ಭಾಗ 96
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೯೬ ಮಹಾಭಾರತ
ಹಾಗೆಯೇ ವಿದುರ ಭೀಷ್ಮಾಚಾರ್ಯರಲ್ಲಿ ನಿವೇದಿಸುತ್ತಾ “ಯುವರಾಜ ಧರ್ಮರಾಯ ಈ ಕಾರ್ಯವನ್ನು ಒಪ್ಪ ಬಾರದಿತ್ತು. ಪ್ರತ್ಯೇಕ ಅಂತರದ ವಾಸ ಯಾಕೋ ಸಂದೇಹಕ್ಕೆ ಎಡೆ ಮಾಡುತ್ತಿದೆ” ಎಂದು ಕೇಳಿದನು. ಆಗ ಭೀಷ್ಮಾಚಾರ್ಯರು ಯೋಚಿಸಿ “ವಿದುರಾ, ಯುವರಾಜನ ಧರ್ಮರಾಯನೇ ಒಪ್ಪಿ ಹೊರಟಿರುವಾಗ ನಮಗೆ ಮನಸ್ಸಿಲ್ಲದಿದ್ದರೂ ಬೀಳ್ಕೊಟ್ಟು ಕಳುಹಿಸುವ ಅನಿವಾರ್ಯತೆ ಬಂದೊದಗಿದೆ.” ಎಂದು ಉತ್ತರಿಸಿದರು. ಅಂದರೆ ಅವರಿಗೂ ಪಾಂಡವರು ಅರಮನೆಯ ಹೊರಗೆ ಪ್ರತ್ಯೇಕ ವಾಸ ಮಾಡುವುದು ಸರಿಯಲ್ಲ ಎಂಬ ಭಾವನೆ ಮನಮಾಡಿತ್ತು.
ಶುಭ ಮುಹೂರ್ತದಲ್ಲಿ ಐವರು ಪಾಂಡವ ಸಹೋದರರು ಮಾತೆ ಕುಂತಿಯ ಜೊತೆ ವಾರಣಾವತದತ್ತ ಹೊರಡಲು ಸಿದ್ದರಾದರು. ಬೇಕು ಬೇಕಾದ ವ್ಯವಸ್ಥೆ, ಸಲಕರಣೆ ಸಾಮಾಗ್ರಿಗಳೂ ಸಿದ್ದವಾಗಿದ್ದವು. ಪ್ರಜಾ ಪರಿವಾರ, ಹಿರಿಯರೆಲ್ಲಾ ಸೇರಿದ್ದಾರೆ. ಧರ್ಮರಾಯಾದಿ ಪಾಂಡವರು ಹಿರಿಯರಿಗೆ ವಂದಿಸಿ ಆಶೀರ್ವಾದ ಪಡೆದು ಹೊರಟರು. ಪ್ರಜಾಜನರು ತುಸು ದೂರ ಜೊತೆಯಾಗಿ ಸಾಗಿದರೂ ವಿದುರ ಮಾತ್ರ ಬೆಂಬತ್ತಿ ಮತ್ತೂ ಅನುಸರಿಸುತ್ತಾ ಸಾಗಿದ.
ಧರ್ಮರಾಯನನ್ನು ಕರೆದು ನಿಲ್ಲಿಸಿ ಅವನೊಬ್ಬನ ಜೊತೆ ಮಾತಿಗೆ ತೊಡಗಿದ. ಮಾತು ವಿಭಿನ್ನವಾಗಿತ್ತು. ಚಕ್ರವರ್ತಿಯಾಗುವ ರಾಜಕುಮಾರ – ಮಂತ್ರಿಯಾಗುವವ ಮುಂತಾದ ಗುರುತರ ಹೊಣೆಯುಳ್ಳ ಶಿಷ್ಯರು ಬಹುಭಾಷೆಗಳನ್ನು ಕಲಿಯುವುದು ಗುರುಕುಲದ ಸಂಪ್ರದಾಯವಾಗಿತ್ತು. ಹಾಗೆಯೇ ಭಿನ್ನ ಭಾಷೆಗಳನ್ನು ಕಲಿತಿದ್ದ ವಿದುರ – ಧರ್ಮರಾಯರು ಮಾತನಾಡ ತೊಡಗಿದ್ದು ಜನರಿಗೆ ಅರ್ಥವಾಗದ ವಿಭಿನ್ನ ಭಾಷೆಯಲ್ಲಿ. ಏನೋ ಗುಪ್ತ ಸಂದೇಶ ಸಂವಹನೆಯಾಗುತ್ತಿತ್ತು. ಆ ಸಂಭಾಷಣೆಯ ಸಾರ “ವತ್ಸಾ ! ಆಯುಧದ ನೇರ ಆಕ್ರಮಣದಿಂದ ಮಾತ್ರ ದೇಹವನ್ನು ಘಾಸಿ ಮಾಡಲಾಗುವುದಲ್ಲ ಅನ್ಯ ಮಾರ್ಗಗಳೂ ಇರಬಹುದು ಎಂಬ ಕಲ್ಪನೆ ಜಾಗೃತವಾಗಿರಲಿ. ಪ್ರಾಣವನ್ನು ಶರೀರದಿಂದ ಬೇರ್ಪಡಿಸಲು ಆಯುಧ ಪ್ರಯೋಗವೇ ಬೇಕೆಂದೇನಿಲ್ಲ. ಅನ್ಯ ವಿಧಾನಗಳಿಂದಲೂ ಎದುರಾಳಿಯು ಪ್ರಾಣಹರಣ ಮಾಡುವ ಪ್ರಯತ್ನ ಮಾಡಬಹುದೆಂಬ ಎಚ್ಚರಿಕೆಯಿರಲಿ. ಇಲಿ ಶಕ್ತಿಯಲ್ಲಿ ದುರ್ಬಲವಾದರೂ ಕಾಡು ಬೆಂಕಿಗಾಹುತಿಯಾದರೆ ಬಿಲಮಾರ್ಗದ ಮೂಲಕ ತನ್ನ ಪ್ರಾಣ ಉಳಿಸಿಕೊಳ್ಳಬಲ್ಲುದು. ಹಾಗಾಗಿ ವಿವೇಕ ಮತ್ತು ಧೈರ್ಯದಿಂದ ಕಾರ್ಯ, ವ್ಯವಹಾರಗಳು ಸಾಗಲಿ. ಧೈರ್ಯಹೀನನಿಗೆ ಯಾವ ಸ್ಥಾನ, ಸೌಭಾಗ್ಯವೂ ಪ್ರಾಪ್ತಿಯಾಗದು. ಹಾಗೆಯೇ ಮೃಗ ಬೇಟೆಯ ವಿದ್ಯೆಯನ್ನೂ ಸ್ಮರಿಸಿಕೊಳ್ಳಿರಿ” ಈ ರೀತಿ ಏನೂ ಅರ್ಥವಾಗದ ಒಗಟಿನಂತೆ ವಿದುರ ವಿವರಿಸಿ, ತಾನು ಹೇಳಿರುವ ವಿಚಾರವನ್ನು ಮರೆಯದೆ ಸ್ಮರಣೆಯಲ್ಲಿ ಇಟ್ಟುಕೊಂಡು ಮನನ ಮಾಡಿ ತರ್ಕಿಸುತ್ತಾ ಇರುವಂತೆಯೂ, ಅಗತ್ಯಬಿದ್ದಾಗ ಅವಲಂಬಿಸುವಂತೆಯೂ ಸೂಚಿಸಿದ. ಬಳಿಕ “ನಿಮಗೆಲ್ಲರಿಗೂ ಒಳ್ಳೆಯದಾಗಲಿ” ಎಂದು ಆಶೀರ್ವದಿಸಿದನು. ಧರ್ಮರಾಯನೂ ಸ್ಪಷ್ಟವಾಗಿ ಗ್ರಹಿಸಿ ಅರ್ಥೈಸಿದವನಂತೆ ತಲೆಯಾಡಿಸಿ ಆಗಬಹುದು ಎಂಬಂತೆ ಸ್ಪಂದಿಸಿ ವಂದಿಸಿ ಮುಂದೆ ಸಾಗಿದ. ವಿದುರ ಹಿಂದಿರುಗಿ ಬಂದನು. ಬೀಳ್ಗೊಡಲು ಬಂದವರೂ ಹಸ್ತಿನಾವತಿಗೆ ಹಿಂದಿರುಗಿದರು.
ಮುಂದುವರಿದು ವಾರಣಾವತದತ್ತ ಪಾಂಡವರೂ ಕುಂತಿಮಾತೆಯೂ ಹೋಗುತ್ತಿದ್ದಾರೆ. ಸ್ತ್ರೀಯರಿಗೆ ವಿಷಯ ಕುತೂಹಲ ಸ್ವಭಾವ ಸಹಜ ಗುಣವಲ್ಲವೇ? ಧರ್ಮರಾಯನನ್ನು ಕರೆದು ಮಗನೇ ವಿದುರ ಏನೋ ಹೇಳಿ ಹೋದನಲ್ಲ! ಏನು ವಿಚಾರ ಎಂದು ಕೇಳಿದಳು. ಅಮ್ಮಾ, ಚಿಕ್ಕಪ್ಪನೂ ನಮ್ಮ ಮಂತ್ರಿಗಳೂ ಆದ ವಿದುರ ನಮಗೆ ಶುಭವಾಗಲಿ ಎಂದು ಹಾರೈಸಿ – ಆಯುಧವಲ್ಲದ ಮರಣಕಾರಕ ವಿಷಯಗಳ ಬಗ್ಗೆ ಎಚ್ಚರದಿಂದಿರಿ ಎಂದು ಹೇಳಿದ್ದಾರೆ. ವಿಷ, ನೀರು, ಅಗ್ನಿ ಇತ್ಯಾದಿಗಳು ಮರಣ ಸದೃಶವಾಗಬಲ್ಲವು . ಹಾಗಾಗಿ ನಾವು ಆರೂ ಮಂದಿ ಇಂತಹ ಆಯುಧ ಘಾತಿಯಲ್ಲದ ಹತಪ್ರಾಣಗೊಳಿಸಬಲ್ಲ ವಿಷಯಗಳ ಬಗ್ಗೆ ಎಚ್ಚರದಿಂದಿರಬೇಕು. ವಿಪತ್ತು ಬಂದರೂ ಇಲಿ ಬಿಲಮಾರ್ಗದಲ್ಲಿ ಓಡಿ ಬದುಕುವಂತೆ, ನಾವೂ ಶಕ್ತಿ ಪ್ರಯೋಗದ ಬದಲು ಬುದ್ದಿ ಪ್ರಯೋಗದಿಂದ ಮುನ್ನಡೆಯಬೇಕು ಎಂದು ಸೂಚ್ಯವಾಗಿ ಹೇಳಿದ್ದಾರೆ. ಮಾತ್ರವಲ್ಲ ಕಾನನ ವಾಸ ಇದಿರಾಗಬಹುದೇನೋ ಎಂಬರ್ಥದಲ್ಲಿ ಬೇಟೆಯಾಡುವುದನ್ನು ಸ್ಮರಿಸಿಕೊಳ್ಳಿ ಎಂಬಂತೆ ಸೂಚಿಸಿದ್ದಾರೆ. ಹಾಗಾಗಿ ಬಹಳ ಎಚ್ಚರಿಕೆಯಿಂದ ಶತ್ರುಭಯವನ್ನು ಜಾಗೃತೆಯಿಂದ ಪರಿಶೀಲನೆ ಮಾಡುತ್ತಾ ಪ್ರತಿ ಹೆಜ್ಜೆಯನ್ನೂ ಗಮನಿಸಬೇಕೆಂದು ಹೇಳಿರುವ ಹಾಗಿದೆ. ವಿಜಯ ಪ್ರಾಪ್ತಿಗೆ ಧೈರ್ಯ, ಸ್ಥೈರ್ಯ ಸಾಹಸ ಬೇಕು ಎಂದಿದ್ದಾರೆ. ಏನಿದ್ದರೂ ಯಾರೂ ಒಬ್ಬರನ್ನೊಬ್ಬರು ಬಿಟ್ಟು ಇರಬಾರದು. ಜೊತೆಯಾಗಿ ಏನೇ ಕೆಲಸವಾಗಲಿ, ವಿಶ್ರಾಂತಿಯಾಗಲಿ ಮಾಡಬೇಕು ಎಂದು ಸಹೋದರರಿಗೂ ಮಾತೆಗೂ ವಿವರಿಸಿದ. ಅರ್ಜುನ ಮತ್ತು ಸಹದೇವ ಏನೋ ಸೂಕ್ಷ್ಮವಿದೆಯೆಂದು ಅರ್ಥೈಸಿಕೊಂಡರು. ನಕುಲನೂ ಭೀಮನೂ ಆರಾಮವಾಗಿದ್ದರು. ಹೀಗೆ ತರ್ಕಿಸುತ್ತಾ ವಾರಣಾವತ ಸೇರಿದರು.
ಪಾಂಡವರ ಆಗಮನದಿಂದ ವಾರಣಾವತದ ಜನರಿಗೆ ಮಹದಾನಂದ. ಪ್ರೀತಿ ಪೂರ್ವಕ ಸ್ವಾಗತ, ಫಲ ಪುಷ್ಪ ಕಾಣಿಕೆ ಅರ್ಪಿಸಿದರು. ಕುಶಲೋಪರಿ ವಿನಿಮಯವಾಗುತ್ತಿದ್ದಂತೆ ಪುರೋಚನ ಬಂದನು. ಕುಂತಿದೇವಿ ಸಹಿತ ಪುತ್ರರರನ್ನು ಭವ್ಯ ಭವನದೆಡೆ ಕರೆದುಕೊಂಡು ಹೋಗಿ, “ನಿಮ್ಮೆಲ್ಲರ ವಾಸ್ತವ್ಯಕ್ಕೆ ಈ ಅರಮನೆ. ಸೇವೆಗೆ ನಾವು ಸದಾ ಸಿದ್ದರಿದ್ದೇವೆ” ಎಂದು ವಂದಿಸಿ ನಿಂತನು. ಪಾಂಡವರೂ ಕುಂತಿಯೂ ನೂತನ ಅರಮನೆಯೊಳಗೆ ಬಂದು, ಏಕಾಂತದಲ್ಲಿ ಧರ್ಮರಾಯ ಮತ್ತೆ ಎಚ್ಚರಿಸಿದನು. “ಉಣ್ಣುವಾಗ ತಿನ್ನುವಾಗ ಜಾಗ್ರತೆ. ಮೈಮರೆತು ಗಾಢ ನಿದ್ರೆಯನ್ನೂ ಮಾಡಬೇಡಿ. ಬೆಂಕಿಯ ಬಗ್ಗೆ ಎಚ್ಚರಿಕೆಯಿರಲಿ. ಪರಿಣಾಮ ಜಾಗರಣೆಯ ಹಗಲು ರಾತ್ರಿಗಳು ಕಳೆದು ಹೋಗುತ್ತಿದ್ದವು. ಉಣ್ಣುವ ಮೊದಲು ವ್ರತವೆಂಬಂತೆ ಪ್ರಾಣಿ ಪಕ್ಷಿಗಳಿಗೆ ಒಂದಂಶ ಆಹಾರವನ್ನು ತಿನ್ನಿಸಿ ಅವುಗಳ ಕ್ಷೇಮ ಖಚಿತ ಪಡಿಸಿ ಬಳಿಕ ಸೇವಿಸುತ್ತಿದ್ದರು. ಮಲಗುವಾಗಲೂ ಪರ್ಯಾಯ ರೂಪದಲ್ಲಿ ಭಾಗಶಃ ಕೆಲವರು ಮಲಗಿದ್ದು ಇನ್ನುಳಿದವರು ಕಾವಲಾಗಿದ್ದರು. ಹೀಗೆ ನಡೆಯುತ್ತಿದ್ದ ಉತ್ಸವವನ್ನು ಎಚ್ಚರದಿಂದಿದ್ದು ಅದ್ದೂರಿಯಿಂದ ನೆರವೇರಿಸಿದರು. ಉತ್ಸವಕ್ಕೆ ಬಂದ ಜನರು ಎಲ್ಲ ಮುಗಿದ ಬಳಿಕ ಪಾಂಡವರಿಗೆ ವಂದಿಸಿ ತಮ್ಮ ತಮ್ಮ ಗ್ರಾಮ, ಮನೆ ಸೇರಿಕೊಂಡರು.
ಇಂತಹ ಸಮಯದಲ್ಲಿ ವಿದುರನಿಂದ ಕಳುಹಲ್ಪಟ್ಟ ಸೇವಕನೋರ್ವ ಗೌಪ್ಯವಾಗಿ ಬಂದು ಧರ್ಮರಾಯನ್ನು ಭೇಟಿಯಾಗಿ ತಾನು ತಂದ ಸಂದೇಶ ಅರುಹತೊಡಗಿದ.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್





















