ಭಾಗ 33
ಭರತೇಶ್ ಶೆಟ್ಟಿ, ಎಕ್ಕಾರ್

ಹೀಗೆ ಕುರು ಚಕ್ರವರ್ತಿ ಧರ್ಮ ಬಿರುವಾಗಿ ತನ್ನ ಶರೀರದ ಅಣು ಅಣುವೂ ಧರ್ಮವನ್ನು ಬೆಳೆಸಬೇಕು ಎಂಬ ಸಂಕಲ್ಪದೊಂದಿಗೆ ಭಗವಂತನಲ್ಲಿ ಅರಿಕೆ ಮಾಡಿಕೊಂಡ ಫಲ ಸ್ವರೂಪವಾಗಿ ಕುರು ತನ್ನನ್ನೇ ಈ ಧರ್ಮಭೂಮಿಯಲ್ಲಿ ಪಾಲನಾ ಕರ್ತ ಶ್ರೀ ಹರಿ ಮುಖೇನ ಬಿತ್ತಿಸಲ್ಪಟ್ಟ ಕಾರಣ ಅಮರನಾದ. ಈ ಪ್ರದೇಶವು ಕುರುಕ್ಷೇತ್ರವಾಗಿ ಧರ್ಮ ಪಾಲನೆ, ಪೋಷಣೆ, ಸ್ಥಾಪನೆಯ ಕ್ಷೇತ್ರವಾಗಿ ಪ್ರಸಿದ್ಧವಾಯಿತು. ಚಂದ್ರವಂಶದವರು ಈ ಚಕ್ರವರ್ತಿಯ ಬಳಿಕ ಕುರು ವಂಶೀಯರು – ಕೌರವರೆಂದೂ ಗುರುತಿಸಲ್ಪಡುವಂತಾದದ್ದು ಇದು ಕುರು ಚಕ್ರವರ್ತಿಗೆ ಸಂದ ಮಹಾನ್ ಗೌರವ.
ಹೀಗೆ ಈ ವಂಶದಲ್ಲಿ ಕೆಲ ತಲೆಮಾರುಗಳು ಸಂದು ಹೋದ ಬಳಿಕ ರಾಜನಾದವನೇ ‘ಪ್ರತೀಪ’. ಈತನ ಮಹಾರಾಣಿ ಸುನಂದೆ. ಇವರಿಗೆ ದೇವಾಪಿ, ಶಂತನು, ಬಾಹ್ಲೀಕ ಎಂಬ ಮೂವರು ಪುತ್ರರು. ಹಿರಿಯವನಾದ ದೇವಾಪಿ ರೋಗಗ್ರಸ್ಥನಾಗಿದ್ದ ಕಾರಣ, ಹಿರಿಯರ ಆದೇಶದಂತೆ ಶಂತನು ಚಕ್ರವರ್ತಿ ಪೀಠವನ್ನೇರಿದ. ದೇವಾಪಿ ಕಾನನ ಸೇರಿ ತಪೋ ನಿರತನಾದನು. ಶಂತನು ಚಕ್ರವರ್ತಿಯಾದ ಬಳಿಕ ದೇಶಕ್ಕೆ ಬರಗಾಲ ಬಂತು. ಕಾರಣವೇನಿರಬಹುದೆಂದು ವಿವೇಚಿಸಿದಾಗ ಹಿರಿಯರ ಮುನಿಸಿನಿಂದ ಹೀಗಾಯಿತೆಂಬ ಸತ್ಯ ಗೊತ್ತಾಯಿತು. ಧರ್ಮಿಷ್ಟನಾಗಿ ಕರ್ತವ್ಯಗಳೆಲ್ಲವನ್ನೂ ಚ್ಯುತಿ ಬಾರದಂತೆ ನಿರ್ವಹಿಸಿಯೂ ಹೀಗೇಕಾಯಿತು? ಹಿರಿಯರನ್ನೂ ಅತಿ ಗೌರವದಿಂದ ಕಾಣುತ್ತಿದ್ದರೂ ಮುನಿಸು ಯಾಕೆ ಎಂಬ ಸತ್ಯ ನಿಗೂಢವಾಗಿ ಶಂತನು ಚಕ್ರವರ್ತಿಗೆ ವ್ಯಥೆ ಆವರಿಸಿತು. ಕಡೆಗೆ ತನ್ನಣ್ಣ ದೇವಾಪಿಯ ಮುನಿಸು ಕಾರಣ ಎಂದು ತಿಳಿಯಲ್ಪಟ್ಟಿತು. ಹಾಗಾಗಿ ಅಣ್ಣನನ್ನು ಕಾಣಲು ಕಾಡಾಡಿಯಾಗಿ ಹೋಗಿ ಹುಡುಕತೊಡಗಿದ. ನಿರಂತರ ಶೋಧನೆಯ ಬಳಿಕ ಅಗ್ರಜನನ್ನು ಕಂಡು ದೇಶದ ಸ್ಥಿತಿಯನ್ನೂ, ಕಾರಣವನ್ನೂ ತಿಳಿಸಿದ. ದೇವಾಪಿ ಅಯ್ಯೋ ನನ್ನ ಮುನಿಸು ಕಾರಣವೇ? ನಾನು ಮುನಿದಿಲ್ಲವಲ್ಲ. ಹಿರಿಯರೇ ತೀರ್ಮಾನಿಸಿದ ಮೇಲೆ, ಅವರ ಆದೇಶದಂತೆ ನೀನು ರಾಜನಾಗಿರುವುದು ನನಗೂ ಸಮ್ಮತವೇ. ಆದರೂ ನೀನು ರಾಜನಾಗುವ ವೇಳೆ ನನ್ನಲ್ಲಿ ಒಂದು ಮಾತು ಹೇಳುತ್ತಿದ್ದರೆ ಎಂಬ ಅಪೇಕ್ಷೆ ಇತ್ತು. ಅದೇ ಅವ್ಯಕ್ತ ಭಾವ ಮುನಿಸಾಗಿ ಪರಿವರ್ತನೆಗೊಂಡು ಈ ದುರ್ಭಿಕ್ಷಕ್ಕೆ ಕಾರಣವಾದರೆ, ಇದೋ ನಾನು ನಿನ್ನನ್ನು ಮನಸಾರೆ ಕ್ಷಮಿಸಿದ್ದೇನೆ. ಹಿರಿಯವ ಅಣ್ಣನಾದ ನಾನಿದ್ದೂ ತಮ್ಮನನ್ನು ರಾಜನನ್ನಾಗಿ ನೇಮಿಸಿರುವುದು ನನಗೆ ಸರ್ವತಾ ಕೋಪ ತರಲಿಲ್ಲ. ಆದರೆ ನಾನಿದ್ದರೂ ಮರೆತು ವ್ಯವಹರಿಸಿದರಲ್ಲ ಎಂಬ ಬೇಸರವಾಗಿತ್ತು. ನನಗೆ ಅಧಿಕಾರದ ಆಸೆಯಾಗಲಿ, ರಾಜ್ಯ – ಕೋಶಗಳ ಅಪೇಕ್ಷೆಗಳಾಗಲಿ ಇರಲೇ ಇಲ್ಲ. ಅಂತಹ ತೀರ್ಮಾನಕ್ಕೆ ಕಾರಣ ಯಾರೂ ಅಲ್ಲ ನನ್ನ ಶರೀರ ಹೊಂದಿರುವ ರೋಗವೇ ಹೊರತು ಅನ್ಯರಾರೂ ದೋಷಿಗಳಲ್ಲ. ಹೀಗೆ ವಿವರಿಸಿ ತಮ್ಮ ಶಂತನುವನ್ನು ಪ್ರೀತಿಯಿಂದ ಹರಸಿ ಆಶೀರ್ವದಿಸಿ ಆದರದಿಂದ ಕಳುಹಿಸಿಕೊಡುತ್ತಾನೆ. ಶಂತನು ಮರಳಿ ರಾಜ್ಯ ಸೇರುವಾಗ ರಾಜ್ಯಕ್ಕೆ ಮಳೆಯಾಗಿ ಕ್ಷಾಮ ನಿವಾರಣೆಯಾಗಿತ್ತು.
ಹೀಗೆ ಕಾಲ ಸಾಗುತ್ತಿರಲು ಒಂದು ದಿನ ರಾಜ ಮೃಗ ಬೇಟೆಗೆ ಬಂದವನು ಗಂಗಾತೀರದಲ್ಲಿ ಸೌಂದರ್ಯದ ಗಣಿ, ಚೆಲುವೆ ಹೆಣ್ಣೊಬ್ಬಳನ್ನು ಕಾಣುತ್ತಾನೆ. ಕಂಡಾಕ್ಷಣ ಅಂಕುರವಾದ ಪ್ರೇಮದ ಬಲೆಗೆ ಸಿಲುಕುತ್ತಾನೆ. ಆ ಹೆಣ್ಣನ್ನು ಮಾತನಾಡಿಸಿ, ತನ್ನ ಮನದ ಇಚ್ಚೆ ಪ್ರಕಟಿಸಿ ಮದುವೆಯಾಗುವಂತೆ ಕೇಳಿಕೊಳ್ಳುತ್ತಾನೆ. ಆಗ ಆಕೆ ನಿನ್ನನ್ನು ಶರತ್ತುಬದ್ದವಾಗಿ ವರಿಸಬಲ್ಲೆ ಎಂದು ತಿಳಿಸುತ್ತಾಳೆ. ಶರತ್ತುಗಳೇನು ಎಂದು ಕೇಳಿದಾಗ, ತನ್ನ ವೃತ್ತಾಂತ ಕೇಳಬಾರದು, ಏನೇ ಮಾಡಿದರೂ ಯಾಕೆ/ಏನು ಇತ್ಯಾದಿ ಯಾವುದೇ ರೀತಿಯ ಆಕ್ಷೇಪ ಮಾಡುವುದಿಲ್ಲ ವೆಂದು ಭಾಷೆ ನೀಡಿದರೆ ವರಿಸುವೆನೆಂದಳು. ತಪ್ಪಿದರೆ ಬಿಟ್ಟು ಹೋಗುವೆನೆಂದು ಎಚ್ಚರಿಸಿದಳು. ಒಪ್ಪಿದ ಶಂತನು ಆಕೆಯನ್ನು ಹಸ್ತಿನಾವತಿಗೆ ಕರೆತಂದು ವಿಜ್ರಂಭಣೆಯಿಂದ ಶಾಸ್ತ್ರೋಕ್ತವಾಗಿ ವರಿಸುತ್ತಾನೆ.
ಹೀಗೆ ಮದುವೆಯಾದ ರಾಜ ಶಂತನು ಚಕ್ರವರ್ತಿಯೇ ಸತ್ಯಲೋಕದಲ್ಲಿ ಶಾಪಗ್ರಸ್ಥನಾಗಿದ್ದ ಮಹಾಭಿಷ. ಅಪೂರ್ವ ಚೆಲುವೆ, ಶಂತನುವಿನ ರಾಣಿಯೇ ಬ್ರಹ್ಮಲೋಕದ ಗಂಗೆ. ಹೀಗೆ ಇವರೀರ್ವರ ದಾಂಪತ್ಯ ಸಾಗುತ್ತಿರಲು, ಗರ್ಭಿಣಿಯಾದ ಗಂಗೆ ರಾಜನ ಮಹದಾನಂದಕ್ಕೆ ಕಾರಣಳಾದಳು. ಆದರೆ ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್



















