ಭಾಗ -31
ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೩೧ ಮಹಾಭಾರತ
ರಾಜ ಹೊರಟು ಹೋದ ಮೇಲೆ ಆಶ್ರಮದಲ್ಲಿ ದುಷ್ಯಂತನನ್ನೇ ಕುರಿತು ಶಕುಂತಳೆ ಒಬ್ಬಳೇ ಕುಳಿತು ಅಗಲಿಕೆಯ ದುಃಖದಿಂದ ಚಿಂತಿತಳಾಗಿ, ಗತ ವೈಭವದ ದಿನಗಳನ್ನು ನೆನಪಿಸಿ ಮೈ ಮರೆತಿದ್ದಳು. ಅದೇ ಸಂದರ್ಭ ಸುಲಭಕೋಪಿಯಾದ ದುರ್ವಾಸ ಮುನಿಗಳು ಕಣ್ವಾಶ್ರಮದತ್ತ ಬರುತ್ತಾರೆ. ಬಂದಂತಹ ಮುನೀಶ್ವರನನ್ನು ಆದರಿಸಿ ಸತ್ಕರಿಸಬೇಕಾದದ್ದು ಆಶ್ರಮ ಧರ್ಮ. ಆದರೆ ಹಾಗೆ ಮಾಡದೆ, ಮೈಮರೆತು ಕುಳಿತಿದ್ದ ಶಕುಂತಳೆಯನ್ನು ನೋಡಿ, ಅನಾದರಕ್ಕೊಳಗಾದ ಭಾವ ಮುನೀಶ್ವರನಿಗೆ ಆಗಿ ಕುಪಿತನಾದರು. ಅದೇನು ಅವರ ಜ್ಞಾನಕ್ಕೆ ವೇದ್ಯವಾಯಿತೋ! “ಯಾರ ಬಗ್ಗೆ ಕನಸು ಕಾಣುತ್ತಾ ಮೈಮರೆತಿರುವೆಯೋ, ಅವನು ನಿನ್ನನ್ನು ಮರೆತು ಹೋಗಲಿ” ಎಂದು ಶಾಪ ವಾಕ್ಯ ಉಚ್ಚರಿಸಿಬಿಟ್ಟರು. ಈ ವೃತ್ತಾಂತವನ್ನೆಲ್ಲಾ ನೋಡಿ ಭಯಗೊಂಡಿದ್ದ ಆಶ್ರಮ ಬಾಲಿಕೆಯೂ, ಶಕುಂತಳೆಯ ಪ್ರಿಯ ಮಿತ್ರೆಯೂ ಆದ ‘ಪ್ರಿಯಂವದೆ’ ಎಂಬವಳು ನೋಡಿ ಅತೀವ ಭಯಗೊಂಡಿದ್ದಳು. ಅರೆಕ್ಷಣದಲ್ಲಿ ಘಟಿಸಿದ ಅಪ್ರಿಯ ಸಂಗತಿಯನ್ನು ಅರಿತು, ಅಯ್ಯೋ ಅನರ್ಥವಾಯಿತಲ್ಲಾ ಎಂದು ಮರುಗಿದಳು. ಪರಿಹಾರ ಮುನಿವರನಿಂದ ಮಾತ್ರ ಸಾಧ್ಯವೆಂದು ತಿಳಿದು, ತಕ್ಷಣ ಓಡಿಹೋಗಿ ಋಷಿ ದುರ್ವಾಸರಲ್ಲಿ ಕ್ಷಮಾಪಣೆ ಬೇಡಿ ಮನ್ನಿಸಬೇಕೆಂದು ಬೇಡಿಕೊಂಡು, ನಡೆದ ವೃತ್ತಾಂತವನ್ನೆಲ್ಲಾ ಅವರಲ್ಲಿ ಹೇಳುತ್ತಾಳೆ. “ಮಹರ್ಷೇ, ನಮ್ಮ ಮಾತುಗಳನ್ನು ಅವಧರಿಸಬೇಕು. ರಾಜ ದುಶ್ಯಂತ ಶಕುಂತಳೆಯ ಸಮಾಗಮದಿಂದ ಅವಳಲ್ಲಿ ತತ್ಸಂಬಂಧಿ ಬದಲಾವಣೆಗಳು ಗೋಚರಿಸುತ್ತಿವೆ. ನಮ್ಮನ್ನು ಸಲಹುತ್ತಿರುವ ಕಣ್ವ ಮಹರ್ಷಿಗಳು ಯಾಗನಿಮಿತ್ತ ಹೋದವರು ಬಹುಕಾಲ ಕಳೆದು ಇನ್ನಷ್ಟೆ ಬರಲಿಕ್ಕಿದ್ದಾರೆ. ಹಾಗೆ ಗುರುಗಳು ಬಂದರೆ ತನ್ನ ಸ್ಥಿತಿಯನ್ನು ಹೇಗೆ ತಿಳಿಸುವುದು ಎಂಬ ಭಯ ಶಕುಂತಳೆಯದ್ದಾಗಿದೆ. ಮತ್ತೊಂದೆಡೆ ತನ್ನನ್ನು ಈ ಸ್ಥಿತಿಯಲ್ಲಿ ತೊರೆದು ಹೋಗಿರುವ ರಾಜನ ನೆನಪಿನಿಂದ ಉತ್ಪನ್ನವಾದ ವಿರಹವೂ ಅವಳಲ್ಲಿ ಸೇರಿ ಮೈಮರೆತು ಯೋಚಿಸುವಂತೆ ಮಾಡಿದೆ. ಈ ಸ್ಥಿತಿಯಲ್ಲಿರುವ ಪುಣ್ಯ ಗರ್ಭೆಯಾದ ಶಕುಂತಳೆಯನ್ನು ಕರುಣಾಮಯಿಗಳಾದ ತಾವೇ ಪೊರೆಯಬೇಕು” ಎಂದು ಪರಿ ಪರಿಯಾಗಿ ಬೇಡುತ್ತಾಳೆ. ಶೀಘ್ರ ಕೋಪಿಯಾದರೂ – ದೀರ್ಘ ದ್ವೇಷಿಗಳಲ್ಲ ದೂರ್ವಾಸ ಮಹರ್ಷಿ. ಶೀಘ್ರ ಪ್ರಸಾದಚಿತ್ತರೂ ಹೌದು. ಋಷಿವರನು ಕೋಪವಿಳಿದು ಶಾಂತ ವದನರಾಗುತ್ತಾರೆ. “ಮಗಳೇ, ಶಾಪ ಹುಸಿಯಾಗದು. ರಾಜ ಈಕೆಯನ್ನು ಮರೆಯುತ್ತಾನೆ. ಆದರೆ ಅಭಿಜ್ಞಾನಾಭರಣದರ್ಶನದಿಂದ ಶಾಪವಿಮೋಚನೆಯಾಗುವುದು” ಎಂಬ ಪರಿಹಾರ ದಾರಿಯನ್ನು ಸೂಚಿಸುತ್ತಾರೆ. ಅಂದರೆ ದುಶ್ಯಂತನಿತ್ತ ಮುದ್ರೆಯುಂಗುರವನ್ನು ಅವನು ನೋಡಿದಾಕ್ಷಣ ಶಾಪ ಪರಿಣಾಮದಿಂದ ಆವೃತವಾದ ಮರೆವು ಮಾಸಿಹೋಗಿ ನೆನಪು ಮರುಕಳಿಸಿ ಎಲ್ಲವೂ ಸುಕ್ಷೇಮವಾಗುವುದು. ಮುನಿವಚನ ಕೇಳಿ ಶಾಪಕ್ಕೆ ಪರಿಮಾರ್ಜನೆಯ ದಾರಿ ದೊರೆತು ಸುಖಾಂತ್ಯವಾಗುತ್ತದೆ ಎಂಬ ಸತ್ಯ ನೆಮ್ಮದಿಯನ್ನು ನೀಡುತ್ತದೆ.
ಹೀಗೆ ಕೆಲದಿನ ಕಳೆಯುತ್ತಿರಲು, ಯಾಗ ನಿಮಿತ್ತ ಹೋಗಿದ್ದ ಆಶ್ರಮ ಕುಲಪತಿ ಕಣ್ವ ಮಹರ್ಷಿಗಳು ಬಳಗ ಸಹಿತ ಬರುತ್ತಾರೆ. ಅವರನ್ನು ನೋಡಿದೊಡನೆ ಅತೀವ ಭಯಗೊಂಡ ಶಕುಂತಳೆ ಭೀತಳಾಗಿ, ನನ್ನ ಹಣೆಬರಹದಲ್ಲಿ ಇನ್ನೇನು ಆತಂಕ ಬರೆಯಲ್ಪಟ್ಟಿದೆಯೋ ಎಂದು ತತ್ತರಿಸಿ ಕಣ್ಣೀರ ಧಾರೆಯಿಂದಲೇ ಋಷಿ ಪಾದಗಳನ್ನು ತೊಳೆಯುತ್ತಾ ತನ್ನನ್ನು ಕ್ಷಮಿಸಬೇಕೆಂದು ಬೇಡುತ್ತಾಳೆ. ಆಶ್ರಮ ಪರಿಚಾರಕಿಯರು ಸಾವಧಾನದಿಂದ ಸಂತೈಸಿ, ಋಷಿ ಕಣ್ವರಲ್ಲಿ ಸವಿವರವಾಗಿ ಘಟಿಸಿದ ವಿಷಯವೆಲ್ಲವನ್ನು ವಿಸ್ತರಿಸಿ ಹೇಳುತ್ತಾರೆ. ಶಕುಂತಳೆಯು ಬಸುರಿಯಾಗಿರುವುದನ್ನೂ ತಿಳಿಯಪಡಿಸುತ್ತಾರೆ. ವಿಷಯ ತಿಳಿದ ಕಣ್ವರು ಆಲೋಚಿಸಿ, “ಕೈ ತಪ್ಪಿಯೇ ಆದರೂ ಹವಿಸ್ಸು ಹೋಮಾಗ್ನಿ ಮಧ್ಯೆ ಬಿದ್ದಿದೆ. ಇದರಿಂದಾಗಿ ನಾವು ಕೃತ ಕೃತ್ಯರಾಗಿದ್ದೇವೆ” ಎಂದು ಸಮಾಧಾನದ ನಿಟ್ಟುಸಿರು ಬಿಟ್ಟರು. “ಭಯ ಪಡಬೇಡ ಮಗಳೇ, ಎಲ್ಲವೂ ದೈವೇಚ್ಚೆ, ಒಳಿತೇ ಆಗಲಿದೆ” ಎಂದು ಸಾಕು ಮಗಳನ್ನು ಎತ್ತಿ ನಿಲ್ಲಿಸಿ ಸಮಾಧಾನ ಪಡಿಸಿದರು. ಶಕುಂತಳೆಗೆ ಹೋದ ಜೀವ ಬಂದಂತಾಯಿತು. ಆಶ್ರಮ ಬಾಲಿಕೆಯರು ಅತಿ ವಾತ್ಸಲ್ಯ ಪ್ರೀತಿಯಿಂದ ಶಕುಂತಳೆಯನ್ನು ಆಶ್ರಮದೊಳಗೆ ಕರೆದುಕೊಂಡು ಹೋದರು. ವಾತ್ಸಲ್ಯದಿಂದ ಉಪಚರಿಸಿ, ಪೋಷಿಸತೊಡಗಿದರು.
ಕಣ್ವರು ಆಶ್ರಮಕ್ಕೆ ಬಂದು ದಿನ ಕೆಲವಾದರೂ ದುಶ್ಯಂತನ ಪತ್ತೆಯಿಲ್ಲ. ನಿತ್ಯ ದಾರಿ ಕಾಯುತ್ತಿದ್ದ ಶಕುಂತಳೆ ಒಂದು ಶುಭದಿನ ಸುಮೂಹೂರ್ತದಲ್ಲಿ ಗಂಡು ಮಗುವಿನ ತಾಯಿಯಾದಳು. ಕಣ್ವ ಮಹರ್ಷಿಗಳು ನವ ಜಾತ ಶಿಶುವನ್ನೂ ತಾಯಿಯನ್ನೂ ಸಂಪ್ರೋಕ್ಷಿಸಿ ಹರಸಿದರು. ಸಕಾಲದಲ್ಲಿ ಜಾತ ಕರ್ಮಾದಿ ವಿಧಿ ಪೂರೈಸಿ ಮಗುವಿಗೆ ‘ಸರ್ವದಮನ’ ಎಂದು ನಾಮಕರಣ ಮಾಡಿದರು. ಒದಗುವ ಸರ್ವ ಕಷ್ಟ ದಮನಿಸುವ ಮಗನಾಗಲಿ ಎಂಬ ಆಶಯ ಈ ಹೆಸರಿಗೆ ಕಾರಣವಾಗಿತ್ತೋ ಏನೋ!
ಕೆಲದಿನ ಕಳೆದ ಮೇಲೆ ಕಣ್ವರು ಯೋಚನಾ ಮಗ್ನರಾಗಿ ಒಂದು ತೀರ್ಮಾನಕ್ಕೆ ಬಂದು, ಶಕುಂತಳೆಯನ್ನು ಕರೆದು ಕುಶಲೋಪರಿ ವಿಚಾರಿಸುತ್ತಾರೆ. ಆಕೆಯನ್ನು ಪತಿಗ್ರಹಕ್ಕೆ ಕಳುಹಿಸುವ ಇಂಗಿತ ವ್ಯಕ್ತ ಪಡಿಸುತ್ತಾರೆ. ಹಾಗೆಯೇ ರಾಜಾ ದುಶ್ಯಂತನ ಆಸ್ಥಾನಕ್ಕೆ ಕಳುಹಿಸುವಾಗ ಬರಿಗೈಯಲ್ಲಿ ಹೋಗುವುದೇ? ಉಡುಗೊರೆಗಳ ಸಮೇತ ಆಶ್ರಮ ಪರಿಚಾರಕಿಯರು, ಕೆಲವು ಶಿಷ್ಯರನ್ನು ಜೊತೆಯಾಗಿಸುವ ವ್ಯವಸ್ಥೆ ಮಾಡಿ, ಮುಹೂರ್ತ ನಿಗದಿಪಡಿಸುತ್ತಾರೆ. ಕಣ್ವರಿಗೆ ಮಗಳನ್ನು ಕಳುಹಿಸುವ ದುಃಖ ಮಡುಗಟ್ಟಿದರೂ, ಮನಸ್ಸನ್ನು ನಿಗ್ರಹಿಸಿ ಹರಸಿ ಹಾರೈಸಿ ಬೀಳ್ಗೊಡುತ್ತಾರೆ. ಸರ್ವ ಕಾಮನೆಗಳನ್ನು ನ್ಯಾಸಗೊಳಿಸಿದವರಾದರೂ ಶಕುಂತಳೆಯನ್ನು ಮಗಳಂತೆ ಸಾಕಿ ಸಲಹಿ, ಮೊಮ್ಮಗನಿಗೆ ಅಜ್ಜನಾಗಿದ್ದರು. ಈಗ ಒಮ್ಮೆಲೆ ಕಳುಹಿಸಿ ಕೊಡುವಾಗ ಕಣ್ಣುಗಳು ನೀರು ತುಂಬಿ ಮಂಜಾಗಿವೆ.
ಸಂಭ್ರಮದಿಂದ ಒಮ್ಮೆಲೆ ಪತಿಯನ್ನು ಕಾಣುವ ಸೆಳೆತದಿಂದ ಓಡಿ ಹೋಗಿ ಅರಸನ ಬಳಿ ಸೇರಿ ಮಗುವನ್ನು ತೋರಿಸಿ ಮುದ್ದು ಮಾಡುವುದನ್ನು ನೋಡುವ ಕಾತರ ಉಕ್ಕಿ ಬರುತ್ತಿತ್ತು. ಆದರೆ ಅರಮನೆಯ ಆಸ್ಥಾನ ನಿಯಮದಂತೆ, ದ್ವಾರಪಾಲಕ ಅರಸನ ದರ್ಶನಕ್ಕೆ ಅನುಮತಿ ಪಡೆದು ಬರುವಲ್ಲಿಯ ತನಕ ಸೈರಿಸಿ ನಿಂತು ಬಳಿಕ ಒಳ ಬಂದರು. ರಾಜೇಂದ್ರ ದುಶ್ಯಂತನನ್ನು ಕಂಡು ಧನ್ಯಳಾದ ಶಕುಂತಳೆ, ತಂದ ಉಡುಗೊರೆಗಳನ್ನು ಅರ್ಪಿಸಲು ತನ್ನ ಜೊತೆಗಾರರಿಗೆ ಆಜ್ಞೆ ಮಾಡುತ್ತಾಳೆ. ಈಗ ಅರಸ ನಮ್ಮನ್ನು ನೋಡಿ ಧಾವಿಸಿ ಬಂದು, ಪ್ರೀತಿಯಿಂದ ಆದರಿಸುತ್ತಾನೆ ಎಂದು ಕಲ್ಪಿಸಿದರೆ, ದುರ್ವಾಸರ ಶಾಪದ ಪ್ರಭಾವದಿಂದ ದುಷ್ಯಂತನಿಗೆ ಶಕುಂತಳೆಯ ನೆನಪೇ ಇಲ್ಲ. ಆಶ್ರಮದಲ್ಲಾದ ಪ್ರೇಮ, ವಿವಾಹ ಕಥನಗಳನ್ನು ಹೇಳಿದರೂ ದುಶ್ಯಂತನಿಗೆ ನೆನಪೇ ಆಗುತ್ತಿಲ್ಲ. ಜ್ಞಾಪಿಸಲು ಸಾಕ್ಷಿಯಾಗಿ ಮುದ್ರೆಯುಂಗುರ ತೋರಿಸೋಣವೆಂದು ಮುಂದಾದ ಶಕುಂತಳೆ, ಬೆರಳು ಎತ್ತಿ ನೋಡಿದರೆ ಉಂಗುರವಿಲ್ಲ. ಅಯ್ಯೋ ದುರ್ವಿಧಿಯೇ! ಅರಸನ ಸಿಂಹಾಸನಕ್ಕೆ ತುಸು ಹತ್ತಿರ ಹೋಗಿ ಮಗುವನ್ನು ತೋರಿಸಿ, “ಈ ಮಗುವಿನ ಮುಖವನ್ನೊಮ್ಮೆ ನೋಡಿ. ಇದು ನಮ್ಮ ಮಗು” ಎಂದು ಕೈಚಾಚಿ ತೋರಿದರೂ ರಾಜ ಸುತಾರಂ ನೋಡಲೂ ಸಿದ್ದನಿಲ್ಲ. ಏನೇ ಹೇಳಿದರೂ, ಅತ್ತು ಗೋಗರೆದರೂ.. ಎಷ್ಟೇ ಪ್ರಯತ್ನ ಪಟ್ಟರೂ ಫಲಕಾರಿಯಾಗಲಿಲ್ಲ. ಅವಮಾನಿತಳಾಗಿ, ದುಷ್ಯಂತನಿಂದ ತಿರಸ್ಕೃತಳಾದಳು. ಈ ವಿಚಾರ ತಿಳಿದ ಅವಳ ಜೊತೆಗಿದ್ದ ಪರಿಚಾರಕಿಯರು ಬಂದು ಸಂತೈಸಿ ಅವಳನ್ನು ಮರಳಿ ತನ್ನಲ್ಲಿಗೆ ಕರೆದೊಯ್ಯುತ್ತಾಳೆ.
ಕಣ್ವಾಶ್ರಮದಿಂದ ದುಷ್ಯಂತನ ಅರಮನೆಗೆ ಬರುತ್ತಿರಬೇಕಾದರೆ ದಾರಿಯಲ್ಲಿ ಸಿಕ್ಕ ಪುಣ್ಯಪ್ರದ ಶಚೀತೀರ್ಥಕ್ಕೆ ಶಕುಂತಳೆಯು ನಮಸ್ಕರಿಸುತ್ತಿದ್ದಾಗ ಅವಳ ಬೆರಳಿನಿಂದ ರಾಜನಿತ್ತ ಮುದ್ರೆ ಉಂಗುರವು ಜಾರಿ ಬಿದ್ದಿರುತ್ತದೆ. ಭಕ್ತಿ ವಶಳಾಗಿದ್ದಳೋ? ಇಲ್ಲ ಇನಿಯನನ್ನು ನೆನೆದು ಮೈಮರೆತಿದ್ದಳೋ? ಏನೋ ಆಗಿ ಉಂಗುರ ಜಾರಿ ಬಿದ್ದುದು ಗೊತ್ತಾಗಿರಲಿಲ್ಲ. ಹೀಗೆ ಜಾರಿ ಬಿದ್ದ ಉಂಗುರವನ್ನು ಒಂದು ಮೀನು ನುಂಗಿ, ಕಾಲಾಂತರದಲ್ಲಿ ಅದನ್ನು ಹಿಡಿದ ಬೆಸ್ತನೊಬ್ಬನು ಆ ಮೀನನ್ನು ಕತ್ತರಿಸಿದಾಗ ಉಂಗುರವು ಆತನಿಗೆ ಸಿಗುತ್ತದೆ. ಲೋಭದಿಂದ ತುಸು ಸಂಪಾದನೆಯಾದೀತೆಂದು ಅದನ್ನು ಮಾರಲು ರಾಜಧಾನಿಯಲ್ಲಿ ಬೆಸ್ತನು ಪ್ರಯತ್ನಿಸುತ್ತಿದ್ದಾಗ ಅವನನ್ನು ಹಿಡಿದ ರಾಜ ಭಟರು ಉಂಗುರ ಸಮೇತ ಆಸ್ಥಾನಕ್ಕೆ ಒಯ್ದು ರಾಜಾ ದುಷ್ಯಂತನ ಸಮಕ್ಷ ನಿಲ್ಲಿಸುತ್ತಾರೆ. ಉಂಗುರವನ್ನು ರಾಜನಿಗರ್ಪಿಸಿ ವಿಷಯ ತಿಳಿಸುತ್ತಾರೆ. ಮುದ್ರೆಯುಂಗುರ ನೋಡುತ್ತಲೇ ಮುನಿ ದುರ್ವಾಸರ ಶಾಪ ವಿಮೋಚನೆಯಾಗಿ, ಅರಸನಿಗೆ ಶಕುಂತಳೆಯ ನೆನಪೆಲ್ಲಾ ಮರುಕಳಿಸುತ್ತದೆ. ತನ್ನ ಅಪರಾಧಕ್ಕೆ ಪಶ್ಚಾತ್ತಾಪ ಪಟ್ಟು ಶಕುಂತಳೆಯನ್ನು ನೆನೆದು ಪರಿತಪಿಸುತ್ತಾನೆ.
ಆದರೆ ಅದೇ ಕ್ಷಣದಲ್ಲಿ ತನ್ನನ್ನು ಪೀಡಿಸುತ್ತಿರುವ ರಾಕ್ಷಸರ ವಿರುದ್ಧ ಯುದ್ಧದಲ್ಲಿ ಸಹಾಯವನ್ನು ಯಾಚಿಸಿ ಇಂದ್ರನಿಂದ ಕರೆಬರುತ್ತದೆ. ದುಷ್ಯಂತನು ಅನಿವಾರ್ಯವಾಗಿ ಸ್ವರ್ಗಕ್ಕೆ ತೆರಳಬೇಕಾಗುತ್ತದೆ. ಯುದ್ಧದಲ್ಲಿ ಜಯವನ್ನು ಪಡೆದು, ಇಂದ್ರನಿಂದ ವಿಶೇಷವಾಗಿ ಸನ್ಮಾನಿಸಲಪಡುತ್ತಾನೆ. ಸಹಾಯ ಪಡೆದ ಗೌರವ ದ್ಯೋತಕವಾಗಿ ಇಂದ್ರ ಅವನನ್ನು ತನ್ನ ದಿವ್ಯ ರಥದಲ್ಲಿ ಸಾರಥಿ ಮಾತಲಿಯ ಜೊತೆ ಕಳುಹಿಸುತ್ತಾನೆ. ದುಷ್ಯಂತನು ಸ್ವರ್ಗದಿಂದ ಭೂಮಿಗೆ ಮರಳುತ್ತಿರುವಾಗ ನಡುವೆ ಹೇಮಕೂಟ ಪರ್ವತದಲ್ಲಿರುವ ಮಹಿಮಾನ್ವಿತ ಋಷಿ ಆಶ್ರಮದಿಂದ ಅನತಿ ದೂರದಲ್ಲಿ ವಿಶ್ರಮಿಸುತ್ತಾನೆ. ಮುನಿಗಳ ಭೇಟಿಗಾಗಿ ಸಮಯವನ್ನು ತಿಳಿದು ಬರಲು ಮಾತಲಿ ಹೋಗುತ್ತಾನೆ.
ವಿಶ್ರಾಂತಿ ಪಡೆಯುತ್ತಿದ್ದ ರಾಜಾ ದುಶ್ಯಂತ ಕೌತುಕವೊಂದನ್ನು ಕಾಣುತ್ತಾನೆ. ಅಲ್ಲಿಯೇ ಅಶೋಕವೃಕ್ಷದ ಅಡಿಯಲ್ಲಿ ಸಿಂಹದೊಂದಿಗೆ ಆಟವಾಡುತ್ತಿರುವ ಬಾಲಕ. ಅರೆ ಆ ಬಾಲಕ ಸಿಂಹವನ್ನು ಒತ್ತಿ ಬಗ್ಗಿಸಿ, ಅದರ ಬಾಯ್ತೆರೆದು ತಾನು ಕಲಿತ ಗಣಿತದ ಎಣಿಕೆಯೋ ಎಂಬಂತೆ ಸಿಂಹದ ಚೂಪಾದ ಹಲ್ಲುಗಳನ್ನು ಎಣಿಸುತ್ತಿದ್ದಾನೆ. ಅರಸನಿಗೆ ಆ ಹುಡುಗನ ಧೈರ್ಯ, ಶೌರ್ಯ, ಸ್ಥೈರ್ಯಕ್ಕೆ ಮೆಚ್ಚುಗೆಯೂ, ಮಮತೆಯೂ, ಕುತೂಹಲವೂ ಉಂಟಾಗುತ್ತದೆ. ನೋಡ ನೋಡುತ್ತಿದ್ದಂತೆ ಅಷ್ಟರಲ್ಲಿ ಅಲ್ಲಿಗೆ ಬಂದ ಶಕುಂತಳೆಯನ್ನೂ ಕಾಣುತ್ತಾನೆ. ಇತ್ತ ದೇವ ಸಾರಥಿ ಮಾತಲಿಯ ಜೊತೆ ಮಹರ್ಷಿಗಳೂ ಬರುತ್ತಾರೆ. ಋಷಿವರ್ಯರ ಸಮ್ಮುಖದಲ್ಲಿ ದುಷ್ಯಂತ ಶಕುಂತಳೆಯರ ಪುನರ್ ಸಮಾಗಮವಾಗುತ್ತದೆ. ತನ್ನ ಅಪರಾಧಕ್ಕಾಗಿ ಮನ್ನಿಸಬೇಕೆಂದು ಶಕುಂತಳೆಯಲ್ಲಿ ಕೇಳಿ, ವೀರ ಪುತ್ರನನ್ನು ಬಿಗಿದಪ್ಪಿ ಮುದ್ದಿಸುತ್ತಾನೆ. ಮಾರೀಚ ಮಹರ್ಷಿಗಳ ಆಶೀರ್ವಾದ ಪಡೆದು ಅರಮನೆ ಸೇರುತ್ತಾರೆ. ಇವರ ಮುದ್ದಿನ ಕಂದ “ಭರತ” ಎಂಬ ಹೆಸರಿನಿಂದ ವಿದ್ಯೆ, ವಿವೇಕ, ಅಸ್ತ್ರ, ಶಸ್ತ್ರ, ಶಾಸ್ತ್ರ ಸಂಪನ್ನನಾಗಿ, ನ್ಯಾಯ, ದಂಡ, ರಾಜ ನೀತಿಯನ್ನೂ ಕಲಿತು ಪ್ರಬುದ್ದನಾಗಿ ಬೆಳೆಯುತ್ತಿದ್ದಾನೆ…
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್



















