25.2 C
Udupi
Wednesday, July 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 567

ಭರತೇಶ ಶೆಟ್ಟಿ,ಎಕ್ಕಾರು

ಅರ್ಜುನನ ಇಬ್ಬರು ಪತ್ನಿಯರೂ, ಬಬ್ರುವಾಹನನ ತಾಯಂದಿರೂ ಆದ ಚಿತ್ರಾಂಗದೆ ಉಲೂಪಿಯರು, ತಮ್ಮ ಕಾಂತನ ಶಿರವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದರಾದರೂ ಈಗ ಕಾಣದೆ ಹೋದಾಗ ವಿಪರೀತ ವೇದನೆ ಅನುಭವಿಸುತ್ತಿದ್ದಾರೆ. ಏನಾಯಿತು, ಯಾರು ಒಯ್ದರು? ಎಲ್ಲಿದೆ? ಎಂದು ಆ ಪ್ರದೇಶದ ಎಂಟು ದಿಕ್ಕುಗಳತ್ತ ತಿರುಗಿ ಓಡಿ ನೋಡಿ ಹುಡುಕಿ ಕಾಣಿಸದಾಗ ದುಃಖಿತರಾಗಿ ದಿಕ್ಕುಗಾಣದೆ ಬೊಬ್ಬಿರಿದು ಅಳತೊಡಗಿದರು.

ಮಣಿಪುರದಲ್ಲಿ ಈ ರೀತಿ ಆಗುತ್ತಿರುವಾಗ, ಅತ್ತ ಹಸ್ತಿನಾಪುರದಲ್ಲೂ ಆತಂಕದ ಛಾಯೆ ಮೂಡತೊಡಗಿತು. ಮಾತೆ ಕುಂತಿದೇವಿಗೆ ತನ್ನ ವೀರ ಪುತ್ರ ಪಾರ್ಥನು ರಣದಲ್ಲಿ ಸತ್ತು ಬಿದ್ದ ಹಾಗೆ ಅತ್ಯಂತ ಭೀಕರದ ಕನಸು ಕಂಡಳು. ತಾನು ಕಂಡ ಘೋರ ಕನಸಿನಿಂದ ಭಯಭೀತಳಾಗಿ, ಆ ವಿಷಯವನ್ನು ಶ್ರೀಕೃಷ್ಣ, ಧರ್ಮರಾಯ, ಭೀಮ ನಕುಲ ಸಹದೇವರನ್ನು ಕರೆದು ತಿಳಿಸಿದಳು. ಕುಂತಿ ತಾನು ಕಂಡ ಭಯಾನಕ ಕನಸನ್ನು ನಡುಗುತ್ತಾ ವಿವರಿಸತೊಡಗಿದಳು. “ಅರ್ಜುನನು ಯಮನ ದಕ್ಷಿಣ ದಿಕ್ಕಿನತ್ತ, ಕತ್ತೆಯನ್ನು ಏರಿ ಹೋಗುತ್ತಿದ್ದನು, ಎಳ್ಳು ಎಣ್ನೆಯನ್ನು ಮೈಮೇಲೆ ಇಳಿದು ಹೋಗುವಷ್ಟು ಬಳಿದುಕೊಂಡಿದ್ದನು. ದಾಸವಾಳದ ಹೂವನ್ನು ಒಡೆವೆಯಾಗಿ ಧರಿಸಿದ್ದನು. ಮೈಗೆ ಗೋಮಯವನ್ನು ಪೂಸಿ ಕೊಂಡಿದ್ದನು. ಸ್ಪಷ್ಟವಾಗಿ ಎಚ್ಚರದಲ್ಲಿ ಕಂಡಂತೆ ನಾನು ಈ ದೃಶ್ಯಗಳನ್ನು ನೋಡಿದೆ” ಎಂದು ಕುಂತಿ ಹೇಳುತ್ತಾ ಅಳತೊಡಗಿದಳು. ಅರ್ಜುನನ್ನು ಹಡೆದ ನನ್ನ ಹೊಟ್ಟೆಯು ಬೇಯುತ್ತಿದೆ ತನಗೆ ತಡೆದು ಕೊಳ್ಳುವ ಶಕ್ತಿಯಿಲ್ಲ ಎಂದು ಗೋಗರೆದು ಪಾರ್ಥನಿಗೇನಾಗಿದೆ ಕೃಷ್ಣಾ! ನೀನೇ ಕಾಪಾಡಬೇಕೆಂದು ಬೇಡಿಕೊಂಡಳು.

ಇಷ್ಟೆಲ್ಲಾ ವಿಚಾರ ರಾಜಮಾತೆ ಕುಂತಿ ದೇವಿ ಹೇಳುವಾಗ ದ್ರೌಪದಿ, ಸುಭದ್ರೆಯರ ಕಣ್ಣುಗಳಿಂದಲೂ ಧಾರಾಕಾರ ಕಣ್ಣೀರು ಸುರಿಯ ತೊಡಗಿತು. “ಹೇ ಕೃಷ್ಣಾ! ಗೋವಿಂದಾ! ಅರ್ಜುನ ನಿನ್ನ ಸಖನು. ಇಂದು ಜೀವಂತವಾಗಿ ಇರುವುದು ಅನುಮಾನವೆಂದು ಅತ್ತೆ ಕುಂತಿಮಾತೆ ಭಯಭೀತರಾಗಿ ಮರುಗುತ್ತಿದ್ದಾರೆ. ಲೀಲಾಮಾನುಷನಾದ ನೀನೇ ದಾರಿ ತೋರಬೇಕು. ಸರ್ವರಕ್ಷಕನಾದ ನೀನೇ ಕಾಪಾಡಬೇಕು” ಎಂದು ದ್ರೌಪದಿ ಸುಭದ್ರೆಯರೂ ಪಾದಕ್ಕೆರಗಿ ಬೇಡಿದರು.

ಎಲ್ಲರಿಗೂ ಸಾಂತ್ವಾನ ಹೇಳಿ, ಧೈರ್ಯದ ಮಾತುಗಳನ್ನಾಡಿ “ನೀವ್ಯಾರು ವ್ಯಾಕುಲ ಚಿತ್ತರಾಗದಿರಿ. ಏನೋ ತೊಂದರೆ ಆಗಿರಬಹುದು. ಬಂದಂತಹ ಆಪತ್ತು ಪರಿಹಾರಗೊಂಡೀತು. ನಾನೇ ಹೋಗಿ ನೋಡಿ ಬರುತ್ತೇನೆ. ನೀವೆಲ್ಲರೂ ಯಾಗ ಕಾರ್ಯದಲ್ಲಿ ಮನಸ್ಪೂರ್ವಕ ತೊಡಗಿರಿ. ಶೀಘ್ರ ಶುಭ ಸಮಾಚಾರ ಬರಲಿದೆ” ಎಂದು ಸಂತೈಸಿದನು. ಕೂಡಲೇ ಕೃಷ್ಣನು ಗರುಡನನ್ನು ಮನಸಲ್ಲಿ ನೆನೆದು ಆಹ್ವಾನಿಸಿದನು. ಗಗನ ವ್ಯಾಪಿಯಾಗಿ ರೆಕ್ಕೆ ಬಡಿಯುತ್ತಾ ಶೀಘ್ರ ಗಮನನಾಗಿ ಬಂದ ಗರುಡ ಶ್ರೀ ಕೃಷ್ಣನ ಮುಂದೆ ಬಂದಿಳಿದು ನಮಿಸಿ ನಿಂತನು. ಕೃಷ್ಣನು ಜೊತೆಗೆ ಭೀಮ, ಕುಂತಿಯರನ್ನೂ ಗರುಡನ ಮೇಲೇರಿಸಿಕೊಂಡು ಮಣಿಪುರದತ್ತ ಹೊರಟನು.

ಗಗನ ಮಾರ್ಗದಲ್ಲಿ ಗರುಡ ಹಾರುತ್ತಾ ಬರುವಾಗಲೇ ಮಣಿಪುರದ ಅರಮನೆ, ರಣಭೂಮಿ, ಸತ್ತು ಬಿದ್ದಿರುವ ಆನೆ, ಕುದುರೆ, ಸೇನೆಯ ರಾಶಿಗಳನ್ನು ನೋಡಿ ಶ್ರೀಕೃಷ್ಣ ಭೀಮನಿಗೆ ತೋರಿಸಿ ಹೇಳತೊಡಗಿದ. ನಾವು ಮಣಿಪುರಕ್ಕೆ ಬಂದು ಮುಟ್ಟಿಯಾಯಿತು. ಇಳಿದು ಬಂದ ಕೃಷ್ಣ, ಭೀಮ, ಕುಂತಿಯರು ನೋಡಿದರೆ ಅಲ್ಲಿದ್ದವರು ಅಳುತ್ತಿದ್ದಾರೆ. ಭೀಮ ಮತ್ತು ಕೃಷ್ಣ ಒಂದೆರಡು ಹೆಜ್ಜೆ ನಡೆದು ಬಿದ್ದಿರುವ ಮುಂಡವನ್ನು ನೋಡಿ ಇದು ಅರ್ಜುನನದ್ದು ಎಂದು ಗುರುತಿಸಿದ ಕೃಷ್ಣ ಬೆರಳ ತುದಿಯಿಂದಲೇ ಭೀಮನಿಗೆ ತೋರಿಸಿದ. ಭೀಮನು ಅತ್ತ ನೋಡಿ ಅರಿತು ಕೊಂಡು ಕುಸಿದು ಕುಳಿತನು. ನಾನೇ ಈಗ ಅತ್ತು ಬಿಟ್ಟರೆ ಅಮ್ಮನನ್ನು ತಡೆಯಲಾದೀತೇ! ಎಂದು ಏನೂ ತೋರಗೊಡದೆ ಎದ್ದು ತಿರುಗಿ ನಿಂತರೆ ಪಕ್ಜದಲ್ಲೇ ವೃಷಕೇತುವಿನ ರುಂಡ ಮುಂಡ ಬಿದ್ದು ಕೊಂಡಿದೆ. ಭೀಮನು ವೃಷಕೇತುವಿನ ಶಿರವನ್ನೆತ್ತಿ ಕಂದಾ ನಾವೇನು ಪಾಪ ಮಾಡಿದ್ದೇವೆ? ನಮ್ಮ ಕಣ್ಣೆದುರಲ್ಲೇ ಬೆಳೆಯಬೇಕಾದ ಮಕ್ಕಳು ಸಾಯುವುದನ್ನು ನಿರಂತರ ಕಾಣಬೇಕಾಗಿ ಬರುತ್ತಿದೆಯಲ್ಲಾ! ಎಂದು ಮರುಗಿ ಕಣ್ಣೀರಿಳಿಸಿದನು. ಹೊಟ್ಟೆಯಲ್ಲಿ ದುಃಖದ ಸಂಕಟ ತುಂಬಿ ತಡೆಯಲಾಗದೆ ಕಲಿ ಭೀಮ ಕೋಪಗೊಂಡು ಬುಸುಗುಡುವ ನಾಗನಂತಾಗಿದ್ದಾನೆ. “ಹೇ ದೇವಾ! ನಿನಗೆ ತಿಳಿಯದ ವಿಚಾರ ಯಾವುದೂ ಇರದು. ನಮ್ಮವರಿಗೆ ಈ ರೀತಿಯ ಸ್ಥಿತಿ ತಂದವರು ಯಾರು. ಮೊದಲು ನನಗದು ತಿಳಿಯಲಿ. ಅಶ್ವಮೇಧ ಯಾಗ, ದಿಗ್ವಿಜಯಗಳ ಬಗ್ಗೆ ಮತ್ತೆ ಯೋಚಿಸುತ್ತೇನೆ. ಮೊದಲಾಗಿ ನನ್ನ ಮನಶಾಂತಿಗಾಗಿ ನನ್ನ ಸೋದರ ಅರ್ಜುನನಿಗೆ ಈ ಸ್ಥಿತಿ ಒದಗಿಸಿದವನ ಶಿರ ಛೇದನ ಮಾಡದೆ ಕೋಪಶಮನವಾಗದು” ಎಂದು ಅಬ್ಬರಿಸಿದನು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page