
ಬೆಂಗಳೂರು: ಸಚಿವ ದಿನೇಶ್ ಗುಂಡೂರಾವ್ ಗಾಂಧಿ ಜಯಂತಿ ಪ್ರಯುಕ್ತ ಬುಧವಾರ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ‘ವಿನಾಯಕ ದಾಮೋದರ್ ಸಾವರ್ಕರ್ ಒಬ್ಬ ಚಿತ್ಪಾವನ ಬ್ರಾಹ್ಮಣನಾಗಿದ್ದರೂ ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಅವರು ಗೋಹತ್ಯೆಗೆ ವಿರುದ್ಧವಾಗಿರಲಿಲ್ಲ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಾವರ್ಕರ್ ಬ್ರಾಹ್ಮಣ, ಹಾಗೆಂದು ಅವರು ಖಂಡಿತವಾಗಿಯೂ ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಮೂಲಭೂತವಾದಿಯಾಗಿದ್ದರೂ ಮಾಡರ್ನ್ ಆಗಿದ್ದ ಅವರು ದನದ ಮಾಂಸ ಸೇವನೆ ಮಾಡುತ್ತಿದ್ದರು ಎಂದು ಕೆಲವರು ಹೇಳಿದ್ದಾರೆ. ಸಾವರ್ಕರ್ ಬಹಿರಂಗವಾಗಿಯೇ ಮಾಂಸಾಹಾರ ಸೇವನೆ ಬಗ್ಗೆ ಅರಿವು ಮೂಡಿಸುತ್ತಿದ್ದರು.
ಹಾಗೆ ನೋಡಲು ಹೋದರೆ ಮಹಾತ್ಮ ಗಾಂಧಿ ಸಸ್ಯಾಹಾರಿ. ಅವರಿಗೆ ಹಿಂದೂ ಸಂಸ್ಕೃತಿ ಬಗ್ಗೆ ಅಪಾರವಾದ ಗೌರವ, ನಂಬಿಕೆ ಇತ್ತು. ಆದರೆ, ಅವರ ಅಭಿಪ್ರಾಯ ಬೇರೆ ರೀತಿಯಲ್ಲಿತ್ತು. ಅವರು ಡೆಮಾಕ್ರಟಿಕ್ ಆಗಿದ್ದರು ಎಂದು ಗುಂಡೂರಾವ್ ಹೇಳಿದ್ದರು.
ಇದೀಗ ಗುಂಡೂರಾವ್ ಹೇಳಿಕೆಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದು ಕಾಂಗ್ರೆಸ್ನವರಿಗೆ ಹಿಂದುಗಳನ್ನು ಟೀಕೆ ಮಾಡುವುದೇ ಧರ್ಮ ಆಗಿದೆ. ಸಾವರ್ಕರ್ ಸತ್ತು ಸ್ವರ್ಗದಲ್ಲಿದ್ದಾರೆ, ಇನ್ನಾದರೂ ಬಿಡಿ ಅವರನ್ನು. ಕೊನೆಗೆ ಹೆಣ್ಣು ಮಕ್ಕಳು ಬಳೆಯೂ ಹಾಕಬಾರದು ಎಂಬ ಮನಸ್ಥಿತಿಗೆ ಕಾಂಗ್ರೆಸ್ ಬಂದು ಬಿಡುತ್ತದೆ. ಇನ್ನಾದರೂ ನಿಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಿ. ಟೀಕೆ ಮಾಡುವುದು ಹಿಂದುಗಳನ್ನು ಮಾತ್ರ, ಮುಸ್ಲಿಮರ ಬಗ್ಗೆ ಒಂದಾದರೂ ಮಾತಾಡಿದ್ದೀರಾ ಎಂದು ಅಶೋಕ್ ಕಿಡಿಕಾರಿದ್ದಾರೆ.













