31.2 C
Udupi
Friday, May 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 35

ಭರತೇಶ್ ಶೆಟ್ಟಿ, ಎಕ್ಕಾರ್

ಅಗ್ನಿವೇಶ್ಯರು ಸಮರ್ಥ ಗುರುಗಳು. ಆಗಸ್ತ್ಯರಿಂದ ಬಗೆ ಬಗೆಯ ಮಂತ್ರಾಸ್ತ್ರಗಳನ್ನೂ, ಧನುರ್ವೇದವನ್ನೂ, ರಹಸ್ಯಾತ್ಮಕ ವಿಚಾರಗಳನ್ನೂ ಕಲಿತುಕೊಂಡಿದ್ದರು. ಹೊಸ ಮಂತ್ರಾಸ್ತ್ರಗಳನ್ನೂ ನಿರ್ಮಿಸುವ ವಿದ್ಯೆಯನ್ನೂ ಬಲ್ಲವರಾಗಿದ್ದರು. ಇಂತಹ ಶ್ರೇಷ್ಟ ಗುರುಗಳ ಬಳಿ ದ್ರೋಣ – ದ್ರುಪದರು ಧನುರ್ವೇದ ಅಭ್ಯಾಸ ಮಾಡುತ್ತಿದ್ದರು. ಸಹಪಾಠಿಗಳಾದ ದ್ರೋಣ ದ್ರುಪದರು ಗುರುಕುಲದಲ್ಲಿ ಅತಿ ಆತ್ಮೀಯ ಮಿತ್ರರಾದರು. ಹೀಗಿರಲು ಒಂದು ದಿನ ದ್ರೋಣ ಮುಖೇನ ಪಡೆದ ಪ್ರಾಣರಕ್ಷಣೆಯ ಮಹದುಪಕಾರವೊಂದಕ್ಕೆ ಪ್ರತಿಯಾಗಿ ಸಂತುಷ್ಟನಾದ ದ್ರುಪದ ಮುಂದೆ ನಾನು ಪಾಂಚಾಲ ದೇಶದ ರಾಜನಾದರೆ ಅರ್ಧ ರಾಜ್ಯ ನಿನಗೆ ನೀಡುವೆ. ನೀನು ಕೂಡ ನನಗೆ ಸಮಾನ ರಾಜನಾಗಿ ಬಾಳಬೇಕೆಂದು ಆಶಯ ವ್ಯಕ್ತಪಡಿಸಿ ವಾಗ್ದಾನ ನೀಡಿದನು.

ವಿದ್ಯಾಭ್ಯಾಸ ಮುಂದುವರಿದು ಇಬ್ಬರೂ ಸಮರ್ಥ ಯೋಧರಾಗಿ ರೂಪುಗೊಳ್ಳುತ್ತಿದ್ದರು. ಪಾಂಚಾಲ ದೇಶದಲ್ಲಿ ರಾಜನಿಲ್ಲದೆ ಅರಾಜಕತೆ ಬರಬಾರದೆಂದು ಮಂತ್ರಿಗಳು ತೀರ್ಮಾನಿಸಿ, ದ್ರುಪದನನ್ನು ಗುರು ಮಠದಿಂದ ಕರೆಸಿ ಪಟ್ಟಾಭಿಷೇಕ ಮಾಡಿ ರಾಜನನ್ನಾಗಿ ಘೋಷಿಸುವ ನಿರ್ಧಾರ ಕೈಗೊಂಡು ಹಾಗೇ ಮಾಡಿದರು. ದ್ರುಪದ ಪಾಂಚಾಲ ದೇಶದ ಮಹಾರಾಜನಾದ.

ಇತ್ತ ದ್ರೋಣ ಅಗ್ನಿವೇಶ್ಯರ ಗರಡಿಯಲ್ಲಿ ಮತ್ತಷ್ಟು ಪಳಗುತ್ತಾ ಇನ್ನೂ ಹೆಚ್ಚಿನ ರಹಸ್ಯಾತ್ಮಕ, ಸೂಕ್ಷ್ಮಾತಿ ಸೂಕ್ಷ್ಮ ವಿದ್ಯೆಗಳನ್ನು ಕಲಿತು ಪ್ರಬುದ್ಧ ಧನುರ್ಧರನಾಗಿ ರೂಪುಗೊಳ್ಳುತ್ತಿದ್ದ.

ಈ ಮಧ್ಯೆ ಬೇಟೆಗಾಗಿ ಹೋಗಿದ್ದ ಶಂತನು ಕಾಡಿನ ಮಧ್ಯದ “ಶರವನ” ಪ್ರದೇಶದಲ್ಲಿ ಸಾಗುತ್ತಿರಬೇಕಾದರೆ ಮಗುವಿನ ಅಳು ಕೇಳಿ ಬಂತು. ಮೊದಲೇ ಪುತ್ರಶೋಕದಿಂದ ತತ್ತರಿಸಿದ್ದ ರಾಜನಿಗೆ ಮಗುವಿನ ಸ್ವರ ಮತ್ತಷ್ಟು ತೀವ್ರವಾಗಿ ಪರಿಣಮಿಸಿ ಅತ್ತ ಧಾವಿಸಿದರೆ ಮುದ್ದಾದ ಎರಡು ಶಿಶುಗಳು ನೆಲದಲ್ಲಿ ಬಿದ್ದುಕೊಂಡು ಅಳುತ್ತಿರುವುದು ಕಂಡಿತು. ಒಂದು ಗಂಡು, ಇನ್ನೊಂದು ಹೆಣ್ಣು ಮಗು. ಕಣ್ಣುಗಳು ನೋಡುತ್ತಿದ್ದಂತೆ ಕೈಗಳು ಎತ್ತಿಕೊಂಡವು. ತನ್ನ ಅರಮನೆಗೆ ತಂದು ದೇವರ ಕೃಪೆ ಎನಗಿದು ಎಂದು ಭಾವಿಸಿದನೋ, ಇಲ್ಲ ಆಸ್ಥಾನ ಗುರುಗಳು ರಾಜನ ಕೃಪೆಗೊಳಗಾದ ಮಕ್ಕಳೆಂದೋ ಏನೋ ಗಂಡು ಮಗುವಿಗೆ ಕೃಪ ಎಂದೂ, ಹೆಣ್ಣು ಮಗುವಿಗೆ ಕೃಪಿ ಎಂದೂ ಹೆಸರಿಟ್ಟು ಪೋಷಿಸಿದರು.

ಹೀಗಿರಲು ಸ್ವಲ್ಪ ಸಮಯ ಕಳೆಯುತ್ತಿರಲು ಗೌತಮ ವಂಶದ “ಶರದ್ವಂತ” ಮುನಿಯು ಶಂತನುವಿನ ಅರಮನೆಗೆ ಬಂದನು. ಅರಸನನ್ನು ಕರೆದು “ಮಹಾರಾಜ! ನಿನಗೆ ವನ ಮಧ್ಯದಲ್ಲಿ ಸಿಕ್ಕಿದ ಮಕ್ಕಳ ಪಿತ ನಾನಾಗಿದ್ದೇನೆ. ನಾನು ಗೌತಮ ವಂಶದ ಶರದ್ವಂತ. ಕಾಡಿನಲ್ಲಿ ತಪೋ ನಿರತನಾಗಿದ್ದಾಗ ” ಜಾನಪದಿ” ಎಂಬ ಅಪ್ಸರೆಯನ್ನು ಕಂಡು ವಿಚಲಿತನಾದೆ. ನನ್ನ ಜೀವಧಾತು ಶರವನದಲ್ಲಿ ಬಿತ್ತು. ಪರಿಣಾಮ ಈ ಎರಡು ಮಕ್ಕಳ ಸೃಷ್ಟಿಯಾಯಿತು. ವಿರಕ್ತನಾಗಿ ತಪೋ ಮುಖನಾಗಿದ್ದ ನಾನು ಅಲ್ಲೇ ಬಿಟ್ಟು ಅನ್ಯ ಸ್ಥಳ ಸೇರಿ ತಪೋ ನಿರತನಾದೆ. ದಯಾಳುವಾದ ನಿನ್ನಿಂದ ಈ ಮಕ್ಕಳು ರಕ್ಷಿಸಿ ಪೋಷಿಸಲ್ಪಡುವ ವಿಚಾರ ತಿಳಿದು, ಪಿತನಾದ ನಾನು ಸಂಸ್ಕಾರ ಧರ್ಮಕ್ಕಾಗಿ ನಾಲ್ಕು ದಿನ ಅವರೊಂದಿಗೆ ಕಳೆಯಲು ಬಂದೆನು”. ಎಂದು ವೃತ್ತಾಂತ ವಿವರಿಸಿದ. ಶಂತನು ಒಪ್ಪಿದ. ಶರದ್ವಂತ ತನ್ನ ಕರ್ತವ್ಯ ಪೂರೈಸಿ ಹೊರಟು ಹೋದನು.

ಪ್ರಾಪ್ತ ವಯಸ್ಕರಾದ ಕೃಪ – ಕೃಪಿಯರನ್ನು ವಿದ್ಯಾಭ್ಯಾಸಕ್ಕಾಗಿ ಪರಶುರಾಮರ ಆಶ್ರಮ ಸೇರಿಸಿದ ಮಹಾರಾಜ ಶಂತನು. ಅಗ್ನಿವೇಶ್ಯರಲ್ಲಿ ಸಕಲ ಶಸ್ತ್ರಾಸ್ತ್ರ, ಮಂತ್ರಾಸ್ತ್ರ ಕರಗತಗೊಳಿಸಿದ ದ್ರೋಣ ಕೂಡ ಈ ಸಮಯ ಪರಶುರಾಮರ ಆಶ್ರಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ. ಹೀಗೆ ಇಲ್ಲಿ ಕೃಪ – ದ್ರೋಣರು ಸಹಪಾಠಿಗಳಾಗಿ ಮಿತ್ರರೂ ಆದರು. ಕೃಪ – ಕೃಪಿಯರು ಸುದೀರ್ಘ ಕಾಲ ಸಕಲ ವಿದ್ಯಾ ಪಾರಂಗತರಾಗಿ ಹಸ್ತಿನಾವತಿ ಸೇರಿದರು. ಇತ್ತ ದ್ರೋಣ ಕೂಡ ಅಸ್ತ್ರ, ಶಸ್ತ್ರ, ಶಾಸ್ತ್ರ ವಿದ್ಯಾ ಪಾರಂಗತನಾಗಿ ಆಚಾರ್ಯ ಸ್ಥಾನಕ್ಕೆ ಸಮರ್ಥನಾಗಿ ರೂಪುಗೊಂಡಿದ್ದ. ಮಾತ್ರವಲ್ಲ ಕಲಿತ ದಿವ್ಯ ವಿದ್ಯೆಯನ್ನು ತಾನೂ ಆಶ್ರಮ ರಚಿಸಿ ವಿದ್ಯಾದಾನ ಮಾಡಬೇಕೆಂಬ ಆಶಯ ಹೊಂದಿ ಆ ತಯಾರಿಯಲ್ಲಿದ್ದನು.

ಕಾಲ ಸಾಗುತ್ತಿತ್ತು. ಒಂದು ದಿನ ಬೇಟೆಗಾಗಿ ಶಂತನು ಗಂಗಾತೀರದಲ್ಲಿ ಕಾಡಿನತ್ತ ಸಾಗುತ್ತಿರಬೇಕಾದರೆ, ಅಚ್ಚರಿಯೊಂದನ್ನು ಕಂಡನು. ಮೈತುಂಬಿ ಹರಿಯುವ ಗಂಗಾನದಿ ಬತ್ತಿ ಬರಿದಾಗಿತ್ತು. ಎಂದೂ ಗೋಚರಿಸದ ಅದರ ಒಡಲು ಸೂರ್ಯನ ಶಾಖಕ್ಕೆ ತೆರೆದು ಮೈಯೊಡ್ಡಿದಂತೆ ಭಾಸವಾಗಿ, ಕಾಡಿನತ್ತ ಹೊರಟಿದ್ದ ಶಂತನು ಪಥ ಬದಲಿಸಿ ಗಂಗಾತೀರದಲ್ಲೇ ನದೀ ಮೂಲ ಅರಸಿ ಹೊರಟನು. ಸ್ವಲ್ಪ ದೂರ ಸಾಗುತ್ತಿರಬೇಕಾದರೆ ದಿವ್ಯ ತೇಜಸ್ಸಿನ ಬಾಲಕನೊಬ್ಬ ತನ್ನ ಶಸ್ತ್ರ ಕೌಶಲ ಮುಖೇನ ಶರಪಂಜರ ನಿರ್ಮಿಸಿ ಭೋರ್ಗರೆಯುವ ನದಿಯನ್ನು ತೊಟ್ಟು ನೀರು ಸೋರದಂತೆ ತಡೆದಿದ್ದ. ಶಂತನುವನ್ನು ಕಂಡ ಕೂಡಲೇ ನದಿಗೆ ಧುಮುಕಿ ಅದೃಶ್ಯನಾದ. ಯಾರಿರಬಹುದೆಂದು ತರ್ಕಿಸುವಾಗ, ಗಂಗಾದೇವಿ ಪ್ರತ್ಯಕ್ಷಳಾಗಿ, ಅದೇ ಬಾಲಕನನ್ನು ಕರೆತಂದು “ರಾಜಾ! ಈ ಬಾಲಕ ನಮ್ಮ ಮಗ ದೇವವೃತ. ವಸಿಷ್ಠ, ಬೃಹಸ್ಪತಿ, ಪರಶುರಾಮರಂತಹ ಮಹಾನ್ ಗುರುಗಳಿಂದ ಶಸ್ತ್ರ, ಶಾಸ್ತ್ರ, ಅಸ್ತ್ರ, ಮಂತ್ರಾಸ್ತ್ರ, ವೇದಾಂತ, ದಂಡನೀತಿ ಇತ್ಯಾದಿ ಸಕಲ ವಿದ್ಯಾ ನಿಪುಣನಾಗಿ ಬಂದಿದ್ದಾನೆ. ಮಗನನ್ನು ಇನ್ನು ನಿಮ್ಮ ವಶಕ್ಕೆ ಒಪ್ಪಿಸುತ್ತೇನೆ. ಸಮರ್ಥ ಮಗನಿಂದ ಸಕಲ ಸೌಭಾಗ್ಯ ಅನುಭವಿಸುವ ಯೋಗ ನಿಮ್ಮದು ಎಂದು ಹೇಳಿ, ಶ್ರೇಯಸ್ಸಾಗಲಿ ಎಂದು ಹರಸಿ ಗಂಗೆ ಅದೃಶ್ಯಳಾದಳು.

ದೇವವೃತ – ಶಂತನು ಅತಿ ಪ್ರೀತಿಯಿಂದ ಸುತ -ಪಿತನ ವಾತ್ಸಲ್ಯ ಪ್ರಕಟಿಸುತ್ತಾ, ಬಹಳಷ್ಟು ವಿಚಾರ ವಿನಿಮಯ ಮಾಡುತ್ತಾ ಅರಮನೆಯತ್ತ ಸಾಗಿದರು.
ದೇವವೃತನ ಜೊತೆ ಶಂತನು ಚಕ್ರವರ್ತಿಯನ್ನು ಕಂಡು ಹಸ್ತಿನಾವತಿಯ ಪ್ರಜೆಗಳು ಹರ್ಷೋದ್ಘಾರ ಮಾಡಿದರು.

ಶಂತನುವಿನ ಸಾಕು ಮಗಳು ಕೃಪಿ ಯೋಗ್ಯ ವಯಸ್ಕಳಾಗಿದ್ದರಿಂದ ಸಂಸ್ಕಾರದಂತೆ ವಿವಾಹ ಕಾರ್ಯಕ್ಕಾಗಿ ವರಾನ್ವೇಷಣೆಯ ವಿಚಾರ ಬಂತು. ಸೋದರ ಕೃಪ ತನ್ನ ತಂಗಿಗೆ ತಕ್ಕ ಪತಿಯಾಗಿ ಗುರುಕುಲದ ಮಿತ್ರ ದ್ರೋಣನ ಹೆಸರು ಸೂಚಿಸಿದ. ಶಂತನುವಿನ ನಿಮಂತ್ರಣದಿಂದ ಬಂದ ಶರದ್ವಂತ ಮುನಿವರ್ಯ ಈ ಮಕ್ಕಳ ಜನ್ಮದಾತ ಪಿತನಲ್ಲವೇ, ಕೃಪ ಕೃಪಿಯರನ್ನು ಜೊತೆ ಕರೆದೊಯ್ದು, ದ್ರೋಣ – ಕೃಪಿಯರಿಗೆ ಶಾಸ್ತ್ರೋಕ್ತವಾಗಿ ಧಾರೆಯೆರೆದು ವಿವಾಹ ಮಾಡಿಸಿದರು. ದ್ರೋಣಾಚಾರ್ಯರಾಗುವ ಕಾಲ ಸನ್ನಿಹಿತವಾಯಿತು. ತನ್ನದೇ ಆಶ್ರಮ ನಿರ್ಮಿಸಿ ಪತ್ನಿ ಕೃಪಿಯೊಂದಿಗೆ ಜೀವನ ಸಾಗಿಸತೊಡಗಿದರು.ಇವರ ಆಶ್ರಮ ಗುರುಕುಲವಾಯಿತು.

ಮುಂದುವರಿಯುವುದು….

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page