ಭಾಗ – 490
ಭರತೇಶ ಶೆಟ್ಟಿ, ಎಕ್ಕಾರು

“ಧರ್ಮಜಾ! ಮೊದಲಾಗಿ ಚಿಂತೆಗೆ ಕಾರಣವಾಗುವ ವಿಚಾರ ಏನು ಎಂದು ತಿಳಿಯಬೇಕು. ಅಪೇಕ್ಷೆ ಎಲ್ಲಾ ಮನುಷ್ಯರನ್ನು ತನ್ನ ಅಂಕೆಯಲ್ಲಿಟ್ಟು ಆಟವಾಡಿಸುತ್ತದೆ. ಹಾಗಾಗಿ ಸುಲಭವಾಗಿ ಹೇಳಬೇಕೆಂದರೆ ಅಪೇಕ್ಷೆ ಕಡಿಮೆ ಇರುವವನಿಗೆ ಚಿಂತೆಯೂ ಕಿಂಚಿತ್ತಾಗಿರುತ್ತದೆ. ಇದಕ್ಕೆ ಪೂರಕವಾದ ಒಂದು ಕಥೆಯನ್ನು ಹೇಳುತ್ತೇನೆ ಕೇಳು.
ಹಿಂದೆ ಪ್ರಹ್ಲಾದ ಒಂದು ಕಡೆ ನಿಶ್ಚಿಂತನಾಗಿರುವ ಋಷಿಯೋರ್ವನನ್ನು ಕಂಡನಂತೆ. ಆತನನ್ನು ಮಾತನಾಡಿಸಿ ” ಮಹಾತ್ಮರೇ! ನೀವು ಯಾವ ಕಾರಣವಿದ್ದರೂ ಚಿಂತೆಗೊಳಗಾಗದೆ ಇರಲು ಹೇಗೆ ಸಾಧ್ಯವಾಗಿದೆ?” ಎಂದು ಕೇಳಿದನಂತೆ.
ಆಗ ಆ ಮಹಾತ್ಮ ಹೇಳಿದನಂತೆ “ಈ ಜಗತ್ತಿನಲ್ಲಿ ಎಷ್ಟೋ ಜೀವ ಜಂತುಗಳು ಅವುಗಳಾಗಿಯೆ ಹುಟ್ಟಿ ಬೆಳೆದು ಕಾಲಾಂತರದಲ್ಲಿ ಸಾಯುವುದನ್ನು ನೋಡಿದ್ದೇನೆ. ಅವುಗಳಿಗೆ ದುಡಿದು ಸಂಪಾದಿಸಬೇಕು, ಕೂಡಿಡಬೇಕು ಎಂಬ ವ್ಯಥೆಯಿಲ್ಲ. ಹೊಟ್ಟೆ ತುಂಬಿಸುವುದು, ಬಳಿಕ ಮಲಗುವುದು. ಮತ್ತೆ ಹಸಿವಾದಾಗ ತಿನ್ನುತ್ತವೆ. ಪ್ರಾಕೃತ ಸೃಷ್ಟಿಯಲ್ಲಿ ಒಂದಕ್ಕೊಂದು ಹಸಿವು ನಿವಾರಣೆಯ ವ್ಯವಸ್ಥೆಯನ್ನು ಕಂಡಿದ್ದೇನೆ. ಹಾಗಿದ್ದರೆ ಅವುಗಳಿಗಿಲ್ಲದ ಚಿಂತೆ ಮನುಷ್ಯನಿಗೆ ಮಾತ್ರ ಯಾಕಿದೆ ಎಂಬ ತರ್ಕ ನನ್ನಲ್ಲಿ ಮೂಡಿತು. ತುಲನೆ ಮಾಡಿ ನೋಡಿದರೆ ಯಾವ ಮನುಷ್ಯನೂ ತನ್ನ ಜನ್ಮವನ್ನು ಆಸೆ ಪಟ್ಟು ಪಡಕೊಂಡದ್ದಿಲ್ಲ. ಹಾಗೆಂದು ಮರಣವನ್ನು ಆಸೆಯಿಂದ ಸ್ವೀಕರಿಸುವವರೂ ಕಾಣ ಸಿಗಲಿಲ್ಲ. ಹಾಗಿರುವಾಗ ಮಧ್ಯದ ಜೀವನದಲ್ಲಿ ಯಾಕೆ ವಿಪರೀತ ಚಿಂತೆ ಮಾಡ ಬೇಕು? ಹುಟ್ಟು ಸ್ವಾಭಾವಿಕ. ಮರಣ ನಿರ್ಧಾರಿತ. ಜೀವಿಸಿರುವಾಗ ಏನೇನೋ ಅಪೇಕ್ಷೆಗಳು. ಏನೇ ಮಾಡಿದರೂ ಮತ್ತೂ ಚಿಂತೆಯೆ ಹೊರತು ನಿಶ್ಚಿಂತೆ ಎಂಬುವುದು ಸಿಗುವುದಿಲ್ಲ. ಆಗ ನಾನು ಯೋಚಿಸತೊಡಗಿದೆ, ಪ್ರಯತ್ನಶೀಲನಾಗಿ ಏನನ್ನಾದರು ಮಾಡುತ್ತಿದ್ದರೆ ಆಗ ಚಿಂತೆ ಇರುತ್ತದೆ. ಮಾಡಿದ ಬಳಿಕವೂ ಹೊಸದೊಂದರ ಬಗ್ಗೆ ಚಿಂತೆ ಉದ್ಭವವಾಗುತ್ತದೆ. ಈ ಚಿಂತೆ ಎನ್ನುವುದು ಮುಗಿಯದ ಕಥೆ ಎಂಬ ಸತ್ಯ ಎಂದು ಅರಿತುಕೊಂಡೆನು. ಆ ಬಳಿಕ ಒಂದು ತೀರ್ಮಾನಕ್ಕೆ ಬಂದಿದ್ದೇನೆ – ನನ್ನ ಹುಟ್ಟು ಆಗಿಯಾಗಿದೆ – ಸಾವು ಖಂಡಿತಾ ಬರಲಿದೆ. ಈ ಎರಡರ ಮಧ್ಯೆ ಬದುಕಿರುವಷ್ಟು ಕಾಲ ಏನೇ ಆದರೂ ಚಿಂತೆ ಮಾಡಬಾರದು. ಅತೃಪ್ತನಾಗಿ ಬದುಕುವ ಬದಲು ತೃಪ್ತಿಯಿಂದ ಜೀವಿಸುತ್ತಿದ್ದೇನೆ. ಇದನ್ನು ತಿಳಿದುಕೊಂಡ ಬಳಿಕ ನನಗೆ ಸಂತೋಷವೂ ಇಲ್ಲ, ವ್ಯಥೆಯೂ ಆಗದು. ಪ್ರತಿಯೊಂದು ಘಟನೆಗಳೂ ಅದರದರ ಸ್ವಭಾವನ್ನು ಅನುಸರಿಸಿಯೆ ನಡೆಯುತ್ತದೆ. ಒಮ್ಮೆ ಜೊತೆಯಾಗಿ ಸೇರಿಕೊಂಡದ್ದು ಅಗಲಿಕೆಯಾಗಲೆ ಬೇಕು. ಕೂಡಿಕೊಂಡದ್ದು ಕರಗಲೆ ಬೇಕು. ಏನೇ ಇದ್ದರೂ ಸತ್ಯ ಏನೆಂದರೆ ಅಂತ್ಯ. ಮೃತ್ಯು ಎಂಬುವುದು ಯಾರನ್ನೂ ಬಿಡದೆ ಇರುವ ವಿಚಾರ. ಅಂದಿನಿಂದ ನಾನು ಒಂದು ಸಮಯ ಆಹಾರವೇ ಸಿಗದೆ ಹೋದರೂ ಚಿಂತೆ ಮಾಡುವುದಿಲ್ಲ. ಸಿಕ್ಕಿದಾಗ ಬಿಡುವುದೂ ಇಲ್ಲ. ಹೆಚ್ಚಾಯಿತೆಂದು ಬಿಸಾಡುವುದೂ ಇಲ್ಲ. ಕಡಿಮೆಯಾದ ಸಮಯ ಕೊರಗುವುದೂ ಇಲ್ಲ. ನಿದ್ರೆ ಬಂದಲ್ಲಿ ಮಲಗಿ ನಿದ್ರಿಸುತ್ತೇನೆ. ನಿದ್ರೆ ಬಾರದಿದ್ದರೂ ಚಿಂತೆ ಮಾಡದೆ ಹಾಗೆಯೆ ಇದ್ದು ಬಿಡುತ್ತೇನೆ. ಈ ರೀತಿ ಇರುವ ನಾನು ದೊರಕಿದ್ದನ್ನು ಅನುಭವಿಸುತ್ತೇನೆ. ದೊರಕದಿದ್ದರೆ ಹಂಬಲಿಸುವುದಿಲ್ಲ. ಈ ರೀತಿಯ ಜೀವನ ಕ್ರಮವನ್ನು ಅಜಗರ ವ್ರತ ಎನ್ನುತ್ತಾರೆ. ಆ ವ್ರತಸ್ಥನಾಗಿ ಲೋಕದ ಆಗು ಹೋಗುಗಳಿಗೆ ಸ್ಪಂದಿಸದೆ ನನ್ನದೇ ಆದ ಪ್ರಪಂಚದಲ್ಲಿ ಬದುಕುತ್ತಿದ್ದೇನೆ. ನನಗೆ ರಾಗ ದ್ವೇಷಗಳಾಗಲಿ, ಚಿಂತೆ ಮೋಹಗಳಾಗಲಿ, ಭಯ ಲೋಭಗಳಾಗಲಿ ಯಾವುದೂ ಇಲ್ಲ. ಹಾಗಾಗಿ ಎದುರಾಗುವ ದ್ವಂದ್ವಗಳನ್ನು ಸಮಾನವಾಗಿ ಕಾಣುತ್ತಾ, ಎಲ್ಲದರಲ್ಲೂ ಒಳಿತನ್ನು ಕಾಣುವ ಹವ್ಯಾಸ ಬೆಳೆಸಿಕೊಂಡಿದ್ದೇನೆ. ಹೀಗಿರುವ ಕಾರಣ ನನಗೆ ಚಿಂತೆ ಆವರಿಸದೆ ನಿಶ್ಚಿಂತನಾಗಿದ್ದೇನೆ” ಎಂದರಂತೆ.
ವತ್ಸಾ! ಜೀವನದಲ್ಲಿ ನಾವು ಸದ್ಗತಿಯನ್ನು ಪಡೆಯಬೇಕಾದರೆ ಸ್ಥಿತ ಪ್ರಜ್ಞರಾಗಿ ಬದುಕಬೇಕು. ಅತಿ ದುಃಖವಾಗಲಿ, ಸಂತೋಷವಾಗಲಿ ಎರಡೂ ಮಾರಕ. ದುಃಖ ಪ್ರಬಲವಾದಾಗ ಮಂಕು ಕವಿಯುತ್ತದೆ. ಅತಿ ಸಂತಸವಾದಾಗ ಬುದ್ದಿ ಕುರುಡಾಗುತ್ತದೆ. ಈ ಎರಡೂ ಸ್ಥಿತಿ ಉತ್ತಮವಲ್ಲ. ಹಾಗಾಗಿ ಸಾಧನೆ ಇರಬೇಕು, ಪರಿಣಾಮದ ಬಗ್ಗೆ ಆತಂಕವಾಗಲಿ, ವಿಪರೀತ ಕಲ್ಪನೆಗಳಾಗಲಿ ಇರಕೂಡದು. ಎಂದು ಭೀಷ್ಮಾಚಾರ್ಯರು ಸೂಕ್ಷ್ಮವನ್ನು ವಿವರಿಸಿದರು.
ಆಲಿಸುತ್ತಿದ್ದ ಧರ್ಮರಾಯನಿಗೆ ಈಗ ಮತ್ತೂ ಆಳವಾದ ಯೋಚನೆ ಮನಮಾಡಿತು. “ಅಜ್ಜಾ! ಮನುಷ್ಯನಾದವ ಏನನ್ನಾದರು ಅವಲಂಬಿಸದೆ ಬದುಕಲು ಸಾಧ್ಯವೇ? ಒಂದು ವೇಳೆ ಅವಲಂಬಿಸಿರಲೇ ಬೇಕು ಎಂದಾದರೆ ಅದು ಯಾವುದು?” ಎಂದು ಕೇಳಿಕೊಂಡನು.
ಮುಂದುವರಿಯುವುದು











