ಭ ‘ಯಾರ ಸ್ಪರ್ಶದಿಂದ ಈ ಮಗುವಿನ ವಿಕಾರತೆ ದೂರವಾಗಿ ಅಂದರೆ ಹೆಚ್ಚಿನ ಕಣ್ಣು ಕೈಗಳು ಮಾಯವಾಗುವುದೋ ಅಂತಹ ಮಹಾತ್ಮನಿಂದ ಈ ಮಗುವಿಗೆ ಮರಣ’ ಎಂಬ ಅಶರೀರವಾಣಿಯಾಯಿತಂತೆ. ಅಂತೆಯೇ ಮಾತಾಪಿತರು ಈ ಮಗುವನ್ನು ಬಂದ ಬಂದವರ ಕೈಗೆ ನೀಡಿ ಅಧಿಕಾಂಗಗಳ ನಿವಾರಣೆಗೆ ಯತ್ನಿಸುತ್ತಿದ್ದರು. ಒಂದು ದಿನ ಬಲರಾಮ ಕೃಷ್ಣರು ಸಂಬಂಧದಲ್ಲಿ ಸೋದರತ್ತೆಯ ಮಗುವಾದ ಈತನನ್ನು ನೋಡಲು ಹೋಗಿದ್ದರು. ಬಲರಾಮ ಮಗುವನ್ನೆತ್ತಿ ಮುದ್ದಾಡಿ ಶ್ರೀಕೃಷ್ಣ ಕೈಗಿತ್ತನು. ಕೃಷ್ಣನು ಮಗುವನ್ನು ಎತ್ತಿದಾಗ ಆತನ ಹೆಚ್ಚಿನ ಕಣ್ಣು ಕೈಗಳು ಮಾಯವಾದವು. ಆ ತಕ್ಷಣ ತಮ್ಮ ಮಗನಿಗೆ ಕೃಷ್ಣನಿಂದಲೇ ಮರಣ ಎಂದರಿತ ತಾಯಿ ತಂದೆಯರು ಕೃಷ್ಣನಲ್ಲಿ ಅಶರೀರವಾಣಿಯ ವಿವರವನ್ನೆಲ್ಲಾ ಹೇಳಿ ಮಗನೇನಾದರು ಅರಿಯದೆ ಅಪರಾಧ ಮಾಡಿದರೆ ಕ್ಷಮಿಸಿ ಕಾಪಾಡಬೇಕೆಂದು ಪ್ರಾರ್ಥಿಸಿಕೊಂಡರು. ಆಗ ಶ್ರೀ ಕೃಷ್ಣ ” ಹಾಗೆಯೆ ಆಗಲಿ. ನಿಮ್ಮ ದುಃಖ ನಿವಾರಣೆಗಾಗಿ ಒಂದು ಅವಕಾಶ ಒದಗಿಸುವೆ. ನೂರು ಅಕ್ಷಮ್ಯ ಅಪರಾಧಗಳನ್ನು ಮಾಡಿದರೂ ಕ್ಷಮಿಸಿ ಮನ್ನಿಸುವೆ. ಆ ಬಳಿಕ ಮಾತ್ರವೇ ಶಿಕ್ಷಾರ್ಹನಾಗುತ್ತಾನೆ” ಎಂದು ಹೇಳಿ ಸಂತೈಸಿದನು. ಹಾಗಾಗಿ ಶ್ರೀ ಕೃಷ್ಣನಿಂದ ಮಾತ್ರ ಈತನ ನಿಗ್ರಹ ಸಾಧ್ಯ. ಅದೂ ಅಕ್ಷಮ್ಯ ಶತಾಪರಾಧ ಪೂರೈಸಿದ ನಂತರವಷ್ಟೆ ವಧಾ ಪ್ರಕರಣ ಸಂಭವಿಸಲು ಸಾಧ್ಯ. ಆ ಕಾರಣದಿಂದಲೇ ಸಮಾಧಾನದಿಂದ ಈ ರೀತಿ ಅಪರಾಧಗಳನ್ನು ಎಣಿಸುತ್ತಾ ಕೃಷ್ಣ ಕಾಯುತ್ತಿದ್ದಾನೆಯೇ ಹೊರತು ದೌರ್ಬಲ್ಯದಿಂದಲ್ಲ. ಶ್ರೀ ಕೃಷ್ಣ ಪೂಜಾರ್ಹನಲ್ಲವೆಂದು ಶಿಶುಪಾಲ ಆಕ್ಷೇಪಿಸುತ್ತಿದ್ದಾನೆ. ಬ್ರಾಹ್ಮಣ ವರ್ಣದಲ್ಲಿ ಜ್ಞಾನಿಯೂ, ಕ್ಷತ್ರಿಯರಲ್ಲಿ ಬಲಶಾಲಿಯೂ, ವೈಶ್ಯರಲ್ಲಿ ಶ್ರೀಮಂತನೂ, ಶೂದ್ರರಲ್ಲಿ ಪ್ರಬುದ್ಧ ಹಿರಿಯನೂ ಮೊದಲ ಮರ್ಯಾದೆಗೆ ಅರ್ಹರಾಗುತ್ತಾರೆ. ಕೃಷ್ಣನಲ್ಲಿ ಚತುರ್ವರ್ಣದ ಶ್ರೇಷ್ಟತೆಗಳೂ ಇದ್ದು ಹೆಚ್ಚಿನವನಾಗಿದ್ದು, ಭಗವಾನ್ ವೇದವ್ಯಾಸರೇ ಕೊಂಡಾಡಿದ್ದಾರೆ. ಈತನನ್ನು ಹೊರತು ಅಗ್ರಪೂಜೆಗೆ ಅರ್ಹರಾಗುವವರು ಯಾರಿದ್ದಾರೆ. ಸಾವಿರ ವರುಷ ತಪಗೈದರೂ ಈ ಪುರಾಣ ಪುರುಷೋತ್ತಮನ ದರ್ಶನವೆ ದುರ್ಲಭವಾದದ್ದು. ಅಂತಹದ್ದರಲ್ಲಿ ನಾವೆಲ್ಲರೂ ಮಹಾ ಭಾಗ್ಯವಂತರೂ, ಯೋಗವಂತರೇ ಆಗಿದ್ದೇವೆ ಎನ್ನಬಹುದು. ಅಗ್ರ ಪೂಜೆ ಕೃಷ್ಣನಿಗೆ ಸಲ್ಲಿಸುವ ಅವಕಾಶ ಒದಗಿರುವುದು ಮಹಾ ಸೌಭಾಗ್ಯ. ಗೊಂದಲಕ್ಕೆ ಒಳಗಾಗದೆ ಕಾಲ ಕೂಡಿ ಬರುವವರೆಗೆ ತಾಳ್ಮೆಯಿಂದ ಸೈರಿಸಿ ಪ್ರತೀಕ್ಷೆ ಮಾಡಬೇಕು.” ಎಂದು ಭೀಷ್ಮಾಚಾರ್ಯರು ಎಳೆ ಎಳೆಯಾಗಿ ಗುಟ್ಟನ್ನು ಬಿಚ್ಚಿಟ್ಟು ಸಮಾಧಾನ ಪಡಿಸಿದರು.
ಈ ಮಾತುಗಳನ್ನೆಲ್ಲಾ ಕೇಳಿಸಿಕೊಂಡ ಶಿಶುಪಾಲ ಅತಿಯಾಗಿ ಕೆರಳಿ ರೇಗಿ ಹೋದನು. ಭೀಷ್ಮನನ್ನೂ, ಪಾಂಡವರನ್ನೂ, ಕೃಷ್ಣನನ್ನೂ ಕೊಂದು ಬಿಡುವೆನೆಂದು ಅಬ್ಬರಿಸಿ ಬಿಟ್ಟನು. ಕೃಷ್ಣ ನನ್ನನ್ನು ಕೊಲ್ಲತ್ತಾನೆಯೇ? ಅಲ್ಲಿಯವರೆಗೆ ಆತನನ್ನು ಬೆಳೆಯಲು ಬಿಡುವವ ಈ ಶಿಶುಪಾಲನಲ್ಲ ಎಂದು ಆರ್ಭಟಿಸಿ ಬಾಯಿಗೆ ಬಂದಂತೆ ಕೃಷ್ಣನನ್ನೂ, ಪಾಂಡವರನ್ನೂ ನಿಂದಿಸ ತೊಡಗಿದನು. ಮುಂದುವರಿದು ಪೂಜಾಪೀಠದಲ್ಲಿ ಕುಳಿತಿದ್ದ ಕೃಷ್ಣನ ಕೈ ಹಿಡಿದೆಳೆದು ಬೀಳಿಸಲು ಮುಂದಾದನು. ಈಗ ಕೃಷ್ಣನ ತಾಳ್ಮೆಯ ಕಟ್ಟೆಯೊಡೆಯಿತು. “ಧರ್ಮರಾಯ ಹಿರಿಯರಾದ ಭೀಷ್ಮಾಚಾರ್ಯರು ಹೇಳಿದ ವಿಚಾರಗಳು ಸತ್ಯವೇ ಹೌದು. ಈಗ ಕಾಲ ಸನ್ನಿಹಿತವಾಗಿದೆ. ಈತನ ಮಾತೆಗಿತ್ತ ವಚನದಂತೆ ಅಪರಾಧಗಳ ವ್ಯಾಪ್ತಿ ಯಾವತ್ತೋ ದಾಟಿದ್ದರೂ ನಾನಾಗಿ ಈತನ ವಧೆಗೆ ಮುಂದಾಗಿರಲಿಲ್ಲ. ಈಗ ನನ್ನನ್ನೇ ಹಿಡಿದೆಳೆದ ಮೇಲೆ ಕಾಯುವುದು ಅಪರಾಧವಾಗುತ್ತದೆ. ಈತನ ತಾಯಿ, ನನ್ನ ಅತ್ತೆ ಯಾದವ ಕನ್ಯೆ. ಪಾಂಡವರಂತೆ ಈತನೂ ನನಗೆ ಸಮಾನ ಬಂಧು. ಯಾಗ ಕಂಟಕನಾಗಿ ಬೆಳೆಯುತ್ತಿರುವ ಈತನನ್ನು ನಿಯಂತ್ರಿಸಲು ನಿಗ್ರಹ ಅನಿವಾರ್ಯ. ಹಿಂದೆ ದ್ವಾರಕೆಯನ್ನೆ ಅಗ್ನಿಗಾಹುತಿಗೊಳಿಸಲು ಬಂದು ಅಣ್ಣ ಬಲರಾಮನಿಂದ ಓಡಿಸಲ್ಪಟ್ಟಿದ್ದ. ವಿಹರಿಸುತ್ತಿದ್ದ ವೃದ್ಧರಾದ ಉಗ್ರಸೇನ ಮಹಾರಾಜರ ಮೇಲೆ ಆಕ್ರಮಣ ಮಾಡಲು ಹೋಗಿ ಪರಿವಾರದವರಿಂದ ಪೆಟ್ಟು ತಿಂದು ಪಲಾಯನಗೈದಿದ್ದ. ಯಾಗದ ಯಾಗಾಶ್ವವನ್ನು ಕದ್ದ ಕಳ್ಳನಾದರೂ ಈತನನ್ನು ಕ್ಷಮಿಸಿದ್ದೆವು. ಬಭ್ರು ಎಂಬ ರಾಜನ ಪತ್ನಿ ಪರಸ್ತ್ರೀಯನ್ನು ಎಳೆದು ತರಲು ಹೋಗಿದ್ದಾಗಲೂ ಆಕೆಯನ್ನು ರಕ್ಷಿಸಿ ಈತನನ್ನು ಬಿಡಲಾಗಿತ್ತು. ಈ ಶಿಶುಪಾಲ ಕರೂಷ ಎಂಬ ರಾಜನ ಜೊತೆ ಮೈತ್ರಿಯನ್ನು ಮಾಡಿಕೊಂಡವನು. ಕರೂಷ ರಾಜನಿಗಾಗಿ ವೇಷಾಂತರದಿಂದ ಬಂದು ನಮ್ಮ ಯಾದವನಾದ ‘ವಿಶಾಲ’ ಎಂಬವನ ಮಗಳನ್ನು ಬಲವಂತದಿಂದ ಅಪಹರಿಸಲು ಬಂದಾಗ, ತಡೆದ ಯಾದವ ವೀರರನ್ನೂ,, ಮಾತೆಯರನ್ನು ಕೊಂದು ಮುನ್ನಡೆದಿದ್ದನು. ಆಗಲೂ ಈತನನ್ನು ತಡೆದು ಓಡಿಸಿ ಕ್ಷಮಿಸಿದ್ದೆವು. ಈಗ ನನ್ನನ್ನೇ ಹಿಡಿದೆಳೆದು ನಿಂತ ಕಾಲದಲ್ಲಿ, ಯಾಗ ಕಂಟಕನೂ ಆಗಿದ್ದಾನೆ. ಇನ್ನು ಸಹನೆ ಸಾಧುವಲ್ಲ” ಎಂದು ನುಡಿದು ನಿರ್ಣಾಯಕವಾದ ಶಂಖನಾದವನ್ನು ಮೊಳಗಿಸಿದನು ಪರಮಾತ್ಮ.
ಶಂಖನಾದ ಕೇಳಿ ಕ್ರೋಧೋನ್ಮತ್ತನಾದ ಶಿಶುಪಾಲ ಕೃಷ್ಣನ ಮೇಲೇರಿ ಬಂದನು. ಕೆಲಹೊತ್ತು ಸಮಬಲದ ಕಾಳಗ ನೀಡಿದರೂ ಕಾಲಹರಣ ಬೇಡವೆಂದು ಕೃಷ್ಣ ಪರಮಾತ್ಮ ತನ್ನ ಚಕ್ರಾಯುಧದಿಂದ ದುರುಳನ ಶಿರಛೇದನ ಗೈದನು. ಶಿಶುಪಾಲನ ಶರೀರದಿಂದ ಹೊರಟ ದಿವ್ಯ ಜ್ಯೋತಿ ಕೃಷ್ಣನಲ್ಲಿ ಲೀನವಾಯಿತು. ಆ ಬಳಿಕ ಪಾರ್ಥಿವ ಶರೀರದ ಮರಣೋತ್ತರ ಕರ್ಮಗಳೂ, ಯಾಗ ಮಂಟಪ ಶುದ್ಧೀಕರಣವೂ ನಡೆಯಿತು. ನೈರ್ಮಲ್ಯ, ಶಾಂತಿಕ, ದೋಷ ನಿವಾರಣಾ ಹೋಮಗಳು ನಡೆದು ಶುದ್ದತೆಯ ಪ್ರಾಪ್ತಿಗಾಗಿ ಪ್ರತ್ಯೇಕ ಹೋಮ ಹವನಗಳು ಆರಂಭವಾದವು.
ಮುಂದುವರಿಯುವುದು..





















