27.8 C
Udupi
Saturday, June 20, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 557

ಭರತೇಶ್ ಶೆಟ್ಟಿ ,ಎಕ್ಕಾರು

ಕಾರ್ತಿಕ ಏಕಾದಶಿಯ ಮಂಗಳವಾರದ ಸೂರ್ಯಾಸ್ಥಮಾನ ಸಮಯ ಅರ್ಜುನನ ಶಿರಚ್ಛೇದನವಾಗಿದೆ. ಹರಿನಾಮ ಸ್ಮರಣೆ ಮಾಡುತ್ತಾ ರುಂಡ ಭೂಮಿಗೆ ಬಿದ್ದಿದೆ. ಬಬ್ರುವಾಹನ ಈ ಕ್ಷಣ ವೀರಾವೇಶಕ್ಕೊಳಗಾಗಿ ಜಯ ಸಾಧಿಸಿದ ಹರ್ಷೋತ್ಕರ್ಷದಲ್ಲಿದ್ದಾನೆ. ವಿಜಯಶಾಲಿಯಾಗಿ ರಥೋತ್ಸವದಲ್ಲಿ ನಗರವನ್ನು ಧ್ವಜಗಳಿಂದ ಸಿಂಗರಿಸಿದ ಪ್ರಜೆಗಳ ಜಯಘೋಷದೊಡನೆ ಅರಮನೆಯ ರಾಜಬೀದಿಗೆ ಬಂದಿಳಿದನು.

ವಿಜಯೋತ್ಸವದಿಂದಲೂ, ಪುರಜನರ ಭವ್ಯ ಆದರದಿಂದಲೂ, ಸುಮಂಗಲೆಯರ ಪೂರ್ಣಕುಂಭ ಸ್ವಾಗತದಿಂದಲೂ, ಹೆಣ್ಮಕ್ಕಳು ಬೆಳಗಿದ ಮಂಗಳ ದೀಪದ ಪ್ರಭೆಯಿಂದಲೂ ಉಲ್ಲಸಿತನಾಗಿ ಅರಮನೆ ರಾಜ ದ್ವಾರದತ್ತ ಬರತೊಡಗಿದನು.

ಅರಮನೆಯೊಳಗೆ ಅಂತಃಪುರದಲ್ಲಿದ್ದ ರಾಜಮಾತೆ ಮಹಾರಾಣಿ ಚಿತ್ರಾಂಗದೆ ಹಾಗೂ ಅವಳ ಜೊತೆಗಿದ್ದ ಉಲೂಪಿಯರ ಬಳಿ ಬಂದ ಪರಿಚಾರಕಿಯರು “ಮಹಾರಾಣಿಯವರೇ, ನಿಮಗೆ ಉನ್ನತವಾದ ಸುದ್ದಿಯೊಂದಿದೆ. ನೀವು ಪುಣ್ಯಗರ್ಭೆಯೂ, ವೀರಗರ್ಭೆಯೂ ಆಗಿದ್ದೀರಿ. ಎಂತಹ ಅದ್ಬುತ ವಿಕ್ರಮಿ ಮಗನನ್ನು ಪಡೆದವರು ನೀವು ಎಂಬ ಹೆಮ್ಮೆ ನಮಗೂ ಆಗುತ್ತಿದೆ. ರಣಾಂಗಣದಲ್ಲಿ ಕಪ್ಪಸಹಿತವಾಗಿ ಹೋಗಿ ಸಮರ್ಪಿಸಿದ ನಮ್ಮ ರಾಜರಾದ ಬಬ್ರುವಾಹನ ಪ್ರಭುಗಳನ್ನು ಅಪಮಾನಿಸಿ, ಹೇಳಬಾರದಂತಹ ನಿಂದಾವಾಕ್ಯಗಳನ್ನಾಡಿದರಂತೆ. ಅಂತಹ ಅಜೇಯ ಅರ್ಜುನನೊಡನೆ ಅಪ್ರತಿಮ ಸಾಹಸಿಯಾಗಿ ಹೋರಾಡಿ ಗೆದ್ದು ಎದುರಾಳಿಯಾದ ಅರ್ಜುನನ್ನೇ ಕೊಂದು ವಿಜಯೋತ್ಸವದೊಂದಿಗೆ, ಪುರ ಜನರ ಭವ್ಯ ಸ್ವಾಗತದೊಂದಿಗೆ ಅರಮನೆಯ ಮುಂಭಾಗಕ್ಕೆ ಬಂದಿದ್ದಾರೆ. ನಮ್ಮ ಪುರದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿರುವ ನಮ್ಮೊಡೆಯನನ್ನು ಸತ್ಕರಿಸಲು‌ ಮಂಗಳಾರತಿಯ ವ್ಯವಸ್ಥೆ ಮಾಡಿದ್ದೇವೆ. ಬನ್ನಿ ರಾಜಮಾತೆಯವರೇ” ಎಂದು ಮಹದಾನಂದದಿಂದ ನುಡಿದರು.

ಪರಿಚಾರಕ ಸಖಿವರ್ಗದವರ ಮಾತು ಕೇಳುತ್ತಿದ್ದಂತೆ ಅರ್ಜುನನ್ನು ಕೊಂದ ವಿಚಾರ ಹೇಳುತ್ತಿದ್ದಂತೆ ನಿಸ್ತೇಜಳಾದ ಚಿತ್ರಾಂಗದೆ ಅಲ್ಲೇ ಕುಸಿದು ಮೂರ್ಛಿತಳಾಗಿ ಬಿದ್ದಳು. ಎಲ್ಲರೂ ಸೇರಿ ಆರೈಕೆ ಮಾಡಿದಾಗ ಚೇತರಿಸಿಕೊಂಡ ರಾಜಮಾತೆ “ಅಯ್ಯೋ ವಿಧಿಯೇ! ವಿಧಿಯಲ್ಲ ನನ್ನ ಪಾಲಿನ ದುರ್ವಿಧಿಯೇ! ನನ್ನ ಸುಮಂಗಲ ಭಾಗ್ಯವನ್ನೇ ಕಿತ್ತುಕೊಂಡೆಯಾ” ಎಂದು ಪರಿ ಪರಿಯಾಗಿ ಗೋಗರೆದು ಅಳ ತೊಡಗಿದಳು.

ವೀರ ಬಬ್ರುವಾಹನ ಅರಮನೆಯ ದ್ವಾರ ಪ್ರವೇಶಿಸಲು ಬಂದು ನಿಂತರೂ ಸ್ವಾಗತಿಸಲು ಒಳಗಿನಿಂದ ಯಾರು ಬಾರದೆ ನಿರ್ಜನ ಪ್ರದೇಶವಾಗಿ ಹೋಗಿದೆ. ಏನಾಗಿದೆ? ಯಾಕೆ ಹೀಗೆ? ಎಂದು ವಿಚಾರಿಸಿದಾಗ ಅರಮನೆಯೊಳಗಿನ ಶೋಕತಪ್ತ ದುಃಖಲಾಪದ ವಿಚಾರ ತಿಳಿಯಿತು. ನೇರವಾಗಿ ತಾಯಿಯ ಬಳಿ ಬಂದು “ಅಮ್ಮಾ! ಇದೇನಿದು? ನಿಮ್ಮ ಮಗ ನಾನು ಸತ್ತದ್ದಲ್ಲ. ಜಯಶಾಲಿಯಾಗಿ ಮರಳಿ ಬಂದಿದ್ದೇನೆ. ಸಂಭ್ರಮಿಸಬೇಕಾದ ನೀನೇಕೆ ಈ ರೀತಿ ಅಳುತ್ತಿರುವೆ?” ಎಂದು ಪ್ರಶ್ನಿಸಿದನು.

ಮಾರುತ್ತರ ನೀಡದೆ ಮೌನವಾಗಿ ಕುಳಿತಿದ್ದ ತಾಯಿಯನ್ನು ನೋಡಿ “ಮಾತೆ, ಆ ಅರ್ಜುನನೆದುರು ನಾನು ಶರಣಾಗಿ ಕಪ್ಪವನ್ನಿತ್ತರೆ ನನ್ನನ್ನು ಷಂಡನೆಂದು ಜರೆದ. ನನಗೇನೂ ಬೇಸರವಾಗಲಿಲ್ಲ. ಕಾರಣ ಅರ್ಜುನ ನನ್ನ ತಂದೆ ಎಂದು ನೀನು ಹೇಳಿದ್ದ ಸಂತೋಷವೇ ಮನದಲ್ಲಿ ತುಂಬಿರುವಾಗ ಅಲ್ಲಿ ವೇದನೆಗೆ ಸ್ಥಾನವಿರಲಿಲ್ಲ. ಮೇಲಾಗಿ ನನ್ನ ಮಾತೆಗೆ ಸಂತೋಷವಾಗುವಂತಹ ಕೆಲಸ ನನ್ನಿಂದಾಗುತ್ತಿದೆ ಎಂಬ ಮಹತ್ವಾಕಾಂಕ್ಷೆಯೇ ನನ್ನದ್ದಾಗಿತ್ತು. ಆದರೆ ನಿನ್ನ ಹಾಗು ನನ್ನ ಬಗ್ಗೆ ಆಡಲೇ ಬಾರದಾದ ಮಾತನ್ನಾಡಿದಾಗ ಸಹಿಸಿಕೊಳ್ಳಲಾಗದೆ ಯುದ್ಧ ಮಾಡಿ ಗೆದ್ದು ಜಯಶಾಲಿಯಾಗಿ ಬಂದಿದ್ದೇನಮ್ಮಾ. ಇಂತಹ ಸಂಭ್ರಮದ ಸಮಯ ದುಃಖವೇಕೆ?” ಎಂದು ಕೇಳುತ್ತಾ ಸಂತೈಸತೊಡಗಿದನು.

ಮಗನ ಮಾತನ್ನಾಲಿಸಿದ ಮಾತೆ ಚಿತ್ರಾಂಗದೆ “ಏನಂದೆ ಮಗನೇ? ಜಯಶಾಲಿಯಾಗಿ ಬಂದಿರುವೆಯಾ? ನೀನು ಸಂಪಾದಿಸಿ ತಂದಿರುವುದು ಜಯವಲ್ಲ ಮಗನೇ ನನಗೆ ನೀನು ತಂದೊಪ್ಪಿಸಿರುವುದು ವೈಧವ್ಯ. ಹಾ! ನೀನು ಮಹತ್ತರವಾದುದನ್ನೇ ಮಾಡಿರುವೆ. ಅರ್ಜುನ ನನ್ನ ಪತಿದೇವ ಏನೇ ಹೇಳಲಿ ಕೇಳಿ ಸಹಿಸಲಾಗದೆ ಹೋದೆಯಾ ಮಗನೇ! ನಿನಗಾತ ಶತ್ರುವಾಗಿ ಗೋಚರಿಸಿದನೇ? ರೋಷ ಉಕ್ಕೇರಿತೇ? ಛಲ ಮೂಡಿತೇ? ನೋಡು ಮಗನೇ ನಿನ್ನ ಹಠ, ರೋಷ, ಛಲದ ಪರಿಣಾಮ ನನ್ನ ಮುತ್ತೈದೆ ಭಾಗ್ಯವನ್ನೇ ಬಲಿ ಪಡೆದುಕೊಂಡಿದೆ. ನನ್ನ ಪಾಲಿನ ದೇವರಾದ ನನ್ನ ಪತಿಯನ್ನೇ ಕೊಂದು ಕಳೆದೆಯಲ್ಲಾ!… ದೇವೇಂದ್ರನ ಮಗನನ್ನೇ ಕೊಂದೆಯಾ? ಧರ್ಮರಾಯನ ತಮ್ಮ ಮಡಿದನೇ? ಶ್ರೀಕೃಷ್ಣನ ಸಖ ಹತನಾದನೇ? ಅದೆಂತಹ ದುಸ್ಸಾಹಸ ಮಾಡಿ ಬಿಟ್ಟೆ ಮಗನೇ? ದುಷ್ಕೃತ್ಯವೆಸಗಿ ತಂದೆಯನ್ನು ಕೊಂದೆನೆಂದು ಅಮ್ಮನ ಬಳಿ ಹೇಳುವ ನಿನ್ನಂತಹ ಕ್ರೂರಿಯನ್ನು ಯಾಕಾದರೂ ನಾನು ಹೆತ್ತೆ? ಸಾಕಿ ಬೆಳೆಸಿದೆ? ನಿನಗೇನೂ ಅನ್ನಿಸಲಿಲ್ಲವೇ? ಕನಿಷ್ಠ ನನ್ನ ನೆನಪೂ ಆಗಲಿಲ್ಲವೇ? ನನ್ನ ಕಂಠದ ಮಂಗಳಸೂತ್ರ, ಕಿವಿಯ ಓಲೆ, ಕೈ ಬಳೆ, ಮೂಗುತಿ, ಕಾಲುಂಗುರ, ಹಣೆಯ ಸಿಂಧೂರದ ಭಾಗ್ಯವನ್ನೇ ಕಿತ್ತು ಕೊಂಡೆಯಲ್ಲಾ ಮಗನೇ! ಮಗನ ಮರಣವಾರ್ತೆ ಕುಂತಿದೇವಿಯನ್ನು ಯಾವ ಸ್ಥಿತಿಗೆ ತಳ್ಳಿರಬಹುದು? ಧರ್ಮಮೂರ್ತಿಯಾದ ಯುಧಿಷ್ಠಿರ ಸೋದರನ ಮೃತ್ಯುವಿನ ಸಂಗತಿ ಸಹಿಸಿಯಾರೇ? ಈ ಸುದ್ಧಿ ತಿಳಿದ ಕೃಷ್ಣ ಭೀಮಾದಿಗಳು ಕೋಪಗೊಂಡರೆ ನಮ್ಮ ಪುರವೇ ನಾಶವಾಗದೆ ಉಳಿದೀತೇ? ಇದ್ದವರಿಗೆಲ್ಲಾ ನೋವು ನೀಡಿ, ಸರ್ವನಾಶಕ್ಕೆ ಕಾರಣನಾದೆಯಲ್ಲ ಮಗನೇ” ಎಂದು ವಿಧ ವಿಧವಾಗಿ ರೋಧಿಸತೊಡಗಿದಳು.

ಬಬ್ರುವಾಹನನಿಗೆ ಏನು ಹೇಳಬೇಕೆಂಬುದೇ ತೋಚದಂತಹ ಸ್ಥಿತಿ ಒದಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page