
ಹೆಬ್ರಿ: ನಿನ್ನೆ ಮುದ್ರಾಡಿಯಲ್ಲಿ ಸಂಭವಿಸಿದ ಭೀಕರ ನೆರೆಯಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆಯ ಮೃತ ದೇಹ ಇಂದು ಮನೆಯಿಂದ ತುಸು ದೂರವಿರುವ ಗದ್ದೆಯಲ್ಲಿ ಪತ್ತೆಯಾಗಿದೆ.
ಮುದ್ರಾಡಿ ಗ್ರಾಮದ ಬಲ್ಲಾಡಿ ಎಂಬಲ್ಲಿ ನಿನ್ನೆ ಜಲ ಪ್ರವಾಹ ಉಂಟಾಗಿದ್ದು ನೇರಲ್ಪಕ್ಕೆ ನಿವಾಸಿ ಚಂದ್ರ ಗೌಡ್ತಿ ಎಂಬ 85ರ ಹರೆಯದ ವೃದ್ಧೆ ಶೌಚಾಲಯಕೆಂದು ಹೋಗಿದ್ದಾಗ ನೆರೆನೀರಿನಲ್ಲಿ ಕೊಚ್ಚಿ ಹೋಗಿದ್ದರು.
ಬಲ್ಲಾಡಿಯ ಈಶ್ವರ ನಗರ ಸಮೀಪದ ಬಮ್ಮಗುಂಡಿ ಹೊಳೆ ಉಕ್ಕಿ ಹರಿದು ಮನೆ ಕೃಷಿ ಜಮೀನಿಗೆ ನೀರು ಅಪಾರ ಹಾನಿಯಾಗಿದೆ. ಭೀಕರ ಜಲ ಪ್ರವಾಹದಿಂದಾಗಿ ಹಲವು ಮನೆಗಳು, ಕಾರು, 2 ಬೈಕುಗಳು ಇನ್ನಿತರ ವಸ್ತುಗಳು ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದು ಮುದ್ರಾಡಿಯ ಹೊಸ ಕಂಬಳದಲ್ಲಿ 1, ಕಾಂತರಾ ಬೈಲಿನಲ್ಲಿ 4, ಕೆಲಕಿಲದಲ್ಲಿ 3 ಮನೆಗಳು ಅರ್ಧದಷ್ಟು ಮುಳುಗಿ ಹೋಗಿದೆ. ರಕ್ಷಣಾ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಹಗ್ಗ ಕಟ್ಟಿ ಏಣಿಯ ಸಹಾಯದಿಂದ ಮನೆ ಮಂದಿಯ ರಕ್ಷಣೆ ಮಾಡಿದ್ದಾರೆ.













