
ಅಣ್ಣಪ್ಪ ನಕ್ರೆ ಮತ್ತು ಶ್ರೀಮತಿ ಪ್ರತಿಮಾ ರಾಣೆ ಹೇಳಿಕೆಯನ್ನು ಗಮನಿಸಿದಾಗ, ಅಂಬೇಡ್ಕರ್ ಭವನದ ನಿರ್ವಹಣಾ ಸಮಿತಿ ಕಾರ್ಕಳದ ದಲಿತ ಸಮುದಾಯದ ಪರವಾಗಿ ಕೆಲಸ ಮಾಡುವ ಬದಲು ಒಂದು ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ, ರಾಜಕೀಯ ಪ್ರೇರಣೆಯಿಂದ ಕೆಲಸ ನಿರ್ವಹಿಸುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಅಂಬೇಡ್ಕರ್ ಭವನದ ಆವರಣ ಗೋಡೆ, ನೀರಿನ ವ್ಯವಸ್ಥೆ ಮತ್ತು ಆಸನದ ವ್ಯವಸ್ಥೆ ಸೇರಿದಂತೆ ಹಲವು ಕಾಮಗಾರಿಗಳು ಇನ್ನೂ ಪೂರ್ಣವಾಗಿಲ್ಲ ಆದರೂ, ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಹಿಡಿಯುವ ಆತುರ. ಸಮಿತಿ ರಚನೆ ಮಾಡುವಾಗ ದಲಿತ ಮುಖಂಡರನ್ನ, ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಿಯಮಾನುಸಾರ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಗೆ ಎಲ್ಲಾ ದಲಿತ ಸಮುದಾಯಗಳಿಂದ ಒಬ್ಬೊಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕು, ಆದರೆ ಇಲ್ಲಿ ಕಾಂಗ್ರೆಸ್ ಪಕ್ಷದ ಮೂವರನ್ನು ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಗೆ ಆಯ್ಕೆ ಮಾಡಲಾಗಿದೆ, ಒಬ್ಬರು ಮಾಜಿ ಪುರಸಭಾ ಅಧ್ಯಕ್ಷರು ಇನ್ನೊಬ್ಬರು ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ಮಾಜಿ ಅಧ್ಯಕ್ಷರು, ಮತ್ತೋರ್ವ ಕಾಂಗ್ರೆಸ್ ಪಕ್ಷದ ತಾಲೂಕು ಎಸ್ಸಿ ಘಟಕದ ಹಾಲಿ ಅಧ್ಯಕ್ಷ, ಇವರಲ್ಲಿ ಇಬ್ಬರು ಒಂದೇ ಸಮುದಾಯಕ್ಕೆ ಸೇರಿದವರು. ಇದರಿಂದ ಸಮಿತಿ ರಚನೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಭಾಗಿಯಾಗಿರುವುದು ಸ್ಪಷ್ಟವಾಗುತ್ತದೆ.
ಈ ಮೂವರಿಗೆ ದಲಿತ ಸಮುದಾಯದ ಹಿತಾಸಕ್ತಿಗಿಂತ ಇವರ ಪರೋಮೋಚ್ಛ ನಾಯಕನನ್ನು ಮೆಚ್ಚಿಸುವುದೇ ಮುಖ್ಯವಾಗಿಬಿಟ್ಟಿದೆ. ಇವರ ನಾಯಕನನ್ನು ಮೆಚ್ಚಿಸುವ ಸಲುವಾಗಿ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಅಡ್ಡ ದಾರಿ ಹಿಡಿದು (ಅನಧಿಕೃತವಾಗಿ) ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಗೆ ಆಯ್ಕೆಯಾದ ಮೂರೂ ಮಂದಿ ಸದಸ್ಯರು ವಿನಾಕಾರಣ ರಾಜಕೀಯವನ್ನು ಎಳೆದು ತಂದು ಬಿಜೆಪಿ ಪಕ್ಷದ ಹೆಸರನ್ನು ಬಳಸುತ್ತಿರುವುದು ತೀವ್ರ ಖಂಡನೀಯ.ಅಂಬೇಡ್ಕರ್ ಭವನ ಯಾವ ಪಕ್ಷದ್ದೂ ಅಲ್ಲ. ಅದು ದಲಿತ ಸಮುದಾಯದ ಸ್ವಾಭಿಮಾನದ ಸಂಕೇತ.
ನಮ್ಮ ಪ್ರಶ್ನೆ ಹಾಗೂ ಒತ್ತಾಯ ರಾಜಕೀಯಕ್ಕಾಗಿ ಅಲ್ಲ, ಪಾರದರ್ಶಕತೆಗಾಗಿ.
- ಸಮಿತಿ ರಚನೆ ಮಾಡುವಾಗ ದಲಿತ ಮುಖಂಡರನ್ನ, ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾವ ಆಧಾರದ ಮೇಲೆ ಸಮಿತಿಯ ಆಯ್ಕೆ ಮಾಡಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಲಿ ಮತ್ತು ಸರ್ಕಾರಿ ಆದೇಶವನ್ನು ಬಹಿರಂಗಗೊಳಿಸಲಿ.
“ರಾಜಕೀಯ ಉದ್ದೇಶ ಇಲ್ಲ” ಎಂದು ಸರ್ಕಾರ ಹೇಳುತ್ತಿದೆ. ಹಾಗಿರುವಾಗ ಸಮಿತಿ ಆಯ್ಕೆಯ Criteria + G.O copy ಸಾರ್ವಜನಿಕರ ಮುಂದಿಡಲಿ. - ಅಂಬೇಡ್ಕರ್ ಭವನ ದಲಿತ ಸಮುದಾಯದ ಆಸ್ತಿ. ಇದರ ನಿರ್ವಹಣೆಯಲ್ಲಿ ಪಾರದರ್ಶಕತೆಬೇಕು.
- ಹೊಸ ಸಮಿತಿ ರಚಿಸುವಾಗ ಭವನಕ್ಕೆ ಶ್ರಮಿಸಿದ ಮೂಲ ದಲಿತ ಮುಖಂಡರನ್ನು, ಸಮಾಜದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಯಮಾನುಸಾರವಾಗಿ ರಾಜಕೀಯ ರಹಿತವಾಗಿ ಸಮಿತಿ ರಚಿಸಬೇಕು.
- ಸಮಿತಿಯಲ್ಲಿ ದಲಿತ ಸಮಾಜದ ಎಲ್ಲ ಬಣಕ್ಕೂ ಪ್ರಾತಿನಿಧ್ಯ ನೀಡಬೇಕು, ಭವನದ ಲೆಕ್ಕಪತ್ರವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಕಟಿಸಬೇಕು.
- ಆರೋಪ-ಪ್ರತ್ಯಾರೋಪವನ್ನು ಬದಿಗಿಟ್ಟು ಡಾ. ಬಾಬಾಸಾಹೇಬ್ ಅವರ ವಿಚಾರಕ್ಕೆ ಬದ್ಧರಾಗಿ ಸರ್ವಾನುಮತದ ಸಮಿತಿ ರಚನೆಯಾಗಬೇಕು ಎಂದು ಶ್ರೀನಿವಾಸ್ ಕಾರ್ಲ ಅಧ್ಯಕ್ಷರು, ಕಾರ್ಕಳ ಬಿಜೆಪಿ ಎಸ್ಸಿ ಮೋರ್ಚಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


































