27.5 C
Udupi
Friday, May 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 32

ಭರತೇಶ್ ಶೆಟ್ಟಿ, ಎಕ್ಕಾರ್

ರಾಜಾ ದುಶ್ಯಂತನ ಬಳಿಕ ಭರತ ಪಟ್ಟಾಭಿಷಿಕ್ತನಾದನು. ಚಕ್ರವರ್ತಿಯಾಗಿ ಕೀರ್ತಿ ಸಂಪನ್ನನಾದನು. ದೀರ್ಘತಮನೆಂಬ ಋಷಿಯ ಮಾರ್ಗದರ್ಶನದಲ್ಲಿ ಎಂಬತ್ತಮೂರು ಅಶ್ವಮೇಧ ಯಾಗ ಮಾಡಿ ಪೂರೈಸಿದ ಕೀರ್ತಿ ಭರತ ಚಕ್ರವರ್ತಿಗೆ ಸಲ್ಲುತ್ತದೆ. ಹೀಗೆ ಚಂದ್ರ ವಂಶ ಬೆಳೆಯುತ್ತಾ ಕೆಲವು ತಲೆಮಾರುಗಳ ಬಳಿಕ “ಹಸ್ತಿ” ಎಂಬಾತ ರಾಜನಾದಾಗ ಹೊಸ ನಗರ ನಿರ್ಮಿಸಿ ರಾಜಧಾನಿಯನ್ನಾಗಿ ಮಾಡಿ ಹಸ್ತಿನಾಪುರ ಎಂದು ಹೆಸರಿಸಿದ. ಆ ಬಳಿಕ ಈ ನಗರ ಬಹು ಪ್ರಸಿದ್ದವಾಗುತ್ತದೆ. ಇಲ್ಲಿಯವರೆಗೆ ಪ್ರತಿಷ್ಠಾನ ನಗರಿ ರಾಜಧಾನಿಯಾಗಿರುತ್ತದೆ.

ಹೀಗೆ ಚಂದ್ರವಂಶ ಬೆಳೆಯುತ್ತಾ ಹಲವು ತಲೆಮಾರುಗಳ ಬಳಿಕ “ಕುರು” ಎಂಬ ಮಹಾರಾಜ ಹುಟ್ಟಿ ಚಂದ್ರವಂಶದ ಚಕ್ರವರ್ತಿಯಾಗಿ ಆಳ್ವಿಕೆ ನಡೆಸಿದನು. ಧರ್ಮಿಷ್ಟನಾದ ರಾಜ ಕುರು ಚಕ್ರವರ್ತಿ ಬಹಳಷ್ಟು ಯಾಗ ಯಜ್ಞಗಳನ್ನು ಮಾಡಿಸಿದವನಾಗಿದ್ದರೂ, ವಿಶಿಷ್ಟವಾದ ಒಂದು ಯಜ್ಞವನ್ನು ಮಾಡಬೇಕೆಂಬ ಮಹತ್ತರವಾದ ಆಶಯ ಹೊಂದುತ್ತಾನೆ. ಹಾಗೆ ಯಾಗಕ್ಕೆ ಸರಿಯಾದ ಸ್ಥಳ ಬೇಕಲ್ಲವೇ? ಸರಸ್ವತಿ – ದೃಷದ್ವತಿ ಎಂಬ ಎರಡು ಪುಣ್ಯ ನದಿಗಳ ಮಧ್ಯೆ ವಿರಾಜಿಸುತ್ತಿದ್ದ ‘ವಿಶಸನ ಕ್ಷೇತ್ರ’ ಎಂಬ ಪುಣ್ಯ ಕ್ಷೇತ್ರವನ್ನು ಆಯ್ಕೆ ಮಾಡಿದನು. ಹಿಂದೆ ಪರಶುರಾಮರು ಕ್ಷತ್ರಿಯ ಸಂಹಾರ ಮಾಡಿ ಬಳಿಕ ಪಿತೃ ತರ್ಪಣವಿತ್ತ ಪುಣ್ಯ ಭೂಮಿಯೂ ಇದೇ ಸ್ಥಳವಾಗಿತ್ತು. ಇಂತಹ ದಿವ್ಯ ಸ್ಥಳದಲ್ಲೇ ತನ್ನ ಸಂಕಲ್ಪದ ಮಹಾ ಯಜ್ಞವನ್ನು ಮಾಡಿಸುವುದೆಂದು ತೀರ್ಮಾನಿಸಿದ.

ಸೂಕ್ತ ಭೂ ಶೋಧನೆಯಾದ ಬಳಿಕ ಶಿವನನ್ನು ಮೆಚ್ಚಿಸಿ ನಂದಿಯನ್ನೂ, ಯಮನನ್ನು ಮೆಚ್ಚಿಸಿ ಕೋಣನನ್ನೂ ಎರವಲಾಗಿ ಪಡೆದು ಜೀವ ದೇವರ ಸಂಬಂಧದ ಪ್ರಕೃತಿ ಶಕ್ತಿಯ ನೊಗ ಕಟ್ಟಿ ವಿಶಾಲವಾದ ಪ್ರದೇಶವನ್ನು ಉಳುಮೆ ಮಾಡಲು ಮುಂದಾದನು. ಹೀಗೆ ಉಳುತ್ತಿರಲು ಇಂದ್ರನು ಪ್ರತ್ಯಕ್ಷನಾಗಿ ಯಾಕೆ ಉಳುತ್ತಿರುವೆ? ಎಂದು ಕೇಳಿದಾಗ ಧರ್ಮವನ್ನು ಬಿತ್ತಿ ಬೆಳೆಸುವುದಕ್ಕೆ ಎಂದು ಉತ್ತರಿಸಿದನು. ಇಂದ್ರ ಹೊರಟು ಹೋದನು. ಇದಾದ ಬಳಿಕ ಭಗವಾನ್ ವಿಷ್ಣುವೇ ವೃದ್ದ ಬ್ರಾಹ್ಮಣ ರೂಪದಲ್ಲಿ ಕಾಣಿಸಿಕೊಂಡು ಇಂದ್ರನಂತೆಯೇ ಪ್ರಶ್ನಿಸಿದಾಗ, ಕುರು ಚಕ್ರವರ್ತಿಯಿಂದ ಮೊದಲಿನ ಅದೇ ಉತ್ತರ ಸಿಗುತ್ತದೆ. ಬ್ರಾಹ್ಮಣ ರೂಪಿ ವಿಷ್ಣು ಅಲ್ಲಿಗೇ ಬಿಡದೆ ಅಯ್ಯಾ ! ಧರ್ಮವನ್ನು ಹೇಗೆ ಬಿತ್ತುವೆ? ಬೆಳೆಸುವೆ? ಎಂದು ಪ್ರಶ್ನಿಸಿದಾಗ- ಇವರಿಬ್ಬರ ಮಧ್ಯೆ ಸುದೀರ್ಘ ಧರ್ಮ ಜಿಜ್ಞಾಸೆ ನಡೆದು ಕುರು ಚಕ್ರವರ್ತಿ ನೀಡಿದ ಸದುತ್ತರಗಳಿಂದ ವಿಷ್ಣು ಪರಮಾತ್ಮ ಸಂತೃಪ್ತನಾಗುತ್ತಾನೆ. ಸುಪ್ರೀತನಾಗಿ ಭಗವಾನ್ ವಿಷ್ಣು, ಕುರು ಚಕ್ರವರ್ತಿಯ ಧರ್ಮ ಬುದ್ಧಿಗೆ ಮೆಚ್ಚಿ ನಿನ್ನ ಇಚ್ಚೆಯಂತೆ ಉಳುವವನು ನೀನೇ ಆಗಿರು. ಬಿತ್ತುವವನು ನಾನೇ ಆಗುತ್ತೇನೆ. ಪರಿಸರ ಪ್ರಭಾವವನ್ನು ಬೆಳೆಸಲಿ. ಶೃದ್ಧಾವಂತರು ಮತ್ತೂ ಬಿತ್ತಿ ಬೆಳೆಸುತ್ತಿರಲಿ ಎಂದು ಅನುಗ್ರಹಿಸಿದನು.

ಹೀಗೆ ಅರಸನು ಉಳುತ್ತಲೇ ಇದ್ದನು. ಭಗವಾನ್ ವಿಷ್ಣುವಿನ ಸುದರ್ಶನ ಅರಸನ ಹಿಂದೆಯೇ ಹೋಯಿತು. ಕುರು ರಾಜನ ಶರೀರದ ಅಂಗಾಂಗಗಳನ್ನು ಸೂಕ್ಷ್ಮ ಚೂರ್ಣರೂಪಕ್ಕೆ ಕತ್ತರಿಸಿ ಉಳುಮೆಯಾದ ಪುಣ್ಯ ಭೂಮಿಯಲ್ಲಿ ಭಗವಾನ್ ವಿಷ್ಣುವಿನಿಂದ ಬಿತ್ತಲ್ಪಟ್ಟಿತು. ಇಂತಹ ಈ ಪುಣ್ಯ ಭೂಮಿಯೇ ಧರ್ಮ ಸಂಸ್ಥಾಪನೆ ಮಾಡುವ ಕ್ಷೇತ್ರವಾಗಿ ಮುಂದೆ ಕುರು ಕ್ಷೇತ್ರ ವಾಗಿ ಪ್ರಸಿದ್ದವಾಯಿತು.

ಮುಂದುವರಿಯುವುದು…

✍🏻ಭರತೇಶ್ ಶೆಟ್ಟಿ ಎಕ್ಕಾರ್…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page