
ಕಾರವಾರ: ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ಭೂ ಕುಸಿತವಾಗುವ ವರದಿಯನ್ನು ನೀಡಿದ್ದು ಇದೀಗ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಭಾಗದಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ.
ಶಿರೂರಿನ ಹೆದ್ದಾರಿಯ ಮತ್ತೊಂದು ಭಾಗದಲ್ಲಿ ನಾಲ್ಕಕ್ಕೂ ಹೆಚ್ಚು ಕಡೆ ಭೂ ಕುಸಿತವಾಗುತ್ತಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಜುಲೈ 16 ರಂದು ಭೂ ಕುಸಿತವಾಗಿ 11 ಜನರು ಸಾವನ್ನಪ್ಪಿದ್ದರು. ಇದರಲ್ಲಿ ಮೂರು ಜನರ ಶವ ಶೋಧಕ್ಕಾಗಿ ಕಾರ್ಯಾಚರಣೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಾದುಹೋಗುವ ಕಾರವಾರದ ಬಿಣಗ, ಅಂಕೋಲದ ಶಿರೂರು, ಹೊನ್ನಾವರದ ಗುಣವಂತೆ ಹೆದ್ದಾರಿ, ಭಟ್ಕಳದ ಹೆದ್ದಾರಿ ಭಾಗದಲ್ಲಿ ಮತ್ತೆ ಭೂ ಕುಸಿತವಾಗಲಿದೆ ಎಂದು ಜಿಎಸ್‌ಐ ತಜ್ಞರ ತಂಡ ವರದಿಯಲ್ಲಿ ತಿಳಿಸಿತ್ತು. ಜೊತೆಗೆ ಜಿಲ್ಲೆಯ ಭೂ ಕುಸಿತ ಭಾಗವನ್ನು ಮೂರು ಭಾಗವಾಗಿ ವಿಂಗಡಿಸಲಾಗಿದ್ದು ಕಾರವಾರ, ಅಂಕೋಲ, ಹೊನ್ನಾವರ, ಭಟ್ಕಳ ಭಾಗದ ಗುಡ್ಡ ಪ್ರದೇಶದಲ್ಲಿ ಮತ್ತೆ ಭೂ ಕುಸಿತ ಯಾವ ಸಂದರ್ಭದಲ್ಲಿಯಾದರೂ ಆಗಬಹುದು ಎಂದು ಎಚ್ಚರಿಕೆ ನೀಡಿದೆ.













