ಭಾಗ – 532
ಭರತೇಶ ಶೆಟ್ಟಿ, ಎಕ್ಕಾರು

ಸುಧನ್ವ ಸಮರ ಸಿದ್ಧನಾಗಿ ಶ್ರೀಕೃಷ್ಣನಿಗೆ ವಂದಿಸುತ್ತಾ “ಹೇ ಪರಮಾತ್ಮಾ ನಿನ್ನನ್ನಿ ನಂಬಿ ಈ ತನಕ ಬದುಕಿದ್ದೇನೆ. ನೀನಲ್ಲದೆ ನನಗೆ ಅನ್ಯ ಗತಿಯಿಲ್ಲ. ಕ್ಷತ್ರಿಯ ಕುಲ ಸಂಭೂತನಾದ ನನಗೆ ಪುರದ ರಕ್ಷಣೆಯ ಹೊಣೆಗಾರಿಕೆಯಿದೆ, ಅದಕ್ಕಾಗಿ ಯುದ್ಧ ಸ್ವಧರ್ಮವಾಗಿದೆ. ನನಗಿಂದು ಎದುರಾಗಿರುವ ರಥದಲ್ಲಿ ಸಾರಥ್ಯ ಪೀಠದಲ್ಲಿ ಸ್ವಾಮಿಯಾದ ನೀನು ಕುಳಿತಿರುವೆಯಾದರೂ, ನನಗೆ ವೈರಿಯಲ್ಲ. ವ್ಯಕ್ತ ಸ್ವರೂಪದಲ್ಲಿ ಕಣ್ತೆರೆದು ನೋಡಿದರೆ ಗೋಚರನಾಗಿ ಅಲ್ಲಿ ಕಾಣಿಸಿದರೂ, ಕಣ್ಮುಚ್ಚಿ ನೋಡಿದರೆ ಅವ್ಯಕ್ತನಾಗಿ ನನ್ನೊಳಗೆ ನನ್ನ ಆತ್ಮಜ್ಯೋತಿಯಾಗಿ ನೀನೇ ಸ್ಥಿತನಾಗಿರುವೆ. ನೀನು ಇಲ್ಲದೆ ಇರುವ ಚರಾಚರ ವಸ್ತುಗಳ್ಯಾವುದಾದರು ಇದೆಯೆ ದೇವಾ? ಧರ್ಮಯುಕ್ತವಾಗಿ ನನ್ನ ಕರ್ಮ ನಾನು ಮಾಡುತ್ತೇನೆ. ಈ ಯುದ್ದದ ಪರಿಣಾಮವಾಗಿ ನಿರ್ಣಯವಾಗಲಿರುವ ಜಯಾಪಜಯಗಳು ನನಗೆ ಗಣನೆಗೆ ಬಾರದ ನಗಣ್ಯ ವಿಚಾರ. ಯಾವ ಕ್ಷಣದಲ್ಲಿ ನನ್ನ ಅಂತರಂಗದಲ್ಲಿ ಆರಾಧ್ಯನಾಗಿದ್ದ ನಿನ್ನನ್ನು ಸಾಕ್ಷಾತ್ಕರಿಸಿಕೊಂಡೆನೋ, ನನ್ನ ಭಕ್ತಿಯ ಬೇಡಿಕೆಗೆ ಒಲಿದು ನೀನು ಪ್ರಕಟನಾದೆಯೊ? ನಿನ್ನ ಭಕ್ತನಾಗಿ ಆ ಕ್ಷಣದಲ್ಲಿ ನಾನು ಗೆದ್ದಾಗಿದೆ. ಹೀಗೆ ದೇವ ಭಕ್ತರ ಸಮಾಗಮವಾಗಲು ಮಾಧ್ಯಮವಾಗಿ ಸಹಕರಿಸಿದ ಅರ್ಜುನನಿಗೂ ಕೃತಜ್ಞನಾಗಿದ್ದೇನೆ. ಭಗವಂತಾ! ಕೃತಾರ್ಥನಾಗಿ ಈ ಜನ್ಮದಲ್ಲಿ ಸಾರ್ಥಕ್ಯವನ್ನು ಕಂಡಾಗಿದೆ. ನಿನ್ನ ಪ್ರೇರಣೆಯಂತೆ ಸೂತ್ರಧಾರನಾಗಿ ನೀನು ಆಡಿಸಲಿರುವ ಆಟದ ಬೊಂಬೆಯಷ್ಟೆ ನಾನಾಗಿರುವೆ. ಈಗಾಗಲೆ ನಾರದರಿಂದ ನನಗಾದ ಉಪದೇಶದಂತೆ ಆದಿದೈವಿಕ, ಆದಿಭೌತಿಕ, ಆಧ್ಯಾತ್ಮಿಕ ವಾದ ತಾಪತ್ರಯಗಳಿಂದ ಬಾಧಿತವಾಗಿರುವ ಈ ಸಂಸಾರದಲ್ಲಿ ಸುಖವನ್ನು ಕಾಣಲಾರೆ. ನಿನ್ನ ಪರಂಧಾಮ ಸೇರಿ ಸಾಮಿಪ್ಯದಲ್ಲಿ ಸಾಯುಜ್ಯವನ್ನು ಹೊಂದಿದೆ ಎಂದಾದರೆ ಅದು ನನಗೆ ಮುಕ್ತಿ ಎಂದು ತಿಳಿದವನಾಗಿದ್ದೇನೆ. ಯಾಕೆಂದರೆ ಎಂದಾದರೊಂದು ದಿನ ಮರ್ತ್ಯಲೋಕದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಮೃತ್ಯುವಶರಾಗ ಬೇಕು. ಆ ನಿಯಮದಿಂದ ಹೊರತಾದವನು ನಾನಲ್ಲವಲ್ಲ. ಹುಟ್ಟು ಮತ್ತು ಸಾವು ಎಂಬುವುದು ನಿಶ್ಚಿತ ಎಂದಾದ ಮೇಲೆ ಈ ಕರ್ಮ ಭೂಮಿಯಲ್ಲಿ ಹುಟ್ಟಿದಾಗ ನನ್ನ ಸಂಸಾರ ಸಂಭ್ರಮಿಸಿತ್ತು. ಆದರೆ ಹುಟ್ಟಿದ ಮಗುವಾಗಿ ನಾನು ಅತ್ತಿರಬಹುದು. ಕಾರಣ ಪುಣ್ಯಫಲ ತೀರಿದ ಕಾರಣ ಕರ್ಮಫಲ ಅನುಭವಿಸುವುದಕ್ಕಾಗಿ ಪುಣ್ಯಲೋಕದಿಂದ ಉದುರಿದ ಆತ್ಮ ಇಲ್ಲಿ ಜೀವಾತ್ಮವಾಗಿ ಬದುಕುವಂತಾದದ್ದು. ಸತ್ಯ ಹೀಗಿರುವಾಗ ಆತ್ಮನಿಗೆ ಸಾವು ಎಂದರೆ ಮಹಾ ಸಂಭ್ರಮದ ಕ್ಷಣವಲ್ಲವೆ? ಈ ದೇಹದ ಬಂಧನದಿಂದ ಮುಕ್ತಿಯನ್ನು ಪಡೆದ ಆತ್ಮ ಸಂಚಿತ ಫಲವನ್ನು ಹೊತ್ತು ಮೂಲ ಸ್ಥಾನವಾದ ಪುಣ್ಯಲೋಕವನ್ನೇರುವ ಭಾಗ್ಯದ ಬಾಗಿಲು ತೆರೆಯುವ ಮುಹೂರ್ತವಲ್ಲವೆ? ನನ್ನವರಿಗೆ ನನ್ನ ಹುಟ್ಟು ಆ ಸಮಯ ಸಂತಸ ನೀಡಿತ್ತು, ಈಗ ನನ್ನ ಮರಣ ದುಃಖವನ್ನೀಯಬಹುದು. ತದ್ವಿರುದ್ಧವಾಗಿ ನನಗೆ ನನ್ನ ಹುಟ್ಟು ದುಃಖದ ಭಾವವಾದ ಅಳುವಿನಿಂದ ಆರಂಭಗೊಂಡು, ಸಾವು ಮಹಾಸಂಭ್ರಮ ಒದಗಿಸುವ ಅತಿ ಸಂತಸದ ಕ್ಷಣ ವಲ್ಲವೆ ಕೇಶವಾ? ಅಚ್ಯುತನೇ! ಯಾವ ವಿಧದ ಚ್ಯುತಿಯೂ ನಿನ್ನ ಭಕ್ತನ ಚಾರಿತ್ರ್ಯಕ್ಕೆ ತಗುಲದಂತಹ ಕರ್ಮದಲ್ಲಿ ತೊಡಗುವ ಸದ್ಬುದ್ಧಿಯನ್ನು ಕರುಣಿಸು. ಅಂತಹ ಅಂತರಂಗದ ಸತ್ಪ್ರೇರಣೆಯಿಂದಲೆ ನೀನಿರುವ ರಥದ ರಥಿಕ ಅರ್ಜುನನಿಗೆದುರಾಗಿ ಆಯುಧವೆತ್ತಿದ್ದೇನೆ. ಸಮರವೆನ್ನುವುದು ಮರಣ ಸಹಿತವಾದದ್ದು ಎಂದು ಅರಿತವನಿದ್ದೇನೆ. ನಿಷ್ಕಲ್ಮಶ ಮನದಿಂದ ನಾನು ಯುದ್ಧ ಸಿದ್ಧನಾಗಿದ್ದೇನೆ. ಇನ್ನೇನಿದ್ದರೂ ಲೋಕಪಾಲಕನಾದ ನಿನ್ನ ಸಂಕಲ್ಪದ ಅನಾವರಣ ಮಾತ್ರ ಬಾಕಿ ಉಳಿದಿದೆ. ನೀನೇ ಪೊರೆಯಬೇಕು” ಎಂದು ನುಡಿದು ಮನದಣಿಯೆ ಸಚ್ಚಿದಾನಂದ ಸ್ವರೂಪನನ್ನು ಕಣ್ತುಂಬಿಸಿಕೊಂಡು ಸಾಷ್ಟಾಂಗ ಪ್ರಣಾಮ ಸಲ್ಲಿಸಿ ನಿಂತನು.
ಶ್ರೀಹರಿಯ ಸಾರಥ್ಯದ ಮಹಿಮೆಯೊ, ಅಲ್ಲ ಅದಕ್ಕೂ ಮೊದಲು ಭಗವಂತ ಕೃಷ್ಣನ ಅಪ್ಪುಗೆಯ ಮಹಾತ್ಮೆಯೊ ಪಾರ್ಥನಲ್ಲಿ ವಿರಾವೇಶ ಉಕ್ಕೇರಿದೆ. ಸುಧನ್ವನನ್ನು ಉದ್ದೇಶಿಸಿ “ಹೇ ಸುಧನ್ವಾ! ಒಂದೊಮ್ಮೆಗೆ ನೀನು ಕ್ಷಣಿಕವಾದ ಮೇಲುಗೈ ಸಾಧಿಸಿದ್ಧನ್ನು ಮಹಾ ಸಾಧನೆ ಎಂದು ಮೆರೆಯಬೇಡ. ಇದೋ ಧನುರ್ಧರನಾದ ಅರ್ಜುನನ ಪ್ರತಿಜ್ಞೆಯನ್ನು ಸರಿಯಾಗಿ ಕೇಳಿಸಿಕೋ. ನನಗೆ ನೀನು ನಗಣ್ಯನಾಗಿರುವೆ. ಎಂತೆಂತಹ ಮಹಾನ್ ಮಹಾರಥಿಗಳು ಈ ಪಾರ್ಥನ ಪೌರುಷವೇನೆಂದು ಕಂಡು ಈಗ ನೆನಪು ಮಾತ್ರವಾಗಿ ಹೋಗಿದ್ದಾರೆ. ನೀನು ಬರೇ ತರಳ, ಸಾಮದಿಂದ ಹೇಳುತ್ತಿದ್ದೇನೆ ಕೇಳು, ಬದುಕುವ ಆಶೆಯಿದ್ದರೆ ಬಂಧಿಸಿರುವ ಯಾಗಾಶ್ವವನ್ನು ಬಿಟ್ಟು ಕೊಟ್ಟು ಶರಣಾಗಿ ಕಪ್ಪ ಕಾಣಿಕೆಯನ್ನು ಸಲ್ಲಿಸು. ಹಾಗೆ ಮಾಡದೇ ಹೋದೆ ಎಂದಾದರೆ ನನಗೆ ಹೆಚ್ಚು ಹೊತ್ತೇ ಬೇಕಾಗಿಲ್ಲ, ಕೇವಲ ಮೂರೇ ಮೂರು ಶರಗಳಿಂದ ನಿನ್ನ ಶಿರವನ್ನು ಧರೆಗುರುಳಿಸುತ್ತೇನೆ. ಹಾಗೆ ಮಾಡಲಾಗದೆ ಹೋದರೆ ಈ ಅರ್ಜುನನಷ್ಟು ಮಹಾಪಾತಕಿ ಲೋಕಲೋಕಗಳಲ್ಲಿಯೂ ಇಲ್ಲ ಎಂದು ತಿಳಿ. ಮಾತ್ರವಲ್ಲ ಅಂತಹ ಸಮಸ್ತ ಮಹಾಪಾತಕಗಳ ದೋಷಗಳ ದುರ್ಗತಿ ನನಗೆ ಪ್ರಾಪ್ತವಾಗಲಿ.” ಎಂಬ ಉಗ್ರ ಪ್ರತಿಜ್ಞೆಯನ್ನು ಮಾಡಿದನು.
ಅರ್ಜುನನ ದುಡುಕಿನ ಪ್ರತಿಜ್ಞೆ ಕೇಳಿದ ಶ್ರೀಕೃಷ್ಣ ಪರಮಾತ್ಮ “ಎಲವೋ ಪಾರ್ಥಾ! ನೀನೇನು ಮಾಡಿಬಿಟ್ಟೆ? ಈಗಾಗಲೆ ಒಮ್ಮೆ ಸುಧನ್ವನೆದುರು ಸರ್ವಶಕ್ತಿ ಪ್ರಯೋಗಿಸಿಯೂ ಪ್ರಯೋಜನ ಕಾಣದೆ ಸೋತು ಹೋದವನು ನೀನು. ಆತನೆಷ್ಟು ಮಹಾ ಪರಾಕ್ರಮಿ ಎಂಬ ಅನುಭವ ನಿನಗಾಗಿದೆ. ಪರಿಭವದ ಪರಿಣಾಮವನ್ನು ಪರಿಗಣಿಸದೆ ಪರಿಜ್ಞಾನವಿಲ್ಲದವನಂತೆ ಪ್ರತಿಜ್ಞೆ ಮಾಡಿ ಬಿಟ್ಟೆಯಲ್ಲಾ? ಸುಧನ್ವನೇನು ಸಾಮಾನ್ಯನೇ? ಈ ಲೋಕದ ಯಾವ ಕ್ಷತ್ರಿಯನೂ ಸುಧನ್ವನನ್ನು ಗೆಲ್ಲಲಾರ. ಧರ್ಮ ಮೀರಿ ನಡೆಯದ ಆತನನ್ನು ಧರ್ಮವೇ ರಕ್ಷಿಸುತ್ತಿರುವಾಗ ಆತ ಅವಧ್ಯನೂ ಅಜೇಯನೂ ಆಗಿದ್ದಾನೆ. ನಿನ್ನ ರಥದಲ್ಲಿ ನಾನಿದ್ದರೂ ಸಾರಥಿಯಾದ ನನ್ನಲ್ಲಿ ಒಂದು ಮಾತು ಹೇಳಿ ಸಮಾಲೋಚಿಸದೆ ಅವಸರದ ಮಾತನ್ನಾಡಿ ಅಪಾಯವನ್ನು ಆಹ್ವಾನಿಸಿಬಿಟ್ಟಿರುವೆ. ಈಗ ನಿನ್ನ ಪ್ರತಿಜ್ಞಾ ಪೂರಣೆಗೆ ದಾರಿಯೇನು? ನೀನು ಆಡಿದಂತೆ ಕೇವಲ ಮೂರು ಬಾಣಗಳಿಂದ ಆತನ ಪ್ರಾಣ ಹರಣ ಮಾಡಲು ಶಕ್ತನಾಗಿರುವೆಯಾ? ಎಂದು ಅನುಮಾನಿಸಿ ಪ್ರಶ್ನಿಸಿದನು.
ಅತ್ತ ಸುಧನ್ವನೂ ” ಹೇ ಪಾರ್ಥಾ! ನಿನ್ನ ಎದುರು ನಿಂತಿರುವ ಸುಧನ್ವ ಕ್ಷತ್ರಿಯ. ಎದುರಾಳಿ ಪಂಥಾಹ್ವಾನ ನೀಡಿದರೆ ಸ್ವೀಕರಿಸಲಾಗದಷ್ಟು ಅಸಮರ್ಥನಲ್ಲ. ಆದರೆ ನೀನು ವಿವೇಚಿಸಬೇಕಿತ್ತು. ನಿನ್ನ ಅಕ್ಷಯ ತೂಣಿರದ ಎರಡೆರಡು ಬತ್ತಳಿಕೆ ಬರಿದಾದರೂ ನನ್ನ ಒಂದು ಕೂದಲನ್ನೂ ಕೊಂಕಿಸಲಾಗದೆ ಈಗಾಗಲೆ ಒಮ್ಮೆ ಸೋತವನು ನೀನು. ಹೆಚ್ಚೇಕೆ, ಬ್ರಹ್ಮಾಸ್ತ್ರ, ಅಷ್ಟದಿಕ್ಪಾಲಕರ ಶಕ್ತ್ಯಾಯುಧಗಳ ಸಹಿತ ನೂರಾರು ದಿವ್ಯಾಸ್ತ್ರಗಳನ್ನೂ ಮಂತ್ರಪೂರಿತವಾಗಿ ಪ್ರಯೋಗಿಸಿದನು. ಅವುಗಳು ನನಗೇನು ಮಾಡದಿರುವಾಗಲೇ ನೀನು ತಿಳಿದುಕೊಳ್ಳಬೇಕಿತ್ತು. ಅರ್ಜುನಾ ಹರಿಭಕ್ತಿಯ ಶಕ್ತಿಯೆದುರು ಯಾವುದೂ ಕಾರ್ಯ ಮಾಡಲಾಗದೇ ಲೀನಗೊಂಡದ್ದನ್ನು ಕಣ್ಣಾರೆ ಕಂಡು ಮರೆತ ಮರುಳನಾದೆಯಾ? ನಿನ್ನನ್ನು ಶಸ್ತ್ರ ಶಾಸ್ತ್ರ ಪಾರಂಗತನೆಂದೂ, ಮಹಾಜ್ಞಾನಿ, ವಿಕ್ರಮಿ, ಅಸದಳ ಪರಾಕ್ರಮಿ, ರಣಭಯಂಕರನೆಂದು ತಿಳಿದಿದ್ದೆ. ನನ್ನ ಕಲ್ಪನೆ ಸುಳ್ಳು ನೀನೊಬ್ಬ ಬರೇ ಮೂರ್ಖ ಎಂದು ಸಮರ್ಥಿಸಿ ತೋರಿಸಿರುವೆ. ಅಕ್ಷಯಾಸ್ತ್ರ ಪ್ರಯೋಗಿಸಿ ತೊಡುವಾಗ ಒಂದು ಸೆಳೆದಾಗ ಹತ್ತು, ಚಿಮ್ಮಿದಾಗ ನೂರು, ಹಾರಿದಾಗ ಸಾವಿರ, ಲಕ್ಷ್ಯ ಸೇರುವಾಗ ಲಕ್ಷವಾಗಿ ಶರವರ್ಷವನ್ನು ಸುರಿಸಿಯೂ ನನ್ನನ್ನೇನೂ ಮಾಡಲಾಗದವ ಈಗ ಬರೇ ಮೂರು ಶರಗಳಿಂದ ವಧಿಸುವೆ ಎಂದು ಯಾವ ಆಧಾರದಲ್ಲಿ ಪ್ರತಿಜ್ಞೆ ಮಾಡಿದೆ? ಯಾಕಯ್ಯಾ ನಿನಗಿಂತ ಅವಿವೇಕ ಮೂಡಿದೆ? ಅದೂ ನನ್ನ ದೇವರು ನಿನ್ನ ರಥ ಪೀಠದಲ್ಲಿ ಸಾನಿಧ್ಯನಾಗಿರುವಾಗ? ಸರಿ ನಿನ್ನ ಮಾತು ನನ್ನ ದೇವರ ಪ್ರೇರಣೆಯಿಂದ ಬಂದುದಾದರೆ ಹಾಗೆಯೇ ಮಾಡಿ ತೋರಿಸು. ನಾನೂ ಮುಕ್ತಿಯನ್ನು ಬಯಸಿ ಸಮರ ಸಿದ್ಧನಾಗಿದ್ದೇನೆ. ನೀನೇನು ಪ್ರತಿಜ್ಞೆ ಮಾಡಿರುವೆ? ಮೂರು ಬಾಣಗಳಿಂದ ನನ್ನ ಶಿರಚ್ಚೇದನ ಮಾಡುವೆಯಾ? ಆರಂಭಿಸು, ನಿನ್ನಿಂದ ಮೊದಲ ಶರ ಸಂಧಾನವಾಗಲಿ. ಆ ಬಳಿಕ ಒಂದೊಂದರಂತೆ ಮತ್ತೆರಡೂ ಬಾಣಗಳನ್ನು ಪ್ರಯೋಗಿಸು. ಆ ಮೂರು ಶರಗಳನ್ನು ಪಥ ಮಧ್ಯದಲ್ಲಿ ಕತ್ತರಿಸದೆ ಹೋದರೆ ನಿನ್ನ ರಥದ ಮುಖದಲ್ಲಿ ಕುಳಿತಿದ್ದಾನಲ್ಲ ಆ ಚಿನ್ಮಯ ಮೂರ್ತಿ ಶ್ರೀಕೃಷ್ಣ ಪರಮಾತ್ಮ ಆತನ ಭಕ್ತ ನಾನಲ್ಲ ಎಂದು ತಿಳಿ. ಈ ತನಕ ನಾನು ನಂಬಿ ಭಕ್ತನಾಗಿ ಆತನ ಸೇವೆ ಮಾಡಿದುದು ಭಕ್ತಿಯಲ್ಲ, ನಾನು ಶ್ರೀಕೃಷ್ಣ ಪರಮಾತ್ಮನ ಪಾದ ನಂಬಿದ ಡಿಂಗರಿಗನಲ್ಲ ಎಂದಾಗಲಿ. ತೊಡು ಬಾಣ” ಎಂದು ಧೈರ್ಯದಿಂದ ಅಬ್ಬರಿಸಿದನು.
ಅರ್ಜುನ ವೀರಾವೇಶದಿಂದ ಬತ್ತಳಿಕೆಯಿಂದ ಚಿನ್ನದ ಅಲುಗುಳ್ಳ ಮಹಾಸ್ತ್ರವೊಂದನ್ನು ಸೆಳೆದು ಶಿಂಜಿನಿಗೆ ಜೋಡಿಸಿದನು.
ಮುಂದುವರಿಯುವುದು…




























