28.1 C
Udupi
Thursday, May 7, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 94

ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೯೪ ಮಹಾಭಾರತ

ಕಣಿಕನು ದುರ್ಯೋಧನನ ಆಪ್ತ ವಲಯದವನಾದ ಮೇಲೆ ಎಂದಿನಂತೆ ಪಾಂಡವರನ್ನು ದಮನಿಸುವ ಯೋಜನೆಯ ಕೂಟ ಸೇರುತ್ತಿತ್ತು. ಮಹಾ ಚಾಣಾಕ್ಷನಾದ ಕಣಿಕನನ್ನು ಶಕುನಿ ಪ್ರಲೋಬನೆಗೆ ಒಳ ಪಡಿಸುವ ಉದ್ದೇಶದಿಂದ ಹೊನ್ನಿನ ಗಂಟೊಂದನ್ನು ಮುಂದಿಟ್ಟು “ಮಾನ್ಯರೇ ಇದು ತಮ್ಮದು ಸ್ವೀಕರಿಸಿ. ಇನ್ನೂ ಇಂತಹ ಹಲವು ತಮ್ಮದಾಗಲಿದೆ. ಪ್ರತಿಯಾಗಿ ನಿಮ್ಮಿಂದ ಒಂದು ಸೂಕ್ತ ಸಲಹೆಯ ಅಪೇಕ್ಷೆ ನಮಗಿದೆ ಎಂದನು. ಏನೆಂದು ಕಣಿಕ ಕೇಳಿದಾಗ, ದುರ್ಯೋಧನನಿಗೆ ಅಧಿಕಾರ ಸಿಗಬೇಕಾದರೆ ಪಾಂಡವರು ಅಳಿಯಬೇಕು. ಆ ಬಗೆಯ ಸಾಧನೆಗೆ ದಾರಿ ತೋರಿಸಬೇಕು” ಎಂದು ಶಕುನಿ ವಿನಂತಿಸಿದ. ಹೊನ್ನಿನ ಗಂಟು ನೋಡಿದ ಕಣಿಕನ ಅಂತಃಕರಣ ತಾನು ಮಾಡಲು ಹೊರಟಿರುವ ಕೆಲಸ ಧರ್ಮ ಸಮ್ಮತವಲ್ಲ ಎಂದು ಸೂಚನೆ ನೀಡಿದರೂ, ಲಾಲಸೆಯೇ ಬಲಪಡೆಯಿತು.

ಕಣಿಕ ಕ್ಷಣಕಾಲ ಮೌನ ತಾಳಿ ಯೋಚನೆಯಲ್ಲಿ ಮಗ್ನನಾಗಿದ್ದ. ಬಳಿಕ ಮಾತು ಆರಂಭಿಸಿದ. “ದುರ್ಯೋಧನ ನೀನು ಬಲಶಾಲಿ ಹೌದಾದರೂ ಕಾರ್ಯ ಸಾಧನೆಗೆ ಸೂಕ್ತ ಮಾರ್ಗದರ್ಶನ ಮಾಡುವ ಮಂತ್ರಿ ಬೇಕು. ಆಯುಧ, ಜನ, ಧನ ಬಲದಿಂದಲೇ ರಾಜ್ಯ ಪ್ರಾಪ್ತಿಸದು. ಮಂತ್ರಬಲವೂ ಮುಖ್ಯ. ಹಾಗಾಗಿ ಬಾಕಿ ಎಲ್ಲಾ ಬಲಗಳನ್ನು ವಿನಿಯೋಗಿಸುವ ಬುದ್ದಿ ಬೇಕು. ಬುದ್ದಿ ಇಲ್ಲದವನ ಬಳಿ ಏನಿದ್ದರೂ ಉಳಿಯದು. ಪಾಂಡವರು ಜನರ ಪ್ರೀತಿ, ಸದ್ಗುಣ, ಧರ್ಮಪಾಲನೆ, ವಿದ್ಯೆಯ ಸಮಯೋಚಿತ ಪ್ರಯೋಗ ಹೀಗೆ ಬುದ್ದಿವಂತಿಕೆಯಿಂದ ಶ್ರೇಷ್ಠರೇ ಆಗಿದ್ದಾರೆ. ಈ ರೀತಿ ಪ್ರಬಲರಾದ ಅವರ ಮೇಲೆ ಆಕ್ರಮಣ ಮಾಡಿದರೆ ನಷ್ಟವೇ ಹೊರತು ಲಾಭವಾಗದು. ಶತ್ರುವು ಪ್ರಬಲನಾಗಿದ್ದಾಗ ಅಂಜಿ ಸ್ನೇಹಿತನಂತೆ ನಟಿಸಬೇಕು. ಸಮಾನನಾಗಿದ್ದಾಗ ಗೌರವವನ್ನು ನೀಡಬೇಕು. ದುರ್ಬಲನಾದರೆ ತಲೆ ಮುರಿಯಬೇಕು. ಮನುಷ್ಯನಿಗೆ ನಾಲ್ಕು ಪುರುಷಾರ್ಥಗಳಿವೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಮೋಕ್ಷದ ವಿಚಾರ ಬಿಡೋಣ. ಧರ್ಮವೇ ಮುಖ್ಯವೆಂದು ಬಹುಮಂದಿ ಹೇಳಿದ್ದಾರೆ. ಆದರೆ ರಾಜನೀತಿಯಂತೆ ಅರ್ಥ ಅಂದರೆ ಆರ್ಥಿಕ ಬಲ ಪ್ರಯೋಗವೇ ಮುಖ್ಯವಾಗುತ್ತದೆ. ಜನ ದುಡ್ಡಿನ ಆಸೆಗೆ ಬೇಗ ವಶವಾಗುತ್ತಾರೆ. ಕಾಮ ಅಂದರೆ ಆಶೆಯ ಸಾಧನೆಗೆ ಇದು ಆಯುಧವಾಗುತ್ತದೆ. ದೇಶದಲ್ಲಿ ಬಡತನವಿದೆ. ರಾಜನಿಗಾದರೋ ಸಂಪಾದನೆಗೆ ಹಲವು ದಾರಿಯಿದೆ. ಏನೂ ಆಗದಿದ್ದರೆ ಪರ ರಾಜ್ಯದ ಮೇಲೆ ದಾಳಿ ಮಾಡಿಯಾದರೂ ಸಂಪತ್ತನ್ನು ವಶ ಪಡಿಸಬಹುದು. ಆದರೆ ಜನ ಸಾಮಾನ್ಯರಿಗೆ ಹಾಗೆ ಮಾಡಲಾಗದು. ಧರ್ಮರಾಯಾದಿ ಪಾಂಡು ಪುತ್ರರು ಜನರ ಕಷ್ಟಗಳಿಗೆ ಸ್ಪಂದಿಸಿ ಪ್ರೀತಿ ಪಾತ್ರರಾಗಿದ್ದಾರೆ. ಮೊದಲ ಉಪಾಯವಾಗಿ ನೀನು ಜನರಿಗೆ ಧನ ಕನಕ ಸಹಾಯ ನೀಡುತ್ತಾ ಈ ವಿಭಾಗದಲ್ಲಿ ಕಪಟದ ದಾರಿಯಾಗಿಯಾದರೂ ಧರ್ಮರಾಯನಿಗೆ ಸಮಾನ ಜನಮನ್ನಣೆ ಗಳಿಸಬೇಕು. ಎರಡನೆಯದಾಗಿ ಪ್ರಬಲರಾಗಿರುವ ಪಾಂಡವರ ಎದುರು ಯಾವುದೇ ವೈರ ಭಾವ ಇಲ್ಲದವರಂತೆ, ಹಿತೈಷಿಗಳಂತೆ ವರ್ತಿಸುತ್ತಾ, ವಿರೋಧಿಸದೆ ನೀನೂ ಉತ್ತಮ ಬಂಧುವಿನಂತೆ ತೋರಿಸಿಕೊಳ್ಳಬೇಕು. ನಿನ್ನನ್ನು ರಾಜ್ಯದ ಜನರು ಒಳ್ಳೆಯ ವ್ಯಕ್ತಿ ಎಂದು ನಂಬಬೇಕು. ಇದಾದ ಬಳಿಕ ಕ್ರಮೇಣ ನೀನು ಧರ್ಮರಾಯನ ದೋಷ, ಅವಗುಣಗಳು ಎದ್ದು ಕಾಣುವಂತೆ ಪ್ರತಿಬಿಂಬಿಸಿ ಅವರ ವರ್ಚಸ್ಸು ಮಂಕಾಗುವಂತೆ ಮಾಡಬೇಕು. ಪರಿಣಾಮ ನೀನು ಧರ್ಮರಾಯನಿಗಿಂತಲೂ ಶ್ರೇಷ್ಠ ಎಂದು ಸಾಬೀತಾಗಬೇಕು. ಕೊನೆಯದಾಗಿ ಹೀಗೆ ದುರ್ಬಲರಾಗುತ್ತಾ ಬಂದ ಪಾಂಡವರನ್ನು ನಿಗ್ರಹಿಸುವ ಯೋಜನೆ ರೂಪಿಸಬೇಕು. ಶತ್ರುಗಳನ್ನು ನಿಗ್ರಹಿಸುವ ಯೋಜನೆಗಳ ಉಪಾಯದಲ್ಲಿ ಮುಖ್ಯವಾದುದು ವಿಷ ಮತ್ತು ಬೆಂಕಿ. ಸಮಯ ಸಾಧಿಸಿ ಈ ಎರಡನ್ನು ಪ್ರಯೋಗಿಸಿ ಶತ್ರುವನ್ನು ಕೊನೆಗಾಣಿಸಬೇಕು. ಆಗ ಅವರ ದುರ್ಮರಣಕ್ಕೆ ನೀನು ಕಾರಣನಲ್ಲ ಎಂಬ ರೀತಿ ಜನ ನಂಬುತ್ತಾರೆ. ನಿನ್ನ ಕಾಮಿತ ಆಸೆ ಕೈಗೂಡುತ್ತದೆ.” ಅರೆ ಹೌದಲ್ಲಾ ಸರಿಯಾದ ಪಥದಲ್ಲಿ ಸಾಗಿದರೆ ಪಾಂಡವರನ್ನು ಬಗ್ಗು ಬಡಿಯಬಹುದೆಂಬ ವಿಶ್ವಾಸ ತಳೆದನು ದುರ್ಯೋಧನ. ಹೀಗೆ ರಾಜ ತಾಂತ್ರಿಕ ಚಾಣಾಕ್ಷತೆಯ ನಿರ್ದೇಶನ ನೀಡಿದ ಕಣಿಕನನ್ನು ಸನ್ಮಾನಿಸಿ ಕಳುಹಿಸಿದರು.

ದುರ್ಯೋಧನನು ಕಣಿಕನ ಉಪದೇಶದ ಬಗ್ಗೆ ತರ್ಕಿಸಿದ. ಅರ್ಥವು ಏನನ್ನೂ ಮಾಡಿಸುತ್ತದೆ ಎಂಬ ಕಣಿಕನ ಮಾತು ನಿಜ. ವಯೋವೃದ್ದ ಜ್ಞಾನ ವೃದ್ಧನಾದರೂ, ಬ್ರಾಹ್ಮಣತ್ವದ ವಿವೇಕ ತೊರೆದು, ಕಣಿಕ ಅರ್ಥ ಸಂಪಾದನೆಗೆ ವಿವಶನಾಗಿ ರಾಜನೀತಿಯ ಈ ಹಾದಿಯ ಬೋಧನೆ ಮಾಡುವಲ್ಲಿ ಪಾಪ ಬರುವುದೆಂದು ತಿಳಿದೂ ಮುಂದುವರೆದಿದ್ದಾನೆ. ಇದು ಆರ್ಥಿಕ ವಿನಿಯೋಗದ ಮಹಿಮೆ ಎಂದು ಅರ್ಥೈಸಿ ಹಾಗೆ ಜನರನ್ನು ತನ್ನ ವಶಗೈಯುವಲ್ಲಿ ಸಾತ್ವಿಕ ಸಜ್ಜನನಾಗಿ ಕಾಣಿಸಿಕೊಂಡು ಜನರಿಗೆ ಉದಾರಿಯಾಗಿ ಸಂದಿಸಿ ಸ್ಪಂದಿಸತೊಡಗಿದ. ಫಲಿತಾಂಶವಾಗಿ ಜನಮನ್ನಣೆ ಸಿಕ್ಕಾಗ ಯೋಜನೆ ಫಲ ನೀಡುತ್ತಿರುವುದು ಗೋಚರಿಸಿತು. ಪಾಂಡವರ ಬಗೆಗೂ ಬಹಿರಂಗವಾಗಿ ಮೃದು ಧೋರಣೆ ತೋರುತ್ತಾ ಬೆಂಬಲಿಗನಂತೆ ವರ್ತಿಸತೊಡಗಿದ. ಈ ನಡೆ ಎಲ್ಲರಲ್ಲೂ ಸದ್ಭಾವ ಮೂಡಿಸಿ ದುರ್ಯೋಧನನೂ ಉತ್ತಮ‌ ಎಣಿಸಿಕೊಂಡ.

ಹೀಗೆ ದುರ್ಯೋಧನ ಮಾನ್ಯತೆ ಪಡೆಯುತ್ತಿರುವಾಗ ಹೊರಗಿನ ಪ್ರಪಂಚವೂ, ಜನರೂ ನಂಬತೊಡಗಿದರು. ಹೀಗೇ ಉಳಿದರೆ ಕಾರ್ಯ ಸಾಧನೆಯಾಗದು, ಸಾಧಿಸಬೇಕಾದರೆ ಇನ್ನೂ ಮುಂದುವರಿಯಬೇಕೆಂದು ಕೆಲವೊಂದು ವಿಚಾರಗಳಲ್ಲಿ ಧಾರಾಳತನ ತೋರಿಸಿ ಅತಿ ಉತ್ತಮನಾಗುವ ಯತ್ನ ಮಾಡುತ್ತಿದ್ದ.

ಇಷ್ಟೆಲ್ಲಾ ಹಂತಗಳು ಕಾರ್ಯಗತವಾಗುತ್ತಿದ್ದಾಗ ಕೊನೆಯ ನಡೆ ಶತ್ರು ಸಂಹಾರದ ಯೋಜನೆಗಾಗಿ ಶಕುನಿ ದುಶ್ಯಾಸನಾದಿಗಳೊಂದಿಗೆ ಕಣಿಕನನ್ನೂ ಕರೆಸಿ ಗೌಪ್ಯ ಸಮಾಲೋಚನೆ ನಡೆಸಿದರು. ಹಾಗೆಯೇ ಅಲ್ಲಿ ಯೋಜಿಸಿದ ತೀರ್ಮಾನದಂತೆ “ಪುರೋಚನ” ಎಂಬ ಆಪ್ತ ಅನುಚರನನ್ನು ಕರೆಯಿಸಿದರು. ವಾರಣಾವತದಲ್ಲಿ ಒಂದು ಭಾರೀ ಉತ್ಸವ ನಡೆಸುವ ಕುರಿತು ಚರ್ಚೆ ನಡೆಯಿತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page