26.1 C
Udupi
Wednesday, April 22, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 496

ಭರತೇಶ ಶೆಟ್ಟಿ, ಎಕ್ಕಾರು

ಸಂಚಿಕೆ ೪೯೬ ಮಹಾಭಾರತ

ಸೂರ್ಯನ ಉದಯ ಅಸ್ತಮಾನಗಳು ಪೂರ್ವ ಪಶ್ಚಿಮದಿಂದಲೆ ಆಗುವುದಾದರೂ ಸಂಚಾರ ಉತ್ತರ ದಿಕ್ಕಿನತ್ತ ವಾಲುತ್ತಾ ಸಾಗತೊಡಗಿ ಉತ್ತರಾಯಣದ ಆರಂಭವನ್ನು ಸ್ಪಷ್ಟೀಕರಿಸಿದಂತಿದೆ. ಸ್ವರ್ಗದ ಬಾಗಿಲು ಈ ಸಮಯ ತೆರೆದಿರುತ್ತದೆ ಎಂಬುವುದು ಶಾಸ್ತ್ರೀಯ ಕಥಿತ ವಿಚಾರ. ಶ್ರೀಕೃಷ್ಣನು ಈ ವಿಷಯವನ್ನು ಧರ್ಮರಾಯನಿಗೆ ಹೇಳಿ ಭೀಷ್ಮಾಚಾರ್ಯರ ಬಳಿ ನಾವು ಹೋಗಬೇಕಾಗಿದೆ ಎಂದು ಸೂಚಿಸಿದನು.

ಧರ್ಮರಾಯನು ಕೃಷ್ಣ ಪರಮಾತ್ಮ ಮತ್ತು ಸಹೋದರರ ಜೊತೆಯಾಗಿ ಕುಂತಿ, ದ್ರೌಪದಿ, ಗಾಂಧಾರಿ, ಧೃತರಾಷ್ಟ್ರ, ವಿದುರಾದಿಗಳನ್ನು ಕೂಡಿಕೊಂಡು ಕುರುಕ್ಷೇತ್ರದ ಓಘವತಿ ತಟಿ ಸಮೀಪ ಸಾಗಿದರು. ತುಪ್ಪ, ಹೂವು, ಗಂಧ, ಪಟ್ಟೆಗಳು, ಗಂಧದ ಚೆಕ್ಕೆಗಳು, ಅಗರು ಮುಂತಾದ ವಸ್ತುಗಳನ್ನೂ ಬಂಡಿಗಳಲ್ಲಿ ತುಂಬಿ ಸಾಗಿಸಲಾಯಿತು. ಬೇಕಾಗುವ ಇನ್ನಿತರ ಪರಿಕರಗಳೂ, ಶ್ರೋತ್ರಿಗಳು, ಮಹರ್ಷಿ ಧೌಮ್ಯರೂ ಸೇರಿ ಎಲ್ಲರೂ ಜೊತೆಯಾಗಿ ಹೊರಟರು. ಅಗ್ನಿ ದೀವಟಿಗೆಗಳನ್ನು ಒಯ್ಯಲಾಯಿತು. ಹಿರಿಯರು, ಪ್ರಜಾಜನರು, ಸ್ತ್ರೀಯರು, ಬಾಲರು, ಪರಿಚಾರಕರು ಹೀಗೆ ಮೆರವಣಿಗೆಯೋಪಾದಿಯಲ್ಲಿ ಸುದ್ದಿ ತಿಳಿದು ಹಿಂಬಾಲಿಸಿದರು. ಶರತಲ್ಪದಲ್ಲಿ ಪವಡಿಸಿದ್ದ ಆಚಾರ್ಯ ಭೀಷ್ಮಾಚಾರ್ಯರಿಗೆ ಸಮಸ್ತರೂ ವಂದಿಸಿದರು.

ಭೀಷ್ಮಾಚಾರ್ಯರು ಚಂದ್ರವಂಶವನ್ನು ಆಧರಿಸಿದ್ದ ಆಧಾರ ಸ್ಥಂಭ. ಇಂದಿಗೆ ಐವತ್ತೆಂಟು ದಿನಗಳ ಸುದೀರ್ಘ ಕಾಲ ಶರಶಯ್ಯೆಯಲ್ಲಿ ಪವಡಿಸಿ ಕಾಲಗಣನೆ ಮಾಡುತ್ತಾ ಕಾದಿದ್ದಾರೆ. ಒಮ್ಮೆ ಮಲಗಿದ್ದಲ್ಲಿಂದಲೆ ಕಣ್ಣು ತಿರುಗಿಸಿ ಎಲ್ಲರನ್ನೂ ಕಣ್ತುಂಬಾ ನೋಡಿದರು. ಶ್ರೀಕೃಷ್ಣ, ಧೃತರಾಷ್ಟ್ರ, ವಿದುರ, ಗಾಂಧಾರಿ, ಕುಂತಿ ಪಾಂಡವರೆಲ್ಲರನ್ನೂ ಮನ ತುಂಬಿ ನೋಡಿ ಧರ್ಮರಾಯನನ್ನು ಬಳಿ ಕರೆದರು. “ಮಗನೇ! ನೀವು ದುಃಖಿಸಬಾರದು. ಯಾಕೆಂದರೆ ನನಗಿಂದು ಮಹದಾನಂದದ ದಿನ. ಎಷ್ಟೋ ತಲೆಮಾರುಗಳನ್ನು ಕಾಣುತ್ತಾ ನಿಬಿಡ ಕಾರ್ಯದೊತ್ತಡದಲ್ಲಿ ಬದುಕಿದ್ದವನು. ಆದರೆ ಈ ಐವತ್ತೆಂಟು ದಿನಗಳೇಕೊ ಬಹಳ ನಿಧಾನವಾಗಿ ಸಾಗಿ ಬಹು ಸಮಯದಂತೆ ನನಗೆ ಭಾಸವಾಗಿ ಹೋಯಿತು. ವೀರೋಚಿತವಾಗಿ ಹೋರಾಡಿ, ಧರ್ಮ ಅನುಸರಿಸಿ ದುಡಿದಿದ್ದೇನೆ. ಏನು ಆಗಬೇಕಾಗಿತ್ತೊ ಅದು ಆಗಿ ಹೋಯಿತು. ಶರತಲ್ಪದಲ್ಲಿ ಒರಗಿ ನಾನಿರುವಂತಾಯಿತು. ಆದರೂ ನನ್ನ ಜೀವ ಮಾತ್ರ ನನ್ನ ಇಚ್ಚೆಯ ವ್ಯಾಪ್ತಿಯೊಳಗಿರುವ ಭಾಗ್ಯ ಹೊಂದಿರುವ ಕಾರಣ ನಾನಿನ್ನೂ ಜೀವ ಧಾರಣೆ ಮಾಡಿಕೊಂಡು ಉಳಿದಿದ್ದೇನೆ. ನಿಮ್ಮನ್ನೆಲ್ಲಾ ನೋಡಿ ನನಗೆ ಹರುಷ ಆಗುತ್ತಿದೆ. ಈ ಕ್ಷಣದಲ್ಲೂ ಕೃಷ್ಣ ಪರಮಾತ್ಮನನ್ನು ಮನಸೋ ಇಚ್ಚೆ ನೋಡಲು ಆ ಮಹಾತ್ಮ ನನಗೆ ದರುಶನ ಭಾಗ್ಯವಿತ್ತದ್ದು ನನ್ನ ಪಾಲಿಗೆ ಮಹಾನ್ ಪುಣ್ಯವೆಂದು ತಿಳಿಯುತ್ತೇನೆ. ಈ ಕ್ಷಣ ನನಗೆ ಕಾಣುತ್ತಿರುವುದು ಒಂದೆಡೆ ದೇವರು, ಮತ್ತೊಂದೆಡೆ ಜೀವರು ಮತ್ತು ಇದನ್ನು ಧರಿಸಿರುವ ಜಗತ್ತು. ಈ ಮೂರನ್ನೂ ಕಾಣುವಾಗ ನನಗೆ ನಾನೇ ಮಹಾಯೋಗಿ ಎಂಬ ಹೆಮ್ಮೆ ಆಗುತ್ತಿದೆ. ಈ ಯೋಗ ಭಾಗ್ಯವೇನು ಸಾಮಾನ್ಯವೆ? ಆ ಮಹಾಮಹಿಮ ಶ್ರೀಹರಿಯ ಒಲುಮೆಯ ಮಾತ್ರದಿಂದ ಇಂತಹ ಸೌಭಾಗ್ಯ ಒದಗಿದೆ. ಇದೆಲ್ಲಾ ಆತನ ಕೃಪೆ, ಕೊನೆಯ ಕ್ಷಣದಲ್ಲಿ ಮಹತ್ತರವಾದುದನ್ನು ಭಕ್ತನಿಗೆ ಕರುಣಿಸಿದ್ದಾನೆ ಎಂದು ತಿಳಿಯುತ್ತೇನೆ. ಭೌತಿಕವಾದ ಈ ಶರೀರಕ್ಕೆ ಮರಣ ಪ್ರಾಪ್ತವಾಗುವ ಸಮಯಕ್ಕೆ ಶರಣನಾಗಿರುವ ಧನ್ಯತೆ ನನಗಿತ್ತಿದ್ದಾನೆ. ಮಗನೇ ಪುಣ್ಯಪ್ರದವಾದ ಮಾಘ ಮಾಸ ಆರಂಭವಾಗಿದೆ. ಶುಕ್ಲಪಕ್ಷದಲ್ಲಿ ಅರ್ಧ ಭಾಗವು ಕಳೆದು ಉಳಿದರ್ಧ ಭಾಗ ಸಾಗುತ್ತಿದೆ. ಇಂದು ಅಷ್ಟಮಿ ತಿಥಿಯ ಸುದಿನವಲ್ಲವೆ? ಹೌದು, ಬಹಳ ಉತ್ತಮ ದಿನವಾದ ಈ ಅಷ್ಟಮಿ ತಿಥಿಯಂದು ಅಂದು ಶ್ರಾವಣ ಮಾಸದಲ್ಲಿ ಶ್ರೀಹರಿ ನಮ್ಮೊಂದಿಗೆ ನರ ರೂಪದಲ್ಲಿ ಕಾಣಿಸಿಕೊಂಡಿದ್ದನು. ಇಂದು ಮಾಘ ಮಾಸದ ಶುಕ್ಲ ಅಷ್ಟಮಿಯಂದು ಈ ದೇವದತ್ತನು ಕಣ್ಮರೆಯಾಗಬೇಕು. ನಂದಗೋಕುಲದಲ್ಲಿ ಗೋವರ್ಧನ ಗಿರಿಯನ್ನೆತ್ತಿ ಹಿಡಿದು ವಿಕೋಪ ವಿಪತ್ತಿನಿಂದ ಸಾಂಕೇತಿಕವಾಗಿ ರಕ್ಷಣೆ ನೀಡಿದ್ದ ದೇವರದೇವನು ಸದಾ ಧರ್ಮಗಿರಿಯನ್ನು ಎತ್ತಿ ಹಿಡಿದಿದ್ದು ಜಗದ ಪಾಲಕನಾಗಿ ಇರುವುದು ಬರಿಯ ಕಣ್ಣಿಗೆ ಕಾಣಿಸದ ಸತ್ಯ. ನನ್ನ ಜೀವಮಾನದ ಕನಸು ಹಸ್ತಿನೆಯ ಸಿಂಹಾಸನದಲ್ಲಿ ಧರ್ಮ ಮತ್ತು ಸಾಮರ್ಥ್ಯ ಎರಡೂ ಸಮಾನವಾಗಿರುವ ಸಮರ್ಥ ರಾಜ ಬರುವವರೆಗೆ ರಕ್ಷಣೆ ಮಾಡುತ್ತಾ ನಾನಿರಬೇಕು. ಅಷ್ಟಾದ ಬಳಿಕ ವಿರಮಿಸುವ ಯೋಚನೆ ಮಾಡಬೇಕು ಎಂಬ ಸಂಕಲ್ಪ ಹೊಂದಿದ್ದೆ. ಭೀಮಾರ್ಜುನರ ಬಲ, ನಿನ್ನ ಧರ್ಮ ಬುದ್ಧಿ ಹಸ್ತಿನೆಯ ಏಕ ಛತ್ರದಡಿ ಒಗ್ಗೂಡಿರುವ ಈ ಸಮಯಕ್ಕಿಂತ ಉತ್ತಮವಾದದ್ದು ನನ್ನ ನಿರ್ಗಮನಕ್ಕೆ ಬೇರೆ ಸಿಗಲಿಕ್ಕಿಲ್ಲ. ನೀನು ಮಹಾರಾಜನಾದ ವಿಚಾರ ತಿಳಿದಿರುವ ನಾನು ನಿಶ್ಚಿಂತನಾಗಿ ಮುಕ್ತಿಯ ಇಚ್ಚೆಯನ್ನು ಬಯಸಬಹುದು. ನನ್ನ ಆಸೆ ಫಲಿಸಿದೆ. ನಾನು ಸೇರಬೇಕಾದಲ್ಲಿಗೆ ಸೇರುವ ಕಾಲವೂ ಕೂಡಿ ಬಂದಿದೆ.” ಎಂದರು. ಆಗ ಧರ್ಮರಾಯನು ಅಜ್ಜನ ಕೈಹಿಡಿದು ಅವರ ಬಳಿಯಲ್ಲಿ ಮುಖದ ಸಮೀಪ ಕುಳಿತಿದ್ದನು. ಪ್ರೀತಿಯಿಂದ ಮೊಮ್ಮಗನ ಮೈ ದಡವಿ ಪೂಸಿದರು.

ಆ ಬಳಿಕ ಧೃತರಾಷ್ಟ್ರನ ಕುರಿತಾಗಿ “ಮಹಾರಾಜಾ! ನೀನು ರಾಜದಂಡಧರನಾಗಿ ನ್ಯಾಯ, ಧರ್ಮ, ಆಚಾರ, ವಿಚಾರ ಎಲ್ಲವನ್ನು ತಿಳಿದವನು. ಪ್ರತ್ಯೇಕವಾಗಿ ನಿನಗೆ ಇನ್ನೊಮ್ಮೆ ಹೇಳಬೇಕಾದುದು ಏನೂ ಉಳಿದಿಲ್ಲ. ಆದರೂ ಕೆಲವೊಂದು ವಿಚಾರಗಳನ್ನು ಹೇಳುವುದು ನನಗೆ ಧರ್ಮವಾಗಿದೆ. ಈ ತನಕ ಏನೇನು ಆಗಿ ಹೋಯಿತೊ ಅದು ಆಗಿ ಹೋಗಿ ಆಗಿದೆ. ಅದಕ್ಕಾಗಿ ನೀನು ಶೋಕಿಸುವುದಾಗಲಿ, ಅದರ ಬಗ್ಗೆ ಚಿಂತಿಸುವುದಾಗಲಿ ಮಾಡಬಾರದು. ಏನು ಆಗಲೇ ಬೇಕಿತ್ತು. ಅದು ಆಗಿದೆ ಹೊರತು ಅದಕ್ಯಾರೂ ಕಾರಣಕರ್ತರಿಲ್ಲ. ಧರ್ಮರಾಯ ಮತ್ತು ಅವನ ತಮ್ಮಂದಿರು ನಿನ್ನ ತಮ್ಮನ ಮಕ್ಕಳು ನಿನಗೂ ಮಕ್ಕಳು. ಅವರ ಗುಣಗಾನ ನಾನು ಮಾಡಿ ನೀನು ತಿಳಿಯಬೇಕಾಗಿಲ್ಲ. ವೃದ್ಧ ಮಾತಾಪಿತರ ಸೇವೆ ಇವರಿಗಿಂತ ಚೆನ್ನಾಗಿ ನಿನ್ನ ಮಕ್ಕಳಿದ್ದರೂ ಮಾಡುತ್ತಿರಲಿಲ್ಲ. ಈ ಐವರು ಪಾಂಡುಪುತ್ರರು ಶ್ರೀಕೃಷ್ಣನ ಪೂರ್ಣ ಕೃಪೆಗೆ ಪಾತ್ರರಾಗಿ, ಧರ್ಮಪಾಲನೆ ಮಾಡುತ್ತಾ ಬದುಕಿದವರು. ಇಂತಹ ಧರ್ಮಾತ್ಮರು ನಮ್ಮ ಚಂದ್ರವಂಶದಲ್ಲಿ ಇಂದಿನ ತನಕ ಹುಟ್ಟಿರಲಿಕ್ಕಿಲ್ಲ. ಈ ತನಕ ಆಗಿ ಹೋಗಿರುವ ಪಿತೃಗಳಿಗೂ ಸದ್ಗತಿ ಒದಗಿಸುವಷ್ಟು ಪುಣ್ಯಾತ್ಮರು ಇವರಾಗಿದ್ದಾರೆ ಎನ್ನುವುದು ನಿಸ್ಸಂಶಯ. ತಂದೆಯಿಲ್ಲದ ಈ ಮಕ್ಕಳು ನಿನಗೆ ವಿಧೇಯರಾಗಿ ಬದುಕುತ್ತಾರೆ ಎಂಬ ಪೂರ್ಣ ವಿಶ್ವಾಸ ನನಗಿದೆ. ನಮ್ಮ ಹಿರಿಯನಾದ ಕುರು ರಾಜನು ಒಂದು ರೀತಿಯ ಧರ್ಮ ಯಜ್ಞ ಮಾಡಿದ್ದರೆ, ನಿನ್ನ ಮಗ ದುರ್ಯೋಧನ ಸಮಸ್ತ ಕ್ಷಾತ್ರ ವೀರರನ್ನು ಸಮಿಧೆಯಂತೆ ಒಂದೆಡೆ ಕ್ರೋಢೀಕರಿಸಿ ಮಹಾ ರಣಯಜ್ಞವನ್ನು ಆಯೋಜಿಸಿದ ದೀಕ್ಷಿತ. ಭೂ ಭಾರವೂ ಇಳಿಯ ಬೇಕಾದ ಕಾಲ ಸನ್ನಿಹಿತವಾಗಿತ್ತು. ಪ್ರೇರಕನಾದ ಜಗನ್ನಿಯಾಮಕನಿಗೆ ಈತ ಪೂರಕನು ಆಗಿ ಹೋದನು. ಹೋಮದಲ್ಲಿ ಹೋಮಿಸಲ್ಪಟ್ಟ ದ್ರವ್ಯ ಸುಟ್ಟು ನಷ್ಟವಾದಂತೆ ಕಂಡರೂ ನಿಷ್ಫಲವಾಗದು. ಅನನ್ಯವಾದ ಪುಣ್ಯವನ್ನು ಒದಗಿಸುತ್ತದೆ. ಮಹಾಯಜ್ಞದ ಹವಿಶ್ಯೇಷದಂತೆ ನಮ್ಮ ವಂಶಕ್ಕೆ ಪ್ರಸಾದ ರೂಪದಲ್ಲಿ ಐದು ಮಂದಿ ಪಾಂಡು ಪುತ್ರರು ಶ್ರೀಕೃಷ್ಣಾನುಗ್ರಹದಿಂದ ಉಳಿದಿದ್ದಾರೆ. ನೀನು ಹಿರಿಯವನಾಗಿ ಅಪೂರ್ವ ಫಲಭೋಕ್ತೃವಾಗಿ ಈ ಅನುಗ್ರಹವನ್ನು ಪರಿಗ್ರಹಿಸಿಕೊಳ್ಳುವಂತೆ ಇವರನ್ನು ಸ್ವೀಕರಿಸಿ ಕೃತಕೃತ್ಯನಾಗು. ನಿನಗೆ ಶುಭವಾಗಲಿ” ಎಂದು ಹರಸಿದರು.

ಇಷ್ಟಾದ ಬಳಿಕ ಭೀಷ್ಮಾಚಾರ್ಯರು ಶ್ರೀಕೃಷ್ಣನಿಗೆ ಕೈಮುಗಿದು ಕ್ಷಣಹೊತ್ತು ಅನಿಮಿಷ ನಯನರಾಗಿ (ಕಣ್ಣವೆ ಮುಚ್ಚದೆ) ನೋಡುತ್ತಿದ್ದಾರೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page