ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಪ್ರಶ್ನೆ

ಕಾರ್ಕಳ : ಧ್ವನಿವರ್ಧಕಕ್ಕೆ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಪೊಲೀಸರು ಯಕ್ಷಗಾನಕ್ಕೆ ತಡೆಯೊಡ್ಡಿದ ಪ್ರಸಂಗ ಕಾರ್ಕಳದ ಶಿರ್ಲಾಲು ವಿನ ಮುಂಡ್ಲಿ ಎಂಬಲ್ಲಿ ವರದಿಯಾಗಿದ್ದು, ಯಾವುದೇ ಮಾಹಿತಿ ನೀಡದೆ ಕಾರ್ಯಕ್ರಮ ಆಯೋಜಿಸಲಾಗಿದ್ದು ,ರಾತ್ರಿ ವೇಳೆ ದ್ವನಿವರ್ಧಕ ಬಳಸುವುದರಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ಕರೆ ಬಂದ ಕಾರಣ ಪೊಲೀಸರು ಹೋಗಿ ವಿಚಾರಿಸಿದ ಸಂದರ್ಭ ಧ್ವನಿವರ್ಧಕ ಬಳಸಲು ಅನುಮತಿ, ಪಡೆಯದೆ ಇರುವುದು ಕಂಡು ಬಂದಿದೆ. ಆದ ಕಾರಣ ಆಯೋಜಕರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್, ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮುಂಡ್ಲಿಯಲ್ಲಿ ನಿನ್ನೆ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನವನ್ನು ಸ್ಥಳೀಯ ಕಾಂಗ್ರೆಸ್ ಮುಖಂಡನ ದೂರಿನ ಮೇರೆಗೆ ಸ್ಥಗಿತಗೊಳಿಸಲು ಹೊರಟಿದ್ದು ಎಷ್ಟು ಸರಿ ? ಯಕ್ಷಗಾನ ಕರಾವಳಿ ಜಿಲ್ಲೆಗಳ ಪಾರಂಪರಿಕ ಕಲೆಯಾಗಿದ್ದು, ರಾತ್ರಿ ಪೂರ್ತಿ ಪ್ರದರ್ಶನಗೊಳ್ಳುತ್ತದೆ. ಕಾಂಗ್ರೆಸ್ ನಾಯಕ ದೂರು ಕೊಟ್ಟ ಎಂಬ ಕಾರಣಕ್ಕೆ,ಎಸ್ಪಿಯೇ ಯಕ್ಷಗಾನ ನಿಲ್ಲಿಸಲು ಪೊಲೀಸರನ್ನು ಕಳುಹಿಸಿದ್ದು ಎಷ್ಟು ಸರಿ? ಸಾಲದಕ್ಕೆ ಮರುದಿನ ಯಕ್ಷಗಾನ ಆಯೋಜಕರ ಮೇಲೆ ಮೊಕದ್ದಮೆ ದಾಖಲಿಸುವ ಮೂಲಕ ನಿಮ್ಮ ಪೊಲೀಸರು ಸರಕಾರ ನಡೆಸಲು ಹೊರಟಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಗೃಹ ಸಚಿವರೇ, ಯಕ್ಷಗಾನದಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತದೆಯೇ? ಯಕ್ಷಗಾನದಿಂದ ಯಾರ ಮನಸ್ಸಿಗಾದರೂ ನೋವಾಗುತ್ತದೆಯೇ? ನೀವು ಒಬ್ಬ ಸಭ್ಯ ಹಾಗೂ ಸುಸಂಸ್ಕೃತ ವ್ಯಕ್ತಿ ಎಂದು ನಾವೆಲ್ಲ ಭಾವಿಸಿದ್ದೆವು ಈಗ ಸುಳ್ಳಾಗಿದೆ. ನಿಮ್ಮ ಅವಧಿಯಲ್ಲಿ ಪೊಲೀಸ್ ಇಲಾಖೆ ಎಂಬುದು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನಕ್ಕೆ ಪದೇ ಪದೇ ಬಳಕೆಯಾಗುತ್ತಿದೆ ಎಂಬುದು ಅತ್ಯಂತ ಬೇಸರದ ಸಂಗತಿಯಾಗಿದ್ದು, ವಾಕ್ ಸ್ವಾತಂತ್ರ್ಯ, ಸಂವಿಧಾನ ಇತ್ಯಾದಿ ವಿಚಾರಗಳು ನಿಮಗೆ ಭಾಷಣದ ಸರಕಾಗಿಬಿಟ್ಟಿದೆ. ಇಂದು ಯಕ್ಷಗಾನ, ನಾಳೆ ಕಂಬಳ, ಭೂತ ಕೋಲ ಇತ್ಯಾದಿ ಧಾರ್ಮಿಕ ಆಚರಣೆಗಳನ್ನು ಕಾಂಗ್ರೆಸ್ ನಾಯಕರು ದೂರು ಕೊಟ್ಟರೆಂದು ನಿಲ್ಲಿಸುತ್ತೀರಾ? ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬ ಕನಸು ಕಾಣುತ್ತಿರುವ ನಿಮಗೆ ನಾಡಿನ ಸಾಂಸ್ಕೃತಿಕ ಆಯಾಮದ ಬಗ್ಗೆ ಕಲ್ಪನೆ ಇಲ್ಲವೋ ಅಥವಾ ಇಲಾಖೆಯ ಮೇಲೆ ಹಿಡಿತವಿಲ್ಲವೋ ಎಂದು ಪ್ರಶ್ನಿಸುವ ಮೂಲಕ ಪ್ರಕರಣದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.




















