
ಮಂಗಳೂರು: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಮುಖಂಡರಾದ ಶರಣ್ ಪಂಪ್ವೆಲ್ ಮತ್ತು ಭರತ್ ಕುಮ್ಡೇಲ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಬಂದಿದ್ದು ಈ ವಿಚಾರವಾಗಿ ಶರಣ್ ಪಂಪ್ವೆಲ್ ಮಂಗಳೂರಿನ ಕದ್ರಿ ಠಾಣೆಯಲ್ಲಿ ಭಾನುವಾರ ದೂರು ದಾಖಲಿಸಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡ ಕದ್ರಿ ಠಾಣೆ ಪೊಲೀಸರು ಇನ್ಫಾರ್ಮೇಶನ್ ಟೆಕ್ನಾಲಜಿ ಆ್ಯಕ್ಟ್ ಮತ್ತು ಬಿಎನ್ಎಸ್ ಕಾಯ್ದೆ 351(4) ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ.
ಶರಣ್ ಪಂಪ್ವೆಲ್ಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ‘‘ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್, ಶರಣ್ ಹತ್ಯೆಯಾಗಲು ತಯಾರಾಗು’’ ಎಂದು ಪೋಸ್ಟ್ ಮಾಡಿದ್ದರು.
ಶರಣ್ ಪಂಪ್ವೆಲ್ ಮಾತ್ರವಲ್ಲದೆ ಬಜರಂಗದಳ ಮುಖಂಡ ಭರತ್ ಕುಮ್ಡೇಲ್ ಅವರಿಗೂ ‘‘ಅಶ್ರಫ್ ಕೊಂದ ಭರತ್ನನ್ನು ಮರೆತಿಲ್ಲ, ‘‘Wait and watch’’ ಎಂದು ತಲ್ವಾರ್ ಫೋಟೋ ಪೋಸ್ಟ್ ಮಾಡಿದ್ದ ಬೆದರಿಕೆ ಬಂದಿದ್ದು ಈ ವಿಚಾರವಾಗಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಿಎನ್ಎಸ್ ಕಾಯ್ದೆ 196(1)(C), 353(2) ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ.
ಇದಲ್ಲದೆ ಎಸ್ಡಿಪಿಐ ಮುಖಂಡ ರಿಯಾಜ್ ಕಡಂಬು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿದ ಕೆ.ಆರ್ ರಾಕೇಶ್ ವಿರುದ್ಧ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.