
ಮಣಿಪಾಲ: ಸಂಸದ ಕೋಟ ಶ್ರೀನಿವಾಸ ಪೂಜಾರಿ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಪರಸರ ಸೂಕ್ಷ್ಮ ಪ್ರದೇಶ ಮತ್ತು ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ್ದು ಈ ವೇಳೆ ಕಸ್ತೂರಿ ರಂಗನ್ ನೇತೃತ್ವದ ಕಾರ್ಯತಂಡದ ಕರಡು ಅಧಿಸೂಚನೆ ವರದಿಯನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಿದ್ದು, ವರದಿ ಜಾರಿ ಬಗ್ಗೆ ಜನರಲ್ಲಿ ಆತಂಕ ಬೇಡ ಎಂದು ಹೇಳಿದರು.
ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಆಧಾರಿಸಿ, ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಈಗಾಗಲೇ 6 ಬಾರಿ ಅಧಿಸೂಚನೆಯನ್ನು ಹೊರಡಿಸಿದ್ದರೂ ಈವರೆಗೂ ಜಾರಿಗೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಜಾರಿಯಾದರೆ ಜನರಿಗೆ ಸಮಸ್ಯೆಯಾಗುತ್ತದೆ. ಸ್ಥಳೀಯ ಜನರ ಆಕ್ಷೇಪಣೆ, ಅವರಿಗಾಗುವ ಅನಾನುಕೂಲಗಳನ್ನು ಮೇಲಾಧಿಕಾರಿಗಳಿಗೆ ತಿಳಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು. ಪ್ರಸ್ತುತ ಜಾರಿಯಲ್ಲಿರುವ ಪರಿಸರ ಸೂಕ್ಷ್ಮ ವಲಯ ನಿಯಮದಿಂದ ಕಾಡಂಚಿನ ಸುರಕ್ಷಿತ ಅರಣ್ಯ ಪ್ರದೇಶ ಹಾಗೂ ವನ್ಯಜೀವಿ ಅಭಯಾರಣ್ಯ ಪ್ರದೇಶ ವ್ಯಾಪ್ತಿಯಿಂದ ಒಂದು ಕಿ.ಮೀ. ವ್ಯಾಪ್ತಿಯ ಬಫರ್ ಝೋನ್ಗಳಲ್ಲಿ ಜನರು ಯಾವುದೇ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಳ್ಳಲು ಈ ವಲಯ ಮೇಲ್ವಿಚಾರಣಾ ಸಮಿತಿಯ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ಸರ್ಕಾರಗಳು ಜಾರಿಗೆ ತರುವ ನೀತಿ ನಿಯಮಗಳು ಹಾಗೂ ಕಾನೂನುಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲೆ ಇರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಪರಿಸರಕ್ಕೆ ಹಾನಿಯಾಗದೇ ಅರ್ಜಿಗಳನ್ನು ಪರಿಶೀಲಿಸಿ, ಅನುಮತಿಯನ್ನು ನೀಡುತ್ತಿದೆ ಎಂದು ಹೇಳಿದರು.



















