
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಸಂಚಲನ ಮೂಡಿಸುವ ಆಘಾತಕಾರಿ ಘಟನೆ ನಡೆದಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಮಧ್ಯ್ಯಗ್ರಾಮ ಪ್ರದೇಶದಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದುಷ್ಕರ್ಮಿಗಳು ಚಂದ್ರನಾಥ್ ರಥ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಅದರಲ್ಲಿ ಮೂರು ಗುಂಡುಗಳು ಅವರ ದೇಹಕ್ಕೆ ತಗುಲಿವೆ ಎಂದು ತಿಳಿದುಬಂದಿದೆ.
ದಾಳಿಯ ವೇಳೆ ಕಾರಿನ ಮುಂಭಾಗದ ಗಾಜು ಪುಡಿಯಾಗಿದ್ದು, ಚಾಲಕ ಬುದ್ದದೇಬ್ ಕೂಡ ಗಾಯಗೊಂಡಿದ್ದಾರೆ. ಗಾಯಾಳುವನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಚಂದ್ರನಾಥ್ ರಥ್ ಹಲವು ವರ್ಷಗಳಿಂದ ಸುವೇಂದು ಅಧಿಕಾರಿ ಅವರ ವಿಶ್ವಾಸಾರ್ಹ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ರಾಜಕೀಯ ಚಟುವಟಿಕೆಗಳ ಜೊತೆಗೆ ವಿವಿಧ ಪ್ರಮುಖ ಜವಾಬ್ದಾರಿಗಳನ್ನು ಅವರು ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಸುವೇಂದು ಅಧಿಕಾರಿ ಆಸ್ಪತ್ರೆಗೆ ಧಾವಿಸಿದ್ದಾರೆ. ಈ ನಡುವೆ, ದಿಬ್ಯೇಂದು ಅಧಿಕಾರಿ ದಾಳಿಯ ಹಿಂದೆ ಟಿಎಂಸಿ ನಾಯಕರ ಕೈವಾಡವಿದೆ ಎಂದು ಆರೋಪಿಸಿದ್ದು, ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.





















