27.5 C
Udupi
Friday, May 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 508

ಭರತೇಶ ಶೆಟ್ಟಿ, ಎಕ್ಕಾರು

ಸಂಚಿಕೆ ೫೦೮ *ಮಹಾಭಾರತ*ಭೀಮಸೇನ ಸ್ವಭಾತಃ ದುಡುಕು ಸ್ವಭಾವದವನಾದರೂ ಇಂದು ಸಮಾಹಿತಗೊಂಡಿರುವ ಸೇನೆಗೆ ವರಿಷ್ಠ ಆತನಾಗಿದ್ದನೆ. ಅಣ್ಣ ಧರ್ಮರಾಯನ ಘನತೆಗೆ ಕುಂದು ಬಾರದ ರೀತಿ ವ್ಯವಹರಿಸಿ ದಿವ್ಯಾಶ್ವವನ್ನು ವಶಕ್ಕೆ ಪಡೆಯಬೇಕಾದ ಅಗತ್ಯ ಆತನಿಗಿದೆ. ಒಂದೋ ಯವನಾಶ್ವನ ಬಳಿ ಹೋಗಿ ವಿಚಾರ ತಿಳಿಸಿ ಕೇಳಿ ಪಡೆಯಬೇಕು. ಅಶ್ವಮೇಧ ಯಾಗ ಸಾಮರ್ಥ್ಯದ ಪ್ರತೀಕ, ಬೇಡಿ ದಾನ ರೂಪದಲ್ಲಿ ಪಡೆಯುವುದು ಎಲ್ಲಿ ಕಳಂಕಪ್ರಾಯವಾಗುವುದೊ ಎಂಬ ಶಂಕೆ ಮನ ಮಾಡಿತು. ಹಾಗೆಂದು ಆಕ್ರಮಣಗೈದು ಸೋಲಿಸಿ ಬಲಪ್ರದರ್ಶನದಿಂದ ಪಡೆಯೋಣವೋ? ಯುದ್ಧ ಘೋಷಣೆಗೆ ಕಾರಣವಿಲ್ಲ. ಅಕಾರಣವಾಗಿ ಯುದ್ಧ ಮಾಡುವುದು ರಾಜಧರ್ಮವಲ್ಲ. ಹಾಗಿದ್ದರೆ ಪರಿಹಾರ ದಾರಿ ಏನು ಎಂದು ತರ್ಕಿಸಿ ತನ್ನ ಮೊಮ್ಮಗ ಮೇಘನಾದನನ್ನು ಬಳಿ ಕರೆದನು. ಘಟೋತ್ಕಚನ ಪುತ್ರನಾದ ಮೇಘನಾದ ಮಾಯಾವಿ ರಾಕ್ಷಸ. ಆತ ಮಾಯ ವಿದ್ಯೆ ಪ್ರಯೋಗಿಸಿ ದಿವ್ಯಾಶ್ವವನ್ನು ತಂದು ಸೇನಾ ಮಧ್ಯದಲ್ಲಿರಿಸಿದರೆ ಆಗ ಯವನಾಶ್ವ ಬಿಡಿಸಿ ಕೊಂಡೊಯ್ಯಲು ಬರಬೇಕು. ಇದನ್ನು ಕಾರಣವಾಗಿ ಸಮಸ್ಯೆ ಇತ್ಯರ್ಥಗೊಳ್ಳುತ್ತದೆ. ಭೀಮ ಸಮಾಲೋಚನೆ ನಡೆಸಿ ಮೇಘನಾದನಿಗೆ ಹೇಳಬೇಕಾದುದೆಲ್ಲವನ್ನೂ ಹೇಳಿ ಕಳುಹಿಸಿದನು. ಅಜ್ಜನ ಅಪ್ಪಣೆ ಪಡೆದು ಹೊರಟ ಮೇಘನಾದ ಆಗಸಕ್ಕೆ ಹಾರಿ ಕಣ್ಮರೆಯಾದನು. ಕ್ಷಣಾರ್ಧದಲ್ಲಿ ಕರಿಮೋಡಗಳ ಮೇಲ್ವಾಯ್ದು ಸಂಚರಿಸಿದನು. ಆತನ ಮಾಯಾಶಕ್ತಿಯ ಪರಿಣಾಮ ಗುಡುಗು, ಮಿಂಚು, ಬಿರುಗಾಳಿ ಇತ್ಯಾದಿ ಅಕಾಲಿಕ ಹವಾಮಾನ ಪ್ರಕಟಗೊಂಡಿತು. ಇದೆಲ್ಲವು ಮಾಯಾವಿ ಮೇಘನಾದನ ಶಕ್ತಿಯ ಪ್ರದರ್ಶನದಿಂದ ಸಂಭವಿಸುತ್ತಿದೆ. ಅನಿರೀಕ್ಷಿತವಾಗಿ ಹೀಗೇಕೆ ಆಗುತ್ತಿದೆ ಎಂದು ಗೊಂದಲಕ್ಕೊಳಗಾದ ಕುದುರೆಯ ಕಾಪಿನ ಭಟರು, ರಕ್ಷಾ ಪಡೆ ಗಾಳಿ ಮಳೆಯ ಆರ್ಭಟಕ್ಕೆ ಸೂರು ಕಂಡತ್ತ ಸ್ವರಕ್ಷಣೆಗಾಗಿ ಓಡಿ ಹೋದರು. ಕುದುರೆ ಒಂಟಿಯಾಗಿ ನಿಂತಿದೆ. ಸುಸೂತ್ರವಾಗಿ ಮೇಘನಾದನ ಯೋಜನೆ ಕಾರ್ಯಗತವಾದುದನ್ನು ಕಂಡು ಅದೃಶ್ಯನಾಗಿ ಕೆಳಗಿಳಿದನು. ದಿವ್ಯಾಶ್ವನ್ನು ಎತ್ತಿಕೊಂಡು ಭೀಮ ಸೇನಾಸಹಿತನಾಗಿ ನಿಂತಿದ್ದ ಗಿರಿ ಶಿಖರದೆಡೆ ಒಯ್ದನು. ಕೆಳಗಿನಿಂದ ನೋಡುತ್ತಿರುವ ರಾಜಭಟರಿಗೆ ಕುದುರೆ ಹಾರಿ ಹೋಗುತ್ತಿರುವಂತೆ ಭ್ರಮೆಯಾಯಿತು. ಮೇಘನಾದ ಕುದುರೆಯನ್ನು ಸೇನೆಯ ಮಧ್ಯದಲ್ಲಿ ಇಳಿಸಿ ಅಜ್ಜ ವೃಕೋದರ ಭೀಮನಿಗೆ ವಂದಿಸಿ ನಿಂತನು. ಈ ಪ್ರಕರಣವನ್ನು ಕಂಡು ಒಮ್ಮೆಲೆ ದಿಗ್ಭ್ರಾಂತರಾಗಿ ಗೊಂದಲದಿಂದ ಬೊಬ್ಬಿರಿದು ಕೂಗಿ ತಮ್ಮ ಅರಸನ್ನು ರಕ್ಷಣೆಗಾಗಿ ಕರೆಯತೊಡಗಿದರು. ಕೆಲವರು ಓಡಿಹೋಗಿ ನಡೆದ ವೃತ್ತಾಂತವನ್ನು ದೊರೆ ಯವನಾಶ್ವನಿಗೆ ವಿವರಿಸಿ ಹೇಳಿದರು. ವಿಳಂಬಿಸದೆ ಯವನಾಶ್ವ ತನ್ನ ಮಗ ಸಮರ ಸಮರ್ಥನಾದ ಸುವೇಗನನ್ನು ನಿಮಂತ್ರಿಸಿ ಸೇನಾಸಹಿತನಾಗಿ ಆ ಗಿರಿಯತ್ತ ಸಾಗಿ ದಿವ್ಯಾಶ್ವವನ್ನು ಮರಳಿ ತರುವಂತೆ ಆಜ್ಞೆ ಮಾಡಿದನು. ದೊಡ್ಡ ಸೇನೆಯನ್ನು ಕೂಡಿಕೊಂಡು ವೀರಾಗ್ರಣಿ ಸುವೇಗ ತನ್ನ ಸೋದರರನ್ನೂ ಒಡಗೂಡಿಕೊಂಡು ಆ ಗಿರಿಯನ್ನೇರಿದನು. ಭೀಮನಿಗೂ ಹೀಗಾಗಬೇಕೆಂದು ಇತ್ತು. ಕರ್ಣನ ಮಗ ವೃಷಕೇತುವನ್ನು ಕರೆದು ಸೇನೆಯನ್ನು ಜೊತೆಗೆ ಸೇರಿಸಿ ಬಂದ ರಾಜಕುಮಾರ ಸುವೇಗನನ್ನು ಎದುರಿಸಲು ಆಜ್ಞೆ ಮಾಡಿದನು. ಒಂದೆಡೆ ಭದ್ರಾವತಿಯ ಸೇನೆ ಮತ್ತು ಯುವರಾಜ ಸುವೇಗನ ನಾಯಕತ್ವ. ಇತ್ತ ಹಸ್ತಿನೆಯ ಸೇನೆ ಮಹಾಕಲಿ ಕರ್ಣನ ಪುತ್ರ ವೃಷಕೇತು ಸೇನಾನಾಯಕ. ಸುವೇಗನ ಸೇನೆ ಸಮೀಪಿಸುತ್ತಿದ್ದಂತೆ ವೃಷಕೇತು ತಾವಿರುವ ಇರವನ್ನು ಸೂಚಿಸಿ ಸಮರಾಹ್ವನವನ್ನು ನೀಡಿದನು. ಇಬ್ಬರೂ ಪರಾಕ್ರಮಿಗಳು ಆದ ಕಾರಣ ತುಸು ಹೊತ್ತು ಉಗ್ರ ಹೋರಾಟ ಸಾಗಿತು. ಕರ್ಣಾರ್ಜುನರು ಕುರುಕ್ಷೇತ್ರದಲ್ಲಿ ಸೆಣಸಿದ ಸ್ವರೂಪದಲ್ಲಿ ತ್ವರಿತ ಯುದ್ದ ಸಾಗಿದರೂ ಸುವೇಗನಿಗೆ ವೃಷಕೇತುವಿನ ವೇಗದೆದುರು ಸೈರಿಸಿ ಪ್ರತಿ ಹೋರಾಟ ಸಂಘಟಿಸಲು ಸಾಧ್ಯವಾಗಲಿಲ್ಲ. ಹಿಮ್ಮೆಟ್ಟಿಸಲ್ಪಟ್ಟ ಸುವೇಗ ಅರಮನೆಗೆ ಸುದ್ದಿ ರವಾನಿಸಿ ತಮಗೆ ಸೋಲಾಗುತ್ತಿರುವ ವಿಚಾರ ಮುಟ್ಟಿಸಿದನು. ಯವನಾಶ್ವ ಚತುರಂಗ ಸೇನಾ ಸಮೇತನಾಗಿ ಕ್ಷಿಪ್ರವಾಗಿ ಧಾವಿಸಿದನು. ವೃಷಕೇತುವಿಗೆ ಯುದ್ಧಾಹ್ವಾನ ನೀಡಿ ಸಮರ ಸಾರಿದನು. ಅತಿ ಭಯಂಕರ ಯುದ್ಧ ಸಾಗತೊಡಗಿತು. ಧನುರ್ವಿದ್ಯಾ ಪ್ರದರ್ಶನ ಬಹಳ ಹೊತ್ತು ಸಮಬಲದಲ್ಲಿ ಸಾಗಿತು. ಆದರೂ ಹೊತ್ತು ಸಾಗುತ್ತಿದ್ದಂತೆ ಯವನಾಶ್ವನ ಕೈ ಮೇಲಾಗ ತೊಡಗಿತು. ಹೀಗಾಗುತ್ತಿದ್ದಂತೆ ಭೀಮಸೇನ ರಥವೇರಿ ಯವನಾಶ್ವನಿಗೆ ಎದುರಾದನು. ಇವರಿಬ್ಬರ ನಡುವೆ ಬಲಾಬಲದ ಯುದ್ಧ ಸಾಗಿದರೂ ಭೀಮನ ಎದುರು ಯವನಾಶ್ವ ನಿಸ್ತೇಜನಾಗಿ ಸೋತು ಹೋದನು. ಆ ಕೂಡಲೆ ಶರಣಾಗತನಾದ ಯವನಾಶ್ವ ಸಂಧಿಗೆ ಮನಮಾಡಿದನು. ಭೀಮಸೇನನಿಗೆ ವಂದಿಸಿ “ಅಯ್ಯಾ ಮಹಾಬಲನೇ! ನಾವು ನಿಮಗೆ ಯಾವ ಅಪಚಾರವನ್ನೂ ಮಾಡಿದವರಲ್ಲ. ನಮ್ಮ ರಾಜ್ಯ ಮತ್ತು ಪ್ರಜೆಗಳನ್ನು ಪರಿಪಾಲಿಸುತ್ತಾ ಇದ್ದೇವೆ. ಯಾವ ಕಾರಣಕ್ಕಾಗಿ ನಮ್ಮದ್ದಾದ ಕುದುರೆಯನ್ನು ಅಪಹರಿಸಿ ಯುದ್ಧಕ್ಕೆ ನೆಪ ಸೃಷ್ಟಿಸಿದ್ದೀರಿ ಎನ್ನುವುದು ತಿಳಿಯದಾಗಿದೆ. ಹಾಗೆಂದು ಬಂದಿರುವ ನಿಮ್ಮ ಪರಿಚಯವೂ ನನಗಾಗಲಿಲ್ಲ. ಯಾವ ಕಾರಣಕ್ಕಾಗಿ ಈ ವೈರ? ನಮ್ಮಿಂದ ಏನು ಅಪರಾಧವಾಗಿದೆ ಎಂದು ಈ ಯುದ್ಧ? ಅಥವಾ ನಿಮಗೇನಾದರು ನಮ್ಮಿಂದ ಅಪೇಕ್ಷೆ ಇದೆಯೆ? ಯುದ್ದಕ್ಕೆ ಕಾರಣ ಮತ್ತು ವಿಷಯ ತಿಳಿಯಪಡಿಸಬಹುದೆ?” ಎಂದು ಕೇಳಿದನು. ಆಗ ಭೀಮಸೇನ “ಚಂದ್ರವಂಶೀಯರಾದ ನಾವು ರಾಜಧರ್ಮವನ್ನು ಮೀರಿ ವ್ಯವಹರಿಸುವವರಲ್ಲ. ಹಸ್ತಿನಾವತಿಯ ಪಾಂಡು ಚಕ್ರವರ್ತಿಯ ಪುತ್ರ ಭೀಮಸೇನ ನಾನು. ಈತ ಕರ್ಣಪುತ್ರ ವೃಷಸೇನ” ಎಂದು ಜೊತೆಗಿದ್ದ ಪ್ರಮುಖರ ಪರಿಚಯ ತಿಳಿಸಿದನು. ಆ ಬಳಿಕ ಮಹಾಭಾರತ ಯುದ್ಧ, ಪರಿಣಾಮ, ಅಣ್ಣ ಧರ್ಮರಾಯನಿಗಾದ ಬಂಧು ಹತ್ಯಾ ದೋಷದ ಚಿಂತೆ, ಪರಿಹಾರವಾಗಿ ವ್ಯಾಸರ ನಿರ್ದೇಶನ, ಕೃಷ್ಣನ ಸಹಮತಗಳೆಲ್ಲವನ್ನೂ ಸವಿವರವಾಗಿ ತಿಳಿಸಿದನು. ಮಹಾಯಾಗ ಅಶ್ವಮೇಧಕ್ಕೆ ಯಾಗಾಶ್ವವಾಗಿ ಈ ಕುದುರೆ ಬೇಕಾಗಿದ್ದು ಅದನ್ನು ಪಡೆಯುವುದಕ್ಕಾಗಿ ಹೀಗೆ ಮಾಡಬೇಕಾಯಿತು ಎಂದು ವಿವರಿಸಿದನು. ಶ್ರೀಕೃಷ್ಣ ಪರಮಾತ್ಮನು ಜೊತೆಗಿದ್ದು ಸಾಗಲಿರುವ ಅಶ್ವಮೇಧ ಯಾಗದ ವಿಷಯ ತಿಳಿದ ಕೂಡಲೆ ಯವನಾಶ್ವ ಅತಿ ಸಂತೋಷದಿಂದ ದಿವ್ಯ ಲಕ್ಷಣಗಳಿರುವ ತನ್ನ ಕುದುರೆಯನ್ನು ನಿಮಗೊಪ್ಪಿಸಿದ್ದೇನೆ ಎಂದು ನುಡಿದನು. ಇಷ್ಟು ಮಾತ್ರವಲ್ಲ ನನ್ನ ಸಾಮ್ರಾಜ್ಯದ ಸಮೃದ್ಧ ಕೋಶ ಭಂಡಾರವನ್ನೂ, ಒಂದು ಆಳೂ ಬಿಡದೆ ಸಂಪೂರ್ಣ ಚತುರಂಗ ಬಲ ಸೇನಾ ಸಹಿತರಾಗಿ ತಾನು ಮತ್ತು ತನ್ನ ಪುತ್ರರು ಶ್ರೀಕೃಷ್ಣ ಸಹಿತ ನಿಮ್ಮಿಂದ ಆಗಲಿರುವ ಅಶ್ವ ಮೇಧ ದಿವ್ಯ ಯಾಗದ ಸೇವೆಗೆ ಜೊತೆಯಾಗಿ ಈಗಲೆ ಹೊರಟು ನಿಂತಿದ್ದೇವೆ ಎಂದು ಕೃತಾರ್ಥ ಭಾವದಿಂದ ಘೋಷಿಸಿದನು. ಯವನಾಶ್ವನು ಸೇನೆಯ ಜೊತೆ ತನ್ನ ಸಮೃದ್ಧ ಭಂಡಾರ ಕೋಶವೆಲ್ಲವನ್ನೂ ಹಸ್ತಿನೆಗೆ ಸಾಗಿಸುವ ವ್ಯವಸ್ಥೆ ಮಾಡಿಸಿದನು. ಆಯುಧಶಾಲೆಯನ್ನೂ ಬರಿದಾಗಿಸಿ ಹಸ್ತಿನೆಗೆ ಸ್ಥಳಾಂತರಿಸುವ ಏರ್ಪಾಟು ಆಯಿತು. ದಿವ್ಯ ಸಲ್ಲಕ್ಷಣ ಭರಿತ ಕುದುರೆಯನ್ನು ಮೆರವಣಿಗೆಯಲ್ಲಿ ವೃಷಕೇತು ಮೇಘನಾದರ ಜೊತೆ ಸೇರಿ ಗಜಪುರದತ್ತ ಹೊರಟರು. ಭೀಮಸೇನನು ಈಗಾಗಲೆ ಹೊರಟು ಹಸ್ತಿನಾವತಿಗೆ ಯಾಗಾಶ್ವವನ್ನು ಸಂಪಾದಿಸಿದ ಶುಭಸಮಾಚಾರ ಹೊತ್ತು ಅಣ್ಣನಿಗೆ ತಿಳಿಸಿ ಪೂರ್ಣ ವೃತ್ತಾಂತ ವಿವರಿಸಿದ್ದನು. ಧರ್ಮರಾಯ ಯವನಾಶ್ವನ ಸಜ್ಜನಿಕೆಯಿಂದ ಸಂತೋಷಗೊಂಡು ಸತ್ಕಾರದಿಂದ ಇದಿರುಗೊಳ್ಳಲು ತಾನೆ ಮುಂದಾಗಿ ಸಿದ್ಧನಾಗಿ ನಿಂತನು. ಮುಂದುವರಿಯುವುದು…✍🏻ಭರತೇಶ್ ಶೆಟ್ಟಿ ಎಕ್ಕಾರು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page