ಭಾಗ – 489
ಭರತೇಶ್ ಶೆಟ್ಟಿ, ಎಕ್ಕಾರು

ಸಂಚಿಕೆ ೪೮೯ ಮಹಾಭಾರತ
“ಧರ್ಮರಾಯಾ! ಯಥಾರ್ಥವಾಗಿ ನೀನು ಕೇಳಿರುವುದು ಸಮಸ್ಯೆಯೆ ಅಲ್ಲ. ಆದರೆ ವಾಸ್ತವದಲ್ಲಿ ಇದು ನಿನ್ನ ಮನಸದಸಿಗೆ ದೊಡ್ಡ ಸಮಸ್ಯೆಯಾಗಿದೆ. ನಿನಗೊಂದು ಕಥೆಯನ್ನು ಹೇಳುತ್ತೇನೆ. ಹಿಂದೆ ಓರ್ವ ಶ್ರೇಷ್ಠಿ ಎಂಬ ವೈಶ್ಯ ವ್ಯಾಪಾರ ಚತುರನಾಗಿದ್ದ. ಶ್ರಮವಹಿಸಿ ದುಡಿಯುತ್ತಾ ಆತನ ವ್ಯವಹಾರವೂ ವೃದ್ಧಿಯಾಯಿತು. ಆರ್ಥಿಕ ಸಂಪಾದನೆಯೂ ಸಮೃದ್ಧವಾಯಿತು. ತನ್ನ ಜೊತೆಗೆ ಆಳುಗಳನ್ನೂ ನೇಮಿಸಿದನು. ತುಸು ಕಾಲವೂ ವಿರಮಿಸದೆ ಹಣಕಾಸಿನ ಕೊಡು ಕೊಳ್ಳುವ ಪ್ರಕ್ರಿಯೆಯನ್ನು ತಾನು ತನ್ನ ಕೈಯಾರೆ ಮಾಡುತ್ತಿದ್ದನು. ಯಾಕೆಂದರೆ ಆತನಿಗೆ ತನ್ನ ಆಳುಗಳು ಎಲ್ಲಾದರು ತನ್ನ ದುಡ್ಡನ್ನು ಲಪಟಾಯಿಸಿದರೆ ಎಂಬ ಸಂದೇಹ ಬಲವಾಗಿತ್ತು. ಹೀಗಾಗಿ ಊಟ, ಉಪಹಾರ, ನಿದ್ದೆ, ವಿಶ್ರಾಂತಿ ಯಾವುದಕ್ಕೂ ಆತನ ಬಳಿ ಹೆಚ್ಚು ಸಮಯ ಇರಲಿಲ್ಲ. ಇಂತಹ ಅವಿಶ್ರಾಂತ ದುಡಿಮೆಯಿಂದ ಯಥೇಚ್ಚವಾದ ಧನ ಸಂಪಾದನೆ ಮಾಡಿದನು. ಇಷ್ಟಾಗುವಾಗ ಕಾಲಚಕ್ರವೂ ಓಡುತ್ತಾ ವೃದ್ಧಾಪ್ಯ ಆವರಿಸಿತು. ವಯೋ ಸಹಜವಾಗಿ ಕಾಯಿಲೆಗಳು ಅಂಟಿಕೊಂಡವು. ವೈದ್ಯರು ಬಂದವರು ಆಹಾರ ಪಥ್ಯಗಳನ್ನು ಸೂಚಿಸಿ, ವಿಶ್ರಾಂತಿಯಲ್ಲಿರಬೇಕೆಂದು ಹೇಳಿದರು. ಈಗ ಆತನಿಗೆ ಬೇಕಾದಷ್ಟು ಬಿಡುವಿದೆ, ಜೊತೆಗೆ ದುಡ್ಡು, ಸಕಲ ಸಂಪದವೂ ಇದೆ. ಆದರೆ ಬಾಯಿ ರುಚಿಗೆ ಬಯಸಿದ್ದನ್ನು ತಿನ್ನುವಂತಿಲ್ಲ. ಹಾಗೆಂದು ತಿನ್ನುವ ಕ್ಷಮತೆ, ಜೀರ್ಣಿಸಿಕೊಳ್ಳುವ ಆರೋಗ್ಯ ಇದ್ದ ಸಮಯ ಬಿಡುವಿಲ್ಲದ ದುಡಿಮೆಯಿಂದಾಗಿ ತಿನ್ನಲಾಗಿರಲಿಲ್ಲ. ಈಗ ಬೇಕಾದಷ್ಟು ಸಂಪತ್ತು ಇದೆಯಾದರೂ, ಕೇವಲ ಕೂಡಿಟ್ಟದ್ದು ಮಾತ್ರ. ತನ್ನ ಸ್ವಂತಕ್ಕೆ ವಿನಿಯೋಗವಾಗಿರಲಿಲ್ಲ. ಮಗೂ ಸತ್ಯ ವಿಷಯವೇನೆಂದರೆ ಜೀವನದಲ್ಲಿ ಆಯ ಅಂದರೆ ಸಂಪಾದನೆ ಎಷ್ಟು ಕಷ್ಟವೋ! ವ್ಯಯವೂ ಅಷ್ಟೇ ಕಷ್ಟವಾದದ್ದು. ಹಾಗಾಗಿ ಆದಾಯವನ್ನು ಸರಿಯಾಗಿ ವಿನಿಯೋಗಿಸುವುದೂ ಒಂದು ಯೋಗವಾಗಿರುತ್ತದೆ. ಧನ ಧಾನ್ಯ ಸಂಪಾದನೆ ಮಾಡಬೇಕು, ಅದನ್ನು ಎಚ್ಚರಿಕೆಯಿಂದ ಸದ್ವಿನಿಯೋಗ ಮಾಡಬೇಕಾದುದೂ ಅಷ್ಟೇ ಅಗತ್ಯ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳು ನಾಲ್ಕು ಪುರುಷಾರ್ಥಗಳು.
ಇನ್ನೂ ಸ್ಪಷ್ಟವಾಗಿ ಹೇಳುತ್ತೇನೆ ಕೇಳು. ಸೃಷ್ಟಿ ಎಂದರೇನು ಬಲ್ಲೆಯಾ? ಶಾಶ್ವತವಾದ ‘ಆತ್ಮ’ ತಾನು ಹೊಂದಿರುವ ಕರ್ಮ ಫಲ ಅನುಭವಿಸಲು ಅದಕ್ಕೆ ಬೇಕಾದ ಮಾಧ್ಯಮವಾಗಿ ಶರೀರವನ್ನು ಹೊಂದಿ ಹುಟ್ಟಿ ಬರುವುದು. ಶರೀರವನ್ನು ಬಳಸಿಕೊಂಡು ಆತ್ಮೋನ್ನತಿಗೆ ಬೇಕಾದುದನ್ನು ಮಾಡಿಕೊಳ್ಳುವುದು ನಿಜವಾದ ಅಗತ್ಯ ಕಾರ್ಯ. ಆದರೆ ಆತ್ಮಜನ್ಯವಾದ ಆತ್ಮ ಸಾಕ್ಷಿ ಮತ್ತು ಶರೀರ ಜನ್ಯವಾದ ಮನಸ್ಸಿನ ಕಾಮನೆಗಳ ಮಧ್ಯೆ ಸ್ಪರ್ಧೆ ಏರ್ಪಡುತ್ತಿರುತ್ತದೆ. ಮನಸ್ಸು ಚಂಚಲವಾಗಿ ಆಸೆಯ ಬೆನ್ನತ್ತಿ ಹೋಗುತ್ತದೆ. ನ್ಯಾಸವಾಗದೆ ಕಂಡದ್ದನ್ನು ಬಯಸುತ್ತಿರುತ್ತದೆ. ಹೋಲಿಕೆ ಮತ್ತು ಸ್ಪರ್ಧೆಯಲ್ಲಿ ತೊಡಗಿಕೊಳ್ಳುತ್ತದೆ. ಪರಿಣಾಮವಾಗಿ ವ್ಯತ್ಯಾಸಗಳ ಉದ್ಭವವಾಗತೊಡಗುತ್ತದೆ. ಅಂದರೆ ಬಡವ ಮತ್ತು ಶ್ರೀಮಂತ ಎಂಬ ಅಂತರಕ್ಕೆ ನೀನು ಹೇಳಿರುವ ಧನ ಮಾಪನವಾಗುತ್ತದೆ. ಆರ್ಥಿಕವಾಗಿ ಪ್ರಾಬಲ್ಯತೆ ಹೊಂದಿರುವವನು ಶ್ರೀಮಂತ, ಆರ್ಥಿಕ ಕೊರತೆ ಇರುವಾತ ಬಡವ ಎಂದೆಣಿಸಿಕೊಳ್ಳುತ್ತಾನೆ.
ಇಂತಹ ಬಡವ ಮೊದಲು ಅಗತ್ಯಗಳನ್ನು ಬಯಸುತ್ತಾನೆ. ಅದು ಪ್ರಾಪ್ತವಾದಾಗ ಸಂತೃಪ್ತನಾಗದೆ ಒಂದು ಹೆಜ್ಜೆ ಮೇಲೇರಿ ಅಧಿಕವಾದುದನ್ನು ಅಪೇಕ್ಷಿಸುತ್ತಾನೆ. ಅದೂ ಸಿಕ್ಕಿದರೆ ಆಗಲೂ ತೃಪ್ತಿ ಇರದು. ಇನ್ನೂ ಒಂದು ರೀತಿಯ ಚಪಲತೆ ಪ್ರಕಟಗೊಳ್ಳತೊಡಗುತ್ತದೆ. ತಾನು ಶ್ರೇಷ್ಟ, ಮೆಚ್ಚಿಸಬೇಕು – ಅನ್ಯರು ಮೆಚ್ಚಬೇಕು, ಹೊಗಳಿಸಬೇಕು, ತಾನು ಹಾಗೆ ಹೀಗೆ ಇತ್ಯಾದಿ ತೋರಿಕೆಯ ಪ್ರವೃತ್ತಿಗಳ ಅಪೇಕ್ಷೆ ಅಗೋಚರವಾಗಿ ಬೆಳೆಯತೊಡಗುತ್ತದೆ. ಅದನ್ನು ನಿರ್ವಹಿಸಲು ಹೋಗುವಲ್ಲಿ ಒದ್ದಾಟಗಳು ಆರಂಭವಾಗುತ್ತದೆ. ಅಲ್ಲಿಂದ ಸಮಸ್ಯೆ ಬೆಳೆಯತೊಡಗುತ್ತದೆ. ಈ ಪ್ರಕ್ರಿಯೆಯಲ್ಲಿ ಎಲ್ಲೂ ಸುಖ ನೆಲೆಸದು.
ಸೂಕ್ಷ್ಮವಾಗಿ ಈ ವಿಚಾರದ ಬಗ್ಗೆ ಗಮನ ಹರಿಸಿ ಯೋಚಿಸು. ಶರೀರ ಕೇವಲ ಮಾಧ್ಯಮ ಮಾತ್ರ. ಇಂದು ಇದ್ದು ಭವಿಷ್ಯದಲ್ಲಿ ಮುಪ್ಪಾಗಿಯೋ, ರೋಗಗ್ರಸ್ಥವಾಗಿಯೋ ಅಥವಾ ಇನ್ಯಾವುದೋ ಕಾರಣದಿಂದ ನಾಶ ಹೊಂದುವಂತಹುದು. ಆದರೆ ಆತ್ಮ ಹಾಗಲ್ಲ ಶಾಶ್ವತವಾಗಿ ಅವಿನಾಶಿಯಾಗಿ ಇರುವಂತಹುದು. ಈಗ ನಿಜ ಪ್ರಶ್ನೆ ಏನೆಂದರೆ ಆತ್ಮದ ಉನ್ನತಿಗೆ ಶರೀರ ಶ್ರಮಿಸಬೇಕೊ ಅಥವಾ ಶರೀರಾಂತರ್ಗತ ಮನೋಕಾಮನೆಗಳ ಕೈಗೊಂಬೆಯಾಗಬೇಕೊ?
ಆತ್ಮದ ಉತ್ಕರ್ಷೆ ಆಗಬೇಕಾದರೆ, ಮಾಧ್ಯಮವಾಗುವ ಶರೀರವೂ ಸುಸ್ಥಿತಿಯಲ್ಲಿರಬೇಕು. ಅಂದರೆ ಶರೀರಕ್ಕೆ ಉತ್ತಮ ಆಹಾರ ಮತ್ತು ಮನಸ್ಸಿಗೆ ಸಂಸ್ಕಾರ ಅಗತ್ಯ. ಶರೀರ ಮತ್ತು ಮನಸ್ಸಿಗೆ ವಿಶ್ರಾಂತಿಯೂ ಅನಿವಾರ್ಯವಾಗುತ್ತದೆ. ಶರೀರ ಆತ್ಮದ ಶ್ರೇಯಸ್ಸಿಗಾಗಿ ದುಡಿಯಬೇಕಾದ ಸಾಧನ. ಮನಸ್ಸು ಅದನ್ನು ನಿರ್ದೇಶಿಸುವ ಶ್ರೇಷ್ಟ ಮಾರ್ಗದರ್ಶಕ. ಇಲ್ಲಿ ಮನಸ್ಸು ಸಂಸ್ಕಾರಹೀನವಾದರೆ ಆಗ ಶರೀರ ದುಷ್ಪ್ರೇರಣೆಗೆ ಒಳಗಾಗಿ ಪಾಪಕೃತ್ಯಗಳಲ್ಲಿ ತೊಡಗುತ್ತದೆ.
ನಿಜವಾಗಿ ಶ್ರೀಮಂತ ಯಾರು ಎಂದು ಕೇಳಿದರೆ ಇರುವುದನ್ನು, ಬಯಸಿದ್ದನ್ನು ತಿಂದುಂಡು, ಜೀರ್ಣಿಸಿಕೊಂಡು ಶಕ್ತನಾಗಿ ಸತ್ಕಾರ್ಯ, ಶ್ರೇಯಸ್ಸಿಗಾಗಿ ದುಡಿದು ದಣಿದಾಗ ಶರೀರ ಮತ್ತು ಮನಸ್ಸಿನ ವಿಶ್ರಾಂತಿಗಾಗಿ ನೆಮ್ಮದಿಯಿಂದ ಮಲಗಿ ನಿದ್ರಾವಶನಾಗಬಲ್ಲವನು ನಿಜ ಧನಿಕ. ಯಾಕೆಂದರೆ ಇದಕ್ಕಿಂತ ಮಿಗಿಲಾದ ಸುಖ ಇನ್ಯಾವುದೂ ಇಲ್ಲ. ಕೇವಲ ಹಣ ಅಥವಾ ಸಂಪತ್ತಿನ ರಾಶಿ ಕೂಡಿ ಹಾಕಿದ್ದರೂ ಸುಖವಿಲ್ಲದಿದ್ದರೆ ಸಂಪತ್ತು ಇದ್ದೂ ನಿರುಪಯುಕ್ತವಾಗುತ್ತದೆ.
ಆದರೆ ಪ್ರಾಪಂಚಿಕರು ತನ್ನನ್ನು ಪರರಿಗೆ ಹೋಲಿಸುತ್ತಾ, ಕನಿಷ್ಠ ಗರಿಷ್ಠ ಎಂಬ ತುಲನೆ ಮಾಡುತ್ತಾ, ತಾನು ಮತ್ತು ತನ್ನವರು ಅಧಿಕರಾಗಬೇಕು ಎಂಬ ಸ್ಪರ್ಧೆಗೆ ತೊಡಗುತ್ತಾರೆ. ಅಸಾಧ್ಯವಾದುದನ್ನು ಬಲವಂತದಿಂದ ಬಯಸಿ ಮನಶಾಂತಿಯನ್ನು ಕಳಕೊಂಡು, ಶರೀರದ ಕ್ಷಮತೆಯನ್ನು ಕದಡಿಸುತ್ತಾ ಜೀವಿಸುತ್ತಾರೆ. ಕೊನೆಗೆ ರೋಗಿಗಳಾಗಿ ಸಾಯುತ್ತಾರೆ
ಆದರೆ ಆತ್ಮದ ಸದ್ಗತಿಗೆ ಬೇಕಾದದ್ದು ಧರ್ಮ, ಸಂಸ್ಕಾರಯುತ ಜೀವನ. ಶರೀರವನ್ನು ಶೌಚ, ಶುದ್ಧಾಹಾರ ಸೇವನೆಯ ಮುಖೇನ ಆರೋಗ್ಯದಿಂದ ಕಾಯ್ದುಕೊಳ್ಳುವುದು. ಮನಸ್ಸನ್ನು ಸಂಸ್ಕಾರ ಬಲದಿಂದ ಸದೃಢಗೊಳಿಸಿಕೊಳ್ಳುವುದು. ಆಗ ಸತ್ಕರ್ಮ, ಸಚ್ಚಾರಿತ್ರ್ಯ, ನ್ಯಾಯ, ಸತ್ಯ, ಧರ್ಮಯುತ ಹಾದಿಯಲ್ಲಿ ನಡೆಯಲು ಶರೀರವನ್ನು ನಿರ್ದೇಶಿಸಲು ಮನಸ್ಸು ಶಕ್ತವಾಗುತ್ತದೆ. ಇದರಿಂದ ಪರಮಾರ್ಥಿಕ ಸಂಪಾದನೆಯಾಗಿ ಜನ್ಮ ಸಾರ್ಥಕವಾಗುತ್ತದೆ. ಆದರೆ ಹಾಗಾಗದೆ ಕೇವಲ ಆರ್ಥಿಕವಾದ ಧನ ಧಾನ್ಯ ಸಂಪಾದನೆಯನ್ನು ಜೀವನದ ಗುರಿಯಾಗಿಸಿ ಸುಖವಿಲ್ಲದ ಬದುಕಿಗೆ ಕಾರಣವಾಗುತ್ತದೆ.
ಧರ್ಮಾರಾಯಾ! ನೀನು ವಿವೇಚಿಸಿ ನೋಡು – ಧನಿಕನಾಗಲಿ, ಬಡವನಾಗಲಿ ಶರೀರಕ್ಕೆ ಬೇಕಾದಷ್ಟೇ ಉಣ್ಣಬಹುದು. ಇದೆ ಎಂದು ಹೆಚ್ಚು ತಿನ್ನಲಾಗದು. ಇದಾದ ನಂತರ ಬೇಕಾದದ್ದು ನಿದ್ದೆ. ಕೊನೆಗೆ ಕಾಲಚಕ್ರ ತಿರುಗಿದಾಗ ಸಾವು ಎಂಬುವುದು ಬಡವ ಮತ್ತು ಶ್ರೀಮಂತ ಇಬ್ಬರಿಗೂ ಭೇದವಿಲ್ಲದೆ ಸಮಾನವಾಗಿ ಆವರಿಸುತ್ತದೆ.
ಆದರೆ ಹುಟ್ಟು ಮತ್ತು ಸಾವಿನ ಮಧ್ಯೆಯ ಜೀವನದಲ್ಲಿ ನಶ್ವರವಾದ ಧನ ಸಂಪಾದನೆ ಮಹತ್ವ ಪಡೆಯುತ್ತದೆ. ಎಷ್ಟೇ ಧನ ಸಂಪಾದಿಸಿದರೂ, ಸಾವು ಆವರಿಸಿದ ಕ್ಷಣದಲ್ಲಿ ಜೊತೆಗೆ ಕೊಂಡೊಯ್ಯಲಾಗದು. ಆತ್ಮಕ್ಕೆ ಒಯ್ಯಲಾಗುವುದು ಸಂಚಿತ ಪಾಪ ಮತ್ತು ಪುಣ್ಯದ ಫಲಗಳನ್ನಷ್ಟು ಮಾತ್ರ ಹೊರತು ಆಸ್ತಿಯನ್ನಲ್ಲ. ಈಗ ನೀನು ಯೋಚಿಸಬೇಕು, ನಿಜವಾದ ಬಡವ ಪಾರಮಾರ್ಥಿಕ ಪುಣ್ಯ ಸಂಪಾದಿಸದೆ ಉಳಿದವನು ಹೊರತು ನಶ್ವರವಾದ ಆರ್ಥಿಕ ಸಂಪಾದನೆ ಮಾಡದವನಲ್ಲ. ಸುಖ ಎನ್ನುವುದು ನೆಲೆಯಾಗುವುದು ಪುಣ್ಯ ಸಂಪಾದಿಸಿದ ಪುಣ್ಯಾತ್ಮನ ಮನದಲ್ಲಿಯೆ ಹೊರತು ಕೇವಲ ಧನ ಸಂಪಾದಿಸಿ ಧನಿಕನಾದವನ ಮನೆಯಲ್ಲಿ ಅಲ್ಲ. ಆದರೆ ಅವಿವೇಕದಿಂದ ಲೌಕಿಕವಾದ ದೃಷ್ಟಿಯಲ್ಲಿ ಹೊನ್ನು, ಆಸ್ತಿ ಅಂತಸ್ತನ್ನು ಸಿರಿವಂತಿಕೆ ಎಂದು ಪರಿಗಣಿಸಿ, ಅದಕ್ಕಾಗಿ ಹಂಬಲಿಸುವುದು ಸಾಮಾನ್ಯ ದೃಷ್ಟ ವಿಚಾರ. ಜೀವನಕ್ಕಾಗಿ ಧನ ಸಂಪಾದನೆಯಾಗಬೇಕು, ಗಳಿಕೆ ಸದ್ವಿನಿಯೋಗ ಆಗಬೇಕು. ಹೊರತು ಕೇವಲ ಧನ ಸಂಪಾದನೆಗಾಗಿ ಜೀವನ ಆಗಬಾರದು. ಹೀಗಾದಾಗ ನಿಜವಾದ ಸುಖ ಪ್ರಾಪ್ತವಾಗುತ್ತದೆ.
ಭೀಷ್ಮಾಚಾರ್ಯರ ಉಪದೇಶ ಕೇಳಿದ ಧರ್ಮರಾಯನಿಗೆ ಮನಸ್ಸು ಮತ್ತು ಶರೀರ ಜನ್ಯ ಆಸೆಗಳು ಅಸೌಖ್ಯಕ್ಕೆ ಕಾರಣವಾಗುವುದು. ಮತ್ತು ಆತ್ಮದ ಬಗ್ಗೆ ಜಾಗೃತವಾಗಿದ್ದು ಅದರ ಉನ್ನತಿಗಾಗಿ ಪ್ರಯತ್ನಿಸಬೇಕಾದುದು ಅಗತ್ಯ ಕರ್ಮ ಎಂಬ ಸತ್ಯ ಅರಿವಾಯಿತು. ಆ ಕುರಿತಾಗಿ ಯೋಚಿಸುತ್ತಿರುವಾಗ ಮನದಲ್ಲಿ ಹೊಸ ಸಂದೇಹ ಮೂಡತೊಡಗಿತು. “ಅಜ್ಜಾ ಈ ಜಗತ್ತಿನಲ್ಲಿ ಚಿಂತೆಯಿಲ್ಲದೆ ಇರಲಾದೀತೇ? ಮನುಷ್ಯ ನಿಶ್ಚಿಂತನಾಗಿದ್ದು ಸದ್ಗತಿ ಪಡೆಯಲು ಸಾಧ್ಯವಿದೆಯೇ?” ಎಂದು ಪ್ರಶ್ನಿಸಿದನು.
ಮುಂದುವರಿಯುವುದು…











