ಭಾಗ – 516
ಭರತೇಶ ಶೆಟ್ಟಿ, ಎಕ್ಕಾರು

ಕುದಿಯುತ್ತಿರುವ ಎಣ್ಣೆಯ ಕಟಾಹಕ್ಕೆ ಎಸೆಯಲ್ಪಡುವಾಗ ಸುಧನ್ವ ಧೃಡಭಕ್ತಿಯಿಂದ ಶ್ರೀಹರಿಯ ಮೊರೆ ಹೋಗಿ ಕೂಗಿ ಕರೆಯುತ್ತಿದ್ದಾನೆ “ಹೇ ಮಾಧವ, ಭೂಧವ, ಯಾದವ, ರಾಧಾವರ, ರಮಾವರ, ಗಿರಿಧರ, ಕರುಣಾಕರ, ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ, ಪುರುಷೋತ್ತಮ, ಪುಂಡರೀಕಾಕ್ಷ, ಕಾರುಣ್ಯಗುಣ, ಮುರಳೀಧರ, ದಾಮೋದರ, ಕೇಶವ, ಅಚ್ಯುತ, ಅನಂತ, ಚಿನ್ಮಯ, ಹೃಷೀಕೇಶ, ಪಾಂಡುರಂಗ, ಮಧುಸೂದನ, ಮುಕುಂದ, ಮುರಾರಿ, ಗೋವಿಂದ, ಹೇ ಭಕ್ತವತ್ಸಲಾ …..ಹಾ ಕೃಷ್ಣಾ! ಜನಾರ್ಧನಾ, ವಾಸುದೇವಾ.. ಗಜೇಂದ್ರನಿಗೊಲಿದು ಮಕರನ ಬಾಯಿಯಿಂದ ಕಾಪಾಡಿದ ದೀನಬಂಧುವೇ, ಬಾಲ ಪ್ರಹ್ಲಾದಗೊಲಿದು ದುರುಳ ಹಿರಣ್ಯಕನ ಸೀಳಿ ತರಿದ ನಾರಸಿಂಹನೇ, ಅಜಾಮಿಳನನ್ನು ಪೊರೆದ ಲೋಕಪಾಲಕನೇ, ಕಾಳಿಂಗನ ಘೋರ ವಿಷದ ಬಾಯಿಂದ ಎಳೆಗರುವ ಸೆಳೆದು ತಂದ ಗೋಪಾಲಕೃಷ್ಣನೇ, ಭಕ್ತ ಅಂಬರೀಷನ ಕಾಯ್ದ ಶಿಷ್ಟ ರಕ್ಷಕನೇ, ಧ್ರುವನನ್ನು ಉದ್ದರಿಸಿದ ಅನಾಥರಕ್ಷಕನೇ, ಮಾನನಿಧಿ ದೌಪದಿಯ ಮಾನ ಕಾಯ್ದ ಆಪದ್ಬಾಂಧವನೇ… ಎನಗೆ ನೀನಲ್ಲದೆ ಬೇರೆ ಗತಿಯಿಲ್ಲ. ಕಾಯುವವನೂ, ಕೊಲ್ಲುವವನೂ ನೀನೇ ಕೃಷ್ಣಾ….ಕಾಯೇನ ವಾಚಾ ಮನಸಾ ನಿನ್ನನ್ನಲ್ಲದೆ ಬೇರೆನನ್ನೂ ಹಂಬಲಿಸಿದವನಲ್ಲ ನಾನು. ಸತ್ಯವನ್ನು ಬಿಡದೆ, ಧರ್ಮವನ್ನು ಮೀರದೆ ಬದುಕನ್ನು ನಿನಗರ್ಪಿಸಿದ್ದೇನೆ. ಗುರು ಹಿರಿಯರನ್ನು, ಗೋಬ್ರಾಹ್ಮಣರನ್ನು ಪೂಜಿಸಿದ್ದೇನೆ, ಅರಿತು ಯಾರಿಗೂ ವಂಚನೆ ದ್ರೋಹ ಎಸಗಿದವನಲ್ಲ ಕೃಷ್ಣಾ… ಕರ್ತವ್ಯವನ್ನು ಕಡೆಗಣಿಸದೆ ಜೀವಿಸಿದರೂ ನನಗೇಕೆ ಈ ಸ್ಥಿತಿ ದೇವಾ!… ಭಗವಂತಾ ನಿನ್ನ ಭಜಕನಿಗೆ ಹೀಗಾದರೆ ನಾಳೆ ಭಕ್ತವತ್ಸಲನಾದ ನಿನಗೆಲ್ಲಿ ಅಪವಾದ ಬರುವುದೋ ಎಂಬ ಭಯವಿದೆ ಕೇಶವಾ… ನನಗೇನಾದರೂ ಚಿಂತೆಯಿಲ್ಲ, ಎನ್ನ ಜೀವ ಹೋದರೂ ವ್ಯಥೆಯಿಲ್ಲ. ನಶ್ವರವಾದುದು ನನ್ನ ಕಾಯ, ಒಂದಲ್ಲ ಒಂದು ದಿನ ಅದು ಅಳಿಯಲೇ ಬೇಕು. ಆದರೆ ಸಂರಕ್ಷಕನು ನೀನು ಎಂದು ನಂಬುತ್ತಿರುವ ಬಹುಜನ ಭಕ್ತರ ವಿಶ್ವಾಸ ಸೋಲಬಾರದು. ನಿನಗೆ ಚ್ಯುತಿ ಬರಬಾರದು ಅಚ್ಯುತಾ… ನನಗೆ ವಿಶ್ವಾಸವಿದೆ ದೇವಾ, ಎಲ್ಲೋ ಅರಿಯದೆ ನಾನೇನೋ ತಪ್ಪು ಮಾಡಿರಬಹುದು. ಅದರ ಫಲ ಅನುಭವಿಸಲು ಈ ಶಿಕ್ಷೆಯೋ? ಅಲ್ಲಾ ನಿನ್ನ ಭಕ್ತನ ಭಕ್ತಿ ತೀರಾ ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ಷೀಣವಾದೀತೋ ಎಂದು ನೋಡುವ ಸತ್ವ ಪರೀಕ್ಷೆಯೋ? ಇಲ್ಲ ಕೃಷ್ಣಾ.. ನೀನೇ ನನ್ನ ಜಗತ್ತು, ನೀನೇ ನನ್ನ ಪ್ರಾಣ, ನೀನೇ ನನ್ನ ಆದಿ, ನೀನೇ ಅಂತ್ಯ. ನನ್ನ ಜೀವದ ಕಣ ಕಣದಲ್ಲೂ ನೀನೇ ತುಂಬಿರುವೆ ದೇವಾ… ನೀನಲ್ಲದೆ ಎನ್ನಲ್ಲಿ ಬೇರೇನೂ ಸಿಗದು. ಸಿಗಿದು ಸೀಳಿದರೂ ನೀನೇ, ಸುಟ್ಟು ಬೂದಿಯಾದರೂ, ಕರಟಿ ಕಮರಿದರೂ, ಬೇಯ್ದು ಬೆಂದರೂ ಏನಾದರೂ ನನ್ನಲ್ಲಿ ನೀನೇ ತುಂಬಿರುವೆ. ಈಗಲೂ ನನಗೆ ಚಿಂತೆಯಿಲ್ಲ ಚಿನ್ಮಯಾ ನೀನು ಅಚಿಂತ್ಯನಲ್ಲವೇ ಎನ್ನ ದೇವಾ… ” ಎಂದು ಪರಿ ಪರಿಯಾಗಿ ಧ್ಯಾನಿಸಿ ಬೇಡುತ್ತಿದ್ದಾನೆ ಸುಧನ್ವ.
ಕುದಿಯುತ್ತಿರುವ ಎಣ್ಣೆ ಗುಳ್ಳೆಗಳೆದ್ದು ಹೊಗೆಯಾಡುತ್ತಾ ತಕಪಕಿಸುತ್ತಿದ್ದರೂ ಸುಧನ್ವನ ಶರೀರಕ್ಕೆ ಅತಿ ಶೀತಲವಾಗಿ ಚಳಿಯಾಗಿಸುತ್ತಿದೆ. ಏನೋ ಒಂದು ರೀತಿಯಲ್ಲಿ ಉರಿ ಶಾಖದಲ್ಲೂ ಅದ್ಬುತ ಸುಖ ಭಾಸವಾಗುತ್ತಿದೆ. ಎಲ್ಲೋ ಗಗನದೆತ್ತರದಲ್ಲಿ, ಮೋಡದಾಚೆ ತೇಲಿ ಹೋಗುತ್ತಿರುವಂತೆ ಭಾಸವಾಗುತ್ತಿದೆ. ಸುಧನ್ವ ಇಂತಹ ಅನನ್ಯ ಹಿತವನ್ನು ಅನುಭವಿಸುತ್ತಾ ಪ್ರಸನ್ನ ವದನನಾಗಿ ಎಣ್ಣೆಯೊಳಗೆ ಮುಳುಗಿದ್ದರೂ ಆಹಾ! ಏನು ಮಹದಾನಂದ. ಜಲಕ್ರೀಡೆಯಾಡುವಂತೆ ತೇಲಾಡುತ್ತಿದ್ದಾನೆ. ಲೀಲಾಮಾನುಷನ ಲೀಲೆಗೆ ಮಿತಿಯುಂಟೇ?
ಎಣ್ಣೆಯ ಕೊಪ್ಪರಿಗೆಯೊಳಗಿರುವ ಭಕ್ತ ಸುಧನ್ವನ ಕೂದಲೂ ಕೊಂಕದಂತೆ ಸರ್ವರಕ್ಷಕ ಪಾಲಿಸುತ್ತಿದ್ದಾನೆ. ಆದರೆ ವಿಪರ್ಯಾಸವೆಂದರೆ ಹೊರಗೆ ಮೆತ್ತಗಿನ ಪೀಠದಲ್ಲಿ, ಚಾಮರಗಳಿಂದ ಬೀಸುಗಾಳಿಯ ಸೇವೆ ಮಾಡಿಸುತ್ತಾ ಕುಳಿತಿದ್ದ ಪುರದ ಹಿತ ಕಾಯಬೇಕಾದ ಪುರೋಹಿತರ ಪೀಠ ಕಾದು ಬಿಸಿಯೇರಿತು. ಬೀಸುವ ಗಾಳಿಯೂ ಸುಡತೊಡಗಿತು. ಉರಿ ಉರಿ ತಾಳಲಾಗುತ್ತಿಲ್ಲ. ಅಬ್ಬಾ ಬೆಂಕಿಯೊಳಗಿದ್ದಂತೆ, ಮೈಯೆಲ್ಲಾ ಹೊತ್ತಿ ಉರಿದಂತೆ… ಅಬ್ಬಾ…. ಹಾಹ್… ಬೊಬ್ಬೆಗಳೆದ್ದವು ಮೈಯಲ್ಲಿ ಎದ್ದು ಬಿದ್ದು ಅಯ್ಯೋ… ಅಮ್ಮಾ… ಉರಿ ಉರಿ ಎಂದು ಬೊಬ್ಬಿರಿದು ಕೂಗಾಡಿ ನರಳಾಡಿ ಒದ್ದಾಡಿದರೂ ಸಹಿಸಲಾಗುತ್ತಿಲ್ಲ. ರಾಜ ಹಂಸಧ್ವಜನನ್ನು ಕೂಗಿ ಕರೆದು “ಅಯ್ಯಾ ನಮ್ಮಿಂದ ಅಪಚಾರವಾಗಿದೆ, ಅಪರಾಧವಾಗಿದೆ. ನಿನ್ನಷ್ಟಕ್ಕೆ ನೀನು ವ್ಯಸ್ಥನಾಗಿದ್ದು ಯುದ್ಧದ ಸಕಲ ವ್ಯವಸ್ಥೆಯಾಗಿ ರಾತ್ರಿಯ ಇಳಿ ಜಾವದ ಹೊತ್ತು ತುಸು ವಿರಮಿಸಲು ಮನ ಮಾಡಿದ್ದೆ. ಆ ಸಮಯ ನಿನ್ನಲ್ಲಿ ಸುಧನ್ವನಿಲ್ಲ ಎಂದು ಹೇಳಿ, ಆತ ಹೇಡಿಯಾಗಿ ಎಲ್ಲೋ ಓಡಿ ಹೋಗಿದ್ದಾನೆ, ಪ್ರಾಣಭಯದಿಂದ ಪಲಾಯನಗೈದಿದ್ದಾನೆ ಎಂದು ಇಲ್ಲ ಸಲ್ಲದ ಮಿಥ್ಯಾರೋಪ ಮಾಡಿಸಿದವರು ನಾವು. ರಾಜ್ಯದ ರಕ್ಷಣೆಯ ಚಿಂತೆಯ ಮಡುವಲ್ಲಿ ಮುಳುಗಿದ್ದ ನಿನಗೆ ಅನಾವಶ್ಯಕ ಬಾಧೆ ನೀಡಿ ಕೋಪ ಬರುವಂತೆ ಮಾಡಿದವರೂ ನಾವು. ಸುಧನ್ವ ತಾನೇನು ಮಾಡಿದೆ ಎಂಬ ಸತ್ಯ ಧರ್ಮಸಮ್ಮತವಾದ ನಡೆಯನ್ನು ಪ್ರಮಾಣೀಕರಿಸಿ ಹೇಳಿದರೂ ನಾವು ಒಪ್ಪಲಿಲ್ಲ. ಮಗನ ಧರ್ಮ ಬುದ್ಧಿಯನ್ನು ಅರಿತು ಶಾಸನ ಮೀರಿದ್ದು ಧರ್ಮ ಕಾರ್ಯಕ್ಕೆ, ಅದು ಅಪರಾಧವಾದೀತೇ? ಈಗ ಪರಿಹಾರ ಏನು ಎಂದು ನೀನು ಕೇಳಿದೆ. ಮಂತ್ರಿಗಳು ಸಾಕಷ್ಟು ವಿವರಿಸಿ ಸುಧನ್ವನಿಂದ ಅಪರಾಧವಾಗಿಲ್ಲ ಎಂದು ತಿಳಿ ಹೇಳಿದರು. ಆದರೂ ಶಿಕ್ಷೆ ನೀಡ ಬೇಕೆಂದು ಹಠ ಹಿಡಿದೆವು. ಮಗನೆಂದು ಮೃದುಧೋರಣೆ ತಳೆದರೆ ನಿನಗೆ ಅಪವಾದ ಬಂದೀತು ಎಂಬ ಹೆದರಿಕೆ ಹುಟ್ಟಿಸಿದೆವು. ರಾಜ್ಯ ತ್ಯಾಗ ಮಾಡುವ ಬೆದರಿಕೆ ಹಾಕಿದೆವು. ಹರಿ ಭಕ್ತನಾದ ಸುಧನ್ವನನ್ನು ಪೀಡಿಸಿದ ಪರಿಣಾಮ ಇದೋ ನಾವು ದೇವರಿಂದ ದಂಡನೆಗೊಳಗಾಗುತ್ತಿದ್ದೇವೆ. ಕುದಿ ಎಣ್ಣೆಯ ಉರಿ ಶಾಖ ಸುಧನ್ವನಿಗೆ ಸುಖ ನೀಡುತ್ತಿದೆ. ನಮ್ಮನ್ನು ಸುಟ್ಟು ಬೇಯಿಸುತ್ತಿದೆ. ಅಯ್ಯೋ!!!! ಆಗದು ಇನ್ನು ತಡೆಯಲಾದು… ನಮ್ಮನ್ನು ಕಾಪಾಡು ಮಹಾರಾಜನೇ…. ನಮ್ಮದು ಸರ್ವಾಪರಾಧವಾಯಿತು. ಇಲ್ಲ … ಇಲ್ಲ… ನೀನು ನಮ್ಮನ್ನು ಕಾಪಾಡಲಾರೆ. ಭಗವಂತನಲ್ಲದೆ ಅನ್ಯರಾರೂ ನಮ್ಮನ್ನು ಕ್ಷಮಿಸಿ ಕಾಯಲಾರರು. ಹೇ ಕ್ಷಮಾನಿಧಿ ಕೃಷ್ಣಾ ನಮ್ಮ ಅಪರಾಧಗಳನ್ನು ಮನ್ನಿಸು. ಅಯ್ಯೋ… ಹಾ… ಹೋ… ಉರಿ….ಉರಿ… ತಾಳಲಾಗದು… ಜೀವ ಹೋಗುತ್ತಿದೆ…. ಶರೀರದ ಚರ್ಮ ಮಾಂಸಗಳು ಬೆಂದು ಹೋಗುತ್ತಿದೆ…. ಸುಧನ್ವಾ… ನಮ್ಮಿಂದ ಅಪರಾಧವಾಗಿದೆ. ಅಕ್ಷಮ್ಯ ಅಪರಾಧವಾಗಿದೆ… ನೀನು ನಮಗಾಗಿ ಶ್ರೀಹರಿಯಲ್ಲಿ ಪ್ರಾರ್ಥಿಸಿ ಮನ್ನಿಸಲು ಬೇಡಿಕೋ ಕಂದಾ… ನೀನು ಕ್ಷಮಿಸದೆ ಆ ದೇವನೂ ಕ್ಷಮಿಸಲಾರ…. ಇದೋ ನಿನ್ನನ್ನು ಕುದಿಯುವ ತೈಲ ಕಟಾಹಕ್ಕೆ ಹಾಕಲು ಹೇಳಿದ ನಾವೂ ನಿನ್ನೊಡನೆ ಸೇರುತ್ತೇವೆ. ನಮಗದೊಂದೆ ಉಳಿದಿರುವ ದಾರಿ. ಹರಿಭಕ್ತನಾದ ನಿನ್ನನ್ನು ಆಶ್ರಯಿಸಿ ಅಪ್ಪಿಕೊಳ್ಳುತ್ತೇವೆ” ಎಂದು ಹೊರಳಾಡುತ್ತಾ…. ತೆವಳುತ್ತಾ ಎದ್ದು ಬಿದ್ದು ಉರಿ ಸೈರಿಸಲಾಗದೆ ಕುಣಿಯುವಂತೆ ಓಡಿ, ಬೀಳುತ್ತಾ ಮತ್ತೆ ಜಿಗಿದು ನೆಗೆದು ಬಿದ್ದು ಎದ್ದು ಎಣ್ಣೆಯ ಕೊಪ್ಪರಿಗೆಗೆ ಹಾರಿ ಸುಧನ್ವನನ್ನು ಅಪ್ಪಿ ಹಿಡಿದು “ಮಗೂ ನಮ್ಮನ್ನು ರಕ್ಷಿಸು, ನಮ್ಮಿಂದ ತಪ್ಪಾಗಿದೆ” ಎಂದು ಅಂಗಾಲಾಚಿ ತೈಲದಲ್ಲಿ ಮುಳುಗೇಳುತ್ತಾ ಬೇಡಿಕೊಳ್ಳತೊಡಗಿದರು.
ಮುಂದುವರಿಯುವುದು…





















