ಅಕ್ಷರದ ಬೀಜ ಬಿತ್ತಿ ವಿದ್ಯೆ,ವಿನಯ, ಸಂಸ್ಕಾರವೆಂಬ ಫಲವನ್ನು ಪಡೆಯುವಲ್ಲಿ ಗುರುವಿನ ಪಾತ್ರ ಹಿರಿದು
ಪ್ರಜ್ವಲಾ ಶೆಣೈ,ಕಾರ್ಕಳ

ಅಕ್ಷರ ಕಲಿಸಿ,ಜ್ಞಾನವ ಸ್ಫುರಿಸಿ ಆಗಸದೆತ್ತರಕ್ಕೆ ಬೆಳೆಸಿದ ನಮ್ಮ ನಲ್ಮೆಯ ಗುರುಗಳನ್ನು ಸ್ಮರಿಸುವುದು ನಮ್ಮೆಲ್ಲರ ಪ್ರಥಮ ಆದ್ಯತೆ.ಜೀವನದ ಏಳು ಬೀಳುಗಳನ್ನು ಧೈರ್ಯವಾಗಿ ಎದುರಿಸಲು,ಒಳಿತು ಕೆಡುಕುಗಳ ಅರಿವನ್ನು ಕಲಿಸಿದ ಗುರುಗಳು ಸದಾ ಪೂಜನೀಯರು.ಕನಸುಗಳಿಗೆ ರೆಕ್ಕೆ ಕಟ್ಟಿದವರು,ರೆಕ್ಕೆ ಮುರಿದಾಗ ಧೈರ್ಯ ತುಂಬಿ ಆಕಾಶದೆತ್ತರಕ್ಕೆ ಹಾರಾಡಲು ಸ್ಫೂರ್ತಿ ನೀಡಿದವರು,ಅಗಣಿತ ಮಂದಿಯ ಬಾಳಿಗೆ ಬೆಳಕಾದವರು,ಸರಿ ತಪ್ಪುಗಳಾಚೆ ಬದುಕಿನ ದಾರಿ ತೋರಿದ ಎಲ್ಲಾ ಶಿಕ್ಷಕರೂ ಆದರಣೀಯರು.
ಗುರು ಬಾಳು ಬೆಳಗುವ ನಂದಾದೀಪ
ಗುರು ಎನ್ನುವ ಪದವೇ ಒಂದು ಅಗಾಧ ಶಕ್ತಿ.ಗುರಿಯನ್ನು ಸೇರಲು ದಾರಿ ತೋರುವವನೇ ಗುರು.ಉಸಿರು ಕೊಟ್ಟವಳು ತಾಯಿ,ಹೆಸರು ಕೊಟ್ಟವನು ತಂದೆ,ಆದರೆ ಆ ಹೆಸರನ್ನು ಉಸಿರಿರುವ ತನಕ ನೆನಪಿಟ್ಟುಕೊಳ್ಳಲು ವಿದ್ಯೆ ಕಲಿಸುವವನು ಗುರು.ಗುರುವೆಂಬ ಜ್ಞಾನದ ಸ್ವರೂಪವು ಜಗತ್ತನ್ನೇ ಬೆಳಗುವ ಮಹಾನ್ ಚೇತನ. ಮನಸ್ಸೆಂಬ ಹೊಲದಲ್ಲಿ ಅಕ್ಷರದ ಬೀಜವ ಬಿತ್ತಿ,ವಿದ್ಯೆ,ವಿನಯ,ಸಂಸ್ಕಾರವೆಂಬ ಫಲವನ್ನು ಪಡೆಯುವಲ್ಲಿ ಗುರುವಿನ ಪಾತ್ರ ಹಿರಿದು.ಹೊಲದಲ್ಲಿ ಅಲ್ಲಲ್ಲಿ ಬೆಳೆದ ಕಳೆಗಳ ಕಿತ್ತೊಗೆಯುವಂತೆ ಶಿಷ್ಯನ ತಪ್ಪುಗಳನ್ನು ತಿದ್ದಿ ತೀಡಿ ಸನ್ಮಾರ್ಗವನ್ನು ತೋರಿಸುವವನೆ ನಿಜವಾದ ಗುರು.
ಕಲ್ಲೊಂದು ಶಿಲ್ಪಿಯ ಕೈಯಲ್ಲಿ ಸುಂದರ ಮೂರ್ತಿಯಾದಂತೆ ಗುರುವಿನ ಕೈಯಲ್ಲಿ ಶಿಷ್ಯ ಅರಳುತ್ತಾನೆ.ಬದುಕಿಗೆ ಅರಿವಿನ ದೀಪ ಹಚ್ಚಿದ ಗುರುಗಳನ್ನು ನೆನಪಿಸಿಕೊಳ್ಳುವುದು ನಾವು ಗುರುಗಳಿಗೆ ನೀಡುವ ನಿಜವಾದ ಗೌರವ.ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ ಶಿಕ್ಷಕ ಹಾಗೂ ಭಾರತದ ಅತ್ಯುನ್ನತ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯನ್ನು ತಂದುಕೊಟ್ಟಿರುವ ಡಾ. ಸರ್ವಪಲ್ಲಿ ರಾಧಾ ಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5 ನ್ನು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತೇವೆ.
ಶಿಕ್ಷಕ ಬದಲಾವಣೆಯ ಹರಿಕಾರ
ಭಾರತೀಯ ಸಂಸ್ಕೃತಿ ಮತ್ತು ಧರ್ಮದಲ್ಲಿ ಗುರು ಶಿಷ್ಯ ಪರಂಪರೆಗೆ ತನ್ನದೇ ಆದ ಮಹತ್ವವಿದೆ.ಗುರು – ಶಿಷ್ಯರ ಬಾಂಧವ್ಯ ಅಂದಿಗೂ ಇಂದಿಗೂ ಬದಲಾವಣೆಯ ಹಾದಿಯನ್ನು ಕಂಡಿವೆ.ಮಗುವಿನ ವರ್ತನೆಯಲ್ಲಿ ಆಗುವ ಬದಲಾವಣೆಯನ್ನೇ ಕಲಿಕೆ ಎನ್ನುತ್ತೇವೆ.ಬೇರೆ ಬೇರೆ ಸಾಮಾಜಿಕ ವ್ಯವಸ್ಥೆಯಿಂದ ಬಂದ ಮಗುವಿನ ವರ್ತನೆಯಲ್ಲಿ ಅಮೂಲಾಗ್ರ ಬದಲಾವಣೆ ತರುವುದು ಶಿಕ್ಷಕರಿಂದ ಮಾತ್ರ ಸಾಧ್ಯ.ಒಂದು ದೇಶದ ಶಿಕ್ಷಣದ ಆರೋಗ್ಯವೇ ಆ ದೇಶದ ಆರೋಗ್ಯ.ಕಾಲ ಕಳೆದಂತೆ,ಜಗತ್ತು ಬದಲಾದಂತೆ ಶಿಕ್ಷಣ ಪದ್ಧತಿಗಳಲ್ಲಿಯೂ ವ್ಯಾಪಕವಾದ ಬದಲಾವಣೆ ಉಂಟಾಗಿದೆ.ಬದಲಾದ ವಿದ್ಯಮಾನಕ್ಕೆ ಅನುಗುಣವಾಗಿ ಇಂದಿನ ವ್ಯವಸ್ಥೆಗೆ ಹೊಂದಿಕೊಳ್ಳಬೇಕಾಗಿದೆ.ಶಿಕ್ಷಕ
ವಿದ್ಯಾರ್ಥಿಯ ಭವಿಷ್ಯ ರೂಪಿಸುವ ನೇತಾರನಷ್ಟೇ ಅಲ್ಲ,ಬದಲಾವಣೆಯ ಹೆಜ್ಜೆಗೆ ಜೊತೆಗಾರನೂ ಹೌದು.
ಗುರುವೇ ಜ್ಞಾನದ ಹೊಂಬೆಳಕು
ನ ಗುರೋರ್ ಅಧಿಕಂ ತತ್ವಂ
ನ ಗುರೋರ್ ಅಧಿಕಂ ತಪಃ
ತತ್ವ ಜ್ಞಾನಂ ಪರಂ ನಾಸ್ತಿ
ತಸ್ಮೈ ಶ್ರೀ ಗುರವೇ ನಮಃ
ಇದರ ಅರ್ಥ ಗುರುವಿಗಿಂತ ದೊಡ್ಡ ತತ್ವವಿಲ್ಲ,ಗುರುವಿಗಿಂತ ದೊಡ್ಡ
ತಪಸ್ಸು ಇಲ್ಲ, ಗುರುವಿನ ಧ್ಯಾನಕ್ಕಿಂತ ಮಿಗಿಲಾದ ಜ್ಞಾನವಿಲ್ಲ.ಅಂತಹ ಗುರುವಿಗೆ ನಾನು ನಮಸ್ಕರಿಸುತ್ತೇನೆ. ಭಾರತೀಯ ಪರಂಪರೆಯಲ್ಲಿ ಗುರುವಿಗೆ ವಿಶಿಷ್ಟವಾದ ಸ್ಥಾನವನ್ನು ನೀಡಲಾಗಿದೆ.
ಗುರು ಎನ್ನುವ ಪದವೇ ಅನನ್ಯ,ಅದ್ಭುತ
,ಅವರ್ಣನೀಯ .ಗುರುವೆಂದರೆ ಅಂಧಕಾರವೆಂಬ ಅಜ್ಞಾನವನ್ನು ತೊಲಗಿಸಿ ಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವವನು.ಶಿಕ್ಷಕನೆಂದರೆ ಕೇವಲ ಅಕ್ಷರ ಕಲಿಸುವವನಷ್ಟೆ ಅಲ್ಲ.ಶಿಕ್ಷಕನ ವ್ಯಾಪ್ತಿ ವಿಶಾಲವಾಗಿದೆ.
ಶಿ ಎಂದರೆ ಶಿಸ್ತೆಂಬ ಶಾಲೆಯಲ್ಲಿ ,ಶಿಕ್ಷಣವೆಂಬ ಅರಿವಿನ ಬೀಜವನ್ನು ಬಿತ್ತುವವನು.
ಕ್ಷ ಎಂದರೆ ಕ್ಷಮೆಯೆಂಬ ಹೂವರಳಿಸಿ,ಕ್ಷಮತೆಯ ಫಲವನ್ನು ಸೃಜಿಸುವವನು. ಕ ಎಂದರೆ ಕತ್ತಲೆ ಎಂಬ ಕಪ್ಪುಕಳೆಯನ್ನು ಕಿತ್ತು,ಕಲ್ಪನೆಯ ಕನಸಿಗೆ ಜ್ಞಾನದ ಬಣ್ಣವನ್ನು ತುಂಬುವವನು.
ಭೂಮಿಗೆ ಬಂದ ಮರುಕ್ಷಣದಿಂದ ಈ ಕ್ಷಣದವರೆಗೂ
ವಿದ್ಯೆ,ಬುದ್ಧಿ,ಸಂಸ್ಕಾರ ಕಲಿಸಿ,ಪ್ರೀತಿ,ಕಾಳಜಿ,ಕರುಣೆಯ ತೋರಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣರಾದ ಪ್ರತಿಯೊಬ್ಬ ವ್ಯಕ್ತಿಯೂ ಗುರುವೇ ಅಲ್ಲವೇ? ದೇಹದ ಭಾಗಗಳನ್ನು ಪಟ್ಟಿ ಮಾಡಿ
ನಿಮಗೆ ಅತಿ ಮುಖ್ಯವಾದದ್ದು ಯಾವುದು ಎಂದು ಕೇಳಿದರೆ ಹೇಗೆ ಉತ್ತರಿಸಲು ಸಾಧ್ಯವಿಲ್ಲವೋ ಹಾಗೇ ಯಾವ ಗುರುಗಳು ನಮ್ಮ ಬದುಕಿನ ದಾರಿಯನ್ನು ಬದಲಿಸಿದರು ಎಂದು ಹೇಳಿದರೆ ಉತ್ತರಿಸುವುದು ಅಷ್ಟೇ ಕಷ್ಟ.ಇಂದು ನಾವು ಏನಾದರೂ ಸಾಧಿಸಿದ್ದರೆ ಅದರ ಹಿಂದೆ ಮೊದಲ ಅಕ್ಷರ ಕಲಿಸಿದ ಗುರುಗಳಿಂದ ಆರಂಭಿಸಿ,ಜೀವನದ ಪಾಠ ಕಲಿಸಿದ ಪ್ರತಿಯೊಬ್ಬರೂ ನಮ್ಮ ಉನ್ನತಿಯ ಪಾಲುದಾರರೇ.ಕಷ್ಟದ ದಿನಗಳಲ್ಲಿ ಜೊತೆಯಾಗಿ ನಿಂತವರು, ಹಸಿವಾದಾಗ ಅನ್ನವಿತ್ತವರು, ಬಾಳು ಬರಡಾದಾಗ ಭರವಸೆ ತುಂಬಿದವರು, ಸೋತು ಹತಾಶರಾದಾಗ ಸ್ಫೂರ್ತಿ ತುಂಬಿದವರು, ನೊಂದು ಬೆಂದಾಗ ಬೆಂಬಲವ ನೀಡಿದವರು,ಮುದುಡಿ ಮೂಲೆ ಸೇರಿದಾಗ ಮಂದಹಾಸವ ಅರಳಿಸಿದವರು,ಬೆಳೆಯುವ ಸಿರಿ ಕಂಡು ಬೆನ್ನು ತಟ್ಟಿದವರು,ಎಲ್ಲರೂ ನಮ್ಮ ಪಾಲಿಗೆ ಗುರುವೇ ಅಲ್ಲವೇ? ಗುರುಗಳಿಂದ ಕಲಿತ ಪಾಠ ಇಂದಿಗೂ ಮುನ್ನಡೆಯಲು ದಾರಿ ದೀಪ.ಪರರ ಮುಂದೆ ಎಂದಿಗೂ ಕೈ ಚಾಚಿ ಸ್ವಾಭಿಮಾನವ ಮರೆಯಬೇಡ ಎನ್ನುವ ಗುರುಗಳ ಮಾತು ಸ್ವಾವಲಂಬನೆಯ ಬೀಜ ಬಿತ್ತಿತು.ಶೃದ್ಧೆ ಯಿಂದ ಮಾಡುವ ಯಾವ ಕೆಲಸವೂ ಕೀಳಲ್ಲ,ಧನಿಕ,ದುರಹಂಕಾರಿಗಳ ಧನ ಮದಕ್ಕೆ ಎಂದಿಗೂ ತಲೆ ಬಾಗಬೇಡ,ಸೋಲು ಸೋಲಲ್ಲ ಅದು ಸಾಧನೆಗೆ ದಾರಿ ಎಂಬ ಜೀವನದ ಪಾಠ ಕಲಿಸಿದ ಗುರುಗಳು ಎಂದೆಂದಿಗೂ ಸ್ಮರಣೀಯರು.
ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ನೆನಪಾಗುವುದು ಬಾಲ್ಯದ ದಿನಗಳು. ಮುಗ್ಧತೆ ಮಾಸದ ದಿನಗಳವು.ಗುರುಗಳು ತಲೆ ಸವರಿ,ಕೆನ್ನೆ ತಟ್ಟಿದರೆಂದರೆ ಅದು ದೊಡ್ಡದೇನೋ ಸಾಧಿಸಿದಂತೆ.ಕಣ್ಣುಗಳಲ್ಲಿ ನೂರು ನಕ್ಷತ್ರಗಳ ಮಿಂಚು ಹೊಳೆಯುತ್ತಿತ್ತು.ನೂರು ಸವಾಲುಗಳ ನಗು ನಗುತ್ತಾ ಸ್ವೀಕರಿಸಿ, ಕಷ್ಟಗಳಿಗಂಜದೇ ದೃಢ ಚಿತ್ತದಿಂದ ಜಗತ್ತನ್ನು ಎದುರಿಸುವ ಪಾಠ ಕಲಿಸಿದ ಎಲ್ಲಾ ಗುರುಗಳಿಗೆ ನನ್ನ ನೂರೊಂದು ನಮನಗಳು.














