ಭಾಗ -25
ಭರತೇಶ್ ಶೆಟ್ಟಿ, ಎಕ್ಕಾರ್

ಈ ಕಾಡಿನಲ್ಲಿರುವ ರಾಕ್ಷಸ ರಾಜ ವೃಷಪರ್ವನಿಗೆ ಗುರುಗಳು ನನ್ನ ತಂದೆ ಶುಕ್ರಾಚಾರ್ಯರು. ಆಸ್ಥಾನ ಗುರುಗಳಾದ ಕಾರಣ ನಾವೂ ಇಲ್ಲೇ ಇದ್ದೇವೆ. ಆ ರಾಕ್ಷಸ ರಾಜನಿಗೆ ಶರ್ಮಿಷ್ಟೆ ಎಂಬ ನನ್ನ ಪ್ರಾಯದ ಮಗಳಿದ್ದಾಳೆ. ನಾವು ಗೆಳತಿಯರು, ನಮ್ಮ ಪ್ರಾಯದ ಹೆಣ್ಮಕ್ಕಳೊಂದಿಗೆ ಕೂಡಿಕೊಂಡು ನೀರಾಟಕ್ಕಾಗಿ ಈ ಸರೋವರದತ್ತ ಬಂದಿದ್ದೆವು. ಬಹಳ ಹೊತ್ತು ಜಲಕ್ರೀಡೆಯಾಡಿದೆವು. ಕೆಲ ಸಮಯದ ಮೊದಲು ಈ ಪ್ರದೇಶದಲ್ಲಿ ಬೇಟೆಗಾರರ ಬೊಬ್ಬೆ ಗದ್ದಲ ಕೇಳಿದಾಗ ಎಲ್ಲರೂ ನೀರಿನಿಂದ ಮೇಲೆ ಬಂದು ಗೊಂದಲಕ್ಕೊಳಗಾಗಿ ಬಟ್ಟೆ ಧರಿಸಿ ಓಡಿದರು. ನನ್ನ ಸೀರೆಯನ್ನು ಶರ್ಮಿಷ್ಟೆ ಉಟ್ಟುಕೊಂಡು ಓಡಿದುದರಿಂದ, ಬೇರೆ ಯಾವುದೇ ವಸ್ತ್ರವೂ ಇಲ್ಲಿರದೆ, ಮಾನ ರಕ್ಷಣೆಗಾಗಿ ಈ ಸ್ಥಿತಿಯಲ್ಲಿ ನಾನು ನೀರಿನಲ್ಲಿ ಮುಳುಗಿ ಇಲ್ಲೇ ಉಳಿದು ಹೋದೆ. ದೇವರ ಕೃಪೆ ರಾಜಾ ನಿನ್ನ ಮುಖಾಂತರ ರಕ್ಷಿಸಲ್ಪಟ್ಟೆ. ಎಂದು ವೃತ್ತಾಂತ ವಿವರಿಸಿದಳು.
ಕ್ಷಣಕಾಲ ಇಬ್ಬರೂ ಮಾತನಾಡಲಿಲ್ಲ. ಆ ಮೌನವೂ ಭಾವನಾತ್ಮಕ ಸಂಭಾಷಣೆಯಾಗಿ, ಮನದಿಂಗಿತಗಳನ್ನು ನೀರವತೆಯಲ್ಲೇ ವ್ಯಕ್ತಪಡಿಸಿ ಅನುಮೋದಿಸಲ್ಪಡುತ್ತಿದೆಯೋ ಎಂಬಂತೆ ಭಾಸವಾಗುತ್ತಿತ್ತು. ಜಾಗೃತನಾದ ರಾಜ ಯಯಾತಿ, ಕತ್ತಲಾಗುತ್ತಾ ಬಂದಿದ್ದರಿಂದ ದೇವಯಾನಿಯನ್ನು ಆಕೆಯ ಮನೆಗೆ ತಲುಪಿಸುವ ಬಗ್ಗೆ ಕೇಳಿಕೊಂಡನು. “ಇಲ್ಲಾ ನಾನು ಒಬ್ಬಳೇ ಹೋಗಬಲ್ಲೆ ಭಯ, ತೊಂದರೆಗಳೇನೂ ಇಲ್ಲ. ನೀವು ನನ್ನನ್ನು ರಕ್ಷಿಸಿ ಎಲ್ಲವನ್ನೂ ನೀಡಿದ್ದೀರಿ”. ಎಂದು ಸುಮಧುರ ಕಂಠದಿಂದ ನೆಲ ನೋಟಕಳಾಗಿ ಉಲಿದಳು. ಮತ್ತೆ ಮುಂದುವರಿಸಿ, “ಮಾನವನ್ನು ರಕ್ಷಿಸಿದ ನೀವು ಮಹಾನುಭಾವರು. ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವೇ? ನಾನು ನನ್ನನ್ನೇ ಸಮರ್ಪಿಸಿಕೊಂಡರೂ ಮುಗಿಯದು…..” ಎಂದು ಮೆಲುದನಿಯಲ್ಲಿ, ನಾಚುತ್ತಾ… ನುಡಿದಳು. ವಿವೇಚಿಸಿದ ರಾಜ ಯಯಾತಿ “ನೀನು ಮಹಿಮಾನ್ವಿತ ದೈತ್ಯಗುರು ಶುಕ್ರಾಚಾರ್ಯರ ಪುತ್ರಿ. ಬ್ರಾಹ್ಮಣ ಕನ್ಯೆಯಲ್ಲವೇ?” ಎಂದಾಗ… “ಓ ನನ್ನ ತಂದೆ… ಅವರನ್ನು ನಾನು ಒಪ್ಪಿಸಿ…” ಎಂದು ಏನೋ ಆಲೋಚನೆಯಲ್ಲಿ ನಿಲ್ಲಿಸಿದಳು. ಕೂಡಲೆ ಯಯಾತಿ ನಿನ್ನ ಮಾತು ನಿಜವಾಗಲಿ – ಆ ಭಾಗ್ಯ ನಮ್ಮದಾಗಲಿ ಎಂದು ಹಾರೈಸಿ ಆಕೆಯನ್ನು ಬೀಳ್ಕೊಟ್ಟನು.
ಆಶ್ರಮ ಸೇರಿದ ದೇವಯಾನಿ ನಡೆದ ವೃತ್ತಾಂತವನ್ನು ವರ್ಣರಂಜಿತವಾಗಿ ತನ್ನ ತಂದೆ ಶುಕ್ರಾಚಾರ್ಯರಿಗೆ ವಿಧ ವಿಧವಾಗಿ ವರ್ಣಿಸಿ ರಾಜಾ ಯಯಾತಿಯನ್ನು ಧರ್ಮಿಷ್ಟ, ಸದ್ಗುಣ, ಸಂವೇದನಶೀಲ ಸಂಪನ್ನ ನಾಯಕನಾಗಿಯೂ, ಶರ್ಮಿಷ್ಟೆಯನ್ನು ನಕಾರಾತ್ಮಕ, ದೋಷಿ, ಕಪಟಿ ಎಂಬ ಭಾವ ಬರುವಂತೆಯೂ ಬಿಂಬಿಸಿದಳು. ಕುಪಿತರಾದ ಶುಕ್ರಾಚಾರ್ಯರು ರಾಜ ವೃಷಪರ್ವನ್ನು ಕರೆಸಿ, ಆತನ ಸಾಮಿಪ್ಯ ತೊರೆದು ಹೊರಟು ಹೋಗುವುದಾಗಿ, ಅದಕ್ಕೆ ಕಾರಣ ಈ ಪ್ರಕರಣ ಎಂದು ಹೇಳಿದರು. ವೃಷಪರ್ವ ಅತೀವ ಚಿಂತೆಗೊಳಗಾದ. ಕಾರಣವೇನೆಂದರೆ ಮೃತಸಂಜೀವಿನಿ ವಿದ್ಯೆ ಬಲ್ಲ ಶುಕ್ರಾಚಾರ್ಯರ ರಕ್ಷಣೆ ಆತನಿಗೆ ಅನಿವಾರ್ಯವಾಗಿತ್ತು. ಮೇಲಾಗಿ ದೈತ್ಯ ಸಂಕುಲದ ಗುರುಗಳ ಮಾರ್ಗದರ್ಶನದ ಅವಶ್ಯಕತೆ ಅವನಿಗಿತ್ತು.
ರಾಜ ವೃಷಪರ್ವ ಪರಿ ಪರಿಯಾಗಿ ಶುಕ್ರಾಚಾರ್ಯರನ್ನು ಇಲ್ಲೇ ಇರುವಂತೆ ಬೇಡಿದಾಗ ಮಧ್ಯೆ ಬಂದ ದೇವಯಾನಿ “ತಾನು ಮದುವೆಯಾಗಿ ಹೋಗುವಾಗ ನಿನ್ನ ಮಗಳು ಅಪರಾಧಕ್ಕೆ ಶಿಕ್ಷಾ ರೂಪದಲ್ಲಿ ನನ್ನ ದಾಸಿಯಾಗಿ ಬರಬೇಕು” ಎಂದು ನುಡಿದಳು. ಆಗ ಶುಕ್ರಾಚಾರ್ಯರು “ಇದಕ್ಕೆ ನೀನು ಒಪ್ಪುವುದಾದರೆ ನಾನು ಇಲ್ಲಿ ಇರಬಲ್ಲೆ” ಎಂದು ಹೇಳಿಬಿಟ್ಟರು. ಚಿಂತೆಗೊಳಗಾದ ರಾಜ ವೃಷಪರ್ವ ತನ್ನ ಮಗಳಲ್ಲಿ ಈ ವಿಚಾರ ತಿಳಿಸಿದ. ಆಕೆ “ಅಪ್ಪಾ ಯುವರಾಣಿಯಾಗಿ ನಮ್ಮವರ ಕ್ಷೇಮ, ರಕ್ಷಣೆಗೆ ಪೂರಕವಾದ ಕೆಲಸ ಮಾಡಬೇಕಾದದ್ದು ನನ್ನ ಕರ್ತವ್ಯ. ಚಿಂತಿಸಬೇಡಿ. ಜಲವಿಹಾರಕ್ಕೆ ಹೋದ ಸಂದರ್ಭ ಬೇಟೆಗಾರರ ಗದ್ದಲದಿಂದ ಆಕಸ್ಮಿಕವಾಗಿ ಭಯ, ಗೊಂದಲ ಉಂಟಾಯಿತು. ಅರಿಯದೆ ನನ್ನಿಂದಾಗ ತಪ್ಪಿಗೆ, ಅಪರಾಧವಲ್ಲದಿದ್ದರೂ ಪ್ರತಿಕಾರ ರೂಪದ ದಂಡನೆಗೆ ಮನಮಾಡಿದ್ದಾಳೆ. ನಾನು ಶಾಂತ ಚಿತ್ತದಿಂದ ನಿಭಾಯಿಸುವೆ” ಎಂದು ಸಮಾಧಾನಿಸಿ, ಸಮ್ಮತಿ ನೀಡಿದಳು.
ಇದನ್ನೆಲ್ಲಾ ತಿಳಿದ ದೇವಯಾನಿ ಆನಂದ ತುಂದಿಲಳಾದಳು. ಯಯಾತಿಯ ಜೊತೆ ಪ್ರೇಮಾನುರಾಗಿಯಾದಳು. ತನ್ನ ಮನದಿಂಗಿತವನ್ನು ತಂದೆ ಶುಕ್ರಾಚಾರ್ಯರಿಗೆ ವಿವರಿಸಿದಾಗ ಬ್ರಾಹ್ಮಣ ಕನ್ಯೆಯಾದ ನಿನ್ನನ್ನು ವರ್ಣಧರ್ಮ ಮೀರಿ ಕ್ಷತ್ರಿಯ ರಾಜಕುಮಾರನಿಗೆ ಹೇಗೆ ಧಾರೆ ಎರೆದು ಕೊಡುವುದು? ಎಂಬ ವಿಚಾರದಲ್ಲಿ ಚಿಂತೆಗೊಳಗಾದರು. ಮಗಳ ಮೇಲಿನ ಅತಿ ವ್ಯಾಮೋಹದಿಂದ ತರ್ಕಕ್ಕೆ ತನ್ನನ್ನು ಒಡ್ಡಿದ್ದ ಶುಕ್ರಾಚಾರ್ಯರು ವಿವೇಚಿಸಿದರು.ರಾಜ ಯಯಾತಿ ಧರ್ಮಾತ್ಮನಿದ್ದಾನೆ. ವರ್ಣದಿಂದ ಕ್ಷತ್ರಿಯನಾದರೂ, ಕರ್ಮದಲ್ಲಿ ತಪಸ್ಸು, ದಾನ, ಧರ್ಮ, ಯಾಗ, ಯಜ್ಞಾದಿಗಳನ್ನು ನಿರಂತರ ಮಾಡುತ್ತಿರುವುದರಿಂದ ಆಚಾರದಲ್ಲಿ ಬ್ರಹ್ಮತ್ವ ದ ಬ್ರಾಹ್ಮಣ್ಯವನ್ನು ಹೊಂದಿದ್ದಾನೆ. ಹಾಗೆಂದು ವಿಮರ್ಷಿಸಿ ಮಗಳನ್ನು ಧಾರೆ ಎರೆದು ಕೊಡಲು ಒಪ್ಪಿದರು. ಇತ್ತ ವಿಧಿಯಾಟಕ್ಕೆ ಸಿಲುಕಿದ ವೃಷಪರ್ವ ತನ್ನ ಮುದ್ದಿನ ಕುವರಿ ಶರ್ಮಿಷ್ಟೆಯನ್ನು ದಾಸಿಯಾಗಿ ಕಳುಹಿಸಿಕೊಡುವ ಧರ್ಮ ಸಂಕಟಕ್ಕೆ ಬಿದ್ದು, ಅನ್ಯ ದಾರಿಯಿಲ್ಲದೆ ಹಾಗೆ ಮಾಡಬೇಕಾಯಿತು. ಗುರುಪುತ್ರಿ ದೇವಯಾನಿ ಪಟ್ಟದರಸಿ – ಮಹಾರಾಣಿ ಆದಳು. ವರ್ತಮಾನ ಕಾಲದಲ್ಲಿ ರಾಜ ವೃಷಪರ್ವನ ಮಗಳಾಗಿ ಯುವರಾಣಿ ಆಗಿರುವ ಶರ್ಮಿಷ್ಟೆ – ದೇವಯಾನಿಯ ಚರಣದಾಸಿಯಾಗಿ ಸೇವೆ ಮಾಡಲು ಮಹಾರಾಜ ಯಯಾತಿಯ ಅರಮನೆ ಸೇರಬೇಕಾಯಿತು.
ಮುಂದುವರಿಯುವುದು….
✍🏻ಭರತೇಶ್ ಶೆಟ್ಟಿ ಎಕ್ಕಾರ್….



















