
ಬೆಂಗಳೂರು: ಬುಧವಾರ ಕಾನೂನು ಸಚಿವ ಎಚ್.ಕೆ. ಪಾಟೀಲ್ ವಿಧಾನಸೌಧದಲ್ಲಿ ಮಸೂದೆ ಅಂತಿಮಗೊಳಿಸುವ ಸಂಬಂಧ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಜತೆಗೂಡಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಸಾಲ ವಸೂಲಾತಿ ವೇಳೆ ಸಾಲಗಾರರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಲು ಮಸೂದೆ ಕರಡು ಸಿದ್ದಪಡಿಸಲಾಗಿದ್ದು, ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ನೀಡುತ್ತಿರುವ ಕಿರುಕುಳವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರವು ಅದನ್ನು ತಡೆಯಲು ತ್ವರಿತವಾಗಿ ಕಾನೂನು ತರಲು ಸೂಚಿಸಿದ್ದು ಮಸೂದೆ ಸಿದ್ದಪಡಿಸಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಚರ್ಚಿಸಲಾಗುವುದು. ಅಲ್ಲದೆ, ಮಾರ್ಚ್‌ನಲ್ಲಿ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಅಲ್ಲಿಯವರೆಗೆ ಕಾಯುವ ಬದಲು ಸುಗ್ರೀವಾಜ್ಞೆ ಮೂಲಕ ಮಸೂದೆಯನ್ನು ಶೀಘ್ರದಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಮಸೂದೆಗೆ ಅನುಮೋದನೆ ಪಡೆದು, ಸುಗ್ರೀವಾಜ್ಞೆ ಹೊರಡಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಹೊಸದಾಗಿ ರಚಿಸಿರುವ ಈ ನೂತನ ಮಸೂದೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಆರ್ಥಿಕ ವ್ಯವಹಾರಗಳಿಗೆ ತಡೆಯೊಡ್ಡುತ್ತಿಲ್ಲ. ಬದಲಿಗೆ ಸಾಲ ವಸೂಲಾತಿ ವೇಳೆ ಕಿರುಕುಳ ನೀಡುವುದನ್ನು ತಪ್ಪಿಸುವ ಅಂಶಗಳಿರಲಿದ್ದು ಕಿರುಕುಳದ ಕುರಿತು ದೂರುಗಳು ಬಂದು ಸಾಬೀತಾದರೆ ಮೈಕ್ರೋ ಫೈನಾನ್ಸ್ ಸಂಸ್ಥೆ ಮುಖ್ಯಸ್ಥರಿಗೆ ದಂಡವಿಧಿಸುವುದು ಮತ್ತು ಜೈಲು ಶಿಕ್ಷೆ ನೀಡುವಂತಹ ಕಠಿಣ ಅಂಶಗಳು ಮಸೂದೆಗೆ ಸೇರಿಸಲಾಗುತ್ತಿದೆ ಎಂದು ಹೇಳಿದರು.





















