
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹಠಾತ್ ಹೃದಯಾಘಾತದಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು ಈ ಸಾವುಗಳಿಗೆ ಕೊರೊನಾ ವ್ಯಾಕ್ಸಿನ್ ಕಾರಣವಲ್ಲ, ತಮ್ಮ ಕೋವಿಶೀಲ್ಡ್ ಲಸಿಕೆ ಸುರಕ್ಷಿತವಾಗಿದೆ ಎಂದು ಲಸಿಕೆ ತಯಾರಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ.
ತಮ್ಮ ಔಷಧವು ಕೋವಿಡ್ 19 ವಿರುದ್ಧ ರಕ್ಷಣೆ ನೀಡುವಲ್ಲಿ ಪರಿಣಾಮಕಾರಿಯಾಗಿದೆ. ಕೋವಿಶೀಲ್ಡ್ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ವಿಶ್ವಾದ್ಯಂತ ಹಲವಾರು ಕ್ಲಿನಿಕಲ್ ಪರೀಕ್ಷೆಗಳು ಮತ್ತು ನಿಯಂತ್ರಕ ಸಂಸ್ಥೆಗಳ ಮೌಲ್ಯಮಾಪನದಿಂದ ದೃಢೀಕರಿಸಲಾಗಿದೆ. ಲಸಿಕೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ದುಷ್ಪರಿಣಾಮಗಳಿಗೆ ವೈಜ್ಞಾನಿಕ ಆಧಾರವಿಲ್ಲ ಎಂದು ಸೀರಮ್ ಇನ್ಸ್ಟಿಟ್ಯೂಟ್ ಸಂಸ್ಥೆ ವಾದಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ರಾಜ್ಯದಲ್ಲಿ ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ಕೆಲವರು ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಹೇಳಿಕೆಯು ಸಾರ್ವಜನಿಕರಲ್ಲಿ ಗೊಂದಲ ಮತ್ತು ಚರ್ಚೆಗೆ ಕಾರಣವಾಗಿತ್ತು. ಆದರೆ ಸೀರಂ ತನ್ನ ಲಸಿಕೆಯ ಸುರಕ್ಷತೆಯನ್ನು ಪುನರುಚ್ಚರಿಸಿದ್ದು, ಇಂತಹ ಆರೋಪಗಳಿಗೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಆತಂಕ ಮೂಡಿಸುವ ಯಾವುದೇ ಆಧಾರರಹಿತ ಹೇಳಿಕೆಗಳಿಗೆ ಜನರು ಭಯ ಪಡಬಾರದು ಎಂದು ಸಾರ್ವಜನಿಕರಿಗೆ ತಿಳಿಸಿದೆ.













